LatestMysore

ಆಧಾರ್ ಸೇವೆಗಳಿಗಾಗಿ ಜನರ ಪರದಾಟ… ವಿಶೇಷ ಶಿಬಿರ ಆಯೋಜಿಸಲು ವಿಕ್ರಂ ಅಯ್ಯಂಗಾರ್  ಆಗ್ರಹ

ಮೈಸೂರು: ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಪ್ರತಿನಿತ್ಯವೂ ಪರದಾಡುವಂತಾಗಿದೆ. ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವುದು, ಕಾರ್ಡ್‌ನಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು ಹಾಗೂ ಆಧಾರ್‌ಗೆ ಮೊಬೈಲ್ ಸಂಖ್ಯೆ ಜೋಡಿಸುವುದು ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ತ್ವರಿತವಾಗಿ ಹಾಗೂ ಸಕಾಲದಲ್ಲಿ ಸೇವೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.

ಆಧಾರ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿರುವುದರಿಂದ ಜನರು ದೀರ್ಘಕಾಲ ಸರದಿಯಲ್ಲಿ ಕಾಯಬೇಕಾಗಿದೆ. ವಿಶೇಷವಾಗಿ ವೃದ್ಧರು, ಅಂಗವಿಕಲರು ಹಾಗೂ ವಿಶೇಷಚೇತನರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹವರಿಗೆ ಆದ್ಯತೆ ನೀಡುವ ಮೂಲಕ ಸೇವೆ ಒದಗಿಸಬೇಕು. ಜನರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿ ನೇಮಿಸಿ, ವಿಶೇಷ ಆಧಾರ್ ಸೇವಾ ಘಟಕಗಳನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗ್ರಾಮೀಣ ಭಾಗದ ಜನರು ಸಣ್ಣಪುಟ್ಟ ಆಧಾರ್ ತಿದ್ದುಪಡಿಗಳಿಗಾಗಿ ನಗರ ಪ್ರದೇಶಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ವಿಶೇಷ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರಗಳನ್ನು ಆಯೋಜಿಸಬೇಕು. ಇದರಿಂದ ಗ್ರಾಮೀಣ ಜನರಿಗೆ ಸಮಯ ಮತ್ತು ಹಣದ ಉಳಿತಾಯವಾಗುವುದರ ಜತೆಗೆ ಅನಗತ್ಯ ಅಲೆದಾಟವೂ ತಪ್ಪಲಿದೆ.

ಸಾರ್ವಜನಿಕರಿಗೆ ಅಗತ್ಯವಾದ ಆಧಾರ್ ಸೇವೆಗಳು ವಿಳಂಬವಿಲ್ಲದೆ ಸುಲಭವಾಗಿ ಲಭ್ಯವಾಗುವಂತೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಆಧಾರ್ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಕ್ರಂ ಅಯ್ಯಂಗಾರ್ ಮನವಿ ಮಾಡಿದ್ದಾರೆ.

admin
the authoradmin

Leave a Reply