LatestMysore

ಜಿ.ಪಂ. ಮೀಸಲಾತಿ ಲೋಪದೋಷ ಸರಿಪಡಿಸಲು ಎಚ್.ಪಿ. ಮಂಜುನಾಥ್ ಮನವಿ.. ನ.1ರಂದು ಶುಭ ಸುದ್ದಿ ಸಿಗುತ್ತಾ?

ಹುಣಸೂರು(ಮನುಕುಮಾರ್): ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲು ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿನ ಅನುಸೂಚಿತ ಜಾತಿ (ಎಸ್‌ಸಿ) ಸಮುದಾಯಕ್ಕೆ ಮೀಸಲು ಕ್ಷೇತ್ರ ಕಲ್ಪಿಸುವಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ, ನ್ಯಾಯ ಒದಗಿಸಬೇಕೆಂದು ಸ್ನೇಹಜೀವಿ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ರಂದೀಪ್, ಐಎಎಸ್ ಹಾಗೂ ಕಾರ್ಯದರ್ಶಿ ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿದ ಎಚ್.ಪಿ. ಮಂಜುನಾಥ್ ಅವರು, ಹುಣಸೂರು ತಾಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿ ಆಗಿರುವ ಲೋಪದೋಷಗಳ ಕುರಿತು ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದರು.

ಚುನಾವಣಾ ಆಯೋಗ ಪ್ರಕಟಿಸಿರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿನ ಅನುಸೂಚಿತ ಜಾತಿ ಸಮುದಾಯಕ್ಕೆ ಮೀಸಲು ಕ್ಷೇತ್ರ ದೊರೆಯದಿರುವುದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಹಂಚಿಕೆಯಲ್ಲಿನ ನ್ಯೂನತೆಗಳನ್ನು ಪರಿಶೀಲಿಸಿ, ಸೂಕ್ತ ನ್ಯಾಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ನ.1ರಂದು ಶುಭ ಸುದ್ದಿ ನಿರೀಕ್ಷೆ: ಹುಣಸೂರು ತಾಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿನ ಲೋಪದೋಷಗಳ ಕುರಿತು ಚುನಾವಣಾ ಆಯೋಗ, ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ತಾಲೂಕಿನ ಅನುಸೂಚಿತ ಜಾತಿ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ವಿಶ್ವಾಸವಿದೆ ಎಂದು ಎಚ್.ಪಿ. ಮಂಜುನಾಥ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಈ ಸಂಬಂಧ ಶುಭ ಸುದ್ದಿ ಸಿಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

admin
the authoradmin

Leave a Reply