LatestMysore

ಚುಂಚನಕಟ್ಟೆ ಬಳಿ ಪಲ್ಟಿ ಹೊಡೆದ ಕೆಎಸ್ ಆರ್ ಟಿಸಿ ಬಸ್… ಪ್ರಯಾಣಿಕರು ಪಾರು

ಕೆ.ಆರ್‌.ನಗರ(ಜಿಟೆಕ್ ಶಂಕರ್): ಕೆಎಸ್ ಆರ್ ಸಿಟಿ ಬಸ್ ನ ಸ್ಟೇರಿಂಗ್ ರಾಡ್ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿರುವ ಘಟನೆ ಚುಂಚನಕಟ್ಟೆ–ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದ್ದು ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್ ಕೆ.ಆರ್.ನಗರದಿಂದ ರಾವಂದೂರು ಹೋಗುವ ಮಾರ್ಗದ ಚುಂಚನಕಟ್ಟೆಯ ಬಿದಿರು ಹಳ್ಳದ ಬಳಿ ಈ ಘಟನೆ  ನಡೆದಿದ್ದು, ಘಟನೆಯ ದೃಶ್ಯ ಭೀಕರವಾಗಿ ಕಂಡು ಬಂದಿದ್ದರೂ ಪ್ರಯಾಣಿಕರು ಪವಾಡ ಸದೃಶರಾಗಿ ಪಾರಾಗಿರುವುದು ನಿಜಕ್ಕೂ ನಿಟ್ಟುಸಿರು ಬಿಡುವಂತಾಗಿದೆ.

ಬಸ್ ಪಲ್ಟಿಯಾದ ಪರಿಣಾಮ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ   ಸ್ಥಳೀಯರು ಹಾಗೂ ವಾಹನ ಸವಾರರು  ನೆರವಿಗೆ ಧಾವಿಸಿ, ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದಲ್ಲದೆ  ಗಾಯಾಳುಗಳನ್ನು ಕೆ.ಆರ್.ನಗರ ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯಲ್ಲಿ  ಚಾಲಕ ಕನಕರಾಜು ನಿರ್ವಾಹಕ ಸುರೇಶ್ ಸೇರಿದಂತೆ  ಸುಮಾರು 15 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡರವನ್ನು ಮೈಸೂರಿನ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರ ಪೈಕಿ ಬಹುತೇಕರು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಪ್ರಯಾಣಿಕರಾಗಿದ್ದು 3 ಮಂದಿ ಮಾತ್ರ ಮೈಸೂರಿನವರು ಎಂದು ಗುರುತಿಸಲಾಗಿದೆ.

ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೆಎಸ್ಆರ್ ಟಿಸಿ ಘಟಕದ ವ್ಯವಸ್ಥಾಪಕರು ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಘಟನೆ ಸಂಬಂಧ ಮಾಹಿತಿ ಪಡೆದುಕೊಂಡರು.

ಚಾಲಕನ ಸಮಯ ಪ್ರಜ್ಞೆ: ಬಸ್ ನಲ್ಲಿ ಜನ ತುಂಬಿದ್ದು ಸ್ಟೇರಿಂಗ್ ರಾಡ್ ಕಟ್ಟಾದ ಸುಳಿವು ಅರಿತ ಬಸ್ ಚಾಲಕ ಸಮಯಪ್ರಜ್ಞೆಯಿಂದ, ನಿಧಾನಗತಿಯ ಚಾಲನೆ ಮಾಡಿ ಬಸ್ ಉರುಳಿ ಬಿದ್ದರು ಯಾವುದೇ ಪ್ರಾಣಪಾಯವಾಗದಂತೆ ತಡೆದಿದೆ. ಇದರಿಂದ ಚಾಲಕ ಕನಕರಾಜು ರವರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅಪಘಾತವಾಗಿರುವ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ತೆರಕಣಾಂಬಿ ರಾಮನಾಥಪುರ ಮುಖ್ಯ ರಸ್ತೆಯಾಗಿದ್ದು ರಸ್ತೆಯ ಇಕ್ಕೆಲಗಳು ಸುಮಾರು 15 ಅಡಿಗೂ ಹೆಚ್ಚು ಆಳವಾಗಿದ್ದು ಅಲ್ಲದೆ ನಿರಂತರವಾಗಿ ವಾಹನ ಸಂಚರಿಸುವ ರಸ್ತೆ ಇದಾಗಿದ್ದರೂ ಯಾವುದೇ ತಡೆಗೋಡೆ ಇಲ್ಲದಿರುವ ಕಾರಣ ಬಸ್ ಉರುಳಿ ಬೀಳಲು ಕಾರಣವಾಗಿದೆ. ಇನ್ನಾದರೂ ಸೂಚನಾ ಫಲಕಗಳೊಂದಿಗೆ  ತಡೆಗೋಡೆ ನಿರ್ಮಾಣ ಮಾಡ ಬೇಕಾದ ಅಗತ್ಯವಿದೆ

admin
the authoradmin

Leave a Reply