ಚುಂಚನಕಟ್ಟೆ ಶ್ರೀಕೋದಂಡರಾಮ ದೇವಾಲಯಕ್ಕೆ ಹರಿದು ಬಂದ ಭಕ್ತಸಾಗರ.. ಶ್ರಾವಣ ಶನಿವಾರದ ವಿಶೇಷಪೂಜೆ

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕಿನ ಚುಂಚನಕಟ್ಟೆಯಲ್ಲಿ ಶ್ರಾವಣ ಮಾಸದ ಕೊನೆಯ 4ನೇ ಶ್ರಾವಣ ಶನಿವಾರದ ಹಿನ್ನೆಯಲ್ಲಿ ಶ್ರೀಕೋದಂಡರಾಮ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರೀ ಕ್ಷೇತ್ರವಾಗಿರುವ ಚುಂಚನಕಟ್ಟೆ ಗ್ರಾಮದಲ್ಲಿರುವ ಶ್ರೀಕೋದಂಡರಾಮನ ದೇವಾಲಯದಲ್ಲಿ ಕೊನೆಯ ಶ್ರಾವಣ ಶನಿವಾರವನ್ನು ಭಕ್ತಿಭಾವದಿಂದ ನವವಿವಾಹಿತರು ಹಾಗೂ ಭಕ್ತರು ವಿಶೇಷ ಪೂಜೆಪುನಸ್ಕಾರದೊಂದಿಗೆ ಮುಡಿ, ಉತ್ಸವ ಸೇವೆ, ಇನ್ನಿತರ ಹರಕೆ ತೀರಿಸಿ ಪ್ರಸಾದ ವಿನಿಯೋಗ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಅರ್ಚಕ ವೃಂದ ಶ್ರೀರಾಮ ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿಗೆ ಕ್ಷೀರಾಭಿಷೇಕ, ಸೇರಿದಂತೆ ಪಂಚಾಮೃತಭಿಷೇಕ ವಿಶೇಷ ಅರ್ಚನೆ ಹೋಮ ಹವನಗಳು ಹಾಗೂ ಇನ್ನಿತರ ಕೈಂಕಾರ್ಯಗಳನ್ನು ನೆರವೇರಿಸಿದ ಅವರು ದೇವರ ಮೂರ್ತಿಗಳಿಗೆ ಹಲವು ಬಗೆಯ ಹೂವಿನಿಂದ ಅಲಂಕಾರ ಮಾಡಿದ ಪ್ರಧಾನ ಅರ್ಚಕ ನಾರಾಯಣ ಅಯ್ಯಂಗಾರ್ ಹಾಗೂ ವಾಸುದೇವನ್ ಭಕ್ತರ ಸಮ್ಮುಖದಲ್ಲಿ ದೇವರಿಗೆ ಪ್ರಸಾದ ನೈವೇದ್ಯ ಮಹಾಮಂಗಳಾರತಿ ನೆರವೇರಿಸಿದರು.

ನಾನಾ ಭಾಗಗಳಿಂದ ಬಂದಿದ ಅಪಾರ ಸಂಖ್ಯೆಯ ಭಕ್ತರು ಬೆಳಗ್ಗೆಯಿಂದ ಸಂಜೆವರೆಗೂ ಸರತಿ ಸಾಲಿನಲ್ಲಿ ನಿಂತು ದೇವರಿಗೆ ಹಣ್ಣುಕಾಯಿ ನೀಡಿ ಶ್ರದ್ಧಾಭಕ್ತಿಯಿಂದ ಮನದಲ್ಲೇ ನಮಿಸುತ್ತ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಭಕ್ತಿಯಿಂದ ಪೂಜೆ ಸಲ್ಲಿಸಿ ಕಣ್ತುಂಬಿಕೊಂಡರು.
ಇನ್ನು ಶ್ರೀರಾಮ, ಲಕ್ಷ್ಮಣ, ಸೀತಾ ಉತ್ಸವ ಮೂರ್ತಿಗಳಿದ್ದ ಚಿಕ್ಕ ರಥಕ್ಕೆ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಥಕ್ಕೆ ಎಂಸಿಡಿಸಿಸಿ ದೊಡ್ಡಸ್ವಾಮೇಗೌಡ ಪತ್ನಿ ವನಜಾಕ್ಷಿ ಹಾಗೂ ಅರ್ಚಕ ವೃಂದ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಬಳಿಕ. ಗ್ರಾಮ ಸೇರಿದಂತೆ ಜಿಲ್ಲೆಯ ಇನ್ನಿತರ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ಸಮೂಹ ಗೋವಿಂದಾ..! ಗೋಪಾಲ ಗೋಪಾಲ ಗೋವಿಂದಾ..! ಎಂಬ ಶ್ರೀರಾಮ ನಾಮ ಪಠಿಸುತ್ತ ರಥವನ್ನು ಒಂದು ಸುತ್ತು ಎಳೆಯುವ ಮೂಲಕ ಭಕ್ತಿ ಭಾವ ಮೆರೆದರು.
ಮುನ್ನೆಚ್ಚರಿಕೆ ಕ್ರಮವಾಗಿ ಪಿ ಎಸ್ ಐ ಶಶಿಕುಮಾರ್ ನಿರ್ದೇಶನದಂತೆ 2 ಡಿ.ಆರ್ ತುಕಡಿ, ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.







