ArticlesLatest

ಮಾತೃದೇವವೋ ಭವಃ ಪಿತೃದೇವೋ ಭವಃ ಗುರುದೇವೋ ಭವಃ… ಇದು ಶಿಕ್ಷಕರ ದಿನಾಚರಣೆ ವಿಶೇಷ

ಭಾರತ ದೇಶದಲ್ಲಿ ಮಾತ್ರ ಮಾತೃದೇವವೋ ಭವಃ ಪಿತೃದೇವೋ ಭವಃ ಗುರುದೇವೋ ಭವಃ ಎಂಬ ಮಂತ್ರದ ಪ್ರಕಾರ ತಾಯಿ-ತಂದೆ ನಂತರ ಗುರುವಿಗೆ ಮೊದಲ ಸ್ಥಾನ ನೀಡುವ ಮೂಲಕ ಒಂದು ಉತ್ತಮ ಆಚಾರ-ವಿಚಾರ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಕಾಲಕ್ರಮೇಣ ಸರ್ವಪಲ್ಲಿ ರಾಧಾಕೃಷ್ಣನ್ ಸ್ಮರಣಾರ್ಥ ಪ್ರತಿವರ್ಷ ಸೆಪ್ಟೆಂಬರ್ 5ನೇ ತಾರೀಖು “ಶಿಕ್ಷಕರ ದಿನಾಚರಣೆ” ಯನ್ನಾಗಿ ಆಚರಿಸಿಕೊಂಡು ಬರಲಾಗಿದೆ. ಗುರುರ್‌ಬ್ರಹ್ಮ ಗುರುರ್‌ವಿಷ್ಣು ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ. ಸೃಷ್ಟಿ ಸ್ಥಿತಿ ಲಯ ದೇವರುಗಳಾದ ತ್ರಿಮೂರ್ತಿಗಳ ನಂತರದ ನಾಲ್ಕನೇ ಸ್ಥಾನವನ್ನು ಗುರುವಿಗೆ ನೀಡಲಾಗಿದೆ.

ಪೌರಾಣಿಕ, ಐತಿಹಾಸಿಕ,  ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲು ಸಹ ಮಾನ್ಯತೆ ದೊರಕಿಸಲಾಗಿದೆ. ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. “ಅಕ್ಷರಂ ಏವಂ ಕಲಿಸಿದಾತಂ ಗುರು ವಂದ್ಯಂ” ಎಂಬುದರ ತಾತ್ಪರ್ಯ” ಒಂದೇ ಒಂದು ಅಕ್ಷರವನ್ನ ಕಲಿಸಿದವರಿಗೂ ಗುರುವಿನ ಸ್ಥಾನಮಾನ ನೀಡಬೇಕು.ಇವರನ್ನು ಅಧ್ಯಾಪಕ ಆಚಾರ್ಯ ಶಿಕ್ಷಕ ಮೇಷ್ಟ್ರು ಟೀಚರ್ ಮುಂತಾದ ವಿವಿಧ ಪದನಾಮದಿಂದ ಗುರುತಿಸುತ್ತಾರೆ.

ಗುರು ಎಂಬುದರ ಅರ್ಥ:-

ಅನಂತ ಅನನ್ಯ ಅಮೋಘ ಅಧ್ಭುತ ಅಮರ ಅಪರಿಮಿತ ಅಸಾಮಾನ್ಯ ಅಗಣಿತ ಮುಂತಾದ ವ್ಯಾಖ್ಯಾನ ನೀಡಬಹುದು. ಭೂಮಂಡಲದಲ್ಲಿ ಮಾನವನಿಗೆ ಎದುರಾಗುವ ಅನರ್ಥ ಅಪಾರ್ಥ ಅಸಮರ್ಥ ಅಸಾಧ್ಯ ಕ್ಲಿಷ್ಟ ಎಂಥದೇ ಸಮಸ್ಯೆಗಳಿಗೆ ಏಕಚಿತ್ತ ದ್ವೈತಾದ್ವೈತ ತ್ರಿಕರಣಶುದ್ಧಿ ಚತುಷ್‌ದಿಕ್ಕು ಪಂಚಭೂತ ಅರಿಷಡ್‌ವರ್ಗ ಸಪ್ತಸ್ವರ ಅಷ್ಟಭೋಗಭಾಗ್ಯ ನವ(ರಸ)ಗ್ರಹ ದಶಮಸಿರಿ ಸೊಬಗು ಏಕಾದಶತೃಪ್ತಿ ದ್ವಾದಶಮುಕ್ತಿ ಹಾಗೂ ಶಿಷ್ಟರಕ್ಷಕ-ದುಷ್ಟಶಿಕ್ಷಕ ಇದೆಲ್ಲದರ ಸಾರಾಂಶವನ್ನು ಸರಳವಾಗಿ ಎಳೆಎಳೆಯಾಗಿ ತಿಳಿಹೇಳುವ ಪೂರ್ಣಕುಂಭ ಸುರಭಿಯೆ ಗುರು!  ಗುರುವಿನ ಮಹಾತ್ಮೆ ಎಷ್ಟು ವರ್ಣಿಸಿದರೂ ಸಾಲದು.

ಅರ್ಹ ಆಚಾರ್ಯ ಆಗಬೇಕಾದರೆ ಯಾವುದೇ ವಿದ್ಯೆಯನ್ನು ಮೊದಲು ತಾನು ಅರ್ಥೈಸಿಕೊಂಡು ನಂತರ ಶಿಷ್ಯರಿಗೆ ಬೋಧಿಸಬೇಕು. ಲಿಖಿತ-ಪ್ರಾಯೋಗಿಕ ಶಿಕ್ಷಣದ ಜತೆಗೆ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ಕಲಿಸಬೇಕು.  ಅದ್ಭುತ ಆಶ್ಚರ್ಯ ನವ್ಯ ಭವ್ಯ ಉನ್ನತ ಅಧ್ಯಯನ ಸಂಶೋಧನೆ ಬಗ್ಗೆ ಸರಿಮಾರ್ಗದರ್ಶನ ನೀಡಬೇಕು.  ಕಠಿಣ-ಹೊಸ ಪದ-ವಾಕ್ಯ ವ್ಯಾಕರಣ-ಅವಧಾನ ಇವುಗಳಿಗೆಲ್ಲ ಗುರುವೆ ನಿಘಂಟಾಗಬೇಕು! ನ್ಯಾಯಾನ್ಯಾಯ ಧರ್ಮಾಧರ್ಮ ಸತ್ಯಾಸತ್ಯ ಅರ್ಥಾನರ್ಥ ಮೋಸವಂಚನೆ ಪಾಪಪುಣ್ಯ ಕಾನೂನು ಸಂವಿಧಾನ ಪರೀಕ್ಷೆ ಫ಼ಲಿತಾಂಶ ಪ್ರಯತ್ನ ಫ಼ಲಾಫ಼ಲ ಸದು[ದುರು]ಪಯೋಗ ಮುಂತಾದವುಗಳ ಬಗ್ಗೆ ವಕೀಲನಾಗಬೇಕು ಪ್ರವಾದಿಯಾಗಬೇಕು ತಾಯಿಯಾಗಬೇಕು ತಂದೆಯಾಗಬೇಕು ಗೆಳೆಯನಾಗಬೇಕು ಶಿಕ್ಷಕ!

ಜಗತ್ತಿನ ಯಾವುದೆ ಜನ ದೇಶ ಭಾಷೆ ಸಂಸ್ಕೃತಿ ಇತಿಹಾಸ ಇತ್ಯಾದಿ ಬಗ್ಗೆ ಕನಿಷ್ಟ ಜ್ಞಾನವಿದ್ದು ಎಂಥ ವಿದ್ಯಾರ್ಥಿಯನ್ನೂ ತಿದ್ದಿ ತೀಡುವ ಶಕ್ತಿ ಮನವರಿಕೆ ಮಾಡುವ ಯುಕ್ತಿ ಇರಬೇಕು. ಸರಳತೆ ಸಜ್ಜನಿಕೆ ಬೆಳೆಸಿಕೊಂಡು ನವರಸಗಳ ಭಾವನೆಯಲ್ಲಿ ಇ[ಬ]ರುವ ಕಠಿಣ-ಮೃದು ಉಚ್ಛಾರಣೆ ಪದಪ್ರಯೋಗ ಉಚಿತಾನುಚಿತ ಪೂರಕ ಮಾರಕ ಪರಿಣಾಮ ಪರಿಮಿತಿ ಬಗ್ಗೆ ಪೂರ್ಣವಾಗಿ ಪಕ್ವವಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮನನ ಮಾಡಿಸುವಂಥ ಉಪಾಧ್ಯಾಯ ಆಗಬೇಕು! ಯಾವುದೆ ಒಂದು ಶಾಸ್ತ್ರ ಅಥವ [ವಿ]ಜ್ಞಾನವನ್ನು ಬೋಧಿಸಿದ ನಂತರ ಅದನ್ನು ಸರಾಗವಾಗಿ, ಸುಲಭವಾಗಿ, ಸಂದರ್ಭೋಚಿತವಾಗಿ ಅರ್ಥೈಸುವ ಮತ್ತು ಉದಾಹರಣೆ ಸಮೇತ ತಾತ್ಪರ್ಯ ತಿಳಿಸುವ ಕಲೆಯನ್ನು  ಕಲಿಸುವ ಅಥವ ಮೈಗೂಡಿಸಿಕೊಂಡ ತಜ್ಞ ಆಗಿರಬೇಕು

ಗೀತ ಸಂಗೀತ ನಾಟ್ಯ ನಟನೆ ಕುಂಚ(ಶಿಲ್ಪ)ಕಲೆ ವಾದವಿವಾದ ವಿತಂಡವಾದ ತರ್ಕ-ವಿತರ್ಕ, ರೀತಿ-ನೀತಿ, ವಾ[ಕ್ಪಟು]ಚಾಳಿತನ ಸ್ವಾವಲಂಬನ ಪರಾವಲಂಬನ ಸ್ವಂತಿಕೆ ಎರವಲು ಅ[ನ]ಸೂಯೆ ಸ್ವಾತಂತ್ರ್ಯ ಸ್ವೇಚ್ಛಾಚಾರ ಮುಂತಾದವುಗಳನ್ನ ವಿವಿಧ ಕೋನದಲ್ಲಿ ವಿಮರ್ಶಿಸುವ ಟೀಕೆ-ಟಿಪ್ಪಣಿ ಮಾಡುವಂಥ [ಪ್ರ]ಶಿಕ್ಷಣವನ್ನು ಕಲಿಸಿಕೊಡುವ ಸಕಲಕಲಾ ವಲ್ಲಭನಾಗಬೇಕು. “ಗುರು-ಶಿಷ್ಯ” ಎಂಬ ಕಾಲಚಕ್ರದೊಳಗೆ ವಿದ್ಯೆಯನ್ನು ಒಬ್ಬರಿಂದ ಮತ್ತೊಬ್ಬರಿಗೆ ಕಲಿತು ಕಲಿಸುವ ಮನಸ್ಸು ನಿರಂತರವಾಗಿ ಇರಬೇಕು. ಸಹಜವಾದ ಕ್ರಿಯೆ-ಪ್ರಕ್ರಿಯೆಗಳಿಗೆ ಸ್ಪಂದಿಸಬೇಕು. ಕಾಲಕ್ಕೆ ತಕ್ಕಂತೆ, ಭೌಗೋಳಿಕ ಲಕ್ಷಣಕ್ಕೆ ತಕ್ಕಂತೆ, [ಪ್ರ]ದೇಶಕ್ಕೆ ತಕ್ಕಂತೆ, ಭೌ[ತಿ]ದ್ಧಿಕ ಬದಲಾವಣೆಗೆ ತಕ್ಕಂತೆ ಮಾನವೀಯ ಮೌಲ್ಯಗಳನ್ನು ಹೊಂದಿಸಬೇಕು,ಸರಿಯಾದ ಮಾರ್ಗದರ್ಶನ ಮಾಡಬೇಕು.

ಜೀವನದಲ್ಲಿ ಎದುರಾಗುವ ಕಷ್ಟನಷ್ಟ ಕೋಪತಾಪ ತ್ಯಾಗಭೋಗ ಸವಾಲುಗಳನ್ನು ಸರಿಸಮನಾಗಿ ಸ್ವೀಕರಿಸುವ ಸಿದ್ಧಶಿಲೆ ಆಗಿಸಬೇಕು.  ಇತಿಹಾಸದ ಘಟನೆಗಳ ಅಥವಾ ಅನುಭವದ ದೃಷ್ಟಾಂತಗಳ ಉದಾಹರಣೆ ನೀಡಿ ಧ್ಯೈರ್ಯ ಸಾಹಸದ ಮೂರ್ತಿಯಾಗಿಸಬೇಕು ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷಣೆ ಸಿದ್ಧಾಂತದ ಮೇಲೆ, ನಮ್ಮ ನಾಡಿನ ವೇದಾಂತದ ಹಿನ್ನೆಲೆಯಲ್ಲಿ ಮುನ್ನುಗ್ಗುತ್ತ ಒಮ್ಮೊಮ್ಮೆ  ತಲೆಬಾಗುತ್ತ, ಆತ್ಮಸಾಕ್ಷಿಯಾಗಿ ಸರಿ ಎಂಬುದನ್ನು ಬಿಡದೆ ಮುಂದುವರೆಸುತ್ತ ‘ಸೈ’ಎನಿಸಿಕೊಳ್ಳಬೇಕು. ದಿ[ಟ]ಟ್ಟ ಗುರುವು ಪ್ರಪಂಚದ ಪ್ರತಿಯೊಂದು ಸಾಧನೆ ಬೋಧನೆಗಳ ಸಂಗಮವಾಗಿದ್ದು ನಿಗರ್ವಿ ನಿಸ್ವಾರ್ಥಿ ನಿಷ್ಪಕ್ಷಪಾತಿ ಆಗಿರುತ್ತಾನೆ.

ಸಮಾಜ ಕಂಟಕರಾದ ಗುರು-ಶಿಷ್ಯರನ್ನು  ದೂರವಿರಿಸಬೇಕು? ಆಪತ್ಕಾಲದಲ್ಲಿ ತನ್ನಂ ತಾನು ರಕ್ಷಿಸಿಕೊಳ್ಳುವಂಥ ಶಸ್ತ್ರಾಸ್ತ್ರ ವಿದ್ಯೆಗಳ ಜತೆಗೆ ಸಾಮ-ದಾನ-ಭೇದ-ದಂಡ ಎಂಬ ಚತುರೋಪಾಯಗಳನ್ನು ಕಲಿತು-ಕಲಿಸಬೇಕು. ಹಾಗಿಲ್ಲದೆಹೋದಾಗ ಅನ್ಯಾಯ,ವಂಚನೆ, ದ್ರೋಹಕ್ಕೆ ಗುರಿಯಾಗಿ ಅಕಾಲ ಮೃತ್ಯುಗೆ ಬಲಿ ಆಗಬಹುದು.

ವಿದ್ಯೆಬಗ್ಗೆ ರಾಷ್ಟ್ರಕವಿ ಕುವೆಂಪು ವ್ಯಾಖ್ಯಾನ : ವಿದ್ಯೆಯೆಂಬುದು ಪ್ರಶ್ನೆಯಿಂದ ಆಶ್ಚರ್ಯದೆಡೆಗೆ ಪುನಃ ಆಶ್ಚರ್ಯದಿಂದ ಪ್ರಶ್ನೆಯೆಡೆಗೆ ಚಲಿಪ ನಿರಂತರ ಪ್ರಕ್ರಿಯೆ ಈ ಪ್ರಕ್ರಿಯೆಯಿಂದಲೆ ಪರಿಪೂರ್ಣತೆ ಪ್ರಾಪ್ತವಾಗುತ್ತದೆ ಎಂಬುದು ರಾಷ್ಟ್ರಕವಿಯ ಅಭಿಮತ.

ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಹೇಳಿದ್ದು..

“ಮಿಯರ್ ಇನ್‌ಫ಼ರ್ಮೇಶನ್ ಈಸ್ ನಾಟ್ ನಾಲೆಡ್ಜ್  & ಮಿಯರ್ ನಾಲೆಡ್ಜ್ ಈಸ್ ನಾಟ್ ವಿಸ್‌ಡಮ್” ಎಂದು ಘೋಷಿಸಿದ್ದಾರೆ. ಪ್ರತಿಯೊಬ್ಬ ಶಿಷ್ಯನ ಜೀವನವೆಂಬ ಕಟ್ಟಡಕ್ಕೆ ಅರಿವೆಂಬ ಅಡಿಪಾಯವನ್ನು ಸರಿಯಾಗಿ ಹಾಕುವ ದಕ್ಷ ಅಭಿಯಂತರನಾಗಿ ಸಕಲ ಸದ್ ವಿದ್ಯೆಯನ್ನು ನಿರ್ವಿವಾದಿತ ವಾಗಿಯೂ ನಿರ್ಭಯವಾಗಿಯೂ ಸಕಾಲದಲ್ಲಿ ಕಲಿಸುವ ಪಾರಂಗತ ಆಗಬೇಕು. ಪಠ್ಯ ವಿಷಯದ ಜತೆಗೇ ಪಶು ಪ್ರಾಣಿ ಪಕ್ಷಿ ಸಂಕುಲದ ಮತ್ತು ರಾಷ್ಟ್ರ [ಸಂ]ಪತ್ತುಗಳ ಉ(ದುರು)ಪಯೋಗ ಅದರಿಂದಾಗುವ ಆ[ವಿ]ಪತ್ತುಗಳ ಪರಿಚಯ ಮಾಡಿಸಬೇಕು. ಸಮಾಜ ಕಂಟಕ ಕಾನೂನು ಬಾಹಿರ ಚಟುವಟಿಕೆಗಳಿಂದ ಉಂಟಾಗುವ ನ[ಕ]ಷ್ಟದ ಬಗ್ಗೆ ಶಿಷ್ಯರಿಗಷ್ಟೆಅಲ್ಲ ಇಡೀಸಮಾಜಕ್ಕೆ ತಿಳಿಯ ಹೇಳಬೇಕು.

ಗುರುಶಿಷ್ಯರಿಂದ ಪ್ರಪಂಚ ಅಭಿವೃದ್ಧಿಯೂ ಆಗಬಹುದು, ಸರ್ವನಾಶವೂ ಆಗಬಹುದು. ಗುರು-ಶಿಷ್ಯ ಇಬ್ಬರೂ ಸರಿಇದ್ದರೆ ಮಾತ್ರ ದೇಶ-ಕೋಶ ಎರಡೂ ಸರಿಇರುತ್ತವೆ. ಪಾಳುಬಿದ್ದ ದೇಶವನ್ನೂ ಪುನರ್ನಿರ್ಮಿಸಬಹುದು. ಇಲ್ಲವಾದರೆ ಯಾವುದೇ ದೇಶವು ಕಾಗೆ-ಗೂಬೆಗಳ ನಾ(ಬೀ)ಡಾಗುತ್ತದೆ!  “ಯಥಾಗುರು ತಥಾಶಿಷ್ಯ, ಯಥಾರಾಜ ತಥಾಪ್ರಜ” ನಾಣ್ಣುಡಿಯನ್ನು ಇವತ್ತಿಗೂ ಒಪ್ಪುವುದು ಅನಿವಾರ್ಯ. ಎಲ್ಲ ಕಾಲದಲ್ಲು ಪರಮಗುರು, ಪವಿತ್ರಶಿಷ್ಯವರ್ಗ ಇದ್ದೇಇರುತ್ತದೆ. ಅಲ್ಲಲ್ಲೆ ಅಲ್ಪಸ್ವಲ್ಪ ಚೋರ್‌ ಗುರು, ಚಂಡಾಲ ಶಿಷ್ಯವರ್ಗವೂ  ಇರಬಹುದೇನೋ….?!

ಇತ್ತೀಚೆಗೆ ಬೋರ್‌ ಗುರು ಮತ್ತು ಭಂಡ ಶಿಷ್ಯವರ್ಗ ಹೆಚ್ಚಾಗಿ ಹುಟ್ಟಿಕೊಳ್ಳುತ್ತಿವೆ ಎಂಬುದು ವಿಚಿತ್ರವಾದರೂ ಸತ್ಯ! ‘ಕೇಡುಗಾಲಕ್ಕೆ ನಾಯಿಯು ಮೊಟ್ಟೆಇಟ್ಟಂತೆ’  ಇವತ್ತಿನ ದಿನ  ‌ಗುರುಯಾರು? ಶಿಷ್ಯಯಾರು? ಎಂದು ನಿಖರವಾಗಿ ಗುರುತಿಸಲು ಅಸಾಧ್ಯವಾದ ಹೀನಾಯ ಸ್ಥಿತಿ ತಲುಪಿದೆ! ಗುರು-ಶಿಷ್ಯರು ಭೇಟಿ ಆದಾಗ ಹಾಯ್-ಬಾಯ್ ಹೇಳಿ ತಮ್ಮದೇ ಆದ ಚಿತ್ರ-ವಿಚಿತ್ರ

ಲೋಕದಲ್ಲಿ ಕಾರ್-ಬಾರ್ ಪಿಜ಼ಾ-ಬರ್ಗರ್ ಜೆರಾಕ್ಸ್-ಈನೋಟ್ಸ್ ಲ್ಯಾಪ್‌ಟಾಪ್-ಪೆನ್‌ಡ್ರೈವ್ ಆಡಿಯೊ-ವೀಡಿಯೊ ಇಯರ್ಫ಼ೋನ್-ಮೊಬೈಲ್ ಟ್ಯಾಬ್ಲೆಟ್-ಇಂಟರ್‌ನೆಟ್ ಇತ್ಯಾದಿ AI ಅಗತ್ಯಕ್ಕಿಂತ ಹೆಚ್ಚು ಬಳಸುವಲ್ಲಿ ವ್ಯಸನಿ [ಅಡಿಕ್ಟ್] ಆಗುತ್ತಿದ್ದಾರೆ.

ವಿದ್ಯಾರ್ಜನೆಗೆ ಅವಶ್ಯಕವಾದ ಧೀರ್ಘ ಬಾಳಿಕೆಯ ಆರೋಗ್ಯಕರ ವಾದ ಎಲ್ಲರಿಗೂ ಎಟುಕುವ ಪೆನ್ನು ಹಾಳೆ ನೋಟ್ ‌ಬುಕ್ ಟೆಕ್ಸ್ಟ್‌ ಬುಕ್ ಡಿಕ್ಷನರಿ ಗೈಡ್ ಜಾಮಿಟ್ರಿ ಕಾಪಿ ಪುಸ್ತಕ ಮಾಯವಾದವು?! ಮುಂಜಾನೆ ಮತ್ತು ಸಂಜೆ ಓದು ಅಭ್ಯಾಸ ಕಾಗುಣಿತ ಮಗ್ಗಿ ಪದ್ಯ ಕಂಠ [ಮನೆ]ಪಾಠ ಸಮೂಹ ಅಧ್ಯಯನ ಜತೆಗೆ ಸಕಾಲದಲ್ಲಿ ವಿದ್ಯೆಬುದ್ಧಿ ನಡೆನುಡಿ ಕಲಿತು ತಾಯಿತಂದೆ ಗುರುಹಿರಿಯರ ಸೋದ[ರ]ರಿ ಬಂಧುಬಳಗ ನೆರೆಹೊರೆಯ ಶುಭಾಶುಭ ಕಾರ್ಯಗಳಲ್ಲಿ ಭಾಗವಹಿಸುವುದು, ಎಲ್ಲರ ಒಡನಾಟ ಸಲಹೆ ಬುದ್ಧಿವಾದ ಸಹಜೀವನ ಸಹಭೋಜನ ದೇಶ ಸುತ್ತಿ ಕೋಶ ಓದಿ ಸು[ವಿ]ಜ್ಞಾನ ಬೆಳೆಸಿಕೊಳ್ಳುವುದು.

ಸೂರ್ಯೋದಯಕ್ಕೆ ಮುನ್ನ ಎದ್ದು ಯೋಗಾಭ್ಯಾಸ ವ್ಯಾಯಾಮ ಗಾಯನ/ವಾದ್ಯ ಸಂಗೀತ ಅಭ್ಯಾಸ ಮನೆಗೆಲಸದಲ್ಲಿ ನೆರವಾಗುವುದು. ಮುಂತಾದ ಸುಬುದ್ಧಿ-ಸನ್ನಡತೆಗಳು ಸ್ಮಶಾನ ಸೇರುತ್ತಿವೆಯೇನೊ?! ವಯೋಧರ್ಮಕ್ಕೆ ಅನುಗುಣವಾಗಿ ಕಲಿಕೆ-ಗಳಿಕೆ ಮಾಡಲು ಆಗುತ್ತಿಲ್ಲ, ಸಕಾಲಕ್ಕೆ ವಿವಾಹ/ಮಕ್ಕಳ ಸೌಭಾಗ್ಯ ದೊರಕುತ್ತಿಲ್ಲ. ಎಲ್ಲದರಲ್ಲು ಯಾವಾಗಲೂ ‘ವೇಗ[ಸ್ಪೀಡ್]’ ಎಲ್ಲ[ರೂ]ವೂ ಅಪ[ಆ]ಘಾತಕ್ಕೆ ಈಡಾಗಿ ಅಂಗಾಂಗ ವೈಫ಼ಲ್ಯ ‘ಕೋಮಾ’ ಇತ್ಯಾದಿ ದುರಂತಕ್ಕೆ ತುತ್ತಾಗುತ್ತಾರೆ!  ಗುರು-ಶಿಷ್ಯರು ಸಮಾಜಕ್ಕೆ ಮತ್ತು ಜಗತ್ತಿಗೆ ‘ವರ’ವಾಗಬೇಕೆ ಹೊರತು ‘ಶಾಪ’ವಾಗಬಾರದು.

ಗುರುವು ಹೀ[ಹೇ]ಗಿರಬೇಕು?:-

ತ್ರಿಕರಣ ಶುದ್ಧಿಯಿಂದ ವಿದ್ಯೆ ಕಲಿಸಬೇಕು. ವಿದ್ಯಾಸಕ್ತರಿಗೆ ಸಹೋದ್ಯೋಗಿಗೆ ಅವಶ್ಯಕತೆ ಇದ್ದವರಿಗೆ ಬಯಸಿಬಂದವರಿಗೆ ಸಾರ್ಥಕರೀತಿ ಪ್ರತಿಫಲಾಪೇಕ್ಷೆ ಬಯಸದೆ ಪ್ರಾಮಾಣಿಕ ವಿದ್ಯಾದಾನ ಮಾಡಬೇಕು. ಸದಭಿರುಚಿ ಸಮರ್ಥತೆ ಬೋಧನೆ ಸಂಶೋಧನೆ ಸಾಮಾಜಿಕ ನಡವಳಿಕೆ ಸಚ್ಚ್ಯಾರಿತ್ರ್ಯದ ಬಗ್ಗೆ ‘ರೋಲ್‌ ಮಾಡಲ್’ ಆಗಬೇಕು.

ಶಿಷ್ಯನು ಹೀ(ಹೇ)ಗಿರಬೇಕು?:-

ದಿನಚರಿಗೆ ಅನುಗುಣವಾಗಿ ಸ-ಸಮಯಕ್ಕೆ ಎದ್ದು ದೇವರನ್ನು ಸ್ಮರಿಸಿ ತಾಯಿತಂದೆ ಗುರುಹಿರಿಯರಿಗೆ ನಮಸ್ಕರಿಸಿ ಅಭ್ಯಾಸ ಪ್ರಾರಂಭಿಸಬೇಕು. ನಿಷ್ಠೆಯಿಂದ ಪ್ರತಿ ತರಗತಿಗೂ ಹಾಜರಾಗಿ ನಿಶ್ಯಬ್ಧ ಶ್ರದ್ಧೆಯಿಂದ ಉಪನ್ಯಾಸ ಆಲಿಸಬೇಕು. ಪ್ರತಿಯೊಬ್ಬ ಗುರುವಿಗೂ ಸಮಾನ ಗೌರವ ತೋರಿಸಿ ಪಾಠ ಅರ್ಥವಾಗದಿದ್ದರೆ ಕೇಳಿ ತಿಳಿದುಕೊಳ್ಳಬೇಕು. ಶೀಲ, ವಿನಯ, ನಂಬಿಕೆ, ಚಾರಿತ್ರ್ಯ, ಸ್ವಚ್ಚ ಇರಬೇಕು. ‘ವಿದ್ಯಾತುರಾಣಾಂ ನ ನಿದ್ರಾಹಾರಂ’ ‘ಹಿಂದೆಗುರು ಮುಂದೆಗುರಿ’ “ಸ್ಟೂಡೆಂಟ್ ‌ಲೈಫ಼್ ಈಸ್ ಎ ಗೋಲ್ಡನ್ ‌ಲೈಫ಼್” ಅನ್ವರ್ಥವಾಗುವಂತೆ ನಡೆನುಡಿ ಕಾಪಾಡಿಕೊಳ್ಳಬೇಕು. ಪೋಷಕರು, ಶಾಲಾಕಾಲೇಜು, ಸರ್ಕಾರ, ಸಮಾಜ, ಗೆಳೆಯರು, ಸಹಪಾಠಿ, ಗ್ರಂಥಾಲಯ, ಮಾಧ್ಯಮ, ಆದಿಯಾಗಿ ಎಲ್ಲರಿಂದಲೂ ದೊರಕುವ ಸೌಲಭ್ಯ ಮತ್ತು ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಒಂದುವೇಳೆ ಈ ಹಂತದಲ್ಲಿ ಉಡಾಫೆ, ಬೇಜವಾಬ್ದಾರಿಯ ಕೆಟ್ಟ ಛಾಳಿಯಿಂದ ಏನಾದರು ವಿದ್ಯೆಯು ನೈವೇದ್ಯ ಆದಾಗ ಕೆಳದರ್ಜೆ ನೌಕರನಾಗಿ ಹೀನಾಯ ಜೀವನ ನಡೆಸಬೇಕಾಗುತ್ತದೆ ಎಚ್ಚರಿಕೆ?! ಅಡ್ಡದಾರಿ ಹಿಡಿದು ಕಾನೂನುಬಾಹಿರ ಚಟುವಟಿಕೆಗಳ ದಾಸನಾಗಿ, ಅಪರಾಧಿಯಾಗಿ, ಸೆರೆಮನೆ(ಜೈಲು) ಸೇರಿ ಜೀವಂತ ಶವವಾಗಿ ಬದುಕಬೇಕಾಗುತ್ತದೆ ಜೋಕೆ..?!

ವಿದ್ಯಾರ್ಥಿ ಸಮೂಹಕ್ಕೆ ಕಾಮನ್ ಗೈಡ್‌ಲೈನ್ಸ್…

ಯಾವುದೆ ಕಾರಣಕ್ಕು ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಲು ಕಲಿಯಿರಿ.  ಕಷ್ಟಪಟ್ಟು ಓದುವಬದಲು ಇಷ್ಟಪಟ್ಟು ಅಭ್ಯಾಸಮಾಡಿರಿ. ರ್‍ಯಾಂಕ್‌ಗೋಸ್ಕರ ಅಂಕಗಳಿಕೆ ಬದಲು ಅರ್ಥೈಸಿಕೊಂಡು ಅಂಕಗಳಿಸಿರಿ. ತಡರಾತ್ರಿ ಹಾಸ್ಟೆಲ್/ಮನೆ ತಲುಪಿ ನಿಮ್ಮ ವಾರ್ಡನ್/ಪೋಷಕರನ್ನು ಬಲಿಕೊಡದಿರಿ. ಸ್ವಯಂಕೃತ ಅಪರಾಧಕ್ಕೆ ‘ಶಾಪ’ ‘ಹಣೆಬರಹ’ ಮುಂತಾದ ಮೂಢ/ಅಪನಂಬಿಕೆ ಹೆಸರಿಟ್ಟು ಸು[ಪೊ]ಳ್ಳು ನೆಪವೊಡ್ಡಿ ಜಾರಿಕೊಳ್ಳದಿರಿ. ‘ರಾಗಿಂಗ್’ ಶಿಕ್ಷಾರ್ಹ ಅಪರಾಧ, ಇದನ್ನು ಬುಡಸಹಿತ ಕಿತ್ತೊಗೆಯಿರಿ. ಲವ್- ಲವಿಕೆಯಿಂದ ಇರಲು ಪಠ್ಯೇತರ ಚಟುವಟಿಕೆ/ಸ್ಫರ್ಧೆಗಳಲ್ಲಿ ಭಾಗವಹಿಸಿರಿ. ಶ್ರವಣ-ದೃಶ್ಯ ಮಾಧ್ಯಮದ ಮೂಲಕ ಶೈಕ್ಷಣಿಕ ಜ್ಞಾನ ಪಡೆವ ಪ್ರವೃತ್ತಿ ಜತೆಗೆ ಮನರಂಜನಾತ್ಮಕ ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳಿರಿ.

ಅಂದಾಭಿಮಾನ ದ್ವೇಷಾಸೂಯೆ ಪ್ರೇ[ಕಾ]ಮ ಚಾ[ಡೇ]ಟಿಂಗ್ ಮುಂತಾದ ಅ[ತೀ]ನಾಗರಿಕತೆ ವರ್ಜಿಸಿ. ದ್ವೇಷವನ್ನು ಪ್ರೀತಿಯಿಂದಲೂ ಕ್ರಾಂತಿಯನ್ನು ಶಾಂತಿಯಿಂದಲೂ ಗೆಲ್ಲುವ ಸಹನಾಶೀಲತೆ ಬೆಳಿಸಿಕೊಳ್ಳಿರಿ. ಕಳೆದುಹೋದರೆ ಮತ್ತೆಂದೂ ದೊರಕದ ಸಮಯ-ಹಣ-ಜ್ಞಾನ-ಪ್ರವಚನ-ಸ್ನೇಹ-ವಿಶ್ವಾಸ-ಸೌಲಭ್ಯ, ಅವಕಾಶವನ್ನು ವ್ಯರ್ಥ ಮಾಡದಿರಿ. ತಪ್ಪುಯಾರೆ ಮಾಡಲಿ ಧೈರ್ಯವಾಗಿ ಪ್ರಶ್ನಿಸಿರಿ, ತಿದ್ದುಕೊಳ್ಳಲು ಅವಕಾಶ ನೀಡಿರಿ. ಪುನರಾವರ್ತನೆ ಆಗದಂತೆ ಸರಿಪಡಿಸಿಕೊಳ್ಳಲು ಪರಿಶ್ರಮ ಮತ್ತು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಯಾವ ಕಾರಣಕ್ಕಾದರೂ ಯಾರನ್ನೂ ನೋಯಿಸಬಾರದು.

ತಾಯಿತಂದೆ ಗುರುಹಿರಿಯರ ಬಗ್ಗೆ ಭಯ-ಭಕ್ತಿ ಬದಲು ಗೌರವ-ವಿಧೇಯತೆ ಇರಿಸಿಕೊಳ್ಳಿ. ಅಮಾನವೀಯತೆ ಅಶ್ಲೀಲತೆ ಜಾತೀಯತೆ ಕೊಳಕುರಾಜಕೀಯ ಅನಿಷ್ಟಗಳಿಂದ ದೂರವಿರಿ.  ಧೂಮಪಾನ ಮದ್ಯಪಾನ ಡ್ರಗ್ಸ್ (addict) ವ್ಯಸನಿಯಾಗಿ ಕುಟುಂಬಕ್ಕೆ-ಸಮಾಜಕ್ಕೆ-ರಾಷ್ಟ್ರಕ್ಕೆ ಕಂಟಕರಾಗಬೇಡಿ.

ಬ್ಲೂಫ಼ಿಲಂ ಡಿಸ್ಕೊತೆಕ್-ಕ್ಲಬ್ ಮುಂತಾದ ಅಶ್ಲೀಲ-ಅಸಭ್ಯ ದುಶ್ಚಟಗಳ ದಾಸರಾಗದಿರಿ. ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್-ಗೈಡ್, ರೆಡ್‌ಕ್ರಾಸ್, ಸಂಚಾರಿಪೊಲೀಸ್, ಸಹಾಯವಾಣಿ ಮೂಲಕ ಅಂಗವಿಕಲರಿಗೆ ಅಬಲರಿಗೆ ವಯೋವೃದ್ಧರಿಗೆ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿರಿ. ದೇಶದ್ರೋಹ/ನಕ್ಸಲೈಟ್/ಭಯೋತ್ಪಾದನೆ ವಿರುದ್ಧ ಸಿಡಿದೆದ್ದು ಸಂಸ್ಕೃತಿ ಪರಂಪರೆ ರಾಷ್ಟ್ರಾಭಿಮಾನ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ನೀವೂ ಬದುಕಿರಿ, ಇತರರನ್ನೂ ಬದುಕಲು ಬಿಡಿ! ವಿದ್ಯಾರ್ಥಿ ಜೀವನ ಸರಿಯಾಗಿದ್ದರೆ ಮಾತ್ರ ‘ಗುರಿ’ತಲುಪಿ ಪದವಿ ಹುದ್ದೆ ಕೀರ್ತಿ ಹಣ ಉನ್ನತ ಸ್ಥಾನಮಾನ ಬಾಳಸಂಗಾತಿ ಎಲ್ಲವೂ ಹುಡುಕಿಕೊಂಡು ಬರುತ್ತವೆ! ಅದು ಸರಿಯಿಲ್ಲವಾದರೆ ವೈಸ್-ವರ್ಸ! ಅಂತಿಮ ಆಯ್ಕೆ ನಿಮ್ಮದೇ…?

admin
the authoradmin

1 Comment

  • ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಾವು ಪ್ರಕಟಿಸಿದ ಹಾಗೂ ಕನ್ನಡ ನಾಡಿನ ಉತ್ತಮ ಬರಹಗಾರ ಕುಮಾರಕವಿಯವರು ಬರೆದ ಶಿಕ್ಷಕರ ದಿನಾಚರಣೆ ಎಂಬ ಒಂದು ಅಮೋಘವಾದ ಅಧ್ಬುತಲೇಖನ ಓದಿ ನಮಗೆಲ್ಲ ಬಹಳ ಸಂತಸವಾಯ್ತು. ನಿಮಗೆ ಮತ್ತು ನಟರಾಜ ಕವಿಯವರಿಗೆ ನಮ್ಮೆಲ್ಲರ ಒಕ್ಕೊರಲಿನ ಹೃತ್ಪೂರ್ವಕ ಧನ್ಯವಾದಗಳು. -ಕೆನೆರ ಬ್ಯಾಂಕ್ ಕಾಲೋನಿ ಉದ್ಯಾನವನ ಗೆಳೆಯರ ಬಳಗ ಪರವಾಗಿ, ಸಂತೋಷ್, ಶಂಕರಪ್ಪ, ಸರಸ್ವತಿ, ಕೈವಾರಗೋಪಿ, ಶ್ರೀಕಾಂತ ಘಲಗಿ, ಸಂಜೀವಪ್ಪ, ಸುಜಾತ, ಲಕ್ಷ್ಮಣ, ರವಿಚಂದ್ರ, ರವೀಂದ್ರ, ರಮೇಶ್, ಕೃಷ್ಣೇಗೌಡ, ಗಣಪತಿಭಟ್, ಮುಂತಾದ 58 ಅಭಿಮಾನಿ ಓದುಗರು, ಬೆಂಗಳೂರು

Leave a Reply