ArticlesDasaraLatest

ಮೈಸೂರು ದಸರಾ… ಮನೆ, ಮನೆಗಳಲ್ಲಿ ಬೊಂಬೆಗಳದ್ದೇ ದರ್ಬಾರ್! ಏನಿದರ ವಿಶೇಷ?

ಮೈಸೂರು ದಸರಾ ಎನ್ನುವುದು ಹತ್ತು ಹಲವು ವಿಶೇಷತೆಗಳ ಸಾಂಸ್ಕೃತಿಕ ಸಂಗಮ… ದಸರಾ ಬಂತೆಂದರೆ ಅರಮನೆಯಿಂದ ಸಾಮಾನ್ಯರ ಮನೆ ತನಕವೂ ದಸರಾ ಸಂಭ್ರಮ ಮನೆ ಮಾಡುತ್ತದೆ. ಈ ವೇಳೆ ನಡೆಯುವ ಹಲವು ಆಚರಣೆಗಳಲ್ಲಿ ಬೊಂಬೆ ಪ್ರದರ್ಶನವೂ ಒಂದಾಗಿದೆ.  ದಸರಾ ಬೊಂಬೆ ಪ್ರದರ್ಶನದ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ…

ಜಗವೇ ಒಂದು ಬೊಂಬೆಯಾಟ… ಆ ವಿಧಿ ಸೂತ್ರಧಾರ. ಅವನಾಡಿಸಿದಂತೆ ನಾವಾಡುವವಯ್ಯಾ… ಎಂಬುವುದು ಜನಜನಿತ ಮಾತು. ಅದಕ್ಕಾಗಿಯೇ ಏನೋ ಮೈಸೂರನ್ನಾಳಿದ ರಾಜಒಡೆಯರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿದ್ದಾರೆ. ನಾಡಹಬ್ಬ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗೂ ವಿಶೇಷ ಸ್ಥಾನ ಕಲ್ಪಿಸಿದ್ದಾರೆ.

ನವರಾತ್ರಿಯ ಒಂಬತ್ತು ದಿನವೂ ಅರಮನೆಯಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ರಾಜಒಡೆಯರ ಆಡಳಿತದ ಆರಂಭದಿಂದಲೂ ಬಂದಿದೆ. ಅದರಂತೆ ಮೈಸೂರಿನ ಮನೆಮನೆಗಳಲ್ಲಿ ಬೊಂಬೆಗಳ ದರ್ಬಾರ್ ಮುನ್ನಡೆಯುತ್ತಿದೆ.

ನವರಾತ್ರಿಯ ದಿನಗಳಲ್ಲಿ ಮೈಸೂರಿಗೊಂದು ಸುತ್ತುಹೊಡೆದರೆ  ಅರಮನೆ, ಕೋಟೆ, ಪಾರಂಪರಿಕ ಕಟ್ಟಡಗಳು, ಅಂಗಡಿ ಮಳಿಗೆಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದರೆ,  ಮನೆಮನೆಗಳಲ್ಲಿ ಬಣ್ಣಬಣ್ಣದ ಬೊಂಬೆಗಳನ್ನು  ಕೂರಿಸಿ ಮಹಿಳೆಯರು ಆರತಿ ಬೆಳಗುವುದು ಕಾಣಿಸುತ್ತದೆ. ಮನೆ, ಮನೆಗಳಲ್ಲಿನ ಬೊಂಬೆಗಳ ದರ್ಬಾರ್ ಮೈಸೂರು ದಸರಾಕ್ಕೆ ಮೆರಗು ತರುವುದಲ್ಲದೆ, ಮನೆ, ಮನಗಳಿಗೆ  ಮುದ ನೀಡಿ ನವರಾತ್ರಿಗೆ ಕಳೆಕಟ್ಟುತ್ತವೆ.

ಆಶ್ವೀಜ ಮಾಸದ ಶುಕ್ಲಪಕ್ಷದ ಪ್ರಥಮ ದಿವಸ ನವರಾತ್ರಿ ಆರಂಭವಾಗುವಾಗ ಮನೆಮನೆಗಳಲ್ಲಿ ವಿವಿಧ ಬಣ್ಣದ ವಿವಿಧ ನಮೂನೆಯ ಗೊಂಬೆಗಳನ್ನು ಅಲಂಕರಿಸಿ ಮುತೈದೆಯರು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಇದು ಪಾಡ್ಯದಿಂದ ಆರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ ತನಕ ಒಂಬತ್ತು ದಿನಗಳ ಕಾಲ ನಡೆಯುತ್ತದೆ.

ನವರಾತ್ರಿ ಸಮಯದಲ್ಲಿ ಮನೆ, ಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಕೇವಲ ಮೈಸೂರಿನಲ್ಲಿ ಮಾತ್ರವಲ್ಲ ರಾಜ್ಯದ ಇತರ ಕಡೆಗಳಲ್ಲಿಯೂ ಇದೆ.  ಆದರೆ ಮೈಸೂರಿನಲ್ಲಿ ಮಾತ್ರ ಬೊಂಬೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ನಾವು ಕಾಣಬಹುದು.

ಮೈಸೂರಿನ ಹಲವು ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಲಾಗುತ್ತಿದ್ದು ಕೆಲವರು ಸಾರ್ವಜನಿಕರಿಗೂ ವೀಕ್ಷಿಸಲು ಅವಕಾಶ ನೀಡುತ್ತಾರೆ. ಬೊಂಬೆ ಪ್ರದರ್ಶನದಲ್ಲಿಯೂ ವಿಶೇಷತೆಯನ್ನು ನಾವು ಕಾಣಬಹುದಾಗಿದ್ದು, ಇಲ್ಲಿ  ರಾಜ-ರಾಣಿಯರದ್ದೇ ದರ್ಬಾರು ಮೇಳೈಸುತ್ತದೆ.

ಮೈಸೂರು ರಾಜಒಡೆಯರ ಪ್ರತೀಕವೆಂಬಂತೆ  ಅವರಿಗೆ ಗೌರವ ಸೂಚಕವಾಗಿ ಪ್ರತಿ ಮನೆಮನೆಯ ಬೊಂಬೆಗಳ ಸಾಲಿನಲ್ಲಿ ರಾಜರಾಣಿ ಬೊಂಬೆ ಮೇಲ್ಪಂಕ್ತಿಯಲ್ಲಿ ಸ್ಥಾನಪಡೆದಿರುತ್ತವೆ.  ಈ ಬೊಂಬೆಗಳನ್ನು ಪಟ್ಟದ ಬೊಂಬೆಗಳೆಂದು ಕರೆಯಲಾಗುತ್ತದೆ.

ಉಳಿದಂತೆ  ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಒಂಟೆಗಳ ಸಾಲು, ಮೈಸೂರು ಅರಮನೆ ಸೇರಿದಂತೆ ಹಲವು ಬೊಂಬೆಗಳು ಪ್ರದರ್ಶನದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುತ್ತವೆ. ಮನೆಯಲ್ಲಿ ಬೊಂಬೆಗಳನ್ನಿಡುವ ವೇಳೆ ಮೈಸೂರನ್ನಾಳಿದ ಅದರಲ್ಲೂ ದಸರಾ ಆಚರಣೆಯನ್ನು ಜಾರಿಗೆ ತಂದ ರಾಜಒಡೆಯರ್ ಗೂ ಸ್ಥಾನ ನೀಡಲಾಗುತ್ತದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಬೊಂಬೆಯನ್ನಿಡುವುದು ಒಂದು ಆಚರಣೆಯಾಗಿ ಉಳಿಯದೆ ಅದಕ್ಕೆ ಪ್ರೋತ್ಸಾಹ ನೀಡಿ ಬೆಳೆಸಿದವರು ಮೈಸೂರಿನ ಮಹಾರಾಜರಾಗಿದ್ದ ರಾಜಒಡೆಯರ್.  ಇವರು ಕಲಾ ಪೋಷಕರಾಗಿದ್ದರು. ಹೀಗಾಗಿ ಆಡಳಿತದಲ್ಲಿ ಕಲೆಗೆ ಒತ್ತು ನೀಡಿದ್ದರು.

ರಾಜಒಡೆಯರ್ ಅರಮನೆಯಲ್ಲಿ ದರ್ಬಾರ್ ಹಾಲ್, ಚಿತ್ರಶಾಲೆ, ವಿವಾಹ ಮಂಟಪ, ಭೋಜನ ಶಾಲೆ, ಶಸ್ತ್ರಗಾರವಿರುವಂತೆ ಬೊಂಬೆಗಳ ಪ್ರದರ್ಶನಕ್ಕೂ ಒಂದು ಪ್ರತ್ಯೇಕ ಸ್ಥಳವನ್ನು ಮೀಸಲಿರಿಸಿದ್ದರು.  ಅವರು ಬೊಂಬೆಗಳನ್ನೆಷ್ಟು ಪ್ರೀತಿಸುತ್ತಿದ್ದರೆಂಬುದಕ್ಕೆ ಅರಮನೆಯ  ತೊಟ್ಟಿಮನೆಯಲ್ಲಿ ಗತಕಾಲದ ಕಲಾತ್ಮಕತೆಯನ್ನು ಸಾರುವ ದಂತ, ಶ್ರೀಗಂಧದ ಮರ ಸೇರಿದಂತೆ ಬೆಲೆಬಾಳುವ ಮರಗಳಿಂದ ಕೆತ್ತಿದ ಅಪೂರ್ವ ಬೊಂಬೆಗಳಿರುವುದೇ ಸಾಕ್ಷಿಯಾಗಿದೆ.

ಕಲಾಪೋಷಕರಾಗಿದ್ದ  ರಾಜಒಡೆಯರು ಕಲಾತ್ಮಕ ಬೊಂಬೆಗಳ ಕೆತ್ತನೆಯನ್ನೇ ತಮ್ಮ ಬದುಕಾಗಿಸಿ ಕೊಂಡ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟರು. ಇವರ ಪ್ರೋತ್ಸಾಹದಿಂದ ಹಲವು ಕಲಾಕಾರರು ಬೆಳಕಿಗೆ ಬಂದಿದ್ದಾರೆ.

ಇನ್ನು ನವರಾತ್ರಿ ಆರಂಭದಂದು  ಮನೆಗಳಲ್ಲಿ  ಬೊಂಬೆಗಳನ್ನು ಕೂರಿಸುವ ಸಂಭ್ರಮ ಕಾಣಿಸುತ್ತದೆ. ಅಂದು ಮಣ್ಣು, ಗಾಜು, ಉಲ್ಲಾನ್, ಪ್ಲಾಸ್ಟಿಕ್, ಪಿಂಗಾಣಿ, ಮಣ್ಣು  ಶ್ರೀಗಂಧ ಹೀಗೆ ವಸ್ತುಗಳಿಂದ ತಯಾರಿಸಿದ ಗೊಂಬೆಗಳನ್ನು ಮನೆಯಲ್ಲಿ ಕೂರಿಸುತ್ತಾರೆ.

ಈ ಗೊಂಬೆಗಳು ಸಾಮಾನ್ಯವಾಗಿ ಪುರಾಣದ ಕಥೆಗಳನ್ನು, ನಾಡಿನ ಪರಂಪರೆಯನ್ನು ಸಾರುತ್ತಿರುತ್ತವೆ.  ಈಶ್ವರ, ಗಣಪತಿ, ಲಕ್ಷ್ಮಿ, ಸರಸ್ವತಿ, ದುರ್ಗಿ ಮೊದಲಾದ ದೇವರ ಮೂರ್ತಿಗಳನ್ನೂ, ದುಷ್ಟ ಸಂಹಾರಕ್ಕೆ ಸಂಬಂಧಿಸಿದ ಕಥಾ ಹಿನ್ನಲೆಗಳನ್ನು ಹೊಂದಿರುವ ಗೊಂಬೆಗಳು ಇಲ್ಲಿ ಸ್ಥಾನಪಡೆಯುತ್ತವೆ.

ಬೊಂಬೆ ಪ್ರದರ್ಶನದ ಬಗ್ಗೆ ಕೆಲವರು ಹೇಳುವ ಪ್ರಕಾರ ಹಿಂದಿನ ಕಾಲದಲ್ಲಿ ಮಕ್ಕಳಿಗೆ ಈಗಿನ  ಕಾಲದಂತೆ  ಮನೋರಂಜನೆಗೆ ಯಾವುದೇ ಆಧುನಿಕ ಆಟಿಕೆಗಳಿರಲಿಲ್ಲ. ಹೀಗಾಗಿ ಮಕ್ಕಳು ಬಾಲ್ಯದಿಂದಲೇ ಗೊಂಬೆಗಳೊಂದಿಗೆ ಆಡುತ್ತಾ ಬೆಳೆಯುತ್ತಿದ್ದರು.

ಅಲ್ಲದೆ, ಬಾಲ್ಯವಿವಾಹವೂ ನಡೆಯುತ್ತಿದ್ದ ಕಾಲವಾದುದರಿಂದ ಹೆತ್ತವರು ಮಗಳನ್ನು ಮದುವೆ ಮಾಡಿಕೊಡುವಾಗ ಆಟವಾಡುತ್ತಿದ್ದ ಗೊಂಬೆಗಳನ್ನು ಸಹ ಜೊತೆಯಲ್ಲಿಯೇ ನೀಡುತ್ತಿದ್ದರು. ಜತೆಗೆ ವರ್ಷಕ್ಕೊಮ್ಮೆ ಈ ಗೊಂಬೆಗಳನ್ನು ಒಂದೆಡೆ ಪ್ರತಿಷ್ಠಾಪಿಸಿ ಅದಕ್ಕೆ ಆರತಿ ಬೆಳಗಿ ಪೂಜಿಸುವಂತೆ ಹೇಳುತ್ತಿದ್ದರಂತೆ  ಇದರಿಂದಾಗಿಯೂ  ಬೊಂಬೆ ಹಬ್ಬ ರೂಢಿಗೆ ಬಂದಿರಬಹುದೆಂದು ಅಭಿಪ್ರಾಯ ಪಡುತ್ತಾರೆ.

ಅದು ಏನೇ ಇರಲಿ  ಬೊಂಬೆ ಕೂರಿಸುವ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ವಿಶೇಷವೇ.. ಅದರಲ್ಲೂ ಮೈಸೂರು ದಸರಾದಲ್ಲಿ  ಬೊಂಬೆ ಕೂರಿಸುವ ಮೈಸೂರಿನ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಮೈಸೂರು ದಸರಾ ಸಾಂಸ್ಕೃತಿಕ ಸಮಿತಿ ದಸರಾ ಬೊಂಬೆ ಪ್ರದರ್ಶನವನ್ನು ಏರ್ಪಡಿಸಿ ಉತ್ತಮ ಪ್ರದರ್ಶನಕ್ಕೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿರುವುದು ಖುಷಿಯ ಸಂಗತಿಯೇ…

ಧ್ವನಿ: ಪ್ರಥ್ವಿದೇವರಾಜ್

 

B M Lavakumar

admin
the authoradmin

Leave a Reply