ArticlesDasaraLatest

ದಸರಾ ಚಿನ್ನದ ಅಂಬಾರಿಗೆ ವರ್ಣರಂಜಿತ ಹೂವಿನ ಸಿಂಗಾರದ ರುವಾರಿ ಎನ್ ಮಂಜುನಾಥ್!.

ನವರಾತ್ರಿ ಮುಗಿದಿದೆ.  ಆಯುಧ ಪೂಜೆ ಮುಗಿಸಿ, ವಿಜಯದಶಮಿಯೂ ಕೂಡ ನಡೆಯಿತು. ಪ್ರಶಾಂತ ಆನೆ ಪ್ರಶಾಂತವಾಗಿ ಚಿನ್ನದ ಅಂಬಾರಿಯನ್ನ ಹೊತ್ತು ಸಾಗುವುದರ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.  ಈ ಶುಭ ಸಂದರ್ಭದಲ್ಲಿ ಮೈಸೂರು 9 ದಿನಗಳಿಂದಲೂ ಕೂಡ ಸಿಂಗಾರಗೊಂಡು, ಹತ್ತನೆಯ ದಿನ ಆಯುಧ ಪೂಜೆ, ಹನ್ನೊಂದನೇ ದಿನ ವಿಜಯದಶಮಿ ದಿನವನ್ನು ಆಚರಿಸಲಾಯಿತು. ಪ್ರತಿದಿನವೂ ಕೂಡ ನವ ದುರ್ಗೆಯರ ಪೂಜೆಯನ್ನು ಭಯ- ಭಕ್ತಿಯಿಂದ ನಾಡಿನಾದ್ಯಂತ ಅಲ್ಲದೆ ಅನೇಕ ಕಡೆ ಆಚರಿಸಿದ್ದಾರೆ.  

ಆಯುಧ ಪೂಜೆ, ವಿಜಯದಶಮಿ ಅಂದರೆ ಜಂಬುಸವಾರಿ ನಡೆಯುವ ದಿನವೂ ಕೂಡ ಅತ್ಯಂತ ಯಶಸ್ವಿಯಾಯಿತು. ಇದರೊಂದಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಕ್ಕೆ ತೆರೆ ಬಿದ್ದಿದೆ.         ಅದಕ್ಕೂ ಮುಂಚಿತವಾಗಿ ನಾವು ಪತ್ರಿಕೆಗಳಲ್ಲಿ….. ಆಕಾಶವಾಣಿಗಳಲ್ಲಿ…. ಟಿವಿ ವಾಹಿನಿಗಳಲ್ಲಿ…. ದೇವಿಯ ಕುರಿತು, ದಸರೆಯ ವೈಭವದ ಕುರಿತು ಓದಿದ್ದೇವೆ, ಕೇಳಿದ್ದೇವೆ, ವೀಕ್ಷಿಸಿದ್ದೇವೆ.ಅಡಿಯಿಂದ ಮುಡಿವರೆಗೆ ಎನ್ನುವಂತೆ ಮೈಸೂರು ನಗರ ಸಿಂಗಾರಗೊಂಡಿತ್ತು. ಮತ್ತೆ ವಿದ್ಯುತ್ ದೀಪಗಳ ಅಲಂಕಾರ ಮುಂದುವರಿಯುವುದರಿಂದ ಮತ್ತಷ್ಟು ಜನರು ಬಂದು ಮೈಸೂರನ್ನ ನೋಡಬಹುದು.

ಇಂತಹ ಸಂದರ್ಭದಲ್ಲಿ ಅಂತಿಮವಾಗಿ ಹೇಳುವುದಾದರೆ ಎಲ್ಲರ ಕಣ್ಣು ಪ್ರಶಾಂತನ ಮೇಲೆ! ಜೊತೆಗೆ ಅವನು ಹೊತ್ತಿರುವ ಅಂಬಾರಿ!! ಜೊತೆಗೆ ಅಂಬಾರಿ ಒಳಗಿರುವ ಚಾಮುಂಡಿ ಮಾತೆಯ ಬಗ್ಗೆ!!!. ಚಿನ್ನದ ಅಂಬಾರಿ ಯನ್ನು ಪ್ರಶಾಂತ ಆನೆ ಯಶಸ್ವಿಯಾಗಿ ನೆರವೇರಿಸಿದ್ದಾನೆ. ದೇವಿಗೆ ಪುಷ್ಪಾರ್ಚನೆ ಮಾಡಿದ ನಂತರ ಯಾವುದೇ ಒತ್ತಡ ಇಲ್ಲದೆ ನಿಧಾನವಾಗಿ ಅರಮನೆಯ ಆವರಣದಿಂದ ರಾಜ ಗಾಂಭೀರ್ಯದಿಂದ ನಡೆದ. ಈ ಸಂದರ್ಭದಲ್ಲಿ ಅಂಬಾರಿ ಹೂವಿನಿಂದ ಸರ್ವ ರೀತಿಯಲ್ಲಿ ಕೂಡ ಸಿಂಗಾರವಾಗಿತ್ತು.

ಸ್ವಲ್ಪ ನಮಗೆ ಕುತೂಹಲ ಮೂಡಿಸುತ್ತದೆ!. ಈ ಚಿನ್ನದ ಅಂಬಾರಿಗೆ ಹೂವಿನ ಅಲಂಕಾರವನ್ನು ಯಾರು ಮಾಡುತ್ತಾರೆ? ಜೊತೆಗೆ ದೇವರಿಗೂ ಕೂಡ?? ಎನ್ನುವುದು ಎಲ್ಲರಲ್ಲೂ ಇದ್ದೇ ಇರುತ್ತದೆ!. ಆದರೆ ಈ ವಿಷಯ ಕೆಲವರಿಗೆ ತಿಳಿದಿರುವುದಿಲ್ಲ. ವುದಿಲ್ಲ. ಇನ್ನೇನು ಒಂದು ಗಂಟೆ ಹತ್ತಿರ ಬರುವಾಗ ಚಿನ್ನದ ಅಂಬಾರಿಯನ್ನು ನೀಡುತ್ತಾರೆ. ಆಗ ಅದಕ್ಕೆ ಸಿಂಗಾರ ನಡೆಯುತ್ತದೆ. ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಗೆ ಮತ್ತು ಅದರೊಳಗಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಅತ್ಯಂತ ಕಲಾತ್ಮಕವಾಗಿ ಪುಷ್ಪಾಲಂಕಾರ ಮಾಡುವ ಕಾಯಕ ನಡೆಯುತ್ತಾ ಬಂದಿದೆ.

ಆ ಕಾಯಕದ ರೂವಾರಿ ಯಾರೆಂದು ತಿಳಿದುಕೊಳ್ಳಲೇಬೇಕು.  ಆ ರೂವಾರಿಯೇ  ಮಂಜುನಾಥ್. ಅವರ ತಂಡ ನಿರಂತರವಾಗಿ ಈ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಎನ್ ಮಂಜುನಾಥ್ ರವರು ಕಳೆದ 27 ವರ್ಷಗಳಿಂದಲೂ ಕೂಡ  ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತಾ ಬಂದಿದ್ದಾರೆ.ಈ ಬಗ್ಗೆ ತಿಳಿದುಕೊಳ್ಳಲೇಬೇಕು.

ಮಂಜುನಾಥ್ ಅವರು ಪ್ರಸ್ತುತ ಮೈಸೂರಿನ ಪ್ರಸಿದ್ಧ ದೇವರಾಜ ಮಾರುಕಟ್ಟೆಯಲ್ಲಿರುವ ಗಾಯತ್ರಿ ಫ್ಲವರ್ ಸ್ಟಾಲ್ ಮಾಲೀಕರಾಗಿದ್ದಾರೆ. ತಲೆಮಾರುಗಳಿಂದ ಹೂವಿನ ವ್ಯವಹಾರದಲ್ಲಿರುವ ಇವರ ಕುಟುಂಬವು ದಸರಾ ಉತ್ಸವದೊಂದಿಗೆ ಆಳವಾದ ಒಡನಾಟ ಹೊಂದಿದೆ. ಅದರಿಂದಾಗಿ ಆ ಅಂಬಾರಿ ಮತ್ತು ದೇವಿಗೆ ಅಲಂಕಾರ ಅದರಲ್ಲೂ ವರ್ಣ ರಂಜಿತ ಹೂವಿನ ಅಲಂಕಾರ ಮಾಡುವ ಸೌಭಾಗ್ಯ ಅವರಿಗೆ ದೊರೆತಿದೆ.   ಎರಡುವರೆ ದಶಕಗಳಿಂದ ಸತತವಾಗಿ ದಸರಾ ಮಹೋತ್ಸವದ ವಿಜಯದಶಮಿಯಂದು ಚಿನ್ನದ ಅಂಬಾರಿಗೆ ಪುಷ್ಪಾಲಂಕಾರ ಮಾಡುವ ಅಪರೂಪದ ಗೌರವ ಹಾಗೂ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಅಲಂಕಾರದ ಶೈಲಿ: ಪ್ರತಿ ವರ್ಷವೂ ಜಂಬೂಸವಾರಿಯ ದಿನದಂದು ಅರಮನೆ ಆವರಣದೊಳಗೆ ಅತ್ಯಂತ ಕಟ್ಟುನಿಟ್ಟಾದ ಭದ್ರತೆಯ ನಡುವೆ ಇವರು ಮತ್ತು ಇವರ ತಂಡ ಅಂಬಾರಿಯನ್ನು ಹೂವುಗಳಿಂದ ನಿಯಮದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ. ಜೊತೆಗೆ ಆಯಾ ವರ್ಷ ಯಾವ ರೀತಿಯಲ್ಲಿ ಹೂವನ್ನ ಹಾಕಿ ಸಿಂಗಾರ ಮಾಡಬೇಕು ಎನ್ನುವುದನ್ನು ಮೊದಲೇ ವಿಷಯ ತಿಳಿದಿರುತ್ತದೆ. ನಿಜಕ್ಕೂ ಅವರ ಸೃಜನಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.

ಅಂಬಾರಿಯ ಭವ್ಯತೆಗೆ ಧಕ್ಕೆ ಬಾರದಂತೆ ಶ್ವೇತ ಹೂವುಗಳು, ಕೆಂಪು ರೋಸ್, ಕನಕಾಂಬರ ಮತ್ತು ಜಸ್ಮಿನ್‌ನಂತಹ ಸಾಂಪ್ರದಾಯಿಕ ಹಾಗೂ ಆಕರ್ಷಕ ಹೂವುಗಳನ್ನು ಬಳಸಿ ದೇವಿಯ ಸನ್ನಿಧಿಯನ್ನು ನಯನಮನೋಹರವಾಗಿ ಕಂಗೊಳಿಸುವಂತೆ ಎಲ್ಲರ ಗಮನ ಸೆಳೆದು ಹೆಸರು ಪಡೆದಿದ್ದಾರೆ ಮಂಜುನಾಥ್ ರವರು. ವರ್ಷ ವರ್ಷವೂ ಈ ರೀತಿ ಸಿಂಗಾರ ಮಾಡುವುದೇ ಇವರ ಕಾಯಕ.

ಮೈಸೂರು ರಾಜಮನೆತನ ಹಾಗೂ ಜಿಲ್ಲಾಡಳಿತವು ಇವರ ಈ ನಿರಂತರ ಮತ್ತು ಶ್ರದ್ಧಾಪೂರ್ವಕ ಸೇವೆಯನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ.   ಈ ಬಾರಿ ಅಂದರೆ 2026ರ ವಿಶ್ವವಿಖ್ಯಾತ ಮೈಸೂರು ದಸರಾದ ಚಿನ್ನದ ಅಂಬಾರಿಗೆ ಮಲ್ಲಿಗೆ, ನೀಲಿ ಆರ್ಕಿಡ್, ಹಳದಿ ಗುಲಾಬಿ ಅಲಂಕಾರ ಮಾಡುತ್ತಿರುವುದೇ ಒಂದು ವಿಶೇಷ ಗಳಲ್ಲಿ ಒಂದು.

ಸುಮಾರು 25 ಕೆಜಿ ವಿವಿಧ ಬಗೆಯ ಹೂವುಗಳನ್ನ ಬಳಸಿ ಚಿನ್ನದ ಅಂಬರಿಯನ್ನು ಅಂದವಾಗಿ ಅಲಂಕರಿಸಲು ಯೋಜನೆಯನ್ನು ರೂಪಿಸಲಾಗಿದೆ. ಅಂಬಾರಿಯ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೂವುಗಳ ಬಣ್ಣಗಳ ಸಂಯೋಜನೆಗೂ ಕೂಡ ವಿಶೇಷ ಗಮನವನ್ನು ನಾನು ಸುಮಾರು 27 ವರ್ಷಗಳಿಂದಲೂ ಕೂಡ ಚಿನ್ನದ ಅಂಬಾರಿಗೆ ಹೂವಿನ ಅಲಂಕಾರ ಮಾಡುವ ಜವಾಬ್ದಾರಿಯನ್ನ ಪಡೆಯುತ್ತಾ ಬಂದಿದ್ದೇನೆ. ಈ ಬಾರಿಯೂ ಕೂಡ ಆ ಸೌಭಾಗ್ಯ ಸಿಕ್ಕಿದೆ. ಈ ಮೂಲಕ ತಾಯಿ ಚಾಮುಂಡೇಶ್ವರಿ ಸೇವೆ ಮುಂದುವರಿಸಲು ಅವಕಾಶ ದೊರೆತಿರುವುದು ನನ್ನ ಪುಣ್ಯವೇ ಸರಿ ಎಂದು ಮಂಜುನಾಥ್ ರವರು ಹೆಮ್ಮೆಯಿಂದ ಹೇಳುತ್ತಾರೆ.

ಈ ಬಾರಿ ಇನ್ನೊಂದು ವಿಶೇಷವೆಂದರೆ…… ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಸಮರ್ಪಿಸುವ ಹೂ ಮಾಲೆಗೂ ವಿಶೇಷ ವಿನ್ಯಾಸ ನೀಡಲಾಗುತ್ತಿದೆ. ಚಿನ್ನದ ಅಂಬಾರಿಗೆ ನೂರೊಂದು ಜುಮ್ಕಿಗಳ (ಚಿನ್ನದ್ದಲ್ಲ) ಅಲಂಕಾರ ಸಹ ಮಾಡಲಾಗುತ್ತಿದೆ ಎನ್ನುತ್ತಾರೆ.

ಮೈಸೂರಿನ ಸಾಂಪ್ರದಾಯಿಕ ಮಲ್ಲಿಗೆ (Jasmine), ರಾಯಲ್ ಲುಕ್ ನೀಡುವ ಆರ್ಕಿಡ್ಸ್ (Orchids) ಮತ್ತು ಆಕರ್ಷಕ ಹಳದಿ ಗುಲಾಬಿ (Yellow Roses) ಹೂವುಗಳನ್ನು ಬಳಸಿ ಅಂಬಾರಿಯನ್ನು ಸಿಂಗಾರ ಮಾಡುವುದರಲ್ಲೂ ಕೂಡ ಹೆಚ್ಚಿನ ಮಹತ್ವ ಇದೆ. ಅದು ಏನೆಂದರೆ ಹಳದಿ ಬಣ್ಣವು ದೇವಿಯ ಪೂಜೆಗೆ ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರ ಎಂದು ಪರಿಗಣಿಸಲಾಗಿರುವುದರಿಂದ, ಹಳದಿ ಗುಲಾಬಿಗಳು ಮತ್ತು ಬಿಳಿ ಮಲ್ಲಿಗೆಯ ಸಂಯೋಜನೆಯು ಚಿನ್ನದ ಅಂಬಾರಿಯ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಂಬಾರಿಯ ಸೂಕ್ಷ್ಮ ಕೆತ್ತನೆಗಳಿಗೆ ಯಾವುದೇ ಹಾನಿಯಾಗದಂತೆ ಹೂವಿನ ಮಾಲೆಗಳನ್ನು ಅತ್ಯಂತ ಕಲಾತ್ಮಕವಾಗಿ ಜೋಡಿಸಲಾಗುತ್ತದೆ.

ಈ ರೀತಿ ಮಾಡುವುದು ಒಂದು ಕಲೆ. ಮಂಜುನಾಥ್ ರವರಿಗೆ ಈ ಕಲೆಯು ಸಿದ್ದಿಸಿರುವುದರಿಂದ ಅವರನ್ನು ಜಿಲ್ಲಾಡಳಿತ, ಸರ್ಕಾರ ಪ್ರತಿ ವರ್ಷವೂ ಕೂಡ ಇವರನ್ನೇ ಅಂಬಾರಿಗೆ ಸಿಂಗಾರ ಮಾಡಲು ಆಯ್ಕೆ ಮಾಡುತ್ತಿದೆ.     ಈ ಸಂದರ್ಭದಲ್ಲಿ ಮಂಜುನಾಥ್ ಮತ್ತು ಅವರ ತಂಡಕ್ಕೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಏಕೆಂದರೆ ಜಂಬೂ ಸವಾರಿಯ ದಿನ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಅವರು ಪೂಜಿ ಸಲ್ಲಿಸುವುದರೊಂದಿಗೆ ಉದ್ಘಾಟನೆಗೊಳ್ಳುತ್ತದೆ. ಆದರೆ ಅದರ ನಂತರ ನಿರಂತರ ಅರಮನೆಯ ಮುಂದಿನಿಂದ ಜಾನಪದ ಕಲಾತಂಡಗಳು, ಎನ್‌ಸಿಸಿ, ಎನ್ಎಸ್ಎಸ್ ಜೊತೆಗೆ ಪೊಲೀಸ್ ವಾದ್ಯಮೇಳ ಅಲ್ಲದೆ ನಮ್ಮ ನಾಡು- ನುಡಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅನೇಕ ಸ್ಥಬ್ಧ ಚಿತ್ರಗಳು, ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುತ್ತವೆ. ಇದರೊಂದಿಗೆ ನಮ್ಮ ಕನ್ನಡ ನಾಡಿನ ಸುಂದರ ಸಂಸ್ಕೃತಿ ಎಲ್ಲವೂ ಕೂಡ ಅನಾವರಣಗೊಳ್ಳುತ್ತದೆ. ಇದರಿಂದಾಗಿ ಸ್ಥಬ್ಧ ಚಿತ್ರಗಳು ಕನ್ನಡ ನಾಡಿನ ಇತಿಹಾಸವನ್ನು ಸಾರುತ್ತವೆ.

ಜೊತೆಗೆ ಚಿತ್ರಗಳಲ್ಲಿ ಅನೇಕ ವಿಭಾಗಗಳ ಮೂಲಕ ಪ್ರಶಸ್ತಿಗೂ ಆಯ್ಕೆ ಮಾಡುತ್ತಾರೆ. ಪ್ರಥಮ, ದ್ವಿತೀಯ, ತೃತೀಯ ಎಂದು.    ನಂತರದಲ್ಲಿ ಅಂತಿಮವಾಗಿ ಆನೆಯ ಮೇಲೆ ಅಂಬಾರಿ. ಅಂಬಾರಿಯ ಒಳಗೆ ಚಾಮುಂಡಿ ಮಾತೆಯ ಚಿತ್ರಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ವೀಕ್ಷಕರು ರಸ್ತೆ ಎರಡು ಕಡೆ ನಿಲ್ಲುತ್ತಾರೆ. ಅಂತಹ ಸಂದರ್ಭದಲ್ಲಿ ಅಲಂಕಾರದಿಂದ ಆ ಒಂದು ಚಿನ್ನದ ಅಂಬಾರಿ ಜೊತೆಗೆ ಬೆಟ್ಟದ ತಾಯಿ ಚಾಮುಂಡಿ ಮಾತೆಯ ಉತ್ಸವ ಮೂರ್ತಿ ಸಿಂಗಾರಗೊಂಡಿರುತ್ತದೆ. ಅಂತಹ ಸಿಂಗಾರವನ್ನ ನಮ್ಮ ಮಂಜುನಾಥ್ ರವರು ಮಾಡುತ್ತಾರೆ ಎಂದರೆ ಒಂದು ರೀತಿಯಲ್ಲಿ ಸಂತಸದ ಕ್ಷಣ ನಮ್ಮ ಪಾಲಿಗೆ ಆಗುತ್ತದೆ.

ಸಮಯದ ಮಿತಿ: ಜಂಬೂ ಸವಾರಿಯ ದಿನದಂದು ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಕೆಲವೇ ಗಂಟೆಗಳ ಮುನ್ನ ಅತ್ಯಂತ ವೇಗವಾಗಿ ಹಾಗೂ ನಿಖರವಾಗಿ ಈ ಹೂವಿನ ಸಿಂಗಾರ ಕಾರ್ಯವನ್ನು ಅರಮನೆ ಆವರಣದಲ್ಲಿಯೇ ಪೂರ್ಣಗೊಳಿಸಲಾಗುತ್ತದೆ. ಮಂಜುನಾಥ್ ರವರು ಇನ್ನೊಂದು ವಿಷಯವನ್ನ ಹಂಚಿಕೊಂಡಿದ್ದಾರೆ ಏನೆಂದರೆ……

ಅವರು ಈ ರೀತಿಯ ಒಂದು ಸೇವೆ ಮಾಡಲು ಮೊದಲು ನರಸೇಗೌಡರು ಮತ್ತು ಆ ಕಾಲದಲ್ಲಿ ಎಸಿಪಿಯಾಗಿದ್ದ ಸಂಪತ್ ಕುಮಾರ್ ರವರನ್ನು ನೆನಪಿಸಿಕೊಳ್ಳುತ್ತಾರೆ. ಏಕೆಂದರೆ ಇವರು ಮೊದಲಿಗೆ ಈ ಅವಕಾಶವನ್ನ ನೀಡಿದರು. ನಂತರದಲ್ಲಿ ಸುಮಾರು 10 ರಿಂದ 12ಕ್ಕೂ ಹೆಚ್ಚು ಎಸಿಪಿ ಗಳು ಬಂದಿದ್ದಾರೆ. ಅವರು ಕೂಡ ನೀವು ಎಂದಿನಂತೆ ಇದೇ ಕಾರ್ಯವನ್ನು ಯಾವುದೇ ಸಮಸ್ಯೆ ಬರದಂತೆ ಮುಂದುವರಿಸಿಕೊಂಡು ಹೋಗಿ ಎಂದು ಪ್ರೋತ್ಸಾಹಿಸುತ್ತಾ ಬಂದರು ಎನ್ನುತ್ತಾರೆ.

ಅಲ್ಲದೆ ಈ ಒಂದು ಸಿಂಗಾರಕ್ಕೆ ಬಳಸುವ ಹೂಗಳ ಬಗ್ಗೆ ಆ ದಿನದಿಂದ ಇವತ್ತಿನವರೆಗೂ ಕೂಡ ಯಾವುದೇ ಲೆಕ್ಕವನ್ನು ಹಾಕಿರುವುದಿಲ್ಲ. ಚಿನ್ನದ ಅಂಬಾರಿಗೆ ಎಷ್ಟು ಹೂವಿನ ಅವಶ್ಯಕತೆ ಎಂದು ಅಂದಾಜಿಸಿ ಅಷ್ಟನ್ನು ಮಾತ್ರ ಹಾಕುತ್ತೇವೆ. ಹೂವು ಸಿಗುತ್ತದೆ ಎಂದು ಹೆಚ್ಚಾಗಿ ಬಳಸಿದರು ಕೂಡ ಚಿನ್ನದ ಅಂಬಾರಿ ತನ್ನ ಲಕ್ಷಣವನ್ನ ಕಳೆದುಕೊಳ್ಳುತ್ತದೆ.

ಜೊತೆಗೆ ಚಿನ್ನದ ಅಂಬಾರಿಯನ್ನ ವರ್ಷಕ್ಕೆ ಒಮ್ಮೆ ಮಾತ್ರ ಹೊರಗೆ ತೆರೆದು ಆನೆಯ ಮೇಲೆ ಅಂಬಾರಿ ಇರುವ ಚಿತ್ರಣವನ್ನು ವೀಕ್ಷಣೆ ಮಾಡಲು ಆ ಒಂದು ಚಿನ್ನದ ಅಂಬಾರಿಯ ಸೌಂದರ್ಯವನ್ನ ಕಣ್ದುಂಬಿಸಿಕೊಳ್ಳಲು ಲಕ್ಷಾಂತರ ಮಂದಿ ಕಾಯುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ಹೂವಿನಿಂದ ಆ ಒಂದು ಚಿನ್ನದ ಅಂಬಾರಿಯನ್ನ ಪೂರ್ತಿ ಮುಚ್ಚಿದರೆ ನಿರಾಸೆ ಉಂಟಾಗುತ್ತದೆ. ಅದರಿಂದಾಗಿ ಜನರಿಗೆ ಚಿನ್ನದ ಅಂಬಾರಿಯೂ ಕಾಣಬೇಕು, ಜೊತೆಗೆ ಆ ಅಂಬಾರಿಗೆ ತಕ್ಕಂತೆ ಹೂವಿನ ಅಲಂಕಾರವೂ ಕೂಡ ಕಾಣಸಿಗಬೇಕು ಇವೆರಡನ್ನ ನಾವು ಸಂಯೋಜಿಸಿ ಅಲಂಕಾರ ಮಾಡುತ್ತಾ ಬಂದಿದ್ದೇವೆ ಎನ್ನುತ್ತಾರೆ. ನಿಜಕ್ಕೂ ಇದೊಂದು ಶ್ರೇಷ್ಠ ಕೆಲಸ ಎನ್ನುವುದು ನನ್ನ ಭಾವನೆ.

ಈ ವಿಶ್ವವಿಖ್ಯಾತ ದಸರಾಯ ಸಂದರ್ಭದಲ್ಲಿ ಒಂದೊಂದು ವಿಷಯಕ್ಕೂ ಒಂದೊಂದು ರೀತಿಯಲ್ಲಿ ಇತಿಹಾಸ ದಾಖಲೆ ಇದ್ದೇ ಇದೆ. ಒಂದೊಂದು ಕಥೆಗಳು ಕೂಡ ರೋಚಕವಾಗಿ ನಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತವೆ. ಇದರಿಂದಾಗಿ ಮೈಸೂರು ದಸರಾ ಇತ್ತೀಚಿನ ದಿನಗಳಲ್ಲಿ ಬರಿ ಉತ್ಸವ ವಾಗದೆ ನಮ್ಮ ನಾಡು- ನುಡಿ- ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೊಡ್ಡ ವೇದಿಕೆಯಾಗಿದೆ. ಇಡೀ ಕರ್ನಾಟಕವೇ ಈ ಒಂದು ಜಂಬುಸವಾರಿಯ ದಿನ ಅಡಗಿರುತ್ತದೆ ಎಂದರೆ ಅಚ್ಚರಿಪಡಬೇಕಾಗಿಲ್ಲ!. ಏಕೆಂದರೆ ನಮ್ಮ ವಿವಿಧ ಕಲಾತಂಡಗಳು ವಿವಿಧ ಜಿಲ್ಲೆಗಳ ಸ್ತಬ್ಧ ಚಿತ್ರಗಳು ಆಯಾ ಸಂಸ್ಕೃತಿಗೆ ತಕ್ಕಂತೆ ಕಲಾತಂಡಗಳು ಅನಾವರಣಗೊಂಡಿರುತ್ತವೆ. ಈ ಬಾರಿ ಕೂಡ ಮತ್ತೆ ಇತಿಹಾಸ ನಿರ್ಮಾಣವಾಗಿದೆ. ಅನೇಕ ಹೊಸ ಹೊಸ ವಿನ್ಯಾಸಗಳೊಂದಿಗೆ ನಿಗದಿತ ಜಿಲ್ಲೆಗಳಿಂದ ಯಶಸ್ವಿಯಾಗಿ ಸ್ಥಬ್ಧ ಚಿತ್ರಗಳು ಪ್ರದರ್ಶನಗೊಂಡಿವೆ.

ಈ ರೀತಿಯಾಗಿ ಮೈಸೂರು ದಸರಾ ಮಾದರಿಯನ್ನೇ ಹೋಲುವಂತಹ ಅನೇಕ ದಸರಾ ಕಾರ್ಯಕ್ರಮಗಳು ಕೂಡ ಬೇರೆ ಬೇರೆ ಜಿಲ್ಲೆಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತಿದೆ. ಇದರಿಂದಾಗಿ ದಸರೆಯ ಆಚೆ ಈಚೆ ನೆನಪುಗಳ ಸರಮಾಲೆ ನಮ್ಮನ್ನ ಎದುರುಗೊಳ್ಳುತ್ತದೆ!.

ಅದರಲ್ಲೂ ಮೈಸೂರು ಎಂದರೆ ಸಾಕು ದಸರೆಯ ನೆನಪು ನಮ್ಮಲ್ಲಿ ಮೂಡುತ್ತದೆ. ಈ ವಿಶ್ವವಿಖ್ಯಾತ ಮೈಸೂರು ದಸರವನ್ನ ಎಲ್ಲರೂ ಸವಿದಿದ್ದೇವೆ. ಹಲವರು ಹತ್ತಿರ ಹೋಗಿ ವೀಕ್ಷಣೆ ಮಾಡಿದ್ದಾರೆ ಇನ್ನೂ ಹಲವರು ಟ್ರಾಫಿಕ್ ಜಾಮ್ ಜನಸಂದಣಿಯ ಕಿರಿಕಿರಿಯನ್ನ ತಪ್ಪಿಸಿಕೊಡಲು ಮನೆಯಲ್ಲೇ ಟಿವಿ ಮುಖಾಂತರ ವೀಕ್ಷಣೆ ಮಾಡಿದ್ದಾರೆ. ಈಗ ಸಂಪರ್ಕ ಮಾಧ್ಯಮಗಳು ಹೆಚ್ಚಾಗಿರುವುದರಿಂದ ಟಿವಿಯಲ್ಲಿ ಆರಾಮಾಗಿ ಕುಳಿತು ವೀಕ್ಷಣೆ ಮಾಡಬಹುದು. ಅದರಲ್ಲೂ ಮೈಸೂರು ಆಕಾಶವಾಣಿ ಈಗ 92ರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದೆ. ಇದು ನಾಡಿನಾದ್ಯಂತ ಅಲ್ಲದೆ ದೇಶ-ವಿದೇಶಗಳಿಗೂ ಕೂಡ ಈ ದಿನ ಜಂಬುಸವಾರಿಯ ನೇರ ವೀಕ್ಷಕ ವಿವರಣೆಯನ್ನು ಅರಮನೆಯ ಆವರಣದಿಂದ ಎಲ್ಲರಿಗೂ ತಲುಪಿಸಿದೆ. ಇದಕ್ಕೂ ಕೂಡ ಒಂದು ರೀತಿಯಲ್ಲಿ ಇತಿಹಾಸ ಇದೆ.

ಅನೇಕ ಅಧಿಕಾರಿಗಳು ತಂತ್ರಜ್ಞರು ಜೊತೆಗೆ ಸಂಪನ್ಮೂಲ ವ್ಯಕ್ತಿಗಳು ಈ ಒಂದು ಸಂದರ್ಭದಲ್ಲಿ ಹಾಜರಿದ್ದು ಅಲ್ಲಿ ನಡೆಯುವ ದಸರೆಯ ಕಲಾತಂಡಗಳ ಸ್ಥಬ್ಧ ಚಿತ್ರಗಳ ಇನ್ನಿತರ ವೈಭವದ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾರೆ. ಆ ಒಂದು ದಸರಾದ ನೇರ ವೀಕ್ಷಕ ವಿವರಣೆಯನ್ನು ಕೇಳುವುದೇ ಒಂದು ರೀತಿಯಲ್ಲಿ ಸೊಬಗು. ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯ ವೀಕ್ಷಕ ವಿವರಣೆಯನ್ನು ನೇರವಾಗಿ ನಮ್ಮ ಎಲ್ಲರ ಮನೆ- ಮನ ಅಲ್ಲದೆ, ವಿಶ್ವಾದ್ಯಂತ ತಲುಪಿಸಿದವರು ಮೈಸೂರು ಆಕಾಶವಾಣಿಯ ಡಾ. ಮೈಸೂರು ಉಮೇಶ್, ದಿಗ್ವಿಜಯ್ ಬಿ,  ಆರ್ ಲೋಕೇಶ್ವರಿ, ಮತ್ತು ಸಹನಾ.

ಈ ಒಂದು ಕಾರ್ಯಕ್ರಮದ ಸಮಗ್ರ ನಿರ್ವಹಣೆ ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಎನ್ ಕೇಶವಮೂರ್ತಿ ಅವರು ವಹಿಸಿದ್ದರು. ಇವರು ಕೂಡ ಅಲ್ಲೇ ಇದ್ದು ಅಂತಿಮವಾಗಿ ಮಾತನಾಡುವುದರೊಂದಿಗೆ ಕಾರ್ಯಕ್ರಮಕ್ಕೆ ವಿಶೇಷ ಸ್ಪೂರ್ತಿಯನ್ನು ತುಂಬಿದರು.

ಇದರ ಜೊತೆಗೆ ಆಕಾಶವಾಣಿಯಲ್ಲಿ ನಿರೂಪಕರು ಜೊತೆಗೆ ತಂತ್ರಜ್ಞರು ಇನ್ನಿತರ ಅಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇವರಿಗೂ ಕೂಡ ಕೇಳುಗರೆಲ್ಲರ ಪರವಾಗಿ ವಿಶೇಷ ಅಭಿನಯಗಳನ್ನು ಸಲ್ಲಿಸುತ್ತೇನೆ. ಇದಕ್ಕೂ ಮುಂಚೆ ನವರಾತ್ರಿಯ ಪ್ರತಿ ದಿನದಲ್ಲೂ ಕೂಡ ವಿಶೇಷ ಸಾಹಿತ್ಯ, ಸಂಗೀತ, ದಸರೆಯ ಕುರಿತ ಮಾಹಿತಿಗಳು, ಸಂದರ್ಶನ ಎಲ್ಲವನ್ನ ಪ್ರಸಾರ ಮಾಡಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ವಿಶ್ವವಿಖ್ಯಾತ ದಸರಾ ಅಚ್ಚುಕಟ್ಟಾಗಿ ನೆರವೇರಿದೆ ಮೈಸೂರು ಜಿಲ್ಲಾಡಳಿತಕ್ಕೆ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ.

admin
the authoradmin

Leave a Reply