ArticlesLatestLife style

ಮಗುವಿಗೆ ಹಾಲುಣಿಸುವ ತಾಯಿಯಂದಿರೇ ನಿಮ್ಮ ಆರೋಗ್ಯದತ್ತ ನಿಗಾ ವಹಿಸಿ… ಏಕೆಂದರೆ?

ಪ್ರತಿಯೊಬ್ಬರೂ ಇವತ್ತು ಮಗು ಯಾವುದೇ ಆಗಿರಲಿ ಆರೋಗ್ಯವಂತ ಮಗು ಬೇಕು ಎಂದು ಬಯಸುತ್ತಾರೆ. ಆದರೆ ಮಗು ಆರೋಗ್ಯವಾಗಿರ ಬೇಕಾದರೆ ಮಗುವಿಗೆ ಜನ್ಮ ನೀಡಿದ ತಾಯಿ ಅರ್ಥಾತ್ ಹಾಲುಣಿಸುವ ಅಮ್ಮ ಆರೋಗ್ಯವಾಗಿ ಇರಬೇಕಾಗುತ್ತದೆ. ಆದರಿಂದ ಹಾಲುಣಿಸುವ ಪ್ರತಿಯೊಬ್ಬ ತಾಯಿಯೂ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ.

ಮಗುವಿಗೆ ಹಾಲುಣಿಸುವ ತಾಯಂದಿರು ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟೇ ಕಾಳಜಿಯನ್ನು ತಮ್ಮ ಆರೋಗ್ಯದ ಬಗ್ಗೆಯೂ ವಹಿಸುವುದು ಅಗತ್ಯವಾಗಿದೆ. ಏಕೆಂದರೆ ಹೆರಿಗೆಯ ನಂತರ ದೇಹದಲ್ಲಿ ಒಂದಷ್ಟು ಬದಲಾವಣೆಗಳು ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಪೌಷ್ಠಿಕ ಆಹಾರ ಸೇವನೆ ಸೇರಿದಂತೆ ಕೆಲವು ಸಲಹೆಗಳನ್ನು ವೈದ್ಯರಿಂದ ಪಡೆದು ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವುದು ಬಹುಮುಖ್ಯವಾಗಿದೆ.

ಹೆರಿಗೆಯ ನಂತರ ಕೆಲವು ಮಹಿಳೆಯರಲ್ಲಿ ತೂಕ ಹೆಚ್ಚಾಗಬಹುದು. ಇನ್ನು ಕೆಲವರಲ್ಲಿ ಕಡಿಮೆಯೂ ಆಗಬಹುದು. ಇದನ್ನು ನಿಯಂತ್ರಿಸಿ ಸೂಕ್ತ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕಾದರೆ ವೈದ್ಯರ ಸಲಹೆ ಅಗತ್ಯವಾಗಿರುತ್ತದೆ. ತಾಯಂದಿರು ಆರೋಗ್ಯವಾಗಿದ್ದು ಹಾಲು ಉತ್ಪತ್ತಿ ಉತ್ತಮ ಪ್ರಮಾಣದಲ್ಲಿದ್ದರೆ ಮಾತ್ರ ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತದೆ. ಆಹಾರ ಸೇವನೆ, ದೇಹದ ತೂಕ ಮತ್ತು ಆರೋಗ್ಯದ ಕಾಳಜಿಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ  ಎದೆಹಾಲು ಹಾಲು ಉತ್ಪತ್ತಿಯಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಆರೋಗ್ಯ ಮತ್ತು ಲೈಫ್ ಸ್ಟೈಲ್ ಗಳಿಗೆ ಸಂಬಂಧಿಸಿದ ಹೆಚ್ಚಿನ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

ಹೆಚ್ಚಿನ ಹಾಲುಣಿಸುವ ಮಹಿಳೆಯರು ಅತಿ ತೂಕದ ಸಮಸ್ಯೆಯಿಂದ ಬಳಲುತ್ತಾರೆ. ಇಂತಹವರು ಹಾಲುಣಿಸುವ ಸಮಯದಲ್ಲಿ ಹೆಚ್ಚಿನ ವರ್ಕೌಟ್ ಮಾಡಿದರೆ ಹಾಲಿನ ಉತ್ಪತ್ತಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಪ್ರತಿತಿಂಗಳು ಅರ್ಧದಿಂದ ಒಂದು ಕೆಜಿ ವರೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚು ಪೌಷ್ಠಿಕಾಂಶವುಳ್ಳ ಮತ್ತು ಕಡಿಮೆ ಪ್ರಮಾಣದ ಆಹಾರವನ್ನು ಬೊಜ್ಜು ಹೊಂದಿರುವ ತಾಯಂದಿರು ಸೇವಿಸುವುದು ಒಳ್ಳೆಯದು. ಇನ್ನು ಹಾಲುಣಿಸುವ  ಮಹಿಳೆಯರಲ್ಲಿ ತೂಕ ಕಡಿಮೆಯಾಗುವುದು ಕಂಡು ಬಂದರೆ ಅಂಥವರು ಪೌಷ್ಠಿಕಾಂಶಗಳ ಆಹಾರದ ಸೇವನೆಗೆ ಒತ್ತು ನೀಡಬೇಕು.

ಹಾಲು ಉತ್ಪಾದನೆ ಹೆಚ್ಚಾಗಲು ಆಹಾರದಲ್ಲಿ ಬೆಳ್ಳುಳ್ಳಿ, ಹಾಲು, ಬಾದಾಮಿ, ಜೀರಿಗೆ, ಆಡು, ಕುರಿಮಾಂಸಗಳನ್ನು ಸೇವಿಸುವುದು ಒಳ್ಳೆಯದು. ಕೆಲವೊಮ್ಮೆ ಹಾಲುಣಿಸುವ ತಾಯಂದಿರಲ್ಲಿ ಮಲಬದ್ಧತೆ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಾಣಂತಿ ಸಮಯದಲ್ಲಿ ಹೆಚ್ಚಿನ ಉಷ್ಣ ಪದಾರ್ಥಗಳನ್ನು ಸೇವಿಸುವುದರಿಂದ ಮಲಬದ್ಧತೆ ಕಂಡು ಬರುವುದರಿಂದ ಅದರ ನಿಯಂತ್ರಣಕ್ಕೆ ಹಸಿ ತರಕಾರಿಗೆ ಹೆಚ್ಚಿನ ಒತ್ತು ನೀಡಬೇಕು. ಮೂಲಂಗಿ ಸೇರಿದಂತೆ ನಾರಿನಂಶ ಹೊಂದಿರುವ ತರಕಾರಿ, ಹಣ್ಣು, ಧಾನ್ಯಗಳನ್ನು ಸೇವಿಸಬೇಕು.

ಇನ್ನು ಆಸ್ಪಿಯೋಪೊರೊಸಿಸ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಅದರ ತಡೆಗೆ ಆಹಾರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಹಾಲುಣಿಸುವ ತಾಯಂದಿರು ಕಾಫಿಯಂತಹ ಕೆಫಿನ್ ಅಂಶವುಳ್ಳ ಪಾನೀಯಗಳನ್ನು ದೂರವಿಡಬೇಕು. ಚಾಕೋಲೆಟ್ ಸೇವನೆಗೂ ಕಡಿವಾಣ ಹಾಕಬೇಕು. ಒಂದು ವೇಳೆ ತಾಯಂದಿರು ಔಷಧಿ, ಆ್ಯಂಟಿಬಯೋಟಿಕ್ ಸೇವಿಸುತ್ತಿದ್ದರೆ ಅಂಥವರು ಎಚ್ಚರ ವಹಿಸಬೇಕು ಏಕೆಂದರೆ ಇದು ಎದೆ ಹಾಲನ್ನು ಸೇರುವುದರಿಂದ ಮಗುವಿನ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಆ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಸೂಕ್ತ. ಸ್ತನ ಕ್ಯಾನ್ಸರ್, ಹೆಚ್‌ಐವಿ ಪಾಸಿಟಿವ್ ಇರುವ ತಾಯಂದಿರು ಹಾಲುಣಿಸುವ ಮುನ್ನ ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆಯುವುದು ಅತ್ಯಗತ್ಯ.

ಮಗುವಿಗೆ ಹಾಲನ್ನು ಬಿಡಿಸಿದ ನಂತರ ಬೊಜ್ಜುತನ ಕಾಡುತ್ತದೆ. ಈ ಸಂದರ್ಭ ಆಹಾರ ಸೇವನೆಯನ್ನು ಕಡಿಮೆಗೊಳಿಸುವುದು ಒಳ್ಳೆಯದು. ಅದು ಏನೇ ಇರಲಿ ಹಾಲುಣಿಸುವ ತಾಯಂದಿರು ಒಂದಷ್ಟು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ ಮಗುವಿನ ಆರೋಗ್ಯದ ಜತೆಗೆ  ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬುದನ್ನು ಮರೆಯಬಾರದು.

ಆರೋಗ್ಯ ಮತ್ತು ಲೈಫ್ ಸ್ಟೈಲ್ ಗಳಿಗೆ ಸಂಬಂಧಿಸಿದ ಹೆಚ್ಚಿನ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

 

B M Lavakumar

admin
the authoradmin

Leave a Reply