50 ವರ್ಷಕಾಲ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರ ತನು-ಮನ ಗೆದ್ದ ದಿಗ್ಗಜ ಸಂಗೀತ ಮಾಸ್ತರು. ಮೂಲತಃ ಕೇರಳದವರಾದರೂ ಬಹುತೇಕ ತಮಿಳು ಮತ್ತು ತೆಲುಗು ಸಿನಿ ಕ್ಷೇತ್ರದಲ್ಲಿ ವಿಶೇಷ ಹೆಸರು ಗಳಿಸಿ ಲೈಟ್ ಮ್ಯೂಸಿಕ್ ಕಿಂಗ್ ಎನಿಸಿದ್ದರು. ತಾವು ಸಂಗೀತ ನೀಡುತ್ತಿದ್ದ ಪ್ರತಿಯೊಂದು ಸಿನಿಮಾದಲ್ಲು ಯಾವುದಾದರೂ ಒಂದು ಹೊಸತನ್ನು ಪರಿಚಯಿಸುವ ಮೂಲಕ ವಿಶಿಷ್ಟತೆ ಕಾಪಾಡಿಕೊಂಡು ಬಂದಂಥ ಮಹಾನ್ ಸಂಗೀತ ನಿರ್ದೇಶಕರಾಗಿದ್ದ ಎಂ.ಎಸ್.ವಿಶ್ವನಾಥನ್ ಇವತ್ತು ನಮ್ಮೊಂದಿಗಿಲ್ಲ. ಅವರ ಸಂಗೀತ ಬದುಕನ್ನು ಹಿರಿಯ ಬರಹಗಾರರಾದ ಕುಮಾರಕವಿ ಬಿ.ಎನ್.ನಟರಾಜ ಅವರು ಬರಹದ ಮೂಲಕ ತೆರೆದಿಟ್ಟಿದ್ದಾರೆ.

ದಕ್ಷಿಣ ಭಾರತ ಸಿನಿಮಾ ರಂಗದ ವಿಖ್ಯಾತ ಸಂಗೀತ ನಿರ್ದೇಶಕರಲ್ಲಿ ಅಗ್ರಜ ಎನಿಸಿಕೊಂಡಿದ್ದರು ಎಂ.ಎಸ್.ವಿಶ್ವನಾಥನ್. ಇವರಿಗೆ ದೊರೆತ ಅನೇಕ ಬಿರುದು ಬಹುಮಾನ ಪ್ರಶಸ್ತಿ ಗೌರವಗಳಲ್ಲಿ ಪ್ರಮುಖವಾದ್ದು “ಸುಮಧುರ ಸಂಗೀತ ಮಹಾರಾಜ”(ಮೇಲಿಸೈ ಮನ್ನರ್-King of Melody) ತಮಿಳು ಚಲನಚಿತ್ರ ಸಂಗೀತಕ್ಕೆ ಪರ್ಯಾಯ ಹೆಸರೇ ಎಂ.ಎಸ್.ವಿ. ಇಷ್ಟಾದರೂ ಕನ್ನಡ ಮಲಯಾಳಂ ತೆಲುಗು ಹಿಂದಿ ಚಿತ್ರ ರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಮೋಡಿಗಾರ ವಿಶ್ವನಾಥನ್ ಎಂದರೆ ಉತ್ಪ್ರೇಕ್ಷೆ ಅಲ್ಲ.

1928 ಜೂನ್ 24 ರಂದು ಕೇರಳ ರಾಜ್ಯದ ಪಾಲಕ್ಕಾಡ್(ಬ್ರಿಟಿಷ್ ಮಲಬಾರ್)ಜಿಲ್ಲೆಯ ಎಲಾಪುಳ್ಳಿ ಎಂಬ ಕುಗ್ರಾಮದಲ್ಲಿ ಜನಿಸಿದರು ಮಣಯಾನ್ಗತಂ ಸುಬ್ರಮಣಿಯನ್ ವಿಶ್ವನಾಥನ್. ಇವರ ತಂದೆ ಶ್ರೀ ಸುಬ್ರಮಣಿಯನ್ ಮತ್ತು ತಾಯಿ ಶ್ರೀಮತಿ ನಾರಾಯಣಿಅಮ್ಮಾಳ್ ಕುಟ್ಟಿ. ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲದ ಬಾಲಕನು ಲೋಯರ್ ಸೆಕೆಂಡರಿ ಶಾಲೆಯನ್ನು ಮುಗಿಸಿದ್ದಾಗ ಸಂಗೀತ ಶಾರದೆಯು ಕೈಬೀಸಿ ಕರೆದುದರಿಂದ ಲೇನೋ ಪೋಷಕರ ಇಷ್ಟದಂತೆ ಇಂಟರ್ ಮೀಡಿಯಟ್ ವಿದ್ಯಾಭ್ಯಾಸ ಮುಗಿಸಲಾರದೇ ಎಲ್ಲರ ವಿರೋಧದ ನಡುವೆಯೂ ಮದ್ರಾಸ್ ನಗರಕ್ಕೆ ಪಯಣ ಬೆಳೆಸಿದರು.
1940ರಲ್ಲಿ ಮಾಹೆಯಾನ 3ರೂಪಾಯಿ ಸಂಬಳಕ್ಕೆ AVM ಫಿಲಂ ಸ್ಟುಡಿಯೋದಲ್ಲಿ ಆಫೀಸ್ ಬಾಯ್ ನೌಕರಿ ಸೇರಿದರು. ತಮ್ಮ ಬಿಡುವಿನ ಸಮಯದಲ್ಲಿ ಹಾರ್ಮೋನಿಯಂ ನುಡಿಸುವುದನ್ನು ಕಲಿತರು. ಕಾಲಕ್ರಮೇಣ ಇವರಂತೆಯೇ ಊರು ಬಂಧು ಬಳಗ ಎಲ್ಲ ಬಿಟ್ಟು ಬಂದು ಅದೇ ಸ್ಟುಡಿಯೋದಲ್ಲಿ ಚಾಕ್ರಿಯಲ್ಲಿದ್ದುಕೊಂಡೇ ಪಿಟೀಲು ವಾದ್ಯ ಕಲಿಯುತ್ತಿದ್ದ ಆರ್.ರಾಮಮೂರ್ತಿಯ ಪರಿಚಯವಾಯಿತು.

ವಿಧಿಯಲೀಲೆ ಎಂಬಂತೆ ಅಂದಿನ ಖ್ಯಾತನಟ ಶಿವಾಜಿಗಣೇಶನ್ರ ಪರಿಚಯವಾಗಿ ಇವರಿಬ್ಬರ ಅದೃಷ್ಟದ ಬಾಗಿಲು ತೆರೆದುಕೊಂಡಿತು.1952ರಲ್ಲಿ ‘ಪಣಂ’ ಸಿನಿಮಾಗೆ ಮತ್ತು 1953ರಲ್ಲಿ ಜನಪ್ರಿಯ ನಟ ಎಂ.ಜಿ.ರಾಮಚಂದ್ರನ್(MGR) ನಟಿಸಿದ ‘ಜಿನೋವ’ ಚಿತ್ರಕ್ಕೆ ಮ್ಯೂಸಿಕ್ ನೀಡಲು ಅವಕಾಶ ದೊರಕಿತು.1954ರಿಂದ ವಿಶ್ವನಾಥನ್-ರಾಮಮೂರ್ತಿ ಜೋಡಿಯು ಒಮ್ಮೆಯೂ ಹಿಂದಿರುಗಿ ನೋಡದಂತೆ ಸತತ 17೦ಕ್ಕೂ ಹೆಚ್ಚು ತಮಿಳು 50ಕ್ಕೂ ಹೆಚ್ಚು ಇತರೆ ಭಾಷೆಯ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಅಮೋಘ ಕಾರ್ಯ ನಿರ್ವಹಿಸಿ ಅನೇಕ ದಾಖಲೆಗಳನ್ನು ನಿರ್ಮಿಸಿದರು! ದುರದೃಷ್ಟವಶಾತ್ ಈ ಜೋಡಿಯು1966ರಲ್ಲಿ ಬೇರೆ ಬೇರೆ ಆಯಿತು.
ಇದನ್ನೂ ಓದಿ:ಡಾ ರಾಜ್ ಕುಮಾರ್ ಮಗನ ಪಾತ್ರಕ್ಕೆ ಜೀವ ತುಂಬಿದ ಅಶೋಕ್…
ಆ ನಂತರ ಎಂ.ಎಸ್.ವಿಶ್ವನಾಥನ್ ಪರ್ವ ಪ್ರಾರಂಭ ವಾಯಿತು. 3 ದಶಕಗಳ ಪರ್ಯಂತ ಎಂ.ಎಸ್.ವಿ.ಯುಗ ವಿಜೃಂಭಿಸಿತು. ಘಂಟಸಾಲ, ಟಿ.ಎಂ.ಸೌಂದರ್ರಾಜನ್, ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಮಣ್ಯಂ, ಯೇಸುದಾಸ್, ಪಿ.ಸುಶೀಲ, ಎಸ್.ಜಾನಕಿ, ಪಿ.ಲೀಲಾ. ಮುಂತಾದ ಅನೇಕರು ಹೆಚ್ಚು ಜನಪ್ರಿಯತೆ ಗಳಿಸಿದರು. ಕೆ.ಬಾಲಚಂದರ್, ಕಮಲಹಾಸನ್, ರಜನೀಕಾಂತ್, ಕೋಕಿಲಮೋಹನ್, ಮುರಳಿ ಮುಂತಾದ ಕಲಾವಿದರು ಖ್ಯಾತಿಯ ಉತ್ತುಂಗಕ್ಕೇರಿದರು. ಹೊಸಬರಾಗಲೀ ಹಳಬರಾಗಲೀ ಎತ್ತರಕ್ಕೆ ಬೆಳೆಸು(ಯು)ವಲ್ಲಿ ಯಾವುದೇ ತಾರತಮ್ಯ ತೋರದೆ ಎಲ್ಲರನ್ನು ಸದುಪಯೋಗ ಪಡಿಸಿಕೊಂಡ ಸಹೃದಯವಂತ.

ಅಂತಾರಾಷ್ಟ್ರ ರಾಷ್ಟ್ರ ರಾಜ್ಯ ಪ್ರಶಸ್ತಿಗಳನ್ನು ಗಳಿಸಿ ಸರ್ವ ರೀತಿಯಲ್ಲಿ ಪರ್ವತವಾಗಿ ಬೆಳೆದರೂ ತಮ್ಮ ಸರಳ ಸಜ್ಜನಿಕೆ ನಡೆ-ನುಡಿಯಿಂದ ಭಾರತ ಚಿತ್ರರಂಗದ ಪ್ರತಿಯೊಬ್ಬರ ಪ್ರೀತಿ ವಿಶ್ವಾಸ ಗಳಿಸಿ ಮಾನವತೆ ಮೆರೆದು ಶಾಶ್ವತ ಪ್ರತಿಭೆಯನ್ನು ಅನಾವರಣಗೊಳಿಸಿದ ಸಂಗೀತ ನಿರ್ದೇಶಕ. ಪಂಚ ಭಾಷೆಗಳ 600ಕ್ಕೂ ಹೆಚ್ಚು ಸಿನಿಮಾಗಳಿಗೆ 2 ಲಕ್ಷಕ್ಕೂ ಮಿಕ್ಕು ಗೀತೆಗಳಿಗೆ ಮ್ಯೂಸಿಕ್ ಡೈರೆಕ್ಷನ್ ಮಾಡಿದ ಧೀಮಂತ, 25ಕ್ಕೂಹೆಚ್ಚು ಹಾಡುಗಳಿಗೆ ಸ್ವಯಂ ಹಿನ್ನೆಲೆ ಗಾಯಕನಾಗಿದ್ದ ವಿದ್ವತ್ ಶ್ರೀಮಂತ!.

ಡಾ.ರಾಜಕುಮಾರ್, ಎನ್.ಟಿ.ರಾಮರಾವ್, ಅಕ್ಕಿನೇನಿನಾಗೇಶ್ವರರಾವ್, ಪ್ರೇಮನಜೀರ್, ಸಾವಿತ್ರಿ, ದೇವಿಕ, ಜಮುನ, ಸಾಹುಕಾರ್ ಜಾನಕಿ ಮುಂತಾದ ಜನಪ್ರಿಯ ನಟನಟಿಯರ ಮೆಚ್ಚಿನ ಸಂಗೀತ ನಿರ್ದೇಶಕರಾಗಿದ್ದರು. ಸಾರ್ವಜನಿಕ ಸಭೆ ಸಮಾರಂಭ ಗಳಲ್ಲಿ ಹಿಂದಿ ಚಿತ್ರರಂಗದ ಶಂಕರ್ ಜೈಕಿಶನ್, ಲಕ್ಷ್ಮಿಕಾಂತ್ ಪ್ಯಾರೇಲಾಲ್, ಎಸ್.ಡಿ.ಬರ್ಮನ್, ರಾಜಕಪೂರ್, ದಿಲೀಪಕುಮಾರ್ ಮುಂತಾದ ಖ್ಯಾತರಿಂದ ಹೊಗಳಿಕೆ ಪಡೆದ ಸಂಗೀತ ನಿರ್ದೇಶಕರಾಗಿದ್ದರು. ಎಂ.ಎಸ್ವಿ. ಸಂಗೀತ ನೀಡಿದ ಅನೇಕ ಚಿತ್ರಗಳಲ್ಲಿ ಕೆಲವು ಉದಾಹರಣೆ ಇಲ್ಲಿವೆ.

ಶಿವಾಜಿಗಣೇಶನ್ ನಟಿಸಿದ ಪುದಿಯಪರವೈ, ಪಾಶಮಲರ್(ಪಾರ್ಥಜ್ಞಾಪಕಂಇಲ್ಲೆಯೋ, ಎಂಗೆನೆಮ್ಮದಿ, ಆಹಾಮೆಲ್ಲನಡ) ಜೆಮಿನಿಗಣೇಶನ್ ನಟಿಸಿದ ಪಾದಕಾಣಿಕೈ(ವೀಡುವರೈಉರವು) ಎಂ.ಜಿ.ಆರ್.-ಬಿ.ಸರೋಜಾದೇವಿ ನಟಿಸಿದ ಅನ್ಬೇವಾ(ರಾಜವಿಂಪಾರ್ವೈ ರಾಣಿ ಎನ್ಪಕ್ಕ೦) ಕಾಲಂಗಳಿಲ್ ಅವಳ್ ವಸಂತಂ, ನಿನಪ್ಪದೆಲ್ಲಾಮ್ ನಡೆದುವಿಟ್ಟಾಲ್, ಸುಮೈತಂಗಿ, ಮುತ್ತಾನಮುತ್ತಲ್ಲವೋ, ಏನಕ್ಕೋರುಕಾದಲ್, ಮುಂತಾದ ಅನೇಕ ಜ್ಯುಬಿಲಿ ಬ್ಲಾಕ್ ಬಸ್ಟರ್ ಸಿನಿಮಾಗಳೂ ಸೇರುತ್ತವೆ.
ಕೆ.ಬಾಲಚಂದರ್, ಕಮಲಹಾಸನ್, ರಜನೀಕಾಂತ್ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಚಲನಚಿತ್ರ ಸಂಗೀತಕ್ಕೆ ನ್ಯಾಯ ನೀತಿ ಒದಗಿಸಿದ್ದ ಬೆರಳೆಣಿಕೆಯಷ್ಟು ಸಂಗೀತ ನಿರ್ದೇಶಕರಲ್ಲಿ ಪ್ರಮುಖರಾಗಿದ್ದ ಇವರಿಗೆ ಹಲವಾರು ಪ್ರಶಸ್ತಿ ಬಹುಮಾನ ಪುರಸ್ಕಾರ ದೊರಕಿದ್ದು ಆಪೈಕಿ 1988ರಲ್ಲಿ ನೀಡಿದ ಪದ್ಮಶ್ರೀ ಪ್ರಶಸ್ತಿಯೂ ಸೇರಿದೆ.

1980ರಿಂದ 2010ರವರೆಗೆ ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕರಾಗಿ ಮೆರೆದಂಥ ಇಳಯರಾಜ, ಎ.ಆರ್.ರೆಹಮಾನ್, ಮುಂತಾದವರು ಎಂ.ಎಸ್.ವಿ. ಶಿಷ್ಯರು ಎಂಬುದು ಹೆಮ್ಮೆ ಪಡುವ ವಿಷಯ. ಕಾಲಾಯ ತಸ್ಮೈ ನಮಃ ಎಂಬಂತೆ 2010 ರಿಂದ ಸುಮಾರು ಐದಾರು ವರ್ಷಕಾಲ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ತೀವ್ರ ಅಸ್ವಸ್ಥತೆಯಿಂದ ಒಂದೆರಡು ವರ್ಷ ಆಸ್ಪತ್ರೆಯಲ್ಲಿ ಒಳರೋಗಿ ಆಗಿದ್ದು ಉತ್ತಮ ಚಿಕಿತ್ಸೆ ನೀಡಿದರೂ ಫಲಕಾರಿ ಆಗಲಿಲ್ಲ. ಕಡೆಗೆ ದಿನಾಂಕ 14 ಜುಲೈ 2015 ಮಂಗಳವಾರದಂದು ಮುಂಜಾನೆ ಹೊತ್ತಿನ 4.30ರಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸಪ್ತಸ್ವರಗಳ ದೊರೆ ಎಂ.ಎಸ್.ವಿಶ್ವನಾಥನ್ ತಮ್ಮದೇ ಸ್ವರ ಬಿಟ್ಟು ಹೊರಟೇ ಬಿಟ್ಟರು!
ಇದನ್ನೂ ಓದಿ: ಮಿನುಗುತಾರೆ ಕಲ್ಪನಾ… ಎಂದೂ ಮರೆಯದ, ಯಾವತ್ತೂ ಮಾಸದ ಬೆಳ್ಳಿ ನಕ್ಷತ್ರ
ಇಂಥ ಸಂಗೀತ ಮಾಂತ್ರಿಕನ ಪತ್ನಿ ಶ್ರೀಮತಿ ಜಾನಕಿ ಮತ್ತು ಪುತ್ರ ಗೋಪಿಕೃಷ್ಣನ್ ರವರನ್ನು ಮಾತ್ರವಲ್ಲದೆ ಇಡೀ ಭಾರತದ ಸಂಗೀತ ಪ್ರೇಮಿ ಹಾಗೂ ಅಸಂಖ್ಯಾತ ಅಭಿಮಾನಿಗಳನ್ನೂ ತಬ್ಬಲಿ ಮಾಡಿ ತೆರಳಿದರು. 87 ವರ್ಷ ಪರ್ಯಂತ ತಮ್ಮ ತುಂಬು ಜೀವನ ನಡೆಸಿ ಅಸ್ತಂಗತರಾದ ಎಂ.ಎಸ್.ವಿಶ್ವನಾಥನ್ ದೇಹಾಂತ್ಯದಿಂದ ಚಿತ್ರರಂಗದ ಧ್ರುವತಾರೆಯೊಂದು ಕಳಚಿ ಬಿದ್ದಂತಾಗಿದೆ. ಆದರೆ ಅವರಾತ್ಮ ಮತ್ತು ಅವರ ಸಂಗೀತ ಸಾಗರ ಆಚಂದ್ರಾರ್ಕ ಅಜರಾಮರ..










SOUTH INDIA’S Legendary music director M.S. VISWANATHAN article written by kannada author Mr.NATRAJ, is really an excellent one. Thank you very much sir😊M.K.Dandayudapani, Proprietor, Madras Musical Stores, Hosur, Tamilnadu.
SOUTH INDIA’S Legendary music director M.S. VISWANATHAN article written by kannada author Mr.NATRAJ, is really an excellent one. Thank you very much sir😊M.K.Dandayudapani,Proprietor, Madras Musical Stores Hosoor, Tamilnadu.