ArticlesLatest

ಕೊಡಗಿನ ಮಣ್ಣಿನ ಮಕ್ಕಳ ಕಣ್ಣೀರು … ಒಂಟಿಯಾದ ಜೀವಗಳಿಗೆ ಜೊತೆಯಾಗೋಣ!

ಚರ್ಚೆ ಹುಟ್ಟು ಹಾಕಿದ ಲೇಖನ…. ಬದಲಾವಣೆಯೊಂದಿಗೆ…

ಇವತ್ತು ನಮ್ಮ, ನಿಮ್ಮ ಮನೆಯ ಸಮಸ್ಯೆಯೇ ಸಾಮಾಜಿಕ ಸಮಸ್ಯೆಯಾಗಿ ರೂಪುಗೊಳ್ಳುತ್ತಿದೆ. ಅದು ಬೇರೆ ಯಾವುದಲ್ಲ ಪ್ರಾಪ್ತ ವಯಸ್ಸಿಗೆ ಬಂದರೂ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗದೆ ಇರುವುದು… 11 ಮೇ 2026 ರಂದು ಜನಮನ ಕನ್ನಡದಲ್ಲಿ ಕೊಡಗಿನಲ್ಲಿ  30, 40, 45 ಮತ್ತು 50 ಆದರೂ ಮದುವೆಯಾಗದೆ ಉಳಿದು ಹೋಗಿರುವ ಹುಡುಗರ ಬಗ್ಗೆ  ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಅವರು ಲೇಖನ ಬರೆದಿದ್ದರು ಅದು ಭಾರಿ ಸದ್ದು ಮಾಡಿತ್ತು. ಒಂದಷ್ಟು ಚರ್ಚೆಯೂ ಆಗಿತ್ತು.. ಲೇಖನ ಸ್ಪರ್ಧೆಗೂ ಕಾರಣವಾಗಿದ್ದು ವಿಶೇಷ..

ಕೆಲವರಿಗೆ ಈ ಲೇಖನದ ಸ್ಪರ್ಧೆ ವಿಷಯ ಅರ್ಥವಾಗಲಿಲ್ಲ –   ಕೊಡಗಿನ ಶೇಕಡ 25ರಷ್ಟು ಹುಡುಗರು ಮದುವೆಯಾಗದೆ ಒಂಟಿಯಾಗಿದ್ದಾರೆ. 30 ದಾಟಿದವರು, 40 ದಾಟಿದವರು ಮಾತ್ರ ಅಲ್ಲ, 45 ರಿಂದ 50 ವರ್ಷ ತಲುಪಿದವರೂ ಇದ್ದಾರೆ.

ನೀವು ವಿಷ್ಣು ನಾಚಪ್ಪರವರ ಪೋಸ್ಟ್ ನೋಡಿದ್ದರೆ (👆)ಅದೇ ದಿಸೆಯಲ್ಲಿ ಈ ಬಗ್ಗೆ ನಿಮ್ಮಿಂದ ಒಂದು ಸ್ಪರ್ಧಾತ್ಮಕ ಲೇಖನ. ಕನ್ನಡದಲ್ಲಿ. ನಿಮ್ಮ ದೃಷ್ಟಿಕೋನದಲ್ಲಿ ಅವರು ಹೇಳಿದ್ದನ್ನೇ ಸವಿಸ್ತಾರವಾಗಿ ಹೇಳಿ ಅಥವಾ ಅವರು ಹೇಳಿದ್ದನ್ನು ಬಿಟ್ಟು ಇನ್ನೇನಾದರೂ ಹೇಳಬೇಕೆನಿಸಿದರೆ ಹೇಳಿ. ಸಲಹೆ ಸೂಚನೆ ಪರಿಹಾರ ಅನಿಸಿಕೆಗಳನ್ನು ಮುಕ್ತವಾಗಿ ಹೇಳಿ. ಯಾವಾಗಲೂ ಇರುವಂತೆ  ಪ್ರಬಂಧದ ಕಟ್ಟುನಿಟ್ಟಿನ ನಿಯಮಗಳಿಲ್ಲ. ವಿಷಯ / ವಿಚಾರಗಳ ಮೇಲೆ ಹೆಚ್ಚು ಗಮನಹರಿಸಿ … ನವೀನ ಒಳನೋಟವಿದ್ದಷ್ಟೂ ಫಲಪ್ರದ. ಕೊಡಗು ಮಾತ್ರ ಅಲ್ಲ ನಮ್ಮ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಲೇಖನ ಬರೆಯಿರಿ ಎಂಬ ಒತ್ತಾಯಗಳು ಬಂದಿದ್ದವು… ಇದಕ್ಕೆ ಪ್ರೇರಣೆಯಾಗಿ ಮತ್ತೊಂದು ಲೇಖನವನ್ನು ಕಾಯಪಂಡ ವಿಷ್ಣು ನಾಚಪ್ಪ ಬರೆದಿದ್ದಾರೆ ಓದಿ ಬಿಡಿ..

ನನ್ನ ಆತ್ಮೀಯ ಬಂಧುಗಳೇ,

ಕಳೆದ 11 ಮೇ 2026 ರಂದು “ಕೊಡಗಿನ ನೈಜ ಧ್ವನಿ”_ಹಾಗೂ ಜನಮನ ಕನ್ನಡದ ಮೂಲಕ ನಾನು ಬರೆದಿದ್ದ _”ಕೊಡಗಿನ ಶೇಕಡ 25ರಷ್ಟು ಹುಡುಗರು ಮದುವೆಯಾಗದೆ ಒಂಟಿಯಾಗಿದ್ದಾರೆ, 30 ದಾಟಿದವರು, 40 ದಾಟಿದವರು ಮಾತ್ರವಲ್ಲ 45 ರಿಂದ 50 ವರ್ಷ ತಲುಪಿದವರೂ ಇದ್ದಾರೆ” ಎಂಬ ಲೇಖನಕ್ಕೆ ಇಡೀ ಕರ್ನಾಟಕದಾದ್ಯಂತ ಸಿಕ್ಕಿರುವ ಜನಮನ್ನಣೆಗೆ ನಾನು ಸಮಸ್ತ ನಾಡಿನ ಜನತೆಗೆ ಮೊದಲು ತುಂಬು ಹೃದಯದ ಧನ್ಯವಾದ ಹೇಳುತ್ತೇನೆ

ಇವತ್ತು ಸಾಮಾಜಿಕ ಮಾಧ್ಯಮದ ಮೂಲಕ ಈ ವಿಷಯದ ಬಗ್ಗೆ ಲೇಖನ ಸ್ಪರ್ಧೆ ನಡೆಯುತ್ತಿದೆ ಎಂದು ಕೇಳಿಬಂತು. ನನ್ನ ಮೂಲ ಲೇಖನದ ಆಶಯವೇ ಈ ಸ್ಪರ್ಧೆಗೆ ಪ್ರೇರಣೆಯಾಗಿರುವುದು ನಿಜಕ್ಕೂ ದೊಡ್ಡ ಪ್ರಶಸ್ತಿ ಸಿಕ್ಕಿದಷ್ಟು ಖುಷಿಯ ವಿಷಯ.

ಇದು ಕೊಡಗಿನ ಒಂದು ಹಳ್ಳಿಯ ಕಥೆಯಲ್ಲ, ರಾಜ್ಯದ ಬಹುತೇಕ ಕಡೆ ಇದೇ ಆಗಿದೆ. ಇದು ನನ್ನ ಲೇಖನ ವೈರಲ್ ಆದ ನಂತರ ನನಗೆ ಅರ್ಥವಾದ ಸತ್ಯ. ಮಂಡ್ಯ, ಹಾಸನ, ಶಿವಮೊಗ್ಗ, ಬೆಳಗಾವಿ, ಉತ್ತರ ಕರ್ನಾಟಕದ ಎಷ್ಟೋ ಜನರು ಕರೆ ಮಾಡಿ “ಅಣ್ಣಾ ನಮ್ಮ ಊರಿನಲ್ಲೂ ಇದೇ ಪರಿಸ್ಥಿತಿ ಇದೆ” ಎಂದು ಹೇಳಿದ್ದಾರೆ. ಕೊಡಗಿನ ಹಸಿರು ಬೆಟ್ಟಗಳ ನಡುವೆ ಹರಿಯುತ್ತಿರುವ ಈ ಮೌನ ಕಣ್ಣೀರು ಇಂದು ರಾಜ್ಯದ ಎಲ್ಲ ಹಳ್ಳಿಗಳಲ್ಲೂ ಹರಿಯುತ್ತಿದೆ. ಇವರು ಕುಡುಕರಲ್ಲ, ಕೆಲಸ ಇಲ್ಲದವರಲ್ಲ. ಇವರು ಕಾಫಿ ತೋಟ ನಂಬಿ, ತಾತ-ಮುತ್ತಾತನ ಕಾಲದ ಮಣ್ಣನ್ನು ಕಾಯುತ್ತಿರುವವರು, ಆದರೂ ಇವತ್ತಿನ ಸಮಾಜದಲ್ಲಿ ಒಂಟಿಯಾಗಿ ಉಳಿದಿದ್ದಾರೆ.

50 ರ ಹೊಸ್ತಿಲಲ್ಲಿ ಒಂಟಿತನದ ಶಾಪ ಎಷ್ಟು ನೋವಿನದ್ದು ಎಂದರೆ, 30ರಲ್ಲಿ ಮದುವೆ ಆಗದಿದ್ದರೆ ‘ಇನ್ನೂ ಟೈಮ್ ಇದೆ’ ಎಂದುಕೊಳ್ಳಬಹುದು, ಆದರೆ 45-50 ವರ್ಷಕ್ಕೆ ಬಂದರೂ ಹೆಣ್ಣು ಸಿಗದಿದ್ದರೆ ಆ ಮನೆಯಲ್ಲಿ 80ರ ತಂದೆ-ತಾಯಿಗೆ ‘ಮಗನಿಗೆ ಸಂಸಾರ ಕಟ್ಟಿಕೊಡಲಾಗಲಿಲ್ಲ’ ಎಂಬ ಕೊರಗು, ಮಗನಿಗೆ ‘ನನ್ನ ತಪ್ಪೇನು’ ಎಂಬ ಪ್ರಶ್ನೆ ಕಾಡುತ್ತದೆ. ಹಬ್ಬ-ಹರಿದಿನಗಳಲ್ಲಿ ‘ನಿನ್ನ ಮದುವೆ ಯಾವಾಗಪ್ಪಾ’ ಎಂಬ ಪ್ರಶ್ನೆಗೆ ಉತ್ತರವಿಲ್ಲದ ಹತಾಶೆ. ಇದು ಕೇವಲ ಒಂಟಿತನವಲ್ಲ, ಬದುಕಿನುದ್ದಕ್ಕೂ ಕಾಡುವ ಸಾಮಾಜಿಕ ನೋವು.

ಈ ಸಮಸ್ಯೆಯ ಮೂಲವನ್ನು ನಾವು ಯಾರನ್ನೂ ದೂಷಿಸದೆ ನೋಡಬೇಕು. ಇದು ಕಾಲದ ಬದಲಾವಣೆ, ವಿದ್ಯಾಭ್ಯಾಸ, ಉದ್ಯೋಗ ಮತ್ತು ಹಳ್ಳಿ-ನಗರದ ನಡುವಿನ ಜೀವನಶೈಲಿಯ ಅಂತರದಿಂದ ಬಂದಿರುವ ಪರಿಸ್ಥಿತಿ. ಇದರ ಜೊತೆಗೆ ಇಂದು ಮದುವೆ ಎಂದರೆ ಲಕ್ಷಾಂತರ ರೂಪಾಯಿ ಖರ್ಚು, ಆಡಂಬರದ ಪ್ರದರ್ಶನ ಎಂಬ ಭಾವನೆ ಎಲ್ಲರಲ್ಲೂ ಬಂದಿದೆ. ಈ ಕಾರಣದಿಂದಲೂ ಅನೇಕ ಕುಟುಂಬಗಳು ಮುಂದೆ ಬರಲು ಹಿಂಜರಿಯುತ್ತಿವೆ.

ಕಾಫಿ ತೋಟವೆಂದರೆ ಕೇವಲ ಕೃಷಿ ಅಲ್ಲ, ಅದು ನಮ್ಮ ಸಂಸ್ಕೃತಿ. ಬೆಂಗಳೂರಿನಲ್ಲಿ 1 ಲಕ್ಷ ಸಂಬಳ ತರುವ ಹುಡುಗನಿಗಿಂತ ಕೊಡಗಿನಲ್ಲಿ 10 ಎಕರೆ ಕಾಫಿ ತೋಟ ನೋಡಿಕೊಳ್ಳುವ ಹುಡುಗನ ಆರ್ಥಿಕತೆ ಕಡಿಮೆ ಇಲ್ಲ. ಇಲ್ಲಿ ಪಬ್, ಮಲ್ಟಿಪ್ಲೆಕ್ಸ್ ಇಲ್ಲದಿರಬಹುದು, ಆದರೆ ಸ್ವಚ್ಛ ಗಾಳಿ, ಸ್ವಂತ ಮನೆ, ಸ್ವಾಭಿಮಾನದ ಬದುಕಿದೆ. ಈ ಹುಡುಗರು ಕೊಡಗು ಉಳಿಸೋಕೆ ಹೋರಾಡುತ್ತಿರುವ ಸೈನಿಕರು. ಇವರು ತೋಟ ಬಿಟ್ಟು ಸಿಟಿಗೆ ಹೋದರೆ ನಾಳೆ ಕೊಡಗಿನ ಕಾಫಿ ತೋಟ ಯಾರ ಪಾಲಾಗುತ್ತದೆ?

ಆದುದರಿಂದ ಇನ್ನೂ ಸಮಯವಿದೆ, ನಾವು ಜೊತೆಯಾಗಿ ಬದುಕು ಕಟ್ಟೋಣ. ಈ ಸಮಸ್ಯೆಗೆ ಪರಿಹಾರ ಒಂದೇ – ಮನಸು ಮಾಡುವುದು. ಮದುವೆಯಾಗದೆ ಉಳಿದಿರುವ ಅವಿವಾಹಿತ ಹೆಣ್ಣು ಮಕ್ಕಳಲ್ಲಿ ನನ್ನ ಮನವಿ ವಯಸ್ಸು 30 ದಾಟಿತು ಎಂದು ಕುಗ್ಗಬೇಡಿ, ನಿಮ್ಮ ಕನಸಿನ ಬದುಕು ಕೊಡಗಿನ ತೋಟದ ಮನೆಯಲ್ಲೂ ಸಿಗಬಹುದು, ಗುಣವಂತ, ದುಡಿಮೆಯ ಹುಡುಗನಿಗೆ ಮನಸು ಕೊಡಿ, ವಯಸ್ಸಿನ ಅಂತರ ದೊಡ್ಡ ವಿಷಯವಲ್ಲ ಹೊಂದಾಣಿಕೆ ಮುಖ್ಯ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆದ ಸಹೋದರಿಯರಲ್ಲಿ ನನ್ನ ಮನವಿ ಒಂದು ಸಂಬಂಧ ಮುರಿದರೆ ಬದುಕು ಮುಗಿಯುವುದಿಲ್ಲ, ಮತ್ತೊಂದು ಅವಕಾಶಕ್ಕೆ ನಿಮ್ಮ ಮನಸಿನ ಬಾಗಿಲು ತೆರೆಯಿರಿ,

ಕೊಡಗಿನ ಮಣ್ಣನ್ನು ನಂಬಿದ, ಕಷ್ಟ-ಸುಖ ಅರಿತ 40-45ರ ಹರೆಯದ ಹುಡುಗನಿಗೆ ನೀವು ಹೊಸ ಬದುಕು ಕೊಡಬಹುದು, ಅವನು ನಿಮಗೆ ಆಸರೆಯಾಗಬಲ್ಲ. ಚಿಕ್ಕ ವಯಸ್ಸಿನಲ್ಲಿ ವಿಧವೆಯಾದ ತಾಯಂದಿರಲ್ಲಿ ನನ್ನ ಮನವಿ ವಿಧಿ ನಿಮ್ಮ ಬದುಕಿನ ಒಂದು ಅಧ್ಯಾಯ ಮುಗಿಸಿರಬಹುದು, ಆದರೆ ಪುಸ್ತಕ ಮುಗಿದಿಲ್ಲ, ಸಮಾಜದ ‘ಏನೆಂದುಕೊಂಡಾರು’ ಎಂಬ ಭಯ ಬಿಟ್ಟು ಮತ್ತೊಮ್ಮೆ ಮನಸು ಮಾಡಿ, ನಿಮ್ಮ ಮಗುವಿಗೆ ತಂದೆಯ ಪ್ರೀತಿ ಕೊಡಬಲ್ಲ ಯುವಕರು ಕೊಡಗಿನಲ್ಲಿದ್ದಾರೆ. ವಯಸ್ಸು ಮೀರಿದ ಹುಡುಗರಿಗೆ ನನ್ನ ಕರೆ ‘ನನಗೆ ಯಾರೂ ಸಿಗಲ್ಲ’ ಎಂದು ಕೈಕಟ್ಟಿ ಕೂರಬೇಡಿ, ನಿಮ್ಮ ತೋಟ, ನಿಮ್ಮ ದುಡಿಮೆ, ನಿಮ್ಮ ಗುಣವೇ ನಿಮ್ಮ ಆಸ್ತಿ, ಸಮಾಜದ ಮುಂದೆ ಬನ್ನಿ, ವಧು-ವರ ಸಮಾವೇಶಗಳಲ್ಲಿ ಭಾಗವಹಿಸಿ.

ಸಮಾಜವಾಗಿ ನಾವೇನು ಮಾಡಬೇಕು ಎಂದರೆ, ತಂದೆ-ತಾಯಿಯರು ಹಾಗೂ ಬಂಧು-ಬಳಗದವರು ‘ಸಿಟಿ ಕೆಲಸ’ ಮಾತ್ರ ನೋಡದೆ ಹುಡುಗನ ಗುಣ, ಕುಟುಂಬ ನೋಡಬೇಕು, ವಿಚ್ಛೇದಿತರು, ವಿಧವೆಯರ ಮರುಮದುವೆಗೆ ಪ್ರೋತ್ಸಾಹಿಸಬೇಕು, ಇದು ತಪ್ಪಲ್ಲ ಪುಣ್ಯದ ಕೆಲಸ. _ಸಂಘ-ಸಂಸ್ಥೆಗಳು ಕೊಡವ ಸಮಾಜಗಳು, ಅಖಿಲ ಕೊಡವ ಸಮಾಜ, ಹಾಗೂ ಇನ್ನಿತರ ಎಲ್ಲಾ ಸಮಾಜಗಳು ನಾಗರಿಕ ಬಂಧುಗಳು 35+ ವಯಸ್ಸಿನ ವಧು-ವರರು, ವಿಚ್ಛೇದಿತರು, ವಿಧವೆಯರಿಗಾಗಿ ವಿಶೇಷ ಸಮಾವೇಶ_ ಮಾಡಬೇಕು, ಯಾರನ್ನೂ ಮೂಲೆಗುಂಪು ಮಾಡಬಾರದು. ಮತ್ತು ಅತ್ಯಂತ ಮುಖ್ಯವಾಗಿ, ಕೊಡಗಿನ ಮೂಲ ನಿವಾಸಿಗಳಾದ ನಾವು ಜಾತಿಭೇದಗಳನ್ನು ಬದಿಗಿರಿಸಿ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ.

ನಾವೆಲ್ಲ ಈ ಮಣ್ಣಿನ ಮಕ್ಕಳು, ಮದುವೆ ವಿಷಯದಲ್ಲಿ ‘ನಮ್ಮ ಜಾತಿ, ಅವರ ಜಾತಿ’ ಎಂದು ಗೋಡೆ ಕಟ್ಟಿಕೊಂಡರೆ ನಮ್ಮ ಮುಂದಿನ ಪೀಳಿಗೆಯೇ ಇಲ್ಲವಾಗುತ್ತದೆ, ಗುಣ ನೋಡಿ, ಮನಸ್ಸು ನೋಡಿ, ಹೊಂದಾಣಿಕೆ ನೋಡಿ, ಜಾತಿ ಅಲ್ಲ ಜೀವ ಮುಖ್ಯ, ಕೊಡಗು ಉಳಿಯಬೇಕಾದರೆ ಕೊಡಗಿನವರು ಒಂದಾಗಬೇಕು.

ಕೊಡಗಿನ ಶೇ. 25ರಷ್ಟು ಹುಡುಗರ ಕಣ್ಣೀರು ಒರೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮದುವೆ ಎಂದರೆ ಜಾತಕ-ಹೊಂದಾಣಿಕೆ ಮಾತ್ರ ಅಲ್ಲ, ಎರಡು ಒಂಟಿ ಜೀವಗಳ ಬೆಸುಗೆ. 50ರ ಹೊಸ್ತಿಲಲ್ಲಿರುವವನಿಗೂ, ಬದುಕಿನಲ್ಲಿ ಎಡವಿದವಳಿಗೂ ‘ಇದು ನನ್ನ ಸಂಸಾರ’ ಎಂದು ಹೇಳಿಕೊಳ್ಳುವ ಹಕ್ಕಿದೆ. ಒಂಟಿತನ ಮರೆಯಾಗಲಿ, ಐನ್‌ಮನೆಗಳಲ್ಲಿ, ಮನೆ ಮನೆಗಳಲ್ಲಿ ಮತ್ತೆ ನಗೆ ಹಬ್ಬಲಿ.

 ಕೊಡಗಿನ ಮಣ್ಣಿನ ಉಳಿವಿಗಾಗಿ ಜನರಿಂದ ಜನರಿಗಾಗಿ ಜನಜಾಗೃತಿಗಾಗಿ….

ಇದನ್ನೂ ಓದಿ… 

ಕೊಡಗಿನ ಮಣ್ಣಿನ ಮಕ್ಕಳ ಕಣ್ಣೀರು…. ಒಂಟಿಯಾದ ಜೀವಗಳಿಗೆ ಜೊತೆಯಾಗೋಣ…

admin
the authoradmin

Leave a Reply