LatestMysore

ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು ಶರಣರು:ನಿ. ನ್ಯಾ.ಅರಳಿ ನಾಗರಾಜ ಗಂಗಾವತಿ

ನಂಜನಗೂಡಿನಲ್ಲಿ 129ನೇ ಶಾಲೆಗಳೆಡೆಗೆ ವಚನಗಳ ನಡಿಗೆ

ನಂಜನಗೂಡು: ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು ಶರಣರು ಎಂದು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಹೇಳಿದರು.

ನಂಜನಗೂಡು ಪಟ್ಟಣದ ಶ್ರೀ ಗುರುಮಲ್ಲೇಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ, ಕಾಗಲವಾಡಿಯ ಗೌಡರ ಮಹದೇವಪ್ಪ ಮಂಗಳಮ್ಮ ಮತ್ತು ಗದಗದ ನಿವೃತ್ತ ಸಿ.ಬಿ.ಐ ಅಧಿಕಾರಿ  ಬಸವರಾಜ್ ಎ ಹಿರೇಮಥ್ ಅವರ ದತ್ತಿ ಅಂಗವಾಗಿ ಆಯೋಜಿಸಿದ್ದ 129ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶರಣರು ತಮ್ಮ ಜೀವನದಲ್ಲಿ ಕಂಡುಕೊಂಡ ಸತ್ಯವನ್ನು ಅನುಭಾವದ ರೂಪದಲ್ಲಿ ವಚನಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ. ವಚನಗಳನ್ನು ಅಧ್ಯಯನ ಮಾಡುವುದರಿಂದ ಸತ್ಯಶುದ್ಧ ಕಾಯಕವನ್ನು ಮೈಗೂಡಿಸಿಕೊಂಡು, ಪರಧನದ ಆಸೆಪಡದೆ ಸಚ್ಚಾರಿತ್ರ್ಯವಂತರಾಗಿ ರೂಪುಗೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ, ಕನಸು ಮತ್ತು ಗುರಿಯನ್ನು ಬೆಳೆಸಿಕೊಳ್ಳಬೇಕು.

ಕನಸು ನನಸಾಗುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಬೇಕು. ತಾವು ಓದಿದ ಶಾಲೆಗೆ ಮುಂದೊಂದು ದಿನ ಮುಖ್ಯ ಅತಿಥಿಗಳಾಗಿ ಬಂದು, ಅಲ್ಲಿನ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಮಾತುಗಳನ್ನು ಹೇಳುವಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿ ಕರೆ ನೀಡಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ವಚನ ಸಾಹಿತ್ಯವು ಸಮುದ್ರದ ದಂಡೆಯಲ್ಲಿರುವ ದೀಪಸ್ತಂಭದಂತೆ ನಮ್ಮ ಬದುಕಿಗೆ ದಾರಿ ತೋರಿಸುತ್ತದೆ. ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದಾಗ ತಲೆಯಲ್ಲಿ ಸದ್ವಿಚಾರ, ಕೈಯಲ್ಲಿ ಸತ್ಕಾರ್ಯ, ಬಾಯಲ್ಲಿ ಸವಿಮಾತು ಮತ್ತು ಎದೆಯಲ್ಲಿ ಸದ್ಭಾವ ಮೂಡುತ್ತದೆ.

ಶಾಲೆಯ ಹೆಸರಿಗೆ ತಕ್ಕಂತೆ ಶ್ರೀ ಗುರುಮಲ್ಲೇಶ್ವರರು ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಕಾಯಕ ತತ್ವವನ್ನು ಬೋಧಿಸಿ, ಅವರಿಂದಲೂ ಕಾಯಕ ಮಾಡಿಸಿ, ನಾಲ್ಕಾಣಿಯನ್ನು ಗುರುಕಾಣಿಕೆಯಾಗಿ ಪಡೆದ ಪ್ರಸಂಗವು ಕಾಯಕದ ಮಹತ್ವವನ್ನು ಸಾರುತ್ತದೆ. ಶರಣರು ಪ್ರತಿಪಾದಿಸಿದ ಕಾಯಕ ತತ್ವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಂತರ ವಚನಗಳನ್ನು ವಾಚನ ಮಾಡಿ, ತಾತ್ಪರ್ಯವನ್ನು ವಿವರಿಸಿದ ವಿದ್ಯಾರ್ಥಿಗಳಿಗೆ ವಚನ ಪುಸ್ತಕ ಹಾಗೂ ವಚನ ದೀವಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಗುರಮಲ್ಲೇಶ್ವರ ಮಹಾವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಎಂ ವೃಷಬೇಂದ್ರ, ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕ ಎಂ. ಮಹದೇವಸ್ವಾಮಿ, ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕ ಪ್ರಕಾಶ್, ಶರಣು ವಿಶ್ವವಚನ ಫೌಂಡೇಶನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಶಿಕ್ಷಕರುಗಳಾದ ಚೇತನ್‌, ಸುಂದರೇಶ್‌, ಆಶಾರಾಣಿ, ಪ್ರತಿಭಾ, ಅರ್ಚನಾ, ಪ್ರಮೀಳಾ, ಜ್ಯೋತಿ, ಸುಜಾತ, ನಂದಿನಿ,  ಉಪಸ್ಥಿತರಿದ್ದರು.

admin
the authoradmin

Leave a Reply