CrimeLatestNews

ರೈತನ ಬಲಿಪಡೆದ ಕಾಡಾನೆ.. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ಘಟನೆ

ಚಾಮರಾಜನಗರ: ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದ ಜೇನೂರು ನಾಯಕ (60) ಕಾಡಾನೆ ದಾಳಿಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದುರ್ದೈವಿ.

ಜೇನೂರು ನಾಯಕ ಸೋಮವಾರ ಬೆಳಗಿನ ಜಾವ ತಮ್ಮ ಕೃಷಿ ಜಮೀನಿಗೆ ತೆರಳಿದ್ದಾಗ ಅರಿಶಿನ ಬೆಳೆದಿದ್ದ ಜಮೀನಿನಲ್ಲಿದ್ದ ಕಾಡಾನೆ ದಿಢೀರನೆ ಅವರ ಮೇಲೆ ದಾಳಿ ನಡೆಸಿ ತುಳಿದು ಗಾಯಗೊಳಿಸಿ ಅಲ್ಲಿಂದ ಕಾಡಿನತ್ತ ಹೊರಟು ಹೋಗಿದೆ. ಗಂಭೀರ ಗಾಯಗೊಂಡಿದ್ದ ಅವರು ಮೇಲೇಳಲಾಗದೆ ನರಳಾಡಿದ್ದಾರೆ. ಆ ನಂತರ ಸ್ಥಳೀಯರು ಗಮನಿಸಿ  ತಕ್ಷಣವೇ ಬೇಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷಿ ಜಮೀನಿನಲ್ಲಿ ರೈತನ ಪ್ರಾಣವೇ ಹೋಗಿರುವುದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಂಡೀಪುರ ಅಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದರೂ ಅರಣ್ಯ ಇಲಾಖೆ ಸೂಕ್ತ ಕಾಡಾನೆ ತಡೆ ಕಂದಕ ಹಾಗೂ ರೈಲ್ವೇ ಬ್ಯಾರಿಕೇಡ್ ಅಳವಡಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶಾಸಕ ಗಣೇಶ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಅರಣ್ಯ ಇಲಾಖೆಯಿಂದ 20 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಕುಟುಂಬಕ್ಕೆ ಕೊಡಿಸಿದ್ದಾರೆ.

admin
the authoradmin

Leave a Reply