ಕುಶಾಲನಗರ ತಾಲ್ಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟ..ಕೂಡಿಗೆ ಪಿಯು ಕಾಲೇಜು ಬಾಲಕರ ತಂಡಕ್ಕೆ ಗೆಲುವು

ಕುಶಾಲನಗರ (ಆರ್ ಹೆಚ್): ಉತ್ತಮ ಹೊಂದಾಣಿಕೆ ಹಾಗೂ ಚಾಣಾಕ್ಷತನ ಆಟ ಪ್ರದರ್ಶಿಸುವ ಮೂಲಕ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಕಬಡ್ಡಿ ತಂಡ ಏಳು ಅಂಕಗಳ ಮುನ್ನಡೆಯೊಂದಿಗೆ ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಬಾಲಕರ ಕಬಡ್ಡಿ ತಂಡವನ್ನು ಮಣಿಸುವ ಮೂಲಕ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.

ಕೊಡಗು ಜಿಲ್ಲಾ ಪಂಚಾಯತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕೆಬಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕಬಡ್ಡಿ ಚಾಂಪಿಯನ್ ಶಿಷ್ 2026 ನೇ ಕ್ರೀಡಾಕೂಟದಲ್ಲಿ ಮೊದಲು ನಡೆದ ಪ್ರಥಮ ಹಂತದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಕಬಡ್ಡಿವನ್ನು 9 ಅಂಕಗಳ ಅಂತರದಿಂದ ಕನ್ನಡ ಭಾರತಿ ಬಾಲಕರ ಕಬಡ್ಡಿ ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿತು.

ಎರಡನೇ ಸೆಮಿಫೈನಲ್ಲಿ ಕೂಡಿಗೆ ಸರ್ಕಾರಿ ಸರ್ಕಾರಿ ಪಿಯು ಕಾಲೇಜು ಬಾಲಕರ ಕಬಡ್ಡಿ ತಂಡ ಗುಮ್ಮನಕೊಲ್ಲಿ ಮೂಕಾಂಬಿಕಾ ಪಿಯು ಕಾಲೇಜು ಬಾಲಕರ ಕಬಡ್ಡಿ ತಂಡದ ವಿರುದ್ಧ ಹದಿನಾಲ್ಕು ಅಂಕಗಳ ಮುನ್ನಡೆಯೊಂದಿಗೆ ಸೋಲಿಸಿ ಫೈನಲ್ ಪ್ರವೇಶಿಸಿತು. ನಂತರ ನಡೆದ ಕೂಡಿಗೆ ಸರ್ಕಾರಿ ಪಿಯು ಕಾಲೇಜು ಬಾಲಕರ ಕಬಡ್ಡಿ ತಂಡ ಹಾಗೂ ಕುಶಾಲನಗರ ಕನ್ನಡ ಭಾರತಿ ಪಿಯು ಕಾಲೇಜು ಬಾಲಕರ ಕಬಡ್ಡಿ ತಂಡಗಳ ನಡುವೆ ನಡೆದ ತೀವ್ರ ರೋಂಚಕ ಹಾಗೂ ಹಣಾಹಣಿ ಪಂದ್ಯಾವಳಿ ಎಲ್ಲರ ಗಮನ ಸೆಳೆಯಿತು. ಉತ್ತಮ ಆಟ ಪ್ರದರ್ಶಿಸಿದ ಕೂಡಿಗೆ ಪಿಯು ಕಾಲೇಜು ತಂಡ ಜಯಗಳಿಸಿತು.

ಬಾಲಕಿಯರ ವಿಭಾಗದಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕಿಯರ ತಂಡ ಪ್ರಥಮ ಹಾಗೂ ನೆಲ್ಲಿಹುದಿಕೇರಿ ಪದವಿ ಪೂರ್ವ ಕಾಲೇಜು ತಂಡ ದ್ವಿತೀಯ ಸ್ಥಾನಗಳಿಸಿದವು. ನಂತರ ವಿಜೇತ ತಂಡಗಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.ಇದಕ್ಕೂ ಮೊದಲು ಕ್ರೀಡಾಕೂಟವನ್ನು ರಾಷ್ಟ್ರೀಯ ಕ್ರೀಡಾ ತರಬೇತುದಾರ ಉತ್ತಪ್ಪ ಚಾಲನೆ ನೀಡಿದರು. ಫೈನಲ್ ಪಂದ್ಯಾವಳಿಗೆ ಪ್ರೊ ಕಬಡ್ಡಿ ಆಟಗಾರ ಅವಿನಾಶ್ ಚಾಲನೆ ನೀಡಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.

ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು,ಶನಿವಾರಸಂತೆ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್, ಕನ್ನಡ ಭಾರತಿ ಪಿಯು ಕಾಲೇಜು ಪ್ರಾಂಶುಪಾಲ ಡಾ.ನಾಗೇಂದ್ರ ಸ್ವಾಮಿ,ಪದವಿ ಕಾಲೇಜು ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ತಾಲ್ಲೂಕು ವ್ಯಾಪ್ತಿಯ ವಿವಿದ ಪಿಯು ಕಾಲೇಜುಗಳ 6 ಬಾಲಕರ ಹಾಗೂ 5 ಬಾಲಕಿಯರ ತಂಡಗಳು ಸೇರಿದಂತೆ ಒಟ್ಟು 11 ಕಬಡ್ಡಿ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ತೀರ್ಪುಗಾರರಾಗಿ ಪ್ರವೀಣ್,ಆದರ್ಶ,ಕಾರ್ತಿಕ್, ಜಾನ್ಸನ್, ನಂದಿನಿ,ಶಶಾಂಕ್ ಕಾರ್ಯನಿರ್ವಹಿಸಿದರು.







