LatestMysore

ಮಾತೃಶ್ರೀ ಹೆಲ್ತ್ ಕೇರ್ ಲೋಕಾರ್ಪಣೆ: ಮಾನಸಿಕ ನೆಮ್ಮದಿಗೆ ಬಸವ ಬೆಳಕು ಕೃತಿ ಪೂರಕ: ಜಿ.ಟಿ. ದೇವೇಗೌಡ

ಮೈಸೂರು: ನಗರದ ರಮಾಬಾಯಿ ನಗರದ ಗುರೂರು ಮುಖ್ಯರಸ್ತೆಯಲ್ಲಿರುವ ಡಾ. ರಾಕೇಶ್ ಮತ್ತು ನೀತು ರಾಕೇಶ್ ದಂಪತಿಗಳ ಬಿಲ್ವಾ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡಿರುವ ಮಾತೃಶ್ರೀ ಹೆಲ್ತ್ ಕೇರ್* ಲೋಕಾರ್ಪಣಾ ಸಮಾರಂಭವು ಅರ್ಥಪೂರ್ಣವಾಗಿ ನೆರವೇರಿತು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್‌ನ ಸಂಸ್ಥಾಪಕ ವಚನ ಕುಮಾರಸ್ವಾಮಿ ಮತ್ತು ರೂಪಾ ಕುಮಾರಸ್ವಾಮಿ ಸಂಪಾದಿಸಿರುವ ಬಸವ ಬೆಳಕು ಕೃತಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಅವರು ಬಿಡುಗಡೆಗೊಳಿಸಿದರು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ ಅವರು, ಆಸ್ಪತ್ರೆಗಳು ಜನರಿಗೆ ಸೂಕ್ತ ಚಿಕಿತ್ಸೆ ನೀಡಿ ದೈಹಿಕ ಆರೋಗ್ಯವನ್ನು ಕಾಪಾಡುವ ಕಾರ್ಯ ಮಾಡುತ್ತವೆ. ಅದೇ ರೀತಿ, ಬಸವ ಬೆಳಕು ಕೃತಿಯು ಬಸವಣ್ಣನವರ ವಿಚಾರಧಾರೆ ಹಾಗೂ ವಚನಗಳ ಮೂಲಕ ಮಾನಸಿಕ ನೋವುಗಳಿಗೆ ಸಾಂತ್ವನ ನೀಡಿ, ಮನಸ್ಸಿಗೆ ನೆಮ್ಮದಿ ಒದಗಿಸುವ ಕಾರ್ಯ ಮಾಡುತ್ತದೆ. ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಂತಹ ಕೃತಿಗಳು ಸಹಕಾರಿಯಾಗಿವೆ ಎಂದರು.

 ಉಪನ್ಯಾಸ ನೀಡಿದ ಶರಣು ವಿಶ್ವವಚನ ಫೌಂಡೇಷನ್‌ನ ಸಂಸ್ಥಾಪಕ ವಚನ ಕುಮಾರಸ್ವಾಮಿ ಅವರು ಹನ್ನೆರಡನೇ ಶತಮಾನದಲ್ಲಿಯೇ ವೈದ್ಯಕೀಯ ಸೇವೆಯ ಮಹತ್ವವನ್ನು ಸಾರಿದ ವೈದ್ಯ ಸಂಗಣ್ಣನವರ ವಚನಗಳನ್ನು ಉಲ್ಲೇಖಿಸಿ, ವಚನ ಸಾಹಿತ್ಯವು ಮನುಷ್ಯನ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ವಾಸ್ಥ್ಯಕ್ಕೂ ಮಾರ್ಗದರ್ಶನ ನೀಡುತ್ತದೆ. ನಾನಾ ರೋಗಗಳು ಬಂದು ದೇಹವ ಹಿಡಿದಲ್ಲಿ

ಶಿವಾರ್ಚನೆಯ ಬೆರಕೊಳ್ಳಿ, ಸಕಲ ಪುಷ್ಪಗಳಿಂದ ಪೂಜೆಯ ಮಾಡಿಕೊಳ್ಳಿ, ಪಂಚಾಕ್ಷರಿ ಪ್ರಣವವ ತ್ರಿಸಂಧಿಯಲ್ಲಿ ನೆನೆಹುಗೊಳ್ಳಿ, ಇದರಿಂದ ರುಜೆದರ್ಪಂಗಳಡಗುವವು ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ ಎಂಬ ವಚನದ ಆಶಯವನ್ನು ವಿವರಿಸಿ ಶಿವನ ಸ್ಮರಣೆ, ಪ್ರಾರ್ಥನೆ ಮತ್ತು ಭಕ್ತಿಯು ಮನುಷ್ಯನಿಗೆ ಮಾನಸಿಕ ಧೈರ್ಯ ಹಾಗೂ ನೆಮ್ಮದಿಯನ್ನು ನೀಡಬಲ್ಲವು.

ಯಾವ ಮನೆಯಲ್ಲಿ ಜನರು ವಾಸವಿರುವುದಿಲ್ಲವೋ, ಅಂತಹ ಮನೆಯಲ್ಲಿ ಇಲಿ, ಹೆಗ್ಗಣ ಸೇರಿದಂತೆ ವಿವಿಧ ಕ್ರಿಮಿಕೀಟಗಳು ನೆಲೆಸುತ್ತವೆ. ಅದೇ ರೀತಿ, ಮನಸ್ಸಿಗೆ ಉತ್ತಮ ವಿಚಾರಗಳೆಂಬ ಆಹಾರವನ್ನು ನೀಡದಿದ್ದರೆ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳು ಮನಸ್ಸಿನಲ್ಲಿ ನೆಲೆಗೊಳ್ಳುತ್ತವೆ. ವಚನಗಳ ಅಧ್ಯಯನ ಮತ್ತು ಚಿಂತನೆ ನಮ್ಮ ಮನಸ್ಸನ್ನು ಜಾಗೃತಗೊಳಿಸಿ, ಸನ್ಮಾರ್ಗದಲ್ಲಿ ಮುನ್ನಡೆಯಲು ನೆರವಾಗುತ್ತವೆ” ಎಂದು ತಿಳಿಸಿದರು.

ನಂತರ ಬಸವ ಬೆಳಕು ಕೃತಿ ಪರಿಚಯ ಮಾಡಿಕೊಟ್ಟ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಅವರು, ಬಸವ ಬೆಳಕು ಕೃತಿಯು ಬಸವಣ್ಣನವರ ಜೀವನ ಚರಿತ್ರೆಯನ್ನು ಒಳಗೊಂಡಿದ್ದು, ಓದುಗರಲ್ಲಿ ಶರಣ ಸಂಸ್ಕೃತಿ, ವಚನ ಸಾಹಿತ್ಯ ಮತ್ತು ನೈತಿಕ ಮೌಲ್ಯಗಳ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಿದೆ.

ಕೃತಿಯಲ್ಲಿ ಮೈಲಾರ ಬಸವಲಿಂಗ ಶರಣರ ಗುರುಕರಣ ತ್ರಿವಿಧಿಯ 101 ಗುರುಸ್ತೋತ್ರಗಳು, ವಿವಿಧ ಶರಣರ 15 ವಚನಗಳು ಹಾಗೂ ಅವುಗಳ ತಾತ್ಪರ್ಯಗಳನ್ನು ಒಳಗೊಂಡಂತೆ ಪ್ರಾರ್ಥನೆ ಮತ್ತು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ಆಧ್ಯಾತ್ಮಿಕ ವಿಚಾರಗಳಿಗೆ ಆದ್ಯತೆ ನೀಡಲಾಗಿದೆ. ಬೆಳಗಿನ ಪ್ರಾರ್ಥನೆಯಲ್ಲಿ ಹಾಡಬಹುದಾದ ಗೀತೆಗಳು ಹಾಗೂ ಪ್ರಾರ್ಥನೆ ಮಾಡುವ ವಿಧಾನಗಳ ಕುರಿತ ಮಾಹಿತಿಯನ್ನು ಕೃತಿಯಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ನಂತರ ವಚನ ಕುಮಾರಸ್ವಾಮಿ ಮತ್ತು ರೂಪಾ ಕುಮಾರಸ್ವಾಮಿ ಅವರ ಸಂಪಾದನೆಯ ಬಸವ ಭಾರತ ಕೃತಿಯನ್ನು, ಮಾತೃಶ್ರೀ ಹೆಲ್ತ್ ಕೇರ್‌ನ ಸಂಸ್ಥಾಪಕರಾದ ಡಾ. ರಾಕೇಶ್ ಮತ್ತು ನೀತು ರಾಕೇಶ್ ದಂಪತಿಗಳು ಲೋಕಾರ್ಪಣಾ ಸಮಾರಂಭಕ್ಕೆ ಆಗಮಿಸಿದ್ದ ಬಂಧುಗಳು ಹಾಗೂ ಗಣ್ಯರಿಗೆ ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ ಎಂ ಶ್ರೀಧರ್, ಮಾಜಿ ತಾ.ಪಂ ಸದಸ್ಯ ಎಸ್ ಯೋಗ ಶ್ರೀನಿವಾಸ್, ಶ್ರೀರಾಂಪುರ ಮಾಜಿ ಗ್ರಾ.ಪಂ ಅಧ್ಯಕ್ಷ ಶಂಕರ್ ಶ್ರೀರಾಂಪುರ ಮಾಜಿ ಗ್ರಾ.ಪಂ. ಸದಸ್ಯೆ  ಕಮಲಾ ನಟರಾಜ್ , ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಪಳನಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ರೆವೆನ್ಯೂ ಇನ್ಸ್ಪೆಕ್ಟರ್  ಶಕೀಲ್ ಅಹ್ಮದ್, ಹೆಲ್ತ್ ಇನ್ಸ್ಪೆಕ್ಟರ್ ಅಣ್ಣೇಶಿ, ಚಿಕ್ಕಮಗಳೂರು ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜು, ರೇಣುಕ, ಹಾಸನ ನಿವೃತ್ತ ಕಂಟ್ರ್ಯಾಕ್ಟರ್ ಪಾಲಾಕ್ಷಪ್ಪ, ಜಯಶ್ರೀ, ವಾಗ್ಮಿ ರಾಕೇಶ್ ಉಪಸ್ಥಿತರಿದ್ದರು.

admin
the authoradmin

Leave a Reply