ಕೆ.ಆರ್.ನಗರ(ಜಿಟೆಕ್ ಶಂಕರ್): ಗ್ರಾಮಾಂತರ ಪ್ರದೇಶದಲ್ಲಿರುವ ಮಠಗಳು ಏಳಿಗೆಯಾದರೆ ಅದರಿಂದ ಶಿಕ್ಷಣ ಮತ್ತು ಸಮುದಾಯದ ಏಳಿಗೆಗೆ ಅನುಕೂಲವಾಗುತ್ತದೆ ಎಂದು ಬೆಟ್ಟದಪುರ ಸಲಿಲಾಖ್ಯ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ನರಚನಹಳ್ಳಿ ಗ್ರಾಮದ ಅಂಬಲಿ ಮಠದ ಟ್ರಸ್ಟಿನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮಠಗಳ ಅಭಿವೃದ್ದಿಗೆ ಧನ ಸಹಾಯ ಮಾಡುವುದರ ಜತೆಗೆ ಸಹಕಾರ ಮತ್ತು ಮಾರ್ಗದರ್ಶನವನ್ನು ನೀಡಬೇಕು ಎಂದರು.
ಜನರು ಮಠ ಮಾನ್ಯಗಳಿಗೆ ಕಾಣಿಕೆ ನೀಡುವಷ್ಠೆ ಮುಖ್ಯವಾಗಿ ವಿಶ್ವಾಸ ತೋರಿಸಬೇಕೆಂದು ತೋರಿಸಿದ ಶ್ರೀಗಳು ನರಚನಹಳ್ಳಿ ಮಠದ ವಿಚಾರದಲ್ಲಿ ಕೆಲವು ಗೊಂದಲಗಳಿದ್ದು ಅವುಗಳನ್ನು ಪರಿಹರಿಸಿಕೊಂಡು ಇತರರಿಗೆ ಮಾದರಿಯಾಗುವ ಕೆಲಸವನ್ನು ನಾವೆಲ್ಲರೂ ಒಟ್ಟುಗೂಡಿ ಮಾಡೋಣ ಎಂದು ಕರೆ ನೀಡಿದರು.
ಸಮುದಾಯ ಮತ್ತು ಸಮಾಜದ ವಿಚಾರ ಬಂದಾಗ ವೈಯುಕ್ತಿಕ ವಿಚಾರಗಳನ್ನು ಬದಿಗೊತ್ತಿ ಕೆಲಸ ಮಾಡಿದರೆ ನಿರೀಕ್ಷಿತ ಸಾಧನೆ ಮಾಡಬಹುದಾಗಿದ್ದು ಈ ವಿಚಾರವನ್ನು ನರಚನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಮುಖಂಡರು ಅರ್ಥ ಮಾಡಿಕೊಂಡು ಸಹೋದರತೆಯಿಂದ ಬದುಕು ನಡೆಸಬೇಕು ಎಂದು ಸೂಚಿಸಿದರು.

ಮಠದ ಏಳಿಗೆ ಮತ್ತು ಅಭಿವೃದ್ದಿಗೆ ನಾನು ಸದಾ ಸಹಾಯ ಹಸ್ತ ಚಾಚಲಿದ್ದು ನನ್ನೊಂದಿಗೆ ಇತರ ಮಠಾಧೀಶರು ಮಾರ್ಗದರ್ಶನ ನೀಡಲು ಸಿದ್ದರಿದ್ದು ಇದರ ಸದುಪಯೋಗವನ್ನು ಮಠದ ಟ್ರಸ್ಟಿಗಳು ಮತ್ತು ಭಕ್ತರು ಬಳಕೆ ಮಾಡಿಕೊಂಡು ಅಂಬಲಿ ಮಠದ ಉದ್ದಾರಕ್ಕೆ ದುಡಿಯಬೇಕೆಂದು ನುಡಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಕೆ.ಆರ್.ನಗರ ತಾಲೂಕು ಘಟಕದ ಅಧ್ಯಕ್ಷ ಸಿ.ಪಿ.ರಮೇಶ್‌ಕುಮಾರ್ ಮಾತನಾಡಿ ಅಂಬಲಿ ಮಠದ ಸುತ್ತ ತಂತಿಬೇಲಿ ನಿರ್ಮಾಣ ಮಾಡಲು ಶಾಸಕರಾದ ಡಿ.ರವಿಶಂಕರ್ ಅವರು ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಹೇಳಿದರು.
ನರಚನಹಳ್ಳಿ ಅಂಬಲಿ ಮಠವು ಸಾವಿರಾರು ಭಕ್ತ ಸಮೂಹವನ್ನು ಹೊಂದಿದ್ದರೂ ಸಂವಹನ ಮತ್ತು ಸಾಮರಸ್ಯದ ಕೊರತೆಯಿಂದ ಅಭಿವೃದ್ದಿಯಲ್ಲಿ ಹಿನ್ನಡೆ ಹೊಂದಿದ್ದು ಭವಿಷ್ಯದಲ್ಲಿ ನಾವೆಲ್ಲ ಅದನ್ನು ಸರಿಪಡಿಸಿಕೊಂಡು ಹೋಗಬೇಕು ಎಂದರು.
ನಾನು ಮಠದ ಅಭಿವೃದ್ದಿಗೆ ವೈಯುಕ್ತಿಕವಾಗಿ ಸಹಕಾರ ಮಾಡುವುದರ ಜತೆಗೆ ಶಾಸಕರ ಮೂಲಕ ಸರ್ಕಾರದ ವತಿಯಿಂದ ದೊರೆಯುವ ಎಲ್ಲಾ ಅನುಕೂಲ ಮತ್ತು ಸವಲತ್ತುಗಳನ್ನು ಕೊಡಿಸಲು ಬದ್ದನಾಗಿದ್ದೇನೆ ಎಂದ ಅಧ್ಯಕ್ಷರು ಮಠದಲ್ಲಿ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪೂಜೆಯನ್ನು ಕೊಡಿಯಾಲದಲ್ಲಿ ಸಮಾಜದ ಮುಖಂಡರು ನಿಧನರಾಗಿದ್ದರಿಂದ ರದ್ದು ಮಾಡಿದ್ದು ಮುಂದಿನ ಹುಣ್ಣಿಮೆ ಪೂಜೆಯನ್ನು ಅತ್ಯಂತ ವೈಭವದಿಂದ ನಡೆಸುವುದಾಗಿ ಪ್ರಕಟಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಕೆ.ಆರ್.ನಗರ ತಾಲೂಕು ಘಟಕದ ನಿರ್ದೇಶಕ ಕುಪ್ಪೆಮಹದೇವಸ್ವಾಮಿ, ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಾಣಿಬಾಲಚಂದರ್, ಹನುಮನಹಳ್ಳಿ ಗ್ರಾಮದ ಮುಖಂಡರಾದ ಮಂಜುನಾಥ್, ನರಚನಹಳ್ಳಿ ಗ್ರಾಮದ ಮಲ್ಲಿಕಾರ್ಜುನ್, ವೀರಪ್ಪ, ಮಾಸ್ಟರ್ ಶಿವಕುಮಾರ್, ನ್ಯಾಯ ಬೆಲೆ ಅಂಗಡಿ ಮಾಲೀಕ ಪಾಪಣ್ಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ಮುಖಂಡರು ಹಾಜರಿದ್ದರು.








