CinemaLatest

ವೀರಕನ್ನಡಿಗ ಎನ್ಕೌಂಟರ್ ದಯಾನಾಯಕ್…. ಇವರು ರೀಲ್ ಹೀರೋ ಅಲ್ಲ… ರಿಯಲ್ ಹೀರೋ..!

ಪೊಲೀಸ್ ಇಲಾಖೆಯಲ್ಲಿ ಎನ್ ಕೌಂಟರ್ ದಯಾನಾಯಕ್ ಎಂದೇ ಖ್ಯಾತಿ ಪಡೆದಿದ್ದ ಕನ್ನಡಿಗ ಪೊಲೀಸ್ ಅಧಿಕಾರಿ ಈ ವರ್ಷ ನಿವೃತ್ತರಾಗಿದ್ದಾರೆ. ಹೀಗಾಗಿ ಅವರ ಬಗ್ಗೆ ಒಂದಷ್ಟು ಹೇಳಬೇಕಾಗಿದೆ. ಅದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ತಮ್ಮದೇ ಶೈಲಿಯಲ್ಲಿ ಅಕ್ಷರಗಳ ಮೂಲಕ ಹೇಳುತ್ತಾ ಹೋಗಿದ್ದಾರೆ. ಓದಿದ ಬಳಿಕ  ವೀರಕನ್ನಡಿಗನಿಗೊಂದು ಸೆಲ್ಯೂಟ್ ಹೊಡೆದು ಬಿಡಿ…

ಭಾರತ ದೇಶದ ಪೊಲೀಸ್ ಇಲಾಖೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದ ಓರ್ವ ಧೀರಕನ್ನಡಿಗ ಆರಕ್ಷಕ ಯೋಧನ ಯಶೋಗಾಥೆ ಇದು. ಸೂರ್ಯ ಚಂದ್ರ ಭೂಮಿ ಇರುವವರೆಗೂ ಇಡೀ ದೇಶವೇ ಮರೆಯಲಾರದಂಥ ಅಧ್ಭುತ ಅಮೋಘ ಅಪ್ರತಿಮ ಅಸಾಮಾನ್ಯ ಸಾಧನೆ ಮಾಡಿದ ಮುಂಬೈ ಪೊಲೀಸ್ ಅಧಿಕಾರಿ ದಯಾನಾಯಕ್ ರವರ ಸೇವೆ ಚಿರಸ್ಮರಣೀಯ!

ಬಾಲ್ಯದಲ್ಲಿ ಮೂರು ಹೊತ್ತಿನ ಊಟಕ್ಕೂ ಸ್ಲೇಟು ಬಳಪ ವಸ್ತ್ರಕ್ಕೂ ಗತಿಇಲ್ಲದ ಬಡತನದ ಕುಟುಂಬದಲ್ಲಿ ಜನಿಸಿದ ಓರ್ವ ಕನ್ನಡದ ಕಂದ ಬಾಲಕನಿದ್ದಾಗಲೇ ತಾನು ಹುಟ್ಟಿದ ಊರು ಕೇರಿ, ತಾಯಿ ತಂದೆ, ಬಂಧು ಬಳಗ ಎಲ್ಲವನ್ನು ತೊರೆದು ಬಹುದೂರದ ಮುಂಬೈ ನಗರಕ್ಕೆ ಪಯಣ ಬೆಳೆಸುತ್ತಾನೆ. ಎಲ್ಲ ಬಗೆಯ ಕೂಲಿ ಕೆಲಸವನ್ನು ನಿಯತ್ತಿನಿಂದ ದುಡಿದು ಒಪ್ಪೊತ್ತು ಉಂಡು ಮಿಕ್ಕ ಹಣದಲ್ಲಿ ಶ್ರದ್ಧಾಭಕ್ತಿಯಿಂದ ಹೆಚ್ಚು ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಸರಿಮಾರ್ಗದಲ್ಲಿ ಸಾಗಿ ಉನ್ನತ ಹುದ್ದೆ ಗಳಿಸುವ ಮೂಲಕ ಗುರಿ ತಲುಪುತ್ತಾನೆ.

ಕಾಲಕ್ರಮೇಣ ಸ್ವಚ್ಚ ಸಮಾಜಕ್ಕಾಗಿ ಪ್ರಾಮಾಣಿಕ ಸೇವೆ ಮಾಡುವ ಶ್ರೇಷ್ಠ ವ್ಯಕ್ತಿ ಶಕ್ತಿಯಾಗಿ ರೂಪುಗೊಳ್ಳುತ್ತಾನೆ. ಅನೇಕ ಎಡರುತೊಡರು ಸಂಕಷ್ಟ ಪ್ರಾಣಾಪಾಯ ಬಂದರೂ ಧೃತಿಗೆಡದೆ ಎಲ್ಲವನ್ನು ಎದುರಿಸಿ ಉತ್ತಮ ಪ್ರಜೆಯಾಗಿ ಜನಪ್ರಿಯತೆ ಗಳಿಸಿ ಭಾರತದ ಉದ್ದಗಲಕ್ಕೂ ಎಲ್ಲರೂ ಜಗ ಮೆಚ್ಚಿದ ಮಗ ಎಂದು ಕೊಂಡಾಡುವಂಥ ಆರಕ್ಷಕನಾಗಿ ಅಖಂಡ ಸೇವೆಗೈದು ಇದೀಗ ಸೇವೆಯಿಂದ ನಿವೃತ್ತಿಯಾಗಿ ವಿಶ್ರಾಂತ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ..!

1967ರಲ್ಲಿ ಕರ್ನಾಟಕ ರಾಜ್ಯದ ಕಾರ್ಕಳ ತಾಲೂಕು ಉಡುಪಿ ಜಿಲ್ಲೆಯ ಎಣ್ಣೆಹೊಳೆ ಗ್ರಾಮದಲ್ಲಿ ಜನಿಸಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ, ಒಂದಿನ ಜರುಗಿದ ಘಟನೆಯ ಪರಿಣಾಮವಾಗಿ ಈ ಪುಟ್ಟಹುಡುಗ ತಾನೇ ದುಡಿದು ಸಂಪಾದಿಸಿ ಓದು ಮುಂದುವರೆಸುವ ಛಲಬಲದ ನಿರ್ಧಾರ ಹೊತ್ತು 1978ರಲ್ಲಿ ಬೃಹತ್ ಬಾಂಬೆಗೆ ಕಾಲಿಡುತ್ತಾನೆ. ತನ್ನ ಪರಿಚಯದ ಯಾರೂ ಇಲ್ಲದ ನಗರದಲ್ಲಿ ಹೊಟೇಲ್ ಕೆಲಸಕ್ಕೆ ಸೇರಿ ತನ್ನ ವಿದ್ಯಾಭ್ಯಾಸ ಮುಂದುವರೆಸಲು ಪುಸ್ತಕ ಫೀಜು ಬಟ್ಟೇಬರಿ ಇತ್ಯಾದಿಗಳಿಗೆ ಬೇಕಾಗಿದ್ದ ಹಣ ಸಂಪಾದಿಸುತ್ತ ಜವಾಬ್ಧಾರಿ ಹೊತ್ತು ತಾಯಿಗೂ ಒಂದಷ್ಟು ಹಣ ಕಳಿಸುತ್ತಲೇ ಕಷ್ಟಪಟ್ಟು ಕಾಲೇಜೆ ಸೇರಿ ಉನ್ನತಶ್ರೇಣಿ ಅಂಕಪಡೆದು ಪದವೀಧರನಾಗಿ 1995ರಲ್ಲಿ ಮುಂಬೈ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆ ಗಳಿಸುತ್ತಾರೆ. ಇವರ ಧೈರ್ಯ ಶಕ್ತಿ ಯುಕ್ತಿ ಸಾಮರ್ಥ್ಯ ಕಂಡ ಇಲಾಖೆಯು ಇವರನ್ನು ಸ್ಪೆಷಲ್ ಟಾಸ್ಕ್ ಫೊರ್ಸ್ ತಂಡಕ್ಕೆ ನೇಮಕ ಮಾಡುತ್ತದೆ.

1990-2000 ದಶಕದಲ್ಲಿ ಮುಂಬೈ ನಗರವು ರೌಡಿ ಗೂಂಡ ಹಫ್ತಾ, ಸುಪಾರಿ, ಸ್ಮಗ್ಲರ್ಸ್, ಡ್ರಗ್ಸ್ ಪೆಡ್ಲರ್ಸ್, ವೇಶ್ಯಾವಾಟಿಕೆ, ಹವಾಲಾ, ಮುಂತಾದ ಚಟುವಟಿಕೆಯಲ್ಲಿ ತೊಡಗಿದ್ದ ಸಮಾಜಘಾತುಕ ಶಕ್ತಿಗಳಿಂದ ತುಂಬಿತ್ತು. ಖಾಕಿ ಪಡೆಯ ಎಲ್ಲ ಅಧಿಕಾರಿಗಳೂ ಬೇಸತ್ತು ಹೋಗಿದ್ದರು. ಆದರೆ, ಚಕ್ರವ್ಯೂಹ ಭೇಧಿಸಿದ ವೀರ ಅಭಿಮನ್ಯುವಿನಂತೆ ರಾತ್ರೋರಾತ್ರಿ ದಯಾನಾಯಕ್ ಕೈಗೊಂಡ ದಿಟ್ಟ ಕಾರ್ಯಾಚರಣೆಯಿಂದ ಮತ್ತು ನಿರ್ಭೀತ ಹೆಜ್ಜೆಗಳಿಂದ ಭೂಗತ ಲೋಕದ ಪಾಪಿಗಳಿಗೆ ಛಳಿಜ್ವರ ನಡುಕ ಹುಟ್ಟಿಸಿತು. ತಮಗೆ ಇಷ್ಟ ಇಲ್ಲದಿದ್ದರೂ ವಿಧಿಯಿಲ್ಲದೆ ತಮ್ಮ ಮತ್ತು ತಮ್ಮ ಸಹೋದ್ಯೋಗಿಗಳ ಪ್ರಾಣ ರಕ್ಷಣೆಗೋಸ್ಕರ ಅನಿವಾರ್ಯವಾಗಿ ಕಂಡಲ್ಲಿ ಗುಂಡು (ಲೈಸೆನ್ಸ್ ಟು ಕಿಲ್) ಆದೇಶ ಪಡೆದ ದಯಾನಾಯಕ್ ಸಮಾಜಘಾತುಕ ದೆವ್ವಗಳಿಗೆ, ದೇಶದ್ರೋಹಿ ಗಳಿಗೆ ಹಾಗೂ ನಕ್ಸಲ್‍ ದರಿದ್ರರಿಗೆ ಸಿಂಹಸ್ವಪ್ನ ವಾದರು. ಇವರ ದಿಟ್ಟ ನೇರ ನಿರಂತರ ದಕ್ಷ ಕಾರ್ಯದ ಪರಿಣಾಮದಿಂದ ಕಡೇ ಪಕ್ಷ ವಾರಕ್ಕೊಂದು ಎನ್ಕೌಂಟರ್ ಖಾತರಿಯಾಗಿ ಇದ್ದೇ ಇರುತ್ತಿತ್ತು.

ಅಂಡರ್ ವರ್ಲ್ಡ್ ಪಾತಕಿಗಳಿಗೆ ಯಮಧರ್ಮ ನಾಗಿದ್ದ ಇವರು ಕ್ರಮೇಣ “ಎನ್ಕೌಂಟರ್ ದಯಾನಾಯಕ್” ಎಂದೇ ಖ್ಯಾತರಾದರು. ಇಷ್ಟಾದರೂ ಹಲವು ಬಾರಿ ಜರುಗಿದ ತೀವ್ರ ತರಹದ ಮಾರಣಾಂತಿಕ ಮುಖಾಮುಖಿ ಕಾರ್ಯಾಚರಣೆಯಲ್ಲಿ ದುಷ್ಟಶಕ್ತಿಗಳಿಂದ ಇವರಿಗೆ ನಾಲ್ಕೈದು ಬಾರಿ ಗುಂಡು ತಗುಲಿ ಪ್ರಾಣಾಪಾಯ ಒದಗಿ ಬಚಾವ್ ಆದರು. ದೇವರ ಕೃಪೆಯಿಂದ ತುರ್ತು ಚಿಕಿತ್ಸೆ ಮೂಲಕ ಪುನರ್ಜನ್ಮ ಪಡೆದರು. ಕೆಲವು ಸಲ  ಮುಖಾಮುಖಿ ಜಟಾಪಟಿಯಲ್ಲಿ ಇವರ ಅಂಗಾಂಗಕ್ಕೆ ಪೆಟ್ಟು ಬಿದ್ದು ಊನವಾಗಿ ವಿಕಲಾಂಗ ಆಗಬಹುದಾದ ಸಂದರ್ಭವೂ ಬಂದಿತ್ತು. ಇವರ ಅಪೂರ್ವ ನಿಸ್ವಾರ್ಥ ಸತತ ಸೇವೆಯನ್ನು ಪರಿಗಣಿಸಿದ ಮುಂಬೈ ಪೊಲೀಸ್ ಇಲಾಖೆಯು ಇವರಿಗೆ ಮುಂಬಡ್ತಿ ನೀಡುತ್ತ ಕಡೆಗೆ ಪೊಲೀಸ್ ಅಸಿಸ್ಟೆಂಟ್ ಕಮೀಷನರ್ (ಎ.ಸಿ.ಪಿ) ಹುದ್ದೆ ನೀಡಿದ್ದು ಒಂದು ಅದ್ಭುತ ಇತಿಹಾಸ!

ಆರಕ್ಷಕ ಉನ್ನತ ಅಧಿಕಾರಿಯಾದ ನಂತರವಂತೂ ಹಗಲುರಾತ್ರಿ ತಮ್ಮ ಅವಿಶ್ರಾಂತ ಕರ್ತವ್ಯ ನಿರ್ವಹಣಾ ಯೋಜನೆ ಮತ್ತು ಯೋಚನೆಯಿಂದ ಪರಿವರ್ತನಾ ಯೋಜನೆ ರೂಪಿಸಿದರು. ಇಡೀ ಮುಂಬೈ ನಗರವನ್ನು ನಿರ್ಭಯ ಮತ್ತು ನಿಶ್ಚಿಂತೆ ನಗರವಾಗಿಸಲು ಮತ್ತು ದುಷ್ಟರ ಕಾಟ ಕಿರುಕುಳ ಕಳ್ಳತನ ಕೊಲೆ ಸುಲಿಗೆ ದರೋಡೆ ಅತ್ಯಾಚಾರ ವ್ಯಭಿಚಾರ ಭ್ರಷ್ಟಾಚಾರ ಮುಂತಾದವುಗಳಿಂದ ಮುಕ್ತಿ ಸಿಗುವಂತೆ ಮಾಡಲು ಅಗತ್ಯವಿದ್ದ “ಕ್ರೈಮ್ ಕ್ಲೀನ್‍ ಸ್ವೀಪ್ ಪ್ರೊಗ್ರಾಮ್” ಕೈಗೊಂಡು ಶೇಕಡ 80ರಷ್ಟು ಯಶಸ್ಸು ಕಂಡರು.

ಕಾಲಕಳೆದಂತೆ ಮುಂಬೈ ನಗರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ದಿಕ್ಕುಗಳಲ್ಲಿ ಹಿರಿಯ ನಾಗರಿಕರು ಮಹಿಳೆಯರು ಮಕ್ಕಳು ಕಾರ್ಮಿಕರು ಯುವಕರು ಸಾರ್ವಜನಿಕರು ವಿದ್ಯಾರ್ಥಿಗಳು ನೆಮ್ಮದಿಯಿಂದ ಅವರವರ ಜೀವನಕ್ಕೆ ಬೇಕಾದ ಸಂಪಾದನೆಯ ದುಡಿಮೆ ಮತ್ತು ಇತರೆ ಕರ್ತವ್ಯ ಕಾರ್ಯಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಲು ಸಾಧ್ಯವಾಗುವಂತೆ ಕಣ್ಣಲ್ಲಿ ಕಣ್ಣಿಟ್ಟು ಹಗಲಿರುಳು ಎನ್ನದೆ ನಿದ್ದೆಗೆಟ್ಟು, ಸಮಯಕ್ಕೆ ಸರಿಯಾಗಿ ಅನ್ನನೀರು ಸಿಗದಿದ್ದರೂ ಧೃತಿಗೆಡದೆ ದುಡಿದರು. ಇದರ ಪ್ರತಿಫಲವಾಗಿ ಮುಂಬೈ ಪ್ರಜೆಗಳು ಪ್ರತಿಕ್ಷಣವು ಧನ್ಯತಾಭಾವ ದಿಂದ ದಯಾನಾಯಕ್‍ ರನ್ನು ನೇರವಾಗಿ ಅಥವಾ ಮಾಧ್ಯಮದ ಮೂಲಕ ಹಾಗೂ ಸಭೆ- -ಸಮಾರಂಭಗಳಲ್ಲಿ ಕಂಡಾಗಲೆಲ್ಲ ಕೃತಜ್ಞತೆ ಸಲ್ಲಿಸುತ್ತಿದ್ದರು, ತಮ್ಮ ಕೃತಜ್ಞತೆ ಸೂಚಿಸುವ ಮೂಲಕ ಹೆಚ್ಚಿನ ಬೆಂಬಲ ನೀಡುತ್ತಿದ್ದರು ಎಂಬುದೇ ಮರೆಯಲಾಗದ ಇತಿಹಾಸ!

ವಿವಿಧ ಭಾಷೆಯ ಸಿನಿಮಾ ನಿರ್ಮಾಣ ಮುಖೇನವೂ ವಂದನೆ ಅಭಿನಂದನೆ ಸಲ್ಲಿಸಿದರು. ಇಂಥ ಪುಣ್ಯಾತ್ಮನನ್ನು ಸದಾ ಸ್ಮರಿಸುವ ಪ್ರಯುಕ್ತ ಬೇರೆಬೇರೆ ಭಾಷೆಯಲ್ಲಿ ಸಿನಿಮಾ ತಯಾರಿಸಿದ ಪ್ರತಿಷ್ಠಿತ ನಿರ್ಮಾಪಕ ನಿರ್ದೇಶಕರು ಬೆಳ್ಳಿತೆರೆಗೆ ಬಿಡುಗಡೆ ಮಾಡಿದ ಸಿನಿಮಾಗಳು ಹೀಗಿವೆ.. ಕನ್ನಡದ ಎನ್ಕೌಂಟರ್ ದಯಾನಾಯಕ್, ಹಿಂದಿಯ ಅಬ್ ತಕ್‍ ಚಪ್ಪನ್, ಕಗಾರ್, ರಿಸ್ಕ್, ತಮಿಳು-ತೆಲುಗಿನ, ಗೋಲಿಮಾರ್, ಸಿಧ್ಧಮ್, ಡಿಪಾರ್ಟ್‍ಮೆಂಟ್, ಟೆಂಪರ್, ಇನ್ನೂ ಮುಂತಾದವು ದೇಶದಾದ್ಯಂತ ಜನಮನ ಸೂರೆಗೊಂಡವು ಮತ್ತು ನೂತನ ದಾಖಲೆಯನ್ನೂ ನಿರ್ಮಿಸಿದವು.

ಒಟ್ಟಾರೆ 85ಕ್ಕೂ ಹೆಚ್ಚು ಎನ್ಕೌಂಟರ್ ಮಾಡುವ ಮೂಲಕ ಗ್ಯಾಂಗ್‍ವಾರ್ ಮತ್ತು ಗೂಂಡಾರಾಜ್ ಪದ್ಧತಿ ಕೊನೆಗಾಣಿಸಿ ಎಲ್ಲಬಗೆಯ ಕೇಡಿಗಳಿಗೆ ಮತ್ತು ಅಪರಾಧಗಳಿಗೆ ಮುಕ್ತಾಯ ಹಾಡಿದರು. ಆಗಾಗ್ಗೆ ಅಧರ್ಮ ರಣಾಂಗಣದ ಶತ್ರುಗಳನ್ನು ಮೆಟ್ಟಿನಿಂತು ಯುದ್ಧಗೆದ್ದು ಫೀನಿಕ್ಸ್ ಪಕ್ಷಿಯಂತೆ ಎದ್ದುಬಂದು 30 ವರ್ಷಕಾಲ ಸಾವಿರಾರು ಕಿರುಕುಳ ಯಮಯಾತನೆ ಸಹಿಸಿದರೂ ಸಹ ಭಾರತದಾದ್ಯಂತ ಎಲ್ಲರಿಂದಲೂ ಶ್ಲಾಘನೆ, ಪ್ರಶಸ್ತಿ, ಪದಕ, ಬಿರುದು ಬಹುಮಾನ ಸನ್ಮಾನ ಪಡೆದು ಮೆಚ್ಚುಗೆಯ ಅಮೋಘ ಸೇವೆಗೈದು 31.7.2025 ರಂದು ಎ.ಸಿ.ಪಿ. ಹುದ್ದೆಯಿಂದ ವಯೋನಿವೃತ್ತಿ ಹೊಂದಿದರು.

ಉದ್ಯೋಗದಲ್ಲಿದ್ದಾಗ ತಮ್ಮ ಮತ್ತು ತಮ್ಮ ತಾಯಿಯ ಕನಸಿನ ಕೂಸಾಗಿದ್ದ ಕನ್ನಡ ಶಾಲೆಯನ್ನು ಇವರ ಹುಟ್ಟೂರಾದ ಎಣ್ಣೆಹೊಳೆಯಲ್ಲಿ 2000ನೇ ಇಸವಿಯಲ್ಲಿ ಸ್ಥಾಪಿಸಿ ಖ್ಯಾತನಟ ಅಮಿತಾಬ್ ಬಚ್ಚನ್‍ರಿಂದ ಉದ್ಘಾಟನೆ ನೆರವೇರಿಸಿ ಕರ್ನಾಟಕ ಸರ್ಕಾರದ ಸುಪರ್ದಿಗೆ ಬಿಟ್ಟುಕೊಟ್ಟಿದ್ದರು. ಪ್ರಸ್ತುತ ತವರೂರಿಗೆ ಹಿಂದಿರುಗಿದ ಇವರು ತಮ್ಮ ತಾಯಿ ಹೆಸರಿನಲ್ಲಿರುವ “ರಾಧಾನಾಯಕ್ ಶಿಕ್ಷಣ ಸಂಸ್ಥೆ” ಶಾಲೆಯ ಜವಾಬ್ಧಾರಿ ಜತೆಗೆ ಭೂಮಿ ಕೃಷಿಯಲ್ಲಿ ತೊಡಗಿಸಿಕೊಂಡು ತಮ್ಮ ನಿಸ್ವಾರ್ಥ ಸೇವೆಯನ್ನು ಸಾರ್ಥಕ ರೀತಿಯಲ್ಲಿ ಮುಂದುವರೆಸಲು ನಿರ್ಧರಿಸಿದ್ದಾರೆ. ಇವರಿಗೆ ಸರ್ವ ವಿಧದಲ್ಲಿ ಶುಭವಾಗಲಿ!

admin
the authoradmin

14 Comments

  • ಎ.ಸಿ.ಪಿ. ದಯಾನಾಯಕ್ ರವರ ದಕ್ಷ ಸೇವೆ ಬಗ್ಗೆ ಬಹಳ ಉತ್ತಮ ಲೇಖನ
    ಎಂ.ಸಿದ್ದಲಿಂಗಸ್ವಾಮಿ , Rtd,Dy.S.P., Chandra layout, Bengaluru

  • ಎ.ಸಿ.ಪಿ. ದಯಾನಾಯಕ್ ರವರ ಬಗ್ಗೆ ಉತ್ತಮ ಲೇಖನ ಬರೆದವರಿಗೂ ಇಂಥ
    ಟಾಪ್ ಕ್ವಾಲಿಟಿ ಲೇಖನ ಪ್ರಕಟಿಸಿದ ಜನಮನ ಕನ್ನಡ ಪತ್ರಿಕೆಯವರಿಗೂ ನನ್ನ ಬಿಗ್ ಸೆಲ್ಯೂಟ್ ಸರ್. ಎಸ್.ಶಿವಣ್ಣ, ನಿವೃತ್ತ ಇನ್ಸ್ಪೆಕ್ಟರ್, ನಾಗರಬಾವಿ, ಬೆಂಗಳೂರು

  • ಎ.ಸಿ.ಪಿ. ದಯಾನಾಯಕ್ ರವರ ದಕ್ಷ ಸೇವೆ ಬಗ್ಗೆ ಬಹಳ ಉತ್ತಮ ಲೇಖನ
    ಎಂ.ಸಿದ್ದಲಿಂಗಸ್ವಾಮಿ , Rtd,Dy.S.P., Chandra layout, Bengaluru south

  • ಎನ್ಕೌಂಟರ್ ದಯಾನಾಯಕ್ ರವರ ಲೇಖನ ಬೊಂಬಾಟ್. ಸಾಂಗ್ಲಿಯಾನ ರವರಂಥೆ ಅಥವ ಅವರಿಗೂ ಮೀರಿದ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾದ ಕನ್ನಡ ನಾಡಿನ ಧೀರ ಪೋಲಿಸ್ ಅಧಿಕಾರಿ, ಧನ್ಯವಾದ, ನಮಸ್ಕಾರ.

    • ನೀವೇ ಹೇಳಿದ ಹಾಗೆ ಎ.ಸಿ.ಪಿ.ದಯಾನಾಯಕ್ ಸತ್ಯವಾಗಿಯೇ ರೀಲ್ ಹೀರೋ ಅಲ್ಲ, ಹಿ ಈಸ್ ಎ ರಿಯಲ್ ಹೀರೊ & ಸೂಪರ್ ಕಾಪ್.

  • First class lekhana ACP Dayanayak ravara great service bagge, dhanyavada sir
    Siddalingaswamy, rtd.Dy.SP. Bengaluru South

  • First class lekhana ACP Dayanayak ravara great service bagge, dhanyavada sir, Siddalingaswamy, Rtd.Dy.SP. Bengaluru South

  • Very very useful and message oriented article about encounter dayanayak the best police in India 🇮🇳 👏

  • Very very useful and message oriented article about encounter dayanayak the best police officer ever born in India 🇮🇳 👏 I mean in Karnataka

  • Very very useful and message oriented article about encounter dayanayak the best police officer ever born in India 🇮🇳 👏 I mean in Karnataka as KANNADIGA

Leave a Reply