LatestMysore

ಮಳೆಯಿಂದ ಸಂಕಷ್ಟಕ್ಕೀಡಾದವರಿಗೆ ಧೈರ್ಯ ತುಂಬಿ ಸಹಾಯಧನ ನೀಡಿದ ಮಾಜಿ ಶಾಸಕ ಹೆಚ್.ಪಿ ಮಂಜುನಾಥ್

 ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಹನಗೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ  ಸುರಿದ ಬಿರುಗಾಳಿ- ಮಳೆಗೆ ಹಾನಿಯಾಗಿರುವ ಗ್ರಾಮಗಳಿಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್  ಯುಗಾದಿ ಹಬ್ಬದಂದು ಭೇಟಿ ನೀಡಿ ನೊಂದ ಜನತೆಗೆ ಆತ್ಮಸ್ಥೈರ್ಯ ತುಂಬಿದರು.

ಇದೇ ವೇಳೆ ಮಳೆಯಿಂದ ಸಂಕಷ್ಟಕ್ಕೀಡಾಗಿರುವ ದಾಸನಪುರ ಗ್ರಾಮದ 23 ಮನೆಗಳು,  ಕಿರಂಗೂರು ಗ್ರಾಮದ 2 ಮನೆಗಳು,  ಕಾಮಗೌಡನಹಳ್ಳಿ ಯಲ್ಲಿ ಒಂದು ಮನೆ, ಹಾಗೂ ಹರಳಳ್ಳಿ ಯಲ್ಲಿ ಒಂದು ಮನೆ ಸೇರಿದಂತೆ ಒಟ್ಟು 27  ಮನೆಗಳಿಗೆ ಹೆಂಚು, ಕಲ್ನಾರು ಶೀಟು, ಮರಮುಟ್ಟುಗಳು  ಹಾಗೂ ಧನಸಹಾಯ ನೀಡಿದರು.

ಇಷ್ಟೇ ಅಲ್ಲದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಹಾನಿಯಾಗಿದ್ದು, ಇವುಗಳ ದುರಸ್ತಿಗೆ  50 ಸಾವಿರ ರೂ  ಹಾಗೂ ಅಗತ್ಯವಾಗಿರುವಷ್ಟು ಹೆಂಚುಗಳನ್ನು  ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರುಗಳಿಗೆ  ನೀಡಿ  ಕೂಡಲೇ ಶಾಲೆ ಕೊಠಡಿಗಳನ್ನು  ದುರಸ್ತಿ ಪಡಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ  ಸಹಕಾರ ನೀಡಿದರಲ್ಲದೆ, ಶಾಲಾ ಕೊಠಡಿ ದುರಸ್ತಿ ವೆಚ್ಚ ಹೆಚ್ಚಾದರೆ ಮತ್ತಷ್ಟು ಸಹಾಯ ಮಾಡುವೆನೆಂದು ಭರವಸೆ ನೀಡಿದರು.

ಇದಲ್ಲದೆ ಗ್ರಾಮದ ಇಬ್ಬರಿಗೆ ಮಳೆ ಗಾಳಿ ಸಿಲುಕಿ ಗಾಯಗೊಂಡಿದ್ದು  ಅವರಿಗೆ ಆಸ್ಪತ್ರೆ ಖರ್ಚು ವೆಚ್ಚಕ್ಕೆ ಧನ ಸಹಾಯ ನೀಡಿದರು. ಜತೆಗೆ ದಾಸನಪುರ, ಹನಗೋಡು ಕಚುವಿನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಹಾನಿಯಾಗಿರುವ ಬಗ್ಗೆ ಚೆಸ್ಕಾಂನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ಕೈಗೊಂಡು ಕಗ್ಗತ್ತಲಿಂದ ಕೂಡಿರುವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಭಾಗದಲ್ಲಿ ಆಲಿಕ್ಲಲು ಮಳೆಯಿಂದಾಗಿ ತಂಬಾಕು  ಮಡಿ ಸಸಿಗಳು   ಹನಗೋಡಿನ ಶಿವಣ್ಣ, ಬಸವರಾಜ್  ರವರಿಗೆ ಬಾಳೆ ಬೆಳೆ ಹೆಮ್ಮಿಗೆ ಗ್ರಾಮದ ರಾಮೇಗೌಡರಿಗೆ ಸೇರಿದ ನಾಲ್ಕು ಎಕರೆ ಕಲ್ಲಂಗಡಿ ಬೆಳೆ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಾದ ಲಕ್ಷ್ಮಿಕಾಂತ್ ರೆಡ್ಡಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ತಂಬಾಕು, ಬಾಳೆ, ಕಲ್ಲಂಗಡಿ ಬೆಳೆಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಈ ವೇಳೆ ಕಿರಂಗೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ್, ತಾಲೂಕು ಗ್ಯಾರಂಟಿ‌ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು,  ಮುಖಂಡರಾದ ಡಾ.ಕಾರ್ತಿಕ್, ಶಿವಕುಮಾರ್, ಮಾದೇವ್, ವಾಸಣ್ಣ, ಕುಮಾರ್, ಲೋಕೇಶ, ರಮೇಶ್,  ಬೀರಪ್ಪ, ಮಂಜು, ಭಾಸ್ಕರ್  ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.

admin
the authoradmin

Leave a Reply

Translate to any language you want