ಕಾಡ್ಗಿಚ್ಚಿನಿಂದ ನಾಗರಹೊಳೆ ಉದ್ಯಾನವನ್ನು ಕಾಪಾಡಲು ಅರಣ್ಯ ಇಲಾಖೆ ಸರ್ವ ಸನ್ನದ್ಧ.. ಹೇಗಿದೆ ಸಿದ್ಧತೆ?

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಬೇಸಿಗೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ನಾಗರಹೊಳೆ ಉದ್ಯಾನದ ಅರಣ್ಯ ಸಂಪತ್ತನ್ನು ಕಾಡ್ಗಿಚ್ಚಿನಿಂದ ಕಾಪಾಡುವುದು ಅರಣ್ಯ ಇಲಾಖೆಗೆ ಸವಾಲ್ ಆಗಿದೆ. ಹೀಗಾಗಿ ಯಾವುದೇ ಅಗ್ನಿ ಅನಾಹುತಗಳು ನಡೆಯದಂತೆ ಫೈರ್ ಲೈನ್ ನಿರ್ಮಾಣ, ಸಿಸಿ ಕ್ಯಾಮರಾ, ಡ್ರೋನ್ ಕಣ್ಗಾವಲು, ಸಿಬ್ಬಂದಿಗಳ ನೇಮಕ, ಅಗ್ನಿಶಾಮಕ ದಳದ ವ್ಯವಸ್ಥೆ ಹೀಗೆ ಹಲವು ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.. ಅಷ್ಟೇ ಅಲ್ಲದೆ ಅರಣ್ಯ ಇಲಾಖೆ ಇಡೀ ಉದ್ಯಾನವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಲಾರಂಭಿಸಿದೆ.

ಸಾಮಾನ್ಯವಾಗಿ ಪ್ರತಿವರ್ಷವೂ ಅರಣ್ಯ ಇಲಾಖೆ ಬೇಸಿಗೆಯ ದಿನಗಳು ಸವಾಲ್ ಆಗಿ ಪರಿಣಮಿಸುತ್ತವೆ. ಒಂದೆಡೆ ಅರಣ್ಯವನ್ನು ಕಾಡ್ಗಿಚ್ಚಿನಿಂದ ಕಾಪಾಡಬೇಕು, ಮತ್ತೊಂದೆಡೆ ಅರಣ್ಯದಲ್ಲಿ ವನ್ಯಪ್ರಾಣಿಗಳಿಗೆ ನೀರಿನ ಹಾಹಾಕಾರ ಬರದಂತೆ ನೋಡಿಕೊಳ್ಳಬೇಕಾಗುತ್ತದೆ. ಇದೇನು ಸುಲಭದ ಕೆಲಸವಲ್ಲ. ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ಕೆರೆಕಟ್ಟೆಗಳು ತುಂಬಿದ್ದವು ಆದರೆ ಬೇಸಿಗೆ ಶುರು ಆಗುತ್ತಿದ್ದಂತೆಯೇ ನೀರಿನ ಸೆಲೆ ಬತ್ತಲಾರಂಭಿಸುತ್ತವೆ. ಇಂತಹ ಸಂದರ್ಭದಲ್ಲಿ ಬೋರ್ ವೆಲ್ ಮೂಲಕ ಕೆರೆಗಳಿಗೆ ನೀರು ತುಂಬಿಸ ಬೇಕಾಗುತ್ತದೆ. ವರುಣ ಕೃಪೆ ತೋರಿ ಮಳೆ ಸುರಿಸಿದರೆ ನೆಮ್ಮದಿಯಾಗುತ್ತದೆ.

ಇದೀಗ ನಾಗರಹೊಳೆ ಹುಲಿಯೋಜನೆ ಮುಖ್ಯಸ್ಥರಾದ ಪಿ.ಎ.ಸೀಮಾ ಅವರು ಬೇಸಿಗೆಯಲ್ಲಿ ಆಗಬಹುದಾದ ಸಮಸ್ಯೆಗೆ ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಂಡಿದ್ದಾರೆ. ಕಾಡ್ಗಿಚ್ಚು ಸಂಭವಿಸುವುದನ್ನು ತಡೆಯುವ ಸಲುವಾಗಿ ಬೆಂಕಿರೇಖೆ (ಫೈರ್ ಲೈನ್) 2549 ಕಿ.ಮೀ ನಿರ್ಮಿಸಿದ್ದಾರೆ ಜತೆಗೆ ಸುಮಾರು 400ಮಂದಿ ತಾತ್ಕಾಲಿಕ ಫೈರ್ ವಾಚರ್ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಅಲ್ಲದೆ ಅರಣ್ಯದೊಳಕ್ಕೆ ಬೇಟೆ ಇನ್ನಿತರ ದುರುದ್ದೇಶದಿಂದ ಅಕ್ರಮವಾಗಿ ನುಸುಳುವವರ ಪತ್ತೆಗೆ ಡ್ರೋಣ್, ಸಿ.ಸಿ.ಕ್ಯಾಮರಾ ಕಣ್ಗಾವಲು ಹಾಕಲಾಗಿದೆ.

ಪ್ರತಿವಲಯಕ್ಕೆ ಒಂದರಂತೆ ಜೀಪ್ ಮೌಂಟೆಡ್ ಟ್ಯಾಂಕರ್, ಬೆಂಕಿ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆಯಾಗಿ 160 ಸ್ಪ್ರೇಯರ್, 15 ಪವರ್ ವೀಡ್ಕಟ್ಟಿಂಗ್ ಯಂತ್ರ, 10 ಬಾಡಿಗೆ ವಾಹನಗಳನ್ನು ನಿಯೋಜಿಸಲಾಗಿದೆ. ಉದ್ಯಾನದ ನಾಗಹೊಳೆ, ವೀರನಹೊಸಹಳ್ಳಿ, ಹುಣಸೂರು, ಮತ್ತಿಗೋಡು, ಕಲ್ಲಳ್ಳ, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ ಸೇರಿದಂತೆ ಎಂಟು ವನ್ಯಜೀವಿ ವಲಯಗಳ ಕಾಡಂಚಿನಲ್ಲಿ 400ಮಂದಿ ಆದಿವಾಸಿಗಳನ್ನು ಬೆಂಕಿ ತಡೆಗೆ ನೇಮಿಸಿಕೊಳ್ಳಲಾಗಿದೆ. ಇವರು ಅರಣ್ಯವನ್ನು ಕಾಯುತ್ತಿದ್ದು, ಇವರಿಗೆ ಮದ್ಯಾಹ್ನ ಊಟ,ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಇಷ್ಟೇ ಅಲ್ಲದೆ ಅರಣ್ಯದಲ್ಲಿ ಹಗಲು ಮತ್ತು ರಾತ್ರಿ ಫೋಟೋ, ವೀಡಿಯೋ ಮಾಡುವ 4 ಥರ್ಮಲ್ ಡ್ರೋಣ್ ಕ್ಯಾಮರ ಸೇರಿದಂತೆ ಒಟ್ಟು 7 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಯಕಟ್ಟಿನಲ್ಲಿ 35 ವಾಚ್ ಟವರ್ ಅಲ್ಲದೆ ಮರಗಳ ಮೇಲೆ ಅಟ್ಟಣಿಗೆಯನ್ನು ಹಾಕಲಾಗಿದ್ದು, ಅಲ್ಲಿದ್ದುಕೊಂಡೇ ವಾಚರ್ ಗಳು ಅರಣ್ಯದಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಗಮನಿಸಲಿದ್ದಾರೆ.
ಈ ಬಾರಿ ಅರಣ್ಯದೊಳಗೆ ಹರಿಯುವ ನಾಗರಹೊಳೆ, ಲಕ್ಷಣತೀರ್ಥ, ಸಾರಥಿನದಿಗಳಲ್ಲಿ ನೀರು ಸಮರ್ಪಕವಾಗಿದೆ. ಜತೆಗೆ ಉದ್ಯಾನದೊಳಗಿನ ಬಫರ್ ಝೋನ್ನಲ್ಲಿ 105, ಕೋರ್ ಏರಿಯಾಗಳಲ್ಲಿ 156ಕೆರೆಗಳು ಸೇರಿದಂತೆ ಒಟ್ಟು 261ಕೆರೆ-ಕಟ್ಟೆಗಳಲ್ಲಿ ಸಮೃದ್ದ ನೀರಿದೆ. ಆದರೂ ಉದ್ಯಾನದೊಳಗಿನ ಸೋಲಾರ್ ಪಂಪ್ ನಿಂದ ಕೆರೆ-ಕಟ್ಟೆಗಳಿಗೆ ನಿರಂತರವಾಗಿ ನೀರನ್ನು ತುಂಬಿಸುವ ಕೆಲಸವೂ ನಡೆಯುತ್ತಿದೆ.

ಇದೆಲ್ಲದರ ನಡುವೆ ಅರಣ್ಯಾಧಿಕಾರಿ-ಸಿಬ್ಬಂದಿಗಳಿಗೆ ಅಗ್ನಿಶಾಮಕದಳದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಅವರು ಅಧಿಕಾರಿಗಳಿಗೆ ಬೆಂಕಿ ತಡೆಗೆ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದು, ವಲಯವಾರು ಪ್ರಾತ್ಯಕ್ಷತೆ ಮೂಲಕ ತರಬೇತಿ ನೀಡಿದ್ದಲ್ಲದೆ, ಅರಣ್ಯದಂಚಿನ ಹಾಡಿ ಹಾಗೂ ಗ್ರಾಮಗಳಲ್ಲಿ ಬೆಂಕಿ ನಿಯಂತ್ರಣದ ಬಗ್ಗೆಯೂ ಅರಿವು ಮೂಡಿಸಿದ್ದಾರೆ. ಈ ನಡುವೆ ಉದ್ಯಾನದಂಚಿನ ಗ್ರಾಮಗಳಲ್ಲಿ ಬೀದಿನಾಟಕದ ಮೂಲಕ ಕಾಡ್ಗಿಚ್ಚು ತಡೆಯುವ ಸಲುವಾಗಿ ಜಾಗೃತಿ ಮೂಡಿಸಲಾಗಿದೆ.

ಇದೆಲ್ಲದರ ನಡುವೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದು, ಒಂದು ವೇಳೆ ಅರಣ್ಯದಲ್ಲಿ ಅಗ್ನಿಅನಾಹುತ ಸಂಭವಿಸಿ ದಟ್ಟ ಹೊಗೆ ಹರಡುತ್ತಿದ್ದಂತೆ ಮೊಬೈಲ್ಗೆ ಎಸ್.ಎಂ.ಎಸ್. ಬರುವ ಆಫ್ ನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕೆಲವು ವರ್ಷಗಳ ಹಿಂದೆ ನಾಗರಹೊಳೆಯಲ್ಲಿ ಸಂಭವಿಸಿದ ಅಗ್ನಿ ದುರಂತಗಳು ಇಂದಿಗೂ ಕಣ್ಣಮುಂದೆಯಿದೆ. ಬೆಂಕಿ ಕೆನ್ನಾಲೆಗೆ ಸಿಕ್ಕಿ ಸತ್ತು ಹೋದ ಮರಗಳು ಇವತ್ತಿಗೂ ಮೂಕ ಸಾಕ್ಷಿಯಾಗಿವೆ.

ಆ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೆಗೆದುಕೊಂಡ ಮುಂಜಾಗ್ರತಾ ಕ್ರಮ ಮತ್ತು ಶ್ರಮದ ಪರಿಣಾಮ ಇಡೀ ಉದ್ಯಾನ ಹಸಿರಾಗಿ ಉಳಿದಿದೆ.. ಅರಣ್ಯವನ್ನು ಕಾಪಾಡುವುದು ಬರೀ ಅರಣ್ಯ ಇಲಾಖೆ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನ ಜವಬ್ದಾರಿಯೂ ಆಗಿರುವುದರಿಂದ ಅರಣ್ಯವನ್ನು ಬೆಂಕಿಯಿಂದ ಕಾಪಾಡುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸೋಣ…







