ಮೈಸೂರು ದಸರಾಕ್ಕೆ ಮುನ್ನುಡಿ ಬರೆಯಲಿರುವ ಗಜಪಯಣ… ಸಿದ್ಧತೆಗಳು ಹೇಗೆಲ್ಲ ನಡೆಯುತ್ತಿವೆ ಗೊತ್ತಾ?

ಆಷಾಢ ಕಳೆದು ಶ್ರಾವಣ ಬಂತೆಂದರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಕಳೆ ಬರುತ್ತಿದೆ ಎಂದರ್ಥ… ಇದೀಗ ನಗರಕ್ಕೆ ಗಜಪಡೆಯನ್ನು ಬರಮಾಡಿಕೊಳ್ಳುವ ಸಮಯವಾಗಿದ್ದು, ಅತ್ತ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗುತ್ತಿದ್ದಂತೆಯೇ ಇತ್ತ ನಗರದಲ್ಲಿ ದಸರಾ ಚಟುವಟಿಕೆಗಳು ಆರಂಭವಾಗುತ್ತವೆ.. ಅದರಲ್ಲೂ ಪ್ರತಿ ದಿನವೂ ನಡೆಯುವ ಗಜಪಡೆಯ ತಾಲೀಮು ದಸರಾ ಬರುತ್ತಿದೆ ಎಂಬುದನ್ನು ನೆನಪಿಸುತ್ತದೆ.
ಮೈಸೂರು ದಸರಾ ಆರಂಭವಾಗುವುದೇ ವೀರನಹೊಸಹಳ್ಳಿಯಲ್ಲಿ ನಡೆಯುವ ಗಜಪಯಣದಿಂದ… ಹೀಗಾಗಿ ಗಜಪಯಣವನ್ನು ದಸರಾಕ್ಕೆ ಬರೆಯುವ ಮುನ್ನುಡಿ ಎಂದರೆ ತಪ್ಪಾಗಲಾರದು.. ಹೀಗಾಗಿಯೇ ವಿವಿಧ ಆನೆ ಶಿಬಿರಗಳಿಂದ ಬರಲಿರುವ ಗಜಪಡೆ ಮತ್ತು ಅವುಗಳ ಲಾಲನೆ ಪಾಲನೆ ಮಾಡುವ ಮಾವುತರು ಹಾಗೂ ಕಾವಾಡಿಗಳಿಗೆ ವಾಸ್ತವ್ಯ ಹೂಡಲು ಅರಮನೆ ಆವರಣದಲ್ಲಿ ಶೆಡ್ ಗಳನ್ನು ನಿರ್ಮಾಣ ಮಾಡುವ ಮೂಲಕ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಪ್ರತಿ ವರ್ಷವೂ ಗಜಪಡೆ ಹಾಗೂ ಮಾವುತರು, ಕಾವಾಡಿಗಳಿಗೆ ಶೆಡ್ ನಿರ್ಮಾಣ ಮಾಡಿ ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಈಗಾಗಲೇ ಈ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಸೋಮವಾರ(ಆಗಸ್ಟ್ 4) ಗಜಪಯಣ ನಡೆಯಲಿದ್ದು, ಮೊದಲ ತಂಡದಲ್ಲಿ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ತಂಡ ಮೈಸೂರು ನಗರಕ್ಕೆ ಆಗಮಿಸಲಿವೆ. ಸದ್ಯ ಗಜಪಡೆ ಅವುಗಳನ್ನು ನೋಡಿಕೊಳ್ಳುವ ಮಾವುತರು, ಕಾವಾಡಿಗಳ ಕುಟುಂಬಗಳ ವಾಸ್ತವ್ಯಕ್ಕಾಗಿ ಸುಮಾರು ನಲುವತ್ತಕ್ಕೂ ಹೆಚ್ಚು ಶೆಡ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಇದನ್ನೂ ಓದಿ: ಮೈಸೂರು ದಸರಾ ಸುಸೂತ್ರವಾಗಿ ನಡೆಸಲು 19 ಉಪಸಮಿತಿ ರಚನೆ… ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?
ಗಜಪಯಣದ ಮೂಲಕ ಮೊದಲ ತಂಡದಲ್ಲಿ ಒಂಬತ್ತು, ಎರಡನೇ ತಂಡದಲ್ಲಿ ಐದು ಹೀಗೆ ಒಟ್ಟು 14 ಆನೆಗಳು ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ. ಆನೆಗಳ ಜತೆಯಲ್ಲೇ ಮಾವುತರು ಮತ್ತು ಕಾವಾಡಿಗಳು, ವಿಶೇಷ ಮಾವುತರು ಸೇರಿದಂತೆ ಅವರ ಕುಟುಂಬ ಸದಸ್ಯರು ಬರಲಿದ್ದಾರೆ. ಇವರಿಗಾಗಿ ಅರಮನೆ ಅಂಗಳದಲ್ಲಿರುವ ಕಾಯಂ ಕಾಂಕ್ರೀಟ್ ಪ್ಲಾಟ್ಫಾರ್ಮ್ ಮೇಲೆ ಶೆಡ್ಗಳನ್ನು ನಿರ್ಮಿಸಿ, ಮೂಲಸೌಕರ್ಯಗಳಾದ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ಮೊದಲಾದ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತಿದೆ.
ಗಜಪಡೆ ಅರಮನೆ ಆವರಣಕ್ಕೆ ಪ್ರವೇಶಿಸಿದ ಬಳಿಕ ದಸರಾ ಆನೆಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಆನೆಗಳು ಬೀಡು ಬಿಡುವ ಸ್ಥಳದಲ್ಲಿ ಪ್ರತಿಬಾರಿಯಂತೆ ಮುಂಜಾಗ್ರತೆಯಾಗಿ ಸಿಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆನೆಗಳಿಗೆ ಆಹಾರ ತಯಾರಿಸುವ ಸ್ಥಳ ಸೇರಿದಂತೆ ಆಯ್ದ ಜಾಗಗಳಲ್ಲಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಇದ್ದರೂ ಪ್ರವಾಸಿಗರು ಫೋಟೋ, ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಆನೆಗಳ ಬಳಿ ಹೋಗುವ ಪ್ರಯತ್ನ ಮಾಡುತ್ತಾರೆ. ಇದನ್ನೆಲ್ಲ ಸೂPವಾಗಿ ಗಮನಿಸಲು ಕ್ಯಾಮರಾ ಅಳವಡಿಕೆಯಿಂದ ಅನುಕೂಲವಾಗಲಿದೆ.
ಈ ಬಾರಿ ನಾಲ್ಕು ಹೆಣ್ಣಾನೆಗಳು ಸೇರಿದಂತೆ ಒಟ್ಟು 14 ಆನೆಗಳು ಭಾಗಿಯಾಗುತ್ತಿದ್ದು, 14 ಆನೆಗಳ ಪೈಕಿ 9 ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಮತ್ತೀಗೋಡು ಶಿಬಿರದ ಭೀಮ, ದುಬಾರೆ ಶಿಬಿರದ ಕಂಜನ್, ಧನಂಜಯ, ಪ್ರಶಾಂತ, ಬಳ್ಳೆ ಶಿಬಿರದ ಮಹೇಂದ್ರ, ದೊಡ್ಡಹರವೆ ಶಿಬಿರದ ಏಕಲವ್ಯ, ದುಬಾರೆ ಶಿಬಿರದ ಕಾವೇರಿ ಹಾಗೂ ಬಳ್ಳೆಯ ಲಕ್ಷ್ಮೀ ಆನೆಗಳು ಭವ್ಯ ಮೆರವಣಿಗೆಯಲ್ಲಿ ಗಜಪಯಣದ ದಿನ ಸಂಪ್ರದಾಯದಂತೆ ಮೈಸೂರಿನತ್ತ ಆಗಮಿಸಲಿವೆ.
ಇನ್ನು ಆನೆಗಳೊಂದಿಗೆ ಅವುಗಳನ್ನು ನೋಡಿಕೊಳ್ಳುವ ಮಾವುತರು, ಕಾವಾಡಿಗರು ಮತ್ತು ಕುಟುಂಬ ಬೇರೆ, ಬೇರೆ ಆನೆಶಿಬಿರಗಳಿಂದ ಆಗಮಿಸುತ್ತಿದ್ದು, 40ಕ್ಕೂ ಹೆಚ್ಚು ಕುಟುಂಬಗಳಿಂದ 120ಕ್ಕೂ ಹೆಚ್ಚು ಸದಸ್ಯರು ಇರಲಿದ್ದಾರೆ. ಇದಾದ ನಂತರ ಮುಂದಿನ ದಿನಗಳಲ್ಲಿ ಇಲ್ಲಿ ಮಾವುತರು, ಕಾವಾಡಿಗರು ಹಾಗೂ ವಿಶೇಷ ಮಾವುತರ 50ಕ್ಕೂ ಹೆಚ್ಚು ಮಕ್ಕಳು ಹೆತ್ತವರೊಂದಿಗೆ ಆಗಮಿಸುತ್ತಿರುವುದರಿಂದ ಅವರ ಕಲಿಕೆಗೆ ಅನುಕೂಲವಾಗುವಂತೆ ಮಕ್ಕಳಿಗೆ ಅರಮನೆ ಅಂಗಳದಲ್ಲಿ ಟೆಂಟ್ ಶಾಲೆ ನಿರ್ಮಿಸಲಾಗುತ್ತಿದೆ. ಜತೆಗೆ, ಗ್ರಂಥಾಲಯ, ಆಯುರ್ವೇದ ಚಿಕಿತ್ಸಾಲಯವನ್ನೂ ತೆರೆಯಲಾಗುತ್ತಿದೆ.
ಇದೀಗ ಗಜಪಯಣದ ಸಿದ್ಧತೆಯನ್ನು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ಕೇಂದ್ರಕ್ಕೆ ಭೇಟಿ ನೀಡಿ ಗಜಪಯಣ ಸಿದ್ಧತೆ ಹಾಗೂ ಸ್ಥಳ ಪರಿಶೀಲಿಸಿದ್ದು, ಆ.4ರಂದು ಗಜಪಯಣ ನಡೆಯಲಿದ್ದು, ವೇದಿಕೆ ಇನ್ನಿತರ ಸಿದ್ಧತಾ ಕಾರ್ಯಗಳು ಆರಂಭವಾಗಿವೆ.
ಇದನ್ನೂ ಓದಿ: ನಾಗರಹೊಳೆಯಲ್ಲಿ ಮುಂಗಾರು ಮಳೆಗೆ ತಲೆದೂಗುತ್ತಿದೆ ನಿಸರ್ಗ… ವನ್ಯಪ್ರಾಣಿಗಳಿಗೆ ಸಂಭ್ರಮವೋ… ಸಂಭ್ರಮ..!
ಈ ಸಂಬಂಧ ಸ್ಥಳಪರಿಶೀಲನೆ ನಡೆಸಿದ ಅಧಿಕಾರಿಗಳು ವೇದಿಕೆ ನಿರ್ಮಾಣ, ಗಜಪಡೆಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಸ್ಥಳದ ಸಿದ್ಧತೆ ವೀಕ್ಷಿಸಿ ಅಗತ್ಯ. ಮಾರ್ಗದರ್ಶನ ನೀಡಿದ್ದಾರೆ. ದೊಡ್ಡಹೆಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರನಹೊಸಳ್ಳಿಯ ವಲಯ ಕಚೇರಿ ಬಳಿ (ಸಫಾರಿ ಕೌಂಟರ್ ಮುಂಭಾಗ) ಗಜಪಯಣಕ್ಕೆ ಚಾಲನೆ ದೊರೆಯಲಿದೆ. ಗಜಪಡೆಗೆ ಈ ವೇಳೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ವೇದಿಕೆ ನಿರ್ಮಾಣಕ್ಕೆ ಸೂಚಿಸಲಾಗಿದೆ. ಈ ಬಾರಿ ಮಳೆಯಾಗುತ್ತಿರುವ ಕಾರಣ ಜರ್ಮನ್ ಟೆಂಟ್ನಲ್ಲಿ ವೇದಿಕೆ ನಿರ್ಮಿಸುವಂತೆ ಸೂಚನೆ ನೀಡಲಾಗಿದೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಗಜಪಯಣದ ಕ್ಷಣಗಳಿಗಾಗಿ ಜನರು ಕಾಯುತ್ತಿದ್ದು, ಆನೆಗಳು ಮೈಸೂರು ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ದಸರಾ ಕಳೆ ಮೈಸೂರನ್ನು ಆವರಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ದಸರಾಕ್ಕೆ ಸಂಬಂಧಿಸಿದ ಚಟುವಟಿಕೆಗಳು ಗರಿಗೆದರಲಿವೆ. ನಂತರ ಗಜಪಡೆಗಳ ತಾಲೀಮು ಆರಂಭವಾಗಲಿದ್ದು, ದಿನದಿಂದ ದಿನಕ್ಕೆ ಇದು ಕಠಿಣವಾಗಿ ಜಂಬೂಸವಾರಿಗೆ ತಯಾರಾಗಲಿವೆ.