ArticlesLatest

ಸಂಗೀತ ಲೋಕದ ಚಿರಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್… ಸಂಗೀತವನ್ನು ಎಂದೂ ನಿಲ್ಲದ ನದಿಯಂತೆ ಹರಿಸಿದವರು…

ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಪಂಚದಲ್ಲಿ ಭಾರತ ಕಂಡ ಅಸಾಧಾರಣ ಪ್ರತಿಭಾಸಿರಿ, ಸ್ವರಸಾಮ್ರಾಜ್ಞೆ, ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್… ಇವರ ಬದುಕು ಮತ್ತು ಸಂಗೀತ ಕ್ಷೇತ್ರದಲ್ಲಿ  ಮಾಡಿದ ಸಾಧನೆ ಕುರಿತು  ಹಿರಿಯ ಸಾಹಿತಿ, ಪತ್ರಕರ್ತರೂ ಆಗಿರುವ ಬನ್ನೂರು ಕೆ.ರಾಜು ಅವರು ಇಲ್ಲಿ ತೆರೆದಿಟ್ಟಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ…

ಗಂಗೂಬಾಯಿ ಅವರ ಹಾಡುಗಾರಿಕೆಯನ್ನು ಕೇಳುವುದೆಂದರೆ

ಪವಿತ್ರವಾದ ನದಿಯೊಂದರಲ್ಲಿ ಪುಣ್ಯಸ್ನಾನ ಮಾಡಿದಂತೆ”

ಹೌದು, ಹಿಂದೂಸ್ತಾನಿ ಸಂಗೀತ ದಿಗ್ಗಜ ಡಾ. ಗಂಗೂಬಾಯಿ ಹಾನಗಲ್ ಕುರಿತಂತೆ ಮತ್ತೊಬ್ಬ ಸುವಿಖ್ಯಾತ ಸಂಗೀತಗಾರ ಡಾ. ರಾಜೀವ್ ತಾರಾನಾಥ್ ಹೇಳಿರುವ ಈ ಮಾತುಗಳು ಅಕ್ಷರಕ್ಷರವೂ ಸತ್ಯ! ನಮ್ಮ ನಡುವಿನ ಜೀವಂತ ದಂತ ಕಥೆಯಂತಿದ್ದ ಹಿಂದೂಸ್ತಾನಿ ಗಾಯಕಿ, ಗಾಯನಗಂಗೆ ಡಾ. ಗಂಗೂಬಾಯಿ ಹಾನಗಲ್ ಅವರು ತಮ್ಮ ಹೆಸರಿನಲ್ಲಿ ಗಂಗೆಯನ್ನು ಕಟ್ಟಿಕೊಂಡಿರುವಂತೆಯೇ ಅದಕ್ಕೆ ಅನ್ವರ್ಥವಾಗಿ ತಮ್ಮ ಬದುಕಿನುದ್ದಕ್ಕೂ ಸಂಗೀತಗಂಗೆಯನ್ನು ರಾಜ್ಯಾದ್ಯಂತ ಮಾತ್ರವಲ್ಲದೆ ರಾಷ್ಟ್ರಾದ್ಯಂತ, ವಿಶ್ವಾದ್ಯಂತ ಎಂದೂ ನಿಲ್ಲದ ನದಿಯಾಗಿ ಹರಿಸಿದವರು.

ಇಲ್ಲಿ ಮಿಂದೆದ್ದು ಪಾವನವಾದವರೆಷ್ಟೋ! ಹಾಗೆಯೇ ಈ ಹಾದಿಯಲ್ಲಿ ಗೌರೀಶಿಖರವಾಗಿ ಬೆಳೆದು ಮಹಾಗಾಯಕಿಯಾಗಿದ್ದ ಇವರು ಸಂಗೀತ ಲೋಕದ ವಿಸ್ಮಯವಾಗಿ ಹಿಂದೂಸ್ತಾನಿ ಸಂಗೀತವನ್ನು ಅದರ ಎಲ್ಲ ಸೊಗಸು ಸೌಂದರ್ಯದ ಚೆಲುವಿನ ಚೆಂದದೊಡನೆ ಜಗದ್ವಿಖ್ಯಾತವಾಗಿ ಜನಪ್ರಿಯಗೊಳಿಸುವ ಕೆಲಸವನ್ನೂ ಮಾಡಿದ್ದರು, ಮಾತ್ರವಲ್ಲ ಹಿಂದೂಸ್ತಾನಿ ಸಂಗೀತ ಎಂದರೆ ಏನು? ಎತ್ತ? ಅದು ಹೇಗಿರಬೇಕು? ಎನ್ನುವುದನ್ನೂ ತಮ್ಮ ಅಪ್ರತಿಮ ಸಾಧನೆಯ ಮೂಲಕವೇ ತೋರಿಸಿಕೊಟ್ಟು ಹಿಂದೂಸ್ತಾನಿ ಸಂಗೀತಕ್ಕೊಂದು ಘನತೆ ತಂದುಕೊಟ್ಟಿದ್ದರು.

ಇದನ್ನೂ ಓದಿ: ವಿಜ್ಞಾನ ಲೋಕದ ಮಹಾ ಬೆಳಕು ಸರ್ ಸಿ ವಿ ರಾಮನ್… ಇವರ ಬದುಕು ಮತ್ತು ಸಾಧನೆ ಇಲ್ಲಿದೆ…

ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಪಂಚದಲ್ಲಿ ಭಾರತ ಕಂಡ ಅಸಾಧಾರಣ ಪ್ರತಿಭಾಸಿರಿ, ಸ್ವರಸಾಮ್ರಾಜ್ಞೆ, ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರು ಕರ್ನಾಟಕದ ಸಂಗೀತನಿಧಿಯಾಗಿ 1913ರ ಮಾರ್ಚ್ 5ರಂದು ಧಾರವಾಡದಲ್ಲಿ ಜನಿಸಿದರು.  ಬಾಲ್ಯದಿಂದಲೂ ಸಂಗೀತಾಸಕ್ತರಾದ ಇವರು ಸ್ವರಗಳೊಡನೆ ಆಟವಾಡುತ್ತಾ ರಾಗಗಳೊಡನೆ ಬೆಳೆದರು.  ತಾಯಿ ಅಂಬಾಬಾಯಿ ಅವರಿಂದ ಸಂಗೀತಸಾಮ್ರಾಜ್ಯಕ್ಕೆ ಹೆಜ್ಜೆಯಿರಿಸಿ, ಪ್ರಾರಂಭದಲ್ಲಿ ಗುರುಗಳಾದ ಕೃಷ್ಣಮಾಚಾರಿ ಹುಲ್ಲೂರು ಮತ್ತು ಸವಾಯಿಗಂದರ್ವ ಅವರುಗಳ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿ ನಂತರ ಉಸ್ತಾದ್ ಅಬ್ದುಲ್ ಕರೀಂಖಾನ್ ಅವರ ಪಟ್ಟಶಿಷ್ಯೆಯಾಗಿ ಕಿರಾನಾ ಘರಾನಾ ಶೈಲಿಯಲ್ಲಿ ಅತ್ಯದ್ಭುತ ಸಾಧನೆಯನ್ನು ಮಾಡಿ, ಸಂಗೀತ ಸಾಮ್ರಾಜ್ಞಿಯಾಗಿ ರೂಪುಗೊಂಡವರು.  ಇವರ ತಂದೆ ಚಿಕ್ಕೂರಾವ್ ನಾಡಗೀರರು.

1924ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮಹಾಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರ ಸಮ್ಮುಖದಲ್ಲಿ ಸ್ವಾಗತಗೀತೆ ಹಾಡಿ ಬಾಪು ಅವರಿಂದಲೇ ಭೇಷ್ ಎನಿಸಿಕೊಂಡಿದ್ದ ಹಿರಿಮೆ ಗಂಗೂಬಾಯಿ ಅವರದ್ದು.  ಕಳೆದ ಏಳೂವರೆ ದಶಕಗಳಿಂದಲೂ ಜಗದ ಉದ್ದಗಲಕ್ಕೂ ತಮ್ಮ ಸ್ವರ ಮಾಧುರ್ಯವನ್ನು ಹರಡಿ ಹಾಡುತ್ತಾ ಕೋಟಿ ಕೋಟಿ ಸಂಗೀತ ಪ್ರೇಮಿಗಳ ಹೃನ್ಮನವನ್ನು ಸೂರೆಗೊಳ್ಳುತ್ತಲೇ ಬಂದಿರುವ ಇವರು 1932ರಲ್ಲಿ ಪ್ರತಿಷ್ಠಿತ ಹೆಚ್.ಎಂ.ವಿ. ಧ್ವನಿಸುರುಳಿಗಾಗಿ ಹಾಡಿ, 1933ರಲ್ಲಿ ಮುಂಬೈನ ಆಕಾಶವಾಣಿಯಲ್ಲಿ ಹಾಡಿ ವಿಶೇಷವಾಗಿ ಹೆಸರು ಮಾಡಿದರು.  1952ರಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಎದುರು ಜಯಪುರದ ಅರಮನೆಯಲ್ಲಿ ಹಾಡಿದ ಇವರು ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದರು.  ಹಾಗೆಯೇ ತಮ್ಮ 95ನೇ ವಯಸ್ಸಿನಲ್ಲೂ 20ರ ಹರೆಯದವರೂ ನಾಚುವಂತೆ 2006ರಲ್ಲಿ ಸತತ 45 ನಿಮಿಷಗಳ ಕಾಲ ಹಾಡಿ ಕೇಳುಗರನ್ನು ಮೂಕವಿಸ್ಮಿತಗೊಳಿಸಿದ್ದ ಇವರು ಮುಂದಿನ ಪೀಳಿಗೆಯ ಸಂಗೀತಗಾರರಿಗೆ ಊಹಿಸಲಿಕ್ಕೂ ಆಗದ ವಿಸ್ಮಯ ಸಂಗೀತ ಸಾಗರ!

ಸಾಂಸ್ಕೃತಿಕ ರಾಯಭಾರಿಯಾಗಿ ಇಂಗ್ಲೇಂಡ್, ಅಮೇರಿಕ, ಜರ್ಮನಿ, ಕೆನಡ, ಫ್ರಾನ್ಸ್, ಪಾಕಿಸ್ತಾನ ಮುಂತಾದ ಹಲವಾರು ದೇಶಗಳಲ್ಲಿ ಪ್ರವಾಸ ಕೈಗೊಂಡು ತಮ್ಮ ಗಾನಗಂಗೆಯಿಂದ ಸಂಗೀತ ಪ್ರೇಮಿಗಳನ್ನು ಸಂತಸದಿಂದ ತೋಯ್ದು ಹೋಗುವಂತೆ ಮಾಡಿದ್ದ ಗಂಗೂಬಾಯಿ ಅವರು ಭಾರತದ ಒಂಭತ್ತು ಪ್ರಧಾನಿಗಳಿಂದ ಮತ್ತು ಐವರು ರಾಷ್ಟ್ರಪತಿಗಳಿಂದ ಗೌರವಿಸಲ್ಪಟ್ಟಿದ್ದರೆಂದರೆ ಇದೇನೂ ಸಾಮಾನ್ಯ ವಿಷಯವಲ್ಲ.  ಸುವರ್ಣಾಕ್ಷರಗಳಲ್ಲಿ ಬರೆದು ವಜ್ರದ ಚೌಕಟ್ಟಿನಲ್ಲಿ ದಾಖಲಿಸುವಂತಾದ್ದು! ಎಷ್ಟು ಮಂದಿ ಸಂಗೀತಗಾರರಿಗೆ ಇಂಥ ಭಾಗ್ಯ ಪ್ರಾಪ್ತವಾದೀತು? ಅದೆಷ್ಟು ಮಂದಿಗೆ ಇಂಥ ಸಾಧನೆ ಸಾಧ್ಯವಾದೀತು?

ಗಂಗೂಬಾಯಿ ಅವರ ಸಾಧನೆ ಬಹುದೊಡ್ಡದಾದರೂ ಇದಕ್ಕಾಗಿ ಇವರು ನಡೆದುಬಂದ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ.  ಪಟ್ಟಪಾಡುಗಳು, ಉಂಡ ಕಷ್ಟಗಳು, ನೋವಿನ ಸ್ವರಗಳನ್ನು, ದುಃಖದ ಹೊಸರಾಗಗಳನ್ನು ಹರಿಸುವಂತೆ ಮಾಡಿದ್ದವು.  ಒಂದು ರೀತಿ ಕಾವ್ಯಲೋಕದಲ್ಲಿ ಬೆಂದು ಬೇಂದ್ರೆಯಾದಂತೆ ಸಂಗೀತಲೋಕದಲ್ಲಿ ನೊಂದು ಗಂಗೆಯಾಗಿದ್ದರಿವರು.

ಇದನ್ನೂ ಓದಿ: ಹೆಗ್ಗಡದೇವನಕೋಟೆ…. ಇದು ಬರೀ ಗಂಧದಗುಡಿಯಲ್ಲ…ಚಿನ್ನದಗುಡಿ..

ಬಡ ಕುಟುಂಬವಾದ್ದರಿಂದ ಇವರ ಬಾಲ್ಯವೂ ಸುಖಕರವಾಗಿರಲಿಲ್ಲ.  ಹಾಗೆಯೇ ಯೌವನಾವಸ್ಥೆಗೆ ಕಾಲಿಟ್ಟಾಗಲೂ ಸುಖವೆಂಬುದು ಇವರನ್ನು ಹುಡುಕಿಕೊಂಡು ಬರಲಿಲ್ಲ.  ಜೊತೆಯಾಗಿ ಬದುಕಿದ ವಕೀಲ ಗುರುನಾಥ್ ಕೌಲಗಿ ಕೂಡ ಹೆಚ್ಚುಕಾಲ ಇವರೊಡನೆ ಜೀವಂತವಾಗಿ ಉಳಿಯದೆ ಇವರನ್ನು ಒಂಟಿಯಾಗಿ ಬಿಟ್ಟು ಮತ್ತೆ ಬಾರದ ಲೋಕದತ್ತ ನಡೆದುಬಿಟ್ಟಿದ್ದರು.  ಆಗ ಏಕಾಂಗಿಯಾಗಿ ಜೀವನದ ನೊಗ ಹೊತ್ತ ಇವರಿಗೆ ಜೊತೆಯಾಗಿದ್ದದ್ದು ಸಂಗೀತ ಮಾತ್ರವೇ ಆದರೂ ಮಗಳು ಕೃಷ್ಣಾ ಹಾನಗಲ್ ಇವರ ಸಂಗೀತ ನಡೆಗೆ, ಹಾಡಿಗೆ ಆಧಾರವಾಗಿದ್ದರು.  ಆದರೆ ನೋವಿನ ಮೇಲೆ ಮತ್ತೊಂದು ನೋವಿನ ಬರೆ ಎಂಬಂತೆ ಇವರು ಹೆಚ್ಚು ಪ್ರೀತಿಸುತ್ತಿದ್ದ ಪ್ರೇಮದ ಪುತ್ರಿ ಕೃಷ್ಣಾ ಹಾನಗಲ್ ಸಹ ತಾಯಿಯನ್ನು ತೊರೆದು ಪರಮಾತ್ಮನ ಪಾದ ಸೇರಿಕೊಂಡಾಗ ದುಃಖದ ಪ್ರಪಾತವನ್ನು ಇವರು ಕಂಡಿದ್ದರು.

ಏಕೆಂದರೆ ಮಗಳು ಕೃಷ್ಣಾ ಹಾನಗಲ್ ಬರೀ ಮಗಳಾಗಿರಲಿಲ್ಲ. ಬದಲಿಗೆ ಇವರ ಸಾಧನೆಯ ಹಾದಿಯಲ್ಲಿ ಜೊತೆಗಾತಿಯಾಗಿದ್ದಳು.  ವಿಧಿ ತಂದೊಡ್ಡಿದ ಈ ಎಲ್ಲಾ ನೋವುಗಳ ದಾರಿಯಲ್ಲಿ ನಡೆದು ದುಃಖವನ್ನೆಲ್ಲಾ ಒತ್ತಟ್ಟಿಗೆ ಒತ್ತರಿಸಿ ಸಂಗೀತದ ಹೆದ್ದಾರಿಯನ್ನು ತೆರೆದುಕೊಂಡ ಮಹಾಸಾಧಕಿ ಗಂಗೂಬಾಯಿ ಅವರಿಗೆ ಯಾರು ತಾನೆ ಸಾಟಿಯಾಗಬಲ್ಲರು? ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ ಎಂಬಂತೆ ಗಂಗೂಬಾಯಿ ಅವರ ಸಂಗೀತದೈಸಿರಿಗೆ, ಹಾಡಿನ ಹೊನ್ನಕಂಠಕ್ಕೆ ಅವರು ಮಾತ್ರವೇ ಸಾಟಿಯಾಗಿದ್ದರು ಎನ್ನಬಹುದು!

ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಪಟ್ಟ ಅಲಂಕರಿಸಿದ ಅಪ್ರತಿಮ ಸಾಧಕಿ ತಾರೆ ಜಯಮಾಲಾ

ಮಹಿಳೆಯರು ಏನಿದ್ದರೂ ತುಮರಿಯಂತಹ ಹಗುರವಾದ ರಾಗಗಳುಳ್ಳ ಸಾಮಾನ್ಯ ಸಂಗೀತಕ್ಕಷ್ಟೇ ಸರಿ ಎಂಬ ಮಾತನ್ನು ಸುಳ್ಳು ಮಾಡಿ ಹಿಂದೂಸ್ತಾನಿ ಸಂಗೀತ ಸಾಮ್ರಾಜ್ಯದಲ್ಲಿ ತಮ್ಮ ಅನನ್ಯ ಪ್ರತಿಭೆಯಿಂದ ನೂತನ ಅಧಿಪತ್ಯ ಸ್ಥಾಪಿಸಿದ ಅಪೂರ್ವ ಸಾಧಕಿ ಗಂಗೂಬಾಯಿ ಅವರೆಂದರೆ ಖಂಡಿತ ಅತಿಶಯೋಕ್ತಿಯಾಗಲಾರದು.  ಸಂಗೀತವನ್ನು ಜೀವ, ಜೀವನ, ಜೀವದುಸಿರು, ಜೀವದಸಿರು ಮಾಡಿಕೊಂಡಿದ್ದ ‘ಭಾರತೀಯ ಶಾಸ್ತ್ರೀಯ ಸಂಗೀತ, ಕಲೆ ಉಳಿಸಿ ಬೆಳೆಸುವುದೇ ನನ್ನ ಜೀವನದ ಗುರಿ’ ಎಂದು ಹೇಳುತ್ತಿದ್ದ ಇಂಥ ಸಂಗೀತರತ್ನವನ್ನು ಪಡೆದ ಕನ್ನಡಮ್ಮ ಮಹಾಭಾಗ್ಯಶಾಲಿಯೇ ಸರಿ.

ಇಂಥ ಗಾನಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರಿಗೆ 1962ರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, 1971ರಲ್ಲಿ ಪದ್ಮಭೂಷಣ ಪ್ರಶಸ್ತಿ, 1973ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1984ರಲ್ಲಿ ತಾನ್ಸೇನ್ ಪ್ರಶಸ್ತಿ, 1990ರಲ್ಲಿ ಅಫೀಜ್ ಅಲಿಖಾನ್ ಮೆಮೋರಿಯಲ್ ಪ್ರಶಸ್ತಿ, 1992ರಲ್ಲಿ ಐ.ಟಿ.ಸಿ. ಸಂಗೀತ ಪ್ರಶಸ್ತಿ, ಅದೇ ವರ್ಷ ಕನಕಪುರಂದರ ಪ್ರಶಸ್ತಿ, 1995ರಲ್ಲಿ ಟಿ. ಚೌಡಯ್ಯ ಮೆಮೋರಿಯಲ್ ಪ್ರಶಸ್ತಿ, 1996ರಲ್ಲಿ ಕೇಂದ್ರ ಸರ್ಕಾರದ ಫೆಲೋಷಿಪ್, 1997ರಲ್ಲಿ ಗಾನಯೋಗಿ ಪಂಚಾಕ್ಷರಿ ಪ್ರಶಸ್ತಿ, 1998ರಲ್ಲಿ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ, 2002ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, 2004ರಲ್ಲಿ ಉಸ್ತಾದ್ ಇನಾಯತ್ ಖಾನ್ ಮೆಮೋರಿಯಲ್ ಪ್ರಶಸ್ತಿ, ಅದೇ ವರ್ಷ ನ್ಯಾಷನಲ್ ಆರ್ಟಿಸ್ಟ್ ಅವಾರ್ಡ್, 2006ರಲ್ಲಿ ಭಾರತೀಯ ಸಂಗೀತ ಪ್ರಶಸ್ತಿ, 2007ರಲ್ಲಿ ಗುರುಗಂಧರ್ವ ಪ್ರಶಸ್ತಿ, 2008ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, 2007ರ ಈ ಟಿ.ವಿ. ವರ್ಷದ ಕನ್ನಡಿಗ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಮತ್ತು ರಾಷ್ಟç ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು.

ಇದನ್ನೂ ಓದಿ: ಶಿವಾರಾಧನೆಯ ಮಹಾಶಿವರಾತ್ರಿ… ಪುರಾಣ ಕಥೆಗಳು ತೆರೆದಿಡುವ ಸಂಗತಿಗಳೇನು?

ಕರ್ನಾಟಕ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಗಳು, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ, ಮುಂಬೈನಿಂದ ಸಂಗೀತ ಮಹಾಮಹೋಪಾದ್ಯಾಯ ಎಂಬ ಡಾಕ್ಟರ್ ಆಫ್ ಮ್ಯೂಸಿಕ್ ಪದವಿ, 2008ರ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮತ್ತು 2003ರಲ್ಲಿ ಕರ್ನಾಟಕ ಸರ್ಕಾರದಿಂದ ಇವರ ಸಂಗೀತ ಸಾಧನೆಗೆ ಸಾಕ್ಷ್ಯಚಿತ್ರದ ಗೌರವ.  ಇವು ಗಂಗೂಬಾಯಿ ಅವರಿಗೆ ಸಂದಿದ್ದ ಅವರ ಗೌರವದ ಮತ್ತಷ್ಟು ಹೊನ್ನಗರಿಗಳು.

ಗುರುವರ್ಯ ಸವಾಯಿ ಗಂಧರ್ವ ವಿಶ್ವಸ್ಥ ಸಂಸ್ಥೆಯು ಕೊಡಮಾಡುವ 2008ನೇ ಸಾಲಿನ ಪ್ರತಿಷ್ಠಿತ ಪ್ರಪ್ರಥಮ ಸವಾಯಿ ಗಂಧರ್ವ ರಾಷ್ಟ್ರೀಯ ಸಂಗೀತ ಪುರಸ್ಕಾರ ಕ್ಕೂ ಇವರು ಭಾಜನರಾಗಿದ್ದರು.  ಸಂಗೀತ ಲೋಕದ ಇಂಥ ಮೇರು ಸಾಧಕಿಯ ಸಂಸ್ಮರಣಾರ್ಥ ಕರ್ನಾಟಕ ಸರ್ಕಾರವು ಇವರ ಹೆಸರಿನಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯವನ್ನು ಮೈಸೂರಿನಲ್ಲಿ ಸ್ಥಾಪಿಸಿ ಬಹುದೊಡ್ಡ ಗೌರವ ನೀಡಿದೆ.

ಇಂಥ ಸಂಗೀತ ಲೋಕದ ಭೀಮಸದೃಶ ಮೇರುಗಿರಿ 2009 ಜುಲೈ 21ರ ಭೀಮನ ಅಮಾವಾಸ್ಯೆಯಂದು ಮುಂಜಾನೆ 7 ಗಂಟೆ 10 ನಿಮಿಷಕ್ಕೆ ಸರಿಯಾಗಿ ಜವರಾಯನೊಡನೆ ಹೊರಟುಬಿಟ್ಟರು.  ಆದರೇನಂತೆ ಭೌತಿಕವಾಗಿ ಗಂಗೂಬಾಯಿಯವರು ಇಲ್ಲವಾಗಿರಬಹುದು, ಆದರೆ ತಮ್ಮ ಸಂಗೀತ ಸಾಧನೆಯ ಮೂಲಕ ಇವರು ಎಂದೆಂದೂ ಅಜರಾಮರರು.  ಒಂದು ಸಮಾಧಾನಕರ ಸಂಗತಿ ಎಂದರೆ ಸಂಗೀತ ಲೋಕದ ಇಂಥ ಮೇರು ಶಿಖರದ ಉತ್ತರಾಧಿಕಾರಿಯಾಗಿ ಗಂಗೂಬಾಯಿ ಅವರ ಮೊಮ್ಮಗಳು ಪ್ರತಿಭಾನ್ವಿತ ಹಿಂದೂಸ್ತಾನಿ ಗಾಯಕಿ ವೈಷ್ಣವಿ ಹಾನಗಲ್ ತಲಕಾಡು ಅವರು ಅಜ್ಜಿ ನಡೆದ ಹಾದಿಯಲ್ಲೇ ಸಾಗುತ್ತಿದ್ದಾರೆ.  ಮುಂದೊಂದು ದಿನ ಗಂಗಜ್ಜಿಯಂತೆಯೇ ಇವರೂ ಸಹ ಹಿಂದೂಸ್ತಾನಿ ಸಂಗೀತದಾಗಸದಲ್ಲಿ ಮಿನುಗುವಂತಹ ಎಲ್ಲಾ ಪ್ರತಿಭಾ ಲಕ್ಷಣಗಳನ್ನೂ ತೋರುತ್ತಿದ್ದಾರೆ.

ಇವರು ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಹಾಗೂ ಚಿತ್ರನಿರ್ಮಾಪಕ ಮಹೇಶ್ ತಲಕಾಡು ಅವರ ಧರ್ಮಪತ್ನಿಯಾಗಿದ್ದು ಅವರ ಒತ್ತಾಸೆ ಕೂಡ ಇವರಿಗಿದ್ದು ತಮ್ಮ ಅಜ್ಜಿಯನ್ನೇ ಮಾದರಿಯಾಗಿಟ್ಟುಕೊಂಡು ಹಿಂದೂಸ್ತಾನಿ ಸಂಗೀತದ ಹಿಮಾಲಯದತ್ತ ಒಂದೊಂದೇ ಮೆಟ್ಟಿಲನ್ನು ಏರುತ್ತಿದ್ದಾರೆ.  ಅಜ್ಜಿ ಗಂಗೂಬಾಯಿ ಅವರಂತೆಯೇ ಸಂಗೀತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಇವರು ಇದಕ್ಕಾಗಿಯೇ ವೈಷ್ಣವಿ ಹಾನಗಲ್ ತಲಕಾಡ್ ಮ್ಯೂಸಿಕ್ ಫೌಂಡೇಷನ್ ಎಂಬ ಸಂಸ್ಥೆಯನ್ನೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ಥಾಪಿಸಿದ್ದಾರೆ.

admin
the authoradmin

Leave a Reply

Translate to any language you want