ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ಭೂಮಿಗೆ ವಿಷ ಸೇರುತ್ತಿದ್ದು, ಪ್ರಗತಿಪರ ರೈತರು ಸಾವಯವ ಗೊಬ್ಬರಕ್ಕೆ ಒತ್ತು ನೀಡಬೇಕು ಎಂದು ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ವಸಂತಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ಗಾವಡಗೆರೆ ಹೋಬಳಿ ಮುಳ್ಳೂರು ಕ್ಲಸ್ಟರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕೃಷಿ ಕ್ಷೇತ್ರ ಅಧ್ಯಯನ ಕಾರ್ಯಕ್ರಮದಲ್ಲಿ ಮಾತನಾಡಿ, ಸಾವಯವ ಕೃಷಿಕ ಜಗದೀಶ್ ಅವರ ತೋಟಕ್ಕೆ ಶಾಲಾ ಮಕ್ಕಳು ಭೇಟಿ ನೀಡಿ ರಾಸಾಯನಿಕ ಗೊಬ್ಬರ ಮುಕ್ತ ಬೇಸಾಯ ಮಾಡುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು.

ರಾಸಾಯನಿಕ ಗೊಬ್ಬರ ಹೇರಳವಾಗಿ ಬಳಸುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಸಾವನ್ನಪ್ಪಲಿದ್ದು, ಅದರಿಂದ ಬೇಸಾಯಕ್ಕೆ ಮಣ್ಣು ಯೋಗ್ಯವಾಗುವುದಿಲ್ಲ. ಎರೆಹುಳು ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಲಿದೆ’ ಎಂದರು. ‘ರಾಸಾಯನಿಕ ಗೊಬ್ಬರ ಬಳಸುವುದರಿಂದ ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿ ಹರಿಯುವ ನೀರು ಕೆರೆ ಕಟ್ಟೆಗಳಿಗೆ ಸೇರಿ ನೀರು ಕಲುಷಿತವಾ-ಗುತ್ತದೆ. ಜನ, ಜಾನುವಾರು ಆ ನೀರು ಬಳಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.
ಅಧ್ಯಯನ ಕಿರು ಪ್ರವಾಸದಲ್ಲಿ ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಕೃಷ್ಣಗೌಡ, ಮುಖ್ಯಶಿಕ್ಷಕ ಪುಟ್ಟರಾಜು, ಶ್ರೀನಿವಾಸ್, ಆಶಾ, ಶಾಲಾಭಿವೃದ್ಧಿ ಸದಸ್ಯರು ಇದ್ದರು.








