ಎಲ್ಲ ಊರುಗಳಲ್ಲಿಯೂ ಹಬ್ಬ ಜಾತ್ರೆ ನಡೆಯುತ್ತಲೇ ಇರುತ್ತದೆ. ಆದರೆ ಹಬ್ಬ ಮತ್ತು ಜಾತ್ರೆಯಲ್ಲಿನ ಆಚರಣೆ ಮಾತ್ರ ಒಂದು ಊರಿನಿಂದ ಮತ್ತೊಂದು ಊರಿಗೆ ವಿಭಿನ್ನವಾಗಿರುತ್ತದೆ. ಇಂತಹ ಜಾತ್ರೆಗಳ ಪೈಕಿ ಮಂಡ್ಯದ ದೇವಲಾಪುರದ ನಾಗನಕೆರೆಯಲ್ಲಿ ನಡೆಯುವ ಗಿಡದ ಜಾತ್ರೆಯೂ ಒಂದಾಗಿದೆ. ಬಹುಶಃ ಇಲ್ಲಿ ನಡೆಯುವ ಜಾತ್ರೆ ಬೇರೆಲ್ಲೂ ನಡೆಯುವುದಿಲ್ಲವೇನೋ? ಹೀಗಾಗಿ ಇದು ವಿಭಿನ್ನ ಮತ್ತು ವಿಶಿಷ್ಟವಾಗಿ ಗೋಚರಿಸುತ್ತದೆ.

ನಿಜ ಹೇಳಬೇಕೆಂದರೆ ಜಾತ್ರೆ ಎಂದಾಕ್ಷಣ ರಥೋತ್ಸವ, ಜನಜಂಗುಳಿ, ಪೂಜೆ, ವ್ಯಾಪಾರ ವಹಿವಾಟಿನ ದೃಶ್ಯಗಳು ಕಣ್ಣು ಮುಂದೆ ಹಾದುಹೋಗುತ್ತಲೇ ಇರುತ್ತದೆ. ಆದರೆ ನಾಗಮಂಗಲ ತಾಲೂಕಿನ ದೇವಲಾಪರ ನಾಗನಕೆರೆಯಲ್ಲಿ ನಡೆಯುವ ಗಿಡದ ಜಾತ್ರೆ ವಿಭಿನ್ನವಾಗಿ ಗೋಚರಿಸುತ್ತಿದೆ. ಬಹುಶಃ ಈಗಾಗಲೇ ನಡೆದಿರುವ ಈ ಜಾತ್ರೆ ಹತ್ತು ಹಲವು ರೀತಿಯಲ್ಲಿ ಜನರ ಗಮನಸೆಳೆದಿದೆ. ಜಾತ್ರೆ ನಡೆಯುವ ಈ ಸ್ಥಳವನ್ನು ಚಿಕ್ಕ ತಿರುಪತಿ ಎಂದೇ ಕರೆಯಲಾಗುತ್ತದೆ.
ಇಲ್ಲಿ ಪ್ರತಿವರ್ಷವೂ ಗಿಡದ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಆಗಮಿಸುವವರಿಗೆ ಎಲ್ಲೆಂದರಲ್ಲಿ ಗೋವಿಂದನ ನಾಮಸ್ಮರಣೆ.. ಜಾಗಟೆಯ ನಿನಾದ.. ತದೇಕ ಚಿತ್ತದಿಂದ ತಿಮ್ಮಪ್ಪನ ಸ್ಮರಿಸುವ ದಾಸರು.. ಬಯಲಲ್ಲೇ ನಡೆಯುವ ಪೂಜೆ.. ಅದರಾಚೆ ದೇವರಿಗೆ ಭಕ್ತರಿಂದ ಮಾಂಸ ಮದ್ಯದ ಎಡೆ.. ಎಲ್ಲವೂ ಗಮನಸೆಳೆಯುತ್ತವೆ. ಮತ್ತು ಅಚ್ಚರಿಯನ್ನು ಮೂಡಿಸುತ್ತವೆ.

ಈ ಜಾತ್ರೆಗೆ ಜಿಲ್ಲೆಯವರು ಮಾತ್ರವಲ್ಲದೆ ಹೊರಗಿನವರು ಬರುತ್ತಾರೆ. ಎಲ್ಲರೂ ಒಂದೆಡೆ ಸೇರಿ ತಿಮ್ಮಪ್ಪನನ್ನು ಸ್ಮರಿಸಿ, ಪೂಜೆ ಮಾಡಿ ಹರಕೆ ಸಲ್ಲಿಸುತ್ತಾರೆ. ಇಲ್ಲಿ ಮದ್ಯ ಮತ್ತು ಮಾಂಸದ ಎಡೆ ಇಡುತ್ತಾರೆ ಎನ್ನುವುದೇ ಮತ್ತೊಂದು ವಿಶೇಷವಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರಾದ ದಾಸರು ತಮ್ಮ ಜೋಳಿಗೆಯಲ್ಲಿ ದೇವರನ್ನು ತಂದು ನಾಗನಕೆರೆ ದಡದ ಗಿಡದ ಪ್ರದೇಶದಲ್ಲಿಟ್ಟು ಪೂಜಿಸುತ್ತಾರೆ. ಈ ವೇಳೆ ಕೇಳಿ ಬರುವ ಶಂಖ, ಜಾಗಟೆಯ ಸದ್ದು ಭಕ್ತರ ಮೈನವಿರೇಳಿಸುತ್ತದೆ. ಇನ್ನೊಂದೆಡೆ ಮದ್ಯ, ಮಾಂಸವನ್ನು ಎಡೆಗಿಟ್ಟು ಪೂಜಿಸಲಾಗುತ್ತದೆ.
ಈ ಸಂಪ್ರದಾಯ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ಭಕ್ತರು ಬಳಿಕ ಪೂಜೆ ಮಾಡಿ ಬೋಜನ ಸ್ವೀಕರಿಸಿ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಒಂದು ದಿನ ನಡೆಯುವ ಈ ಗಿಡದ ಜಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸುತ್ತಾರೆ. ಕೆಲವರು ಇಲ್ಲಿ ಹರಕೆಯಾಗಿ ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ. ಈ ಜಾತ್ರೆ ನಡೆಯುವ ತಾಣವು ನಾಗಮಂಗಲ ಪಟ್ಟಣದಿಂದ ಕೇವಲ 10ಕಿ.ಮೀ. ದೂರದಲ್ಲಿದೆ.
B M Lavakumar








