LatestLife style

ಜೀವನದಲ್ಲಿ ಈ ಮೂರು ಹಣತೆಗಳು ಸದಾ ಬೆಳಗುತ್ತಿದ್ದರೆ.. ನಾವು ಬದುಕಿನುದ್ದಕ್ಕೂ ಸುಖವಾಗಿರಲು ಸಾಧ್ಯ!

ಎಲ್ಲವನ್ನು ಕೊಡುವ ದೇವರು ಏನಾದರೊಂದನ್ನು ನಮ್ಮಿಂದ ಕಿತ್ತುಕೊಂಡಿರುತ್ತಾನೆ.. ಹೀಗಾಗಿ ನಾವು ಬದುಕಿನುದ್ದಕ್ಕೂ ಹೋರಾಡುತ್ತಲೇ ಇರುತ್ತೇವೆ… ನಿಜ ಹೇಳಬೇಕೆಂದರೆ ದೇವರು ಮನುಷ್ಯನಿಗೆ ನೆಮ್ಮದಿಯನ್ನು ಕೊಡುವಲ್ಲಿ ಮರೆತಿದ್ದಾನೆ.. ಹಾಗಾಗಿಯೇ ನಾವೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ನೆಮ್ಮದಿಕಳೆದುಕೊಂಡು ಬದುಕುತ್ತಿದ್ದೇವೆ… ಈ ನೆಮ್ಮದಿಯ ಬದುಕನ್ನು ದೇವರು ಕೊಡದೆ ಇರಬಹುದು. ಆದರೆ ಅದನ್ನು ತಂದುಕೊಳ್ಳುವುದು ನಮ್ಮ ಜಾಣತನವಾಗಿದೆ… ನೆಮ್ಮದಿಯ ಬದುಕು ನಮಗೆ ದಕ್ಕಬೇಕಾದರೆ  ನೆಮ್ಮದಿಬಾಳು,  ಸುಂದರಬದುಕು, ಒಳ್ಳೆಯತನ  ಈ ಮೂರು ಹಣತೆಗಳು ಸದಾ ಬೆಳಗುತ್ತಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ನಿಮಗೆ ಗೊತ್ತಾ ನಿಮ್ಮ ಬಯಕೆಗಳೇ ನಿಮಗೆ ವೈರಿಯಂತೆ… ಅದು ಹೇಗೆ? ಏಕೆ?..

ನೆಮ್ಮದಿಯ ಬಾಳು: ಹುಟ್ಟಿದ ದಿನದಿಂದ ಸಾಯುವ ತನಕ ಅವರವರ ಬಾಳಿನ ನೆಮ್ಮದಿ ಅವರವರ ತನು- ಮನದಲ್ಲೇ ಅಡಗಿರುತ್ತದೆ. ಸು(ಗು)ಪ್ತವಾಗಿರುವುದನ್ನು ಹೆಕ್ಕಿ ತೆಗೆಯುವ ಯುಕ್ತಿ-ಶಕ್ತಿ ಅವರವರಿಗೇ ಸೇರಿದ್ದು ಆದಷ್ಟು ಶೀಘ್ರವಾಗಿ ಸತ್ಸಂಗ ವ್ಯಕ್ತಿಶಕ್ತಿಯಿಂದ ಸರಿಯಾದ ಮಾರ್ಗದರ್ಶನ ಪಡೆಯುವ ಮೂಲಕ ಹಾಗೂ ಸ್ವತಂತ್ರವಾಗಿ ಸ್ವಬುದ್ಧಿಯಿಂದ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೂಲಕ ತನ್ನದೇ ಆದ ಸಹನೆ ಚಿಂತನೆ ಯೋಜನೆ ರೂಪಿಸಿಕೊಳ್ಳ ಬೇಕಾಗುತ್ತದೆ. ಈ ಸತ್ಕಾರ್ಯದಲ್ಲಿ ಎಡವಿದಾಗ ಮಾತ್ರ ಅಪಕೀರ್ತಿ ಅಯಶಸ್ಸು ನಿಶ್ಚಿತವಾಗಿ ಫಲಿಸುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಸ್ವಾರ್ಥಬುದ್ಧಿ ತೊರೆದು ಆತ್ಮಾವಲೋಕನ ಮಾಡಿಕೊಳ್ಳುವುದು ಲೇಸು. ಇದೆಲ್ಲವನ್ನೂ ಮೀರಿ, ಕಾಲನ ಆಣತಿಯಂತೆ, ವಿಧಿ ವಿಲಾಸದಂತೆ ಅಥವ ನಮ್ಮ ಕರ್ಮದ ಗ್ರಹಚಾರ ಇದ್ದಂತೆ ಜರುಗಿದರೆ ಅಥವ ಒಂದುವೇಳೆ ಎಲ್ಲವು ವ್ಯರ್ಥವಾದರೆ. ಆಗ ನಮ್ಮ ಅಕಾರ್ಯ ಅಚಾತುರ್ಯ ಅವಿವೇಕಗಳಿಗೆ ಬೇರೆಯವರನ್ನ ದೂರುವುದು, ದೂಷಿಸುವುದು ಅಥವ ಹೊಣೆಗಾರರನ್ನಾಗಿ ಮಾಡುವುದು ತಪ್ಪು. ಅಸೂಯೆ ಸೇಡು ಪೂರ್ವಾಗ್ರಹ ಷಡ್ಯಂತ್ರ ಕುಕೃತ್ಯ ಮುಂತಾದ ದುರ್ಬುದ್ಧಿ ದುಷ್ಟಪ್ರಯತ್ನ ಬೇಡ. ಇವೆಲ್ಲ ಕೇವಲ ಹೇಡಿತನ, ಸ್ವಯಂಕೃತಾಪರಾಧ ಹಾಗೂ ಪಲಾಯನವಾದ ಎನಿಸುತ್ತದೆ.

ಇದನ್ನೂ ಓದಿ: ನಾವೆಲ್ಲರೂ ದೇಹದ ಆರೋಗ್ಯ ಮಾತ್ರವಲ್ಲ.. ಮನಸ್ಸಿನ ಆರೋಗ್ಯಕ್ಕೂ ಒತ್ತು ನೀಡಬೇಕು…

ಸುಂದರವಾದ ಬದುಕು: ಬದುಕು ಎಂಬುದೊಂದು ಖಾಲಿ ಇರುವ ಬಿಳಿಯಹಾಳೆ ಅಥವ ಕಪ್ಪುಹಲಗೆ ಇದ್ದಂತೆ. ನಮ್ಮ ನಮ್ಮ ಬದುಕಿನ ಹಾಳೆ ಅಥವಾ ಹಲಗೆಯ ಮೇಲೆ ಬರೆಯುವವರು ನಾವೇ ಆಗಿರುವುದರಿಂದ, ಪ್ರತಿಸಲವೂ ಬರೆಯುವ ಮುನ್ನ ಹತ್ತುಸಲ ಯೋಚಿಸಿ ಮತ್ತು ಸರಿಯಾಗಿ ಯೋಜಿಸಿ(ಯೋಜನೆ ರೂಪಿಸಿ) ಒಂದು ಸುಂದರವಾದ, ಸಂಪೂರ್ಣವಾದ, ಸರಿಯಾದ

ಚಿತ್ರವನ್ನು ಬರೆಯುವ ಮನಸ್ಸು, ತಾಳ್ಮೆ, ಶ್ರದ್ಧೆ ಇರಬೇಕು. ದುಡುಕುವುದರಿಂದ “ಚಿತ್ತಾರ” ಮತ್ತು “ಚಿತ್ತ” ಹದಗೆಟ್ಟು ಅಸಹ್ಯ ಮತ್ತು ಅಶ್ಲೀಲ ಚಿತ್ರ ಮೂಡುತ್ತದೆ. ಇದರ ಪ್ರತಿಫಲವಾಗಿ ಸುಂದರವಾದ ಬದುಕು ಅಥವ ಜೀವನ ಖಂಡಿತ ಲಭಿಸುವುದಿಲ್ಲ! ಆದ್ದರಿಂದ, ಪ್ರತಿಯೊಬ್ಬ ಮನುಷ್ಯನೂ ಸಹ ತನ್ನ ಸುಂದರವಾದ ಅಥವ ಸುಂದರವಲ್ಲದ ಬದುಕಿಗೇ ತಾನೇ ಮೂಲಕಾರಣ ಆಗುತ್ತಾನೆ ಹೊರತು ಬೇರೆಯವರಾರೂ ಕಾರಣರಲ್ಲ! ಈ ಸತ್ಯವನ್ನರಿತು “ಸುಂದರ” ಎಂಬುದರ ನಿಜವಾದ ಅರ್ಥ ಅರಿತು ಪ್ರತಿಯೊಬ್ಬರೂ ಅವರವರ ಬದುಕನ್ನು ಸುಂದರ ಆಗಿಸಿಕೊಳ್ಳಲು ಬದುಕಿನ ಉದ್ದಕ್ಕೂ ಪ್ರತಿದಿನವೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ಇದನ್ನೂ ಓದಿ: ಮರ್ಕಟದಂತಹ ಮನಸ್ಸನ್ನು ಏಕಾಗ್ರತೆಯ ಗೂಟಕ್ಕೆ ಕಟ್ಟಿ ಹಾಕುವುದು ಹೇಗೆ..?

ಒಳ್ಳೆಯತನ: ನಾವು ಎಷ್ಟೇ ಒಳ್ಳೆಯವರಾಗಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿ, ಒಳ್ಳೆಯದನ್ನೇ ಮಾತನಾಡುತ್ತ, ಒಳ್ಳೆಯದನ್ನೇ ಮಾಡುತ್ತ, ಒಳ್ಳೆದಾರಿಯಲ್ಲಿ ನಡೆಯುತ್ತ, ಒಳ್ಳೆಜೀವನ ನಡೆಸುತ್ತಿದ್ದರೂ ಕೆಲವರು ಸಹಿಸುವುದಿಲ್ಲ. ಏಕೆಂದರೆ, ಅವರಿಗೆ ಒಳ್ಳೆಯದೆಂದರೆ ಪಥ್ಯ, ಒಳ್ಳೆಯವರನ್ನು ಕಂಡರೇ ಅಸಹನೀಯ, ಒಳ್ಳೆಯನೋಟ ಸ್ವಾದಿಷ್ಟಊಟ ಶುಚಿರುಚಿ ಶುಭಲಾಭ ಎಂದರೇನೆ ಅಸಹ್ಯ. ಇಂಥವರು ಎಂದಿಗೂ ಯೋಗ್ಯರಾಗಿ ಇರುವುದಿಲ್ಲ. ಆದ್ದರಿಂದ, ಅಯೋಗ್ಯರಿಗೆ ಬುದ್ಧಿ ಹೇಳಬಾರದು, ಅಪಾತ್ರರಿಗೆ ದಾನ-ಧರ್ಮ ಮಾಡಬಾರದು! ಎಂಬ ನಾಣ್ಣುಡಿ ನಿತ್ಯಸತ್ಯ. ಹೀಗಿರುವಾಗ ಯಾವಾಗಲೂ ಬೇರೆಯವರು ನಮ್ಮಲ್ಲಿರುವ ಒಳ್ಳೆಯ ಗುಣವನ್ನು ಒಪ್ಪದಿದ್ದರೆ, ನಮ್ಮ ಒಳ್ಳೆಯತನ ಗುರುತಿಸದಿದ್ದರೆ, ನಮ್ಮ ಸದ್ಭಾವನೆಗೆ ಮಾನ್ಯತೆ ಕೊಡದಿದ್ದರೆ ಅಥವ ಉತ್ತಮ ಕೊಡುಗೆ ಸ್ವೀಕರಿಸದಿದ್ದರೆ, ಅದು ಅವರ ತಪ್ಪೇ ಹೊರತು ನಮ್ಮ ತಪ್ಪಲ್ಲ. ಹಾಗಾಗಿ, ಬದುಕಿರೋವರೆಗೆ ಒಳ್ಳೆಯತನವನ್ನೂ ಸದ್ಭಾವನೆಯನ್ನೂ ಬಿಡದೇ ಮುಂದುವರೆಸುತ್ತಿರಬೇಕು!

admin
the authoradmin

Leave a Reply