ಕುಶಾಲನಗರದಲ್ಲಿ ಗೌಡ ಸಮಾಜದಿಂದ ವಿಜೃಂಭಣೆಯ ಹುತ್ತರಿ ಹಬ್ಬ ಆಚರಣೆ… ಧಾನ್ಯಲಕ್ಷ್ಮಿಗೆ ಭವ್ಯ ಸ್ವಾಗತ

ಕುಶಾಲನಗರ(ಹೆಬ್ಬಾಲೆ ರಘು): ಪಟ್ಟಣದ ಗೌಡ ಸಮಾಜ ಹಾಗೂ ಸಮಾಜದ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ರಾತ್ರಿ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಹುತ್ತರಿ ಹಬ್ಬ ಆಚರಣೆ ಮಾಡಲಾಯಿತು.
ಸಮಾಜದ ಅಂಗಸಂಸ್ಥೆಗಳಾದ ಗೌಡ ಯುವಕ ಸಂಘ ಗೌಡ ಮಹಿಳಾ ಸ್ವಸಹಾಯ ಸಂಘ, ನಿವೃತ್ತ ಗೌಡ ಸೈನಿಕರ ಒಕ್ಕೂಟ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ಸಾಂಸ್ಕೃತಿಕ ವೇದಿಕೆ ಹಾಗೂ ಯುವ ಅರೆಭಾಷೆ ಯೂತ್ಸ್ ಹಾಗೂ ಎಲ್ಲಾ ಗೌಡ ಸಮಾಜದ ಬಾಂಧವರು ಸಂಜೆ 7 ಗಂಟೆಗೆ ಗೌಡ ಸಮಾಜ ಸಭಾಂಗಣದಲ್ಲಿ ಒಟ್ಟಿಗೆ ಸೇರಿದರು.ನಂತರ 7.30 ಲಘು ಫಲಹಾರವನ್ನು ಸ್ವೀಕರಿಸಿದರು.
ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ನೇತೃತ್ವದಲ್ಲಿ ರಾತ್ರಿ 8.40 ಕ್ಕೆ ನೆರೆಕಟ್ಟಿ,ಇಗ್ಗುತ್ತಪ್ಪ,ಕಾವೇರಮ್ಮ ಹಾಗೂ ಗುರು ಹಿರಿಯರಿಗೆ ಪೂಜೆ ಸಲ್ಲಿಸಿದರು. ಸಮಾಜದ ಮುಖಂಡ ಪಟ್ಟೆದಾರ ಕುಲ್ಲಚೆಟ್ಟಿ ಕಾಶಿ ಪೂವಯ್ಯ ಅವರು ಕದಿರುಗುತ್ತಿಯನ್ನು ಹೊತ್ತು ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಮೂಲಕ ಕಾರ್ಯಪ್ಪ ವೃತ್ತದಲ್ಲಿರುವ ಐತಿಹಾಸಿಕ ಶ್ರೀ ಗಣಪತಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘದ ಆವರಣದ ಭತ್ತದ ಗದ್ದೆಗೆ ತೆರಳಿ ಧಾನ್ಯಲಕ್ಷ್ಮಿಗೆ ಕಾಶಿಪೂವಯ್ಯ ಅವರು ಪೂಜೆ ಸಲ್ಲಿಸಿದರು.

ಸರಿಯಾಗಿ 9.40ಕ್ಕೆ ಕದಿರು ತೆಗೆಯಲು ಚಾಲನೆ ನೀಡಿದರು.ಇದೇ ಸಂದರ್ಭ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಕುಶಲತೋಪು ಸಿಡಿಸಿ ಶುಭ ಹಾರೈಸಿದರು. ಎಲ್ಲರೂ ಪೊಲಿ ಪೊಲಿ ದೇವ ಪೊಲಿಯೋ ಬಾ ಎಂದು ಘೋಷಣೆಯನ್ನು ಜೋರಾಗಿ ಕೂಗಿ ಹರ್ಷೋದ್ಗಾರ ಮಾಡಿದರು. ಗದ್ದೆಯ ಸುತ್ತಲೂ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು. ಈ ಸಂದರ್ಭ ಪಟಾಕಿ ಹಾಗೂ ಬಾಣ ಬಿರುಸುಗಳನ್ನು ಸಿಡಿಸಲಾಯಿತು. ಯುವಕ ಸಂಘದ ಯುವಕರು ಗದ್ದೆಯಲ್ಲಿನ ಕದಿರು ತೆಗೆದು ಎಲ್ಲರಿಗೂ ವ್ಯವಸ್ಥಿತವಾಗಿ ವಿತರಣೆ ಮಾಡಿದರು. ನಂತರ ಧಾನ್ಯಲಕ್ಷ್ಮಿಯನ್ನು ಸಮಾಜಕ್ಕೆ ತಂದು ಪೂಜಿಸಿ ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋದರು.
ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಸೆಟ್ಟೇಜನ ದೊರೆಗಣಪತಿ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಸಮಾಜದ ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಕುದುಪಜೆ ದೇವಕಿ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಅಧ್ಯಕ್ಷ ಚೀಯಂಡಿ ಶಾಂತಿ, ಗೌಡ ಸಾಂಸ್ಕೃತಿಕ ಅಧ್ಯಕ್ಷರಾದ ಸೂದನ ಗೋಪಾಲ್, ನಿವೃತ್ತ ಗೌಡ ಸೈನಿಕರ ಒಕ್ಕೂಟದ ಅಧ್ಯಕ್ಷರಾದ ದೇವಜನ ಚಿನ್ನಪ್ಪ ನಿರ್ದೇಶಕರಾದ ಕೂರನ ಪ್ರಸನ್ನ, ಗುಡ್ಡೆಮನೆ ವಿಶ್ವ ಕುಮಾರ್ ಸೇರಿದಂತೆ ಅಂಗಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಸದಸ್ಯರು ಇದ್ದರು.







