District

ಅರೆಭಾಷೆ ದಿನಾಚರಣೆ ಮತ್ತು ಅರೆಭಾಷೆ ನಾಟಕ ಪ್ರದರ್ಶನದಲ್ಲಿ ಸದಾನಂದ ಮಾವಜಿ ನೀಡಿದ ಸಲಹೆ ಏನು?

ಕುಶಾಲನಗರ(ರಘುಹೆಬ್ಬಾಲೆ) : ಪ್ರತಿಯೊಬ್ಬ ಗೌಡ ಸಮುದಾಯ ಬಾಂಧವರು ಅರೆಭಾಷೆಯನ್ನು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಬಳಕೆ ಮಾಡುವ ಮ‌ೂಲಕ ಇತರೆ ಅನ್ಯಭಾಷಿಕರಿಗೂ ಅರೆಭಾಷೆ ಕಲಿಸಲು ವಿಶೇಷ ಒತ್ತು ನೀಡಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸಲಹೆ ನೀಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,  ಮಡಿಕೇರಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಕುಶಾಲನಗರ, ಗೌಡ ಸಮಾಜ ಮತ್ತು ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ರೈತ ಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ, ಅರೆಭಾಷೆ ದಿನಾಚರಣೆ 2025 ಮತ್ತು ಅರೆಭಾಷೆ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಆಡುಭಾಷೆಯಾಗಿದ್ದ ಅರೆಭಾಷೆ ವ್ಯವಹಾರ ಭಾಷೆಯಾಗಿ ಬೆಳೆದು ರಾಜ್ಯ ಮನ್ನಣೆಗಳಿಸಿದೆ.  2012 ಡಿ.15 ರಂದು ಅಂದಿನ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದಗೌಡ ಅವರ ವಿಶೇಷ ಪ್ರಯತ್ನದಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಯಿತು. ಇದೀಗ ಅರೆಭಾಷೆ ದಿನಾಚರಣೆಗೆ 15 ವರ್ಷ ತುಂಬಿರುವುದು ಸಂತೋಷ ತಂದಿದೆ ಎಂದರು.

ಅಕಾಡೆಮಿಯ ಮೂಲ  ಉದ್ದೇಶ ಜನಾಂಗದ ಸಂಸ್ಕೃತಿ,ಪರಂಪರೆ ಕುರಿತು ಸಂಶೋಧನೆ ನಡೆಸುವುದು ಸೇರಿದಂತೆ ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮ ಮಾಡುವ ಮೂಲಕ ಅರೆಭಾಷೆ ಬೆಳೆಸುವ ಕೆಲಸ ಮಾಡುತ್ತಿದ್ದೇವೆ.ನಿಮ್ಮೇಲ್ಲರ ಸಹಕಾರ ಅಕಾಡೆಮಿ ಬೇಕು.ಈ ಹಿಂದೆ ಅಕಾಡೆಮಿ ವತಿಯಿಂದ ತ್ರೈಮಾಸಿಕ ಪತ್ರಿಕೆ ಹೊರಬರುತ್ತಿದೆ.ಎಲ್ಲರೂ ರೂ.600 ನೀಡಿ ಅಜೀವ ಸದಸ್ಯತ್ವ ಪಡೆದು ಪತ್ರಿಕೆಯನ್ನು ಬೆಳೆಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ.

ಈ ಹಿನ್ನೆಲೆ ಡಿಜಿಟಲೀಕರಣ ಮಾಡಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು.ಜೊತೆಗೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು. ನಮ್ಮ ಸಭೆ,ಸಮಾರಂಭಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಪರಿಚಯ ಮಾಡಿಕೊಡಬೇಕು.ಮುಂದಿನ ದಿನಗಳಲ್ಲಿ ಅರೆಭಾಷೆ ದಿನಾಚರಣೆಯನ್ನು ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಮೂಕಾಂಬಿಕಾ ವಿದ್ಯಾಸಂಸ್ಥೆ ನಿವೃತ್ತ ಮುಖ್ಯ ಶಿಕ್ಷಕ ಸೂದನ ಗೋಪಾಲ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನ,ಮನೆಗಳಲ್ಲಿ ಅರೆಭಾಷೆಯನ್ನು ಬಳಕೆ ಮಾಡುವ‌ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಭಾಷೆ ಬಳಕೆ ಮಾಡದಿದ್ದಲ್ಲಿ ನಶಿಸಿ ಹೋಗುವ ಸಾಧ್ಯತೆ ಇದೆ.ಭಾಷೆ ಬೆಳೆಸಲು ನಾವು ಎಲ್ಲಿ ದಾರಿ ತಪ್ಪಿದ್ದೇವೆ ಎಂಬುದನ್ನು ಚಿಂತನೆ ನಡೆಸಬೇಕು.ಭಾಷೆ ಬಗ್ಗೆ ಯಾರು ಹಿಂಜರಿಕೆ ಪಡದೆ ನಮ್ಮ ಭಾಷೆ ನಮ್ಮ ಹೆಮ್ಮೆ ಎಂಬ ಅಭಿಮಾನದಿಂದ ಬಳಸಬೇಕು ಎಂದು ಸಲಹೆ ನೀಡಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಆನಂದ್ ಕರಂದ್ಲಾಜೆ ಮಾತನಾಡಿ, ಅರೆಭಾಷೆ ಪುರಾತನ ಭಾಷೆಯಾಗಿದ್ದು, ಗೌಡರ ಮುಖ್ಯಭಾಷೆಯಾಗಿದೆ.ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಹರಡಿರುವ ಗೌಡ ಸಮುದಾಯ ಸಂಸ್ಕೃತಿ, ಭಾಷೆ ವಿಭಿನ್ನವಾಗಿರುವ ಜೊತೆಗೆ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂದರು. ಅರೆಭಾಷೆ ಅಕಾಡೆಮಿ ಸ್ಥಾಪನೆಯಾದ ಬಳಿಕ ಅರೆಭಾಷೆಗೆ ಬಲ ಸಿಕ್ಕಿತು. ನಮ್ಮ ಜನಾಂಗದ ವೇಷಭೂಷಣ ಕಾಪಿ ಮಾಡಬಹುದು ಆದರೆ ಭಾಷೆಯನ್ನು ಕಾಪಿ ಮಾಡಲು ಸಾಧ್ಯವಿಲ್ಲ ಆದ್ದರಿಂದ ಅರೆಭಾಷೆ ಆಸ್ಮಿತೆ ಉಳಿಯಬೇಕಾದರೆ  ಕಡ್ಡಾಯವಾಗಿ ಅರೆಭಾಷೆ ಮಾತನಾಡಬೇಕು ಎಂದರು.

ಇಲ್ಲಿನ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.  ಕೊಡಗು ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಕೆ. ಕುಶಾಲಪ್ಪ ಮೂಲ್ಯ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ  ಎಸ್.ಜೆ ದೇವದಾಸ್,ಕಾರ್ಯದರ್ಶಿ ನಾಗರಾಜು,ಸವಿತಾ ಸಮಾಜದ ಅಧ್ಯಕ್ಷ ಕೆ.ಎಸ್ ದೊರೇಶ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಪೊನ್ನಚ್ಚನ ಮೋಹನ್, ಚಂದ್ರಶೇಖರ್ ಪೇರಲು,ಲತಾ ಕುದುಪಜೆ ಮತ್ತಿತರರು ಪಾಲ್ಗೊಂಡಿದ್ದರು.ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಸ್ವಾಗತಿಸಿದರು.ಕರಂದ್ಲಾಜೆ ಕಲಾಆನಂದ್ ಮತ್ತು ಚೆರಿಯಮನೆ ಋಷಿ ಹರೀಶ್ ನಿರೂಪಿಸಿದರು. ಲೋಕೇಶ್ ಊರುಬೈಲ್ ನಿರ್ದೇಶನದ ಅಪ್ಪ ಅರೆಭಾಷೆ ನಾಟಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಶೋಕ್, ಕಾಶೀ, ಬೈಮನ ಬೋಜಮ್ಮ, ಬೀನನಂಜಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

admin
the authoradmin

Leave a Reply