ArticlesLatest

ಗಣೇಶ ನಿನ್ನ ಮಹಿಮೆ ಅಪಾರ…. ಪಾರ್ವತಿ ಪರಮೇಶ್ವರರ ವರಪ್ರಸಾದ ಈ ನಮ್ಮ ಗಣೇಶ

ಗಣೇಶನಿಗೆ ಇದೀಗ ಎಲ್ಲೆಡೆ ಅಗ್ರಪೂಜೆ ನಡೆಯುತ್ತಿದೆ.. ಮನೆಯಿಂದ ಆರಂಭವಾಗಿ ಗಲ್ಲಿ, ಪಟ್ಟಣದವರೆಗೆ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಗಣೇಶ ಅಂದರೆ ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭವ್ಯಭವಿತವ್ಯ ಭಗವಂತನೇ ಗಣೇಶನಾಗಿದ್ದಾನೆ.

ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ 3ನೇದಿನ ಗೌರಮ್ಮನ ಪಾದಾರ್ಪಣೆ, 4ನೇದಿನ ಗಣೇಶಾಗಮನ.  ಅಪರೂಪಕ್ಕೆ, ತಾಯಿ-ಮಗ ಇಬ್ಬರೂ ಒಟ್ಟಾಗೆ ಧರೆಗಿಳಿವ ಸಂದರ್ಭವುಂಟು! ಅಂದು ಇಂದು ಮುಂದು ಎಂದೆಂದೂ 21ಲೋಕದಲ್ಲಿ ದೇವ ಮಾನವ ದಾನವ ಮೊದಲ್ಗೊಂಡು ಪ್ರಪಂಚದಾದ್ಯಂತ ಪ್ರತಿಯೊಬ್ಬ ಧರ್ಮೀಯರು ಆರಾಧಿಸುವ ಏಕೈಕ ದೈವ! ಅನಾದಿ ಕಾಲದಿಂದ ಜಗತ್ತಿನಾದ್ಯಂತ ಎಲ್ಲ ದೇವರ ಪ್ರತಿಯೊಂದು ದೇವಸ್ಥಾನದಲ್ಲೂ ಪ್ರಥಮ ಪೂಜಿತನ ದೇವಾಲಯ ಅಥವ ವಿಗ್ರಹಮೂರ್ತಿ ಇದ್ದೇ ಇರುತ್ತದೆ.

ಇದಕ್ಕೆ ಕಾರಣ.. ನಾರದ ಮುನಿ ಏರ್ಪಡಿಸಿದ್ದ ಪ್ರಪಂಚ ಪರ್ಯಟನೆ ಸ್ಫರ್ಧೆಯಲ್ಲಿ ಬಾಲಗಣೇಶ ತೋರಿದ ಮಾತಾ-ಪಿತೃ ಭಕ್ತಿಯ ಪ್ರತಿಫ಼ಲವಾಗಿ ಪಾರ್ವತಿ ಪರಮೇಶ್ವರ ಹಾಗೂ ಸುಬ್ರಮಣ್ಯ ನೀಡಿದ ಸಿದ್ಧಿ, ಬುದ್ಧಿ, ವಿದ್ಯೆ, ಶಕ್ತಿ, ಸಂಗಮದ ವರಪ್ರಸಾದ. ಭಕ್ತಾದಿಗಳು ಅವರವರ ಯೋಗ್ಯತೆ ಯಥಾಶಕ್ತಿ ಅನುಸಾರ, 1,3,5,7,9 ದಿನ ಅಥವಾ ತಿಂಗಳ ಪೂರ್ತಿ ಅವಧಿಗೆ ಮಣ್ಣಿನ ಗಣೇಶ ತಂದು ಭವ್ಯ ಮಂಟಪದಲ್ಲಿ ಕೂರಿಸಿ ದಿವ್ಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಿ ದಿನವೂ ಮಹಾ ಮಂಗಳಾರತಿ ಪ್ರಸಾದ ವಿನಿಯೋಗದ ಪೂಜೆ ಕೈಗೊಳ್ಳುವರು.

ಆಧ್ಯಾತ್ಮ ನೆಲೆಗಟ್ಟಿನ ಅಡಿಯಲ್ಲಿ ವೈಭವದಿಂದ  ’ಗಣೇಶೋತ್ಸವ’ ಆಚರಿಸುವಾಗ ಸಾಮಾಜಿಕ ಹಿತದೃಷ್ಟಿಯನ್ನು ಗಮನದಲ್ಲಿ ಇರಿಸಿಕೊಂಡು, ಕಾನೂನು-ಸುವ್ಯವಸ್ಥೆಗೆ ಚ್ಯುತಿಬಾರದಂತೆ, ಅನ್ಯಧರ್ಮೀಯರಿಗೆ ನೋವುಂಟಾಗದಂತೆ, ಪ್ರಕೃತಿ ಪರಿಸರಕ್ಕೆ ನಷ್ಟವಾಗದಂತೆ, ಶುಚಿತ್ವ ಕಾಪಾಡಿಕೊಂಡು ಆರೋಗ್ಯಕ್ಕೆ ಧಕ್ಕೆಯಾಗದಂತೆ, ನೆರೆಹೊರೆ ಸುಖ ಶಾಂತಿ ನಿದ್ರೆಗೆ ಭಂಗವಾಗದಂತೆ, ಮಕ್ಕಳು ಮಹಿಳೆ ರೋಗಿ ವೃದ್ಧರಿಗೆ ಊನವಾಗದಂತೆ, ಸಾರ್ವಜನಿಕ ಸಭೆ ಸಮಾರಂಭಕ್ಕೆ ಅಡ್ಡಿಪಡಿಸದೆ, ಅರೆ/ಸರ್ಕಾರಿ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ, ನೋಡಿಕೊಳ್ಳಬೇಕು. ಸಭ್ಯತೆ ಮೀರದ ಅಶ್ಲೀಲ-ಅಸಹ್ಯ [ಪ್ರ]ದರ್ಶನ ಇಲ್ಲದ ಸಾಂಸ್ಕೃತಿಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಬಹಳ ಎಚ್ಚರಿಕೆಯಿಂದ ಆಯೋಜಿಸಿ ಭೇಷ್ ಎನಿಸಿ ಕೊಳ್ಳಬೇಕು!

ಗಣೇಶ ಬಂದ, ಕಾಯಿಕಡಬು ತಿಂದ, ತಥಾಸ್ತು ಅಂದ, ಚಿಕ್ಕಕೆರೆಯಲ್ಲಿ ಬಿದ್ದ, ದೊಡ್ಡಕೆರೆಯಲ್ಲಿ ಎದ್ದ ಮುಂತಾದ ಚಿನ್ನಾರಿಚಿಣ್ಣರ ಹರ್ಷಮಯ ಮುಗ್ಧತೆಯ (ಅನು)ಪಲ್ಲವಿಯನ್ನೂ; ಮುತ್ತುಸ್ವಾಮಿ ದೀಕ್ಷಿತರ ’ವಾತಾಪಿ ಗಣಪತಿಂ ಭಜೇ ಹಂ’ಸಂಸ್ಕೃತ ಕೀರ್ತನೆಯನ್ನೂ; ವೇದೋಪನಿಷತ್‌ನ ಶುಕ್ಲಅಂಬರಧರಂ (ಬಿಳಿವಸ್ತ್ರಧಾರಿ) ವಿಷ್ಣುಂ (ಬೆಳಕುಹರಡುವ) ಶಶಿ ವರ್ಣಂ(ಚಂದ್ರಬಣ್ಣದ) ಚತುರ್‌ಭುಜಂ (4ಭುಜದ) ಪ್ರಸನ್ನವದನಂ (ಶಾಂತಮುಖದ) ಧ್ಯಾಯೇತ್ (ದೇವರಧ್ಯಾನಮಾಡಲು) ಸರ್ವ ವಿಘ್ನೋಪ (ಎಲ್ಲ ವಿಘ್ನಗಳು)ಶಾಂತಯೆ (ನಿವಾರಣೆಯಾಗುತ್ತೆ).

ದೈವಶ್ಲೋಕವನ್ನೂ ಲಕ್ಷಗಟ್ಟಲೆ ಪದ್ಯ ರಚಿಸಿದ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ-ಶ್ರೀಗಣನಾಥ (ಗಣಗಳ ಒಡೆಯ), ಸಿಂಧೂರ ವರ್ಣ (ಪ್ರಕಾಶಮಾನ ಬಣ್ಣದ) ಕರುಣಸಾಗರ (ಸಹಾನುಭೂತಿ ಸಮುದ್ರದ) ಕರಿವದನ (ಆನೆ ಮುಖದ) ಲಂಬೋದರ (ದೊಡ್ಡಹೊಟ್ಟೆಯ) ಲಕುಮಿ ಕರ(ಲಕ್ಷ್ಮಿಯನ್ನು ಕೈಯಲ್ಲಿ ಹಿಡಿದ) ಅಂಬಾಸುತ (ಪಾರ್ವತೀಪುತ್ರ) ಅಮರ ವಿನುತ (ಮರಣಇಲ್ಲದ ಪ್ರಾಣಶರೀರ) ಸಿದ್ಧಚಾರಣ (ಸಿದ್ಧರು-ಆಕಾಶಕಾಯಗಳು) ಗಣಸೇವಿತ (ದೇವ,ದಾನವ,ಮಾನವ,ಗಣ ಎಲ್ಲರೂ ಪೂಜಿಸುವ) ಸಿದ್ಧಿವಿನಾಯಕ ತೇ ನಮೊನಮೋ (ಅಡೆತಡೆ ನಿವಾರಿಸಿ ವಿಜಯ ದೊರಕಿಸುವ ನಿನಗೆ ನಮಸ್ಕಾರಗಳು) ಕೀರ್ತನೆಯನ್ನು ಯಾರೂ ಮರೆಯುವಂತಿಲ್ಲ.

ಕೀರ್ತಿಶೇಷ ವಾಸುದೇವಾಚಾರ್ಯ, ಅಣ್ಣಮಾಚಾರ್ಯ ಚಿ.ಉದಯಶಂಕರ್ ಆರ್.ಎನ್.ಜಯಗೋಪಾಲ್, ಮುಂತಾದ ಲಕ್ಷಾಂತರ, ಭಕ್ತರು ಅಮಾಯಕರು, ನೂರಾರು ಭಾಷೆಗಳಲ್ಲಿ ರಚಿಸಿದ ಕೋಟ್ಯಂತರ ಭಕ್ತಿಗೀತೆ, ಜನಪದಗೀತೆ, ನುಡಿಗಟ್ಟು, ಲಾವಣಿ ಮುಂತಾದವು ಕೇಳಲು ಕರ್ಣಾನಂದಕರ. ಭಕ್ತರ ನೃತ್ಯಕುಣಿತ ನೋಡಿ ಆನಂದಿಸಿ ಮೈಮರೆವ ನಯನ ಮನೋಹರ ಕ್ಷಣಗಳು ಗಣೇಶಹಬ್ಬ ದಿನಗಳಲ್ಲಿ ಮಾತ್ರ ಲಭ್ಯ! ಇದಕ್ಕೆ ಪುಷ್ಟೀಕರಿಸುವಂತೆ ಹರಿಕಥೆ ಗಣೇಶನಕಥೆ ನಾಟಕ ಸಂಗೀತ ಭರತನಾಟ್ಯ ಮುಂತಾದ  ನೂರಾರು ಆಧ್ಯಾತ್ಮ ಭಕ್ತಿಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮ ಆಪ್ಯಾಯಮಾನ.

ಪ್ರಥಮಪೂಜೆ ಮಾಡದೆ ಕಷ್ಟನಷ್ಟ ಶಿಕ್ಷೆ ಅನುಭವಿಸಿದ ದೇವ ದಾನವ ಮಾನವರ ಉದಾಹರಣೆಗೆ ಹೇಳಬೇಕೆಂದರೆ, ದೇವಲೋಕದಲ್ಲಿ  ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನು. ಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು. ಜಯ-ವಿಜಯ ದ್ವಾರಪಾಲಕರು ಸಪ್ತ ಮಹರ್ಷಿಗಳ ಶಾಪಕ್ಕೆ ಗುರಿಯಾದರು.

ಕೃತ(ಸತ್ಯ)ಯುಗದಲ್ಲಿ.. ಮಹಾವಿಷ್ಣುವು ಮತ್ಸ್ಯ, ಕೂರ್ಮ, ವರಾಹ, ನರಸಿಂಹನಾಗಿ 4 ಬಾರಿ ಅವತಾರ ತಾಳಿದನು. ಹಿರಣ್ಯಾಕ್ಷ ಹಿರಣ್ಯಕಶ್ಯಪ ಸೋದರರು ದುರಹಂಕಾರದಿಂದ ಮೆರೆಯುತ್ತ ಅನೇಕ ಯುದ್ಧಗಳನ್ನು ಜಯಿಸಿದ್ದರೂ ಸಹ ಪ್ರಥಮ ಪೂಜೆ ಸಲ್ಲಿಸಲು ಮರೆತ ದಿನವೇ ಹತರಾದರು. ಸೂರ್ಯದೇವನು ಶನಿಯ ವಕ್ರದೃಷ್ಟಿಗೆ ಬಿದ್ದು ಕಳಾಹೀನತೆ ಹೊಂದಿದನು. ತನ್ನ ಪತಿಯಾದ ಪರಶಿವನ ನಿಂದನೆಯನ್ನು ಕೇಳಿ ಸಹಿಸಲಾರದೇ ಅಗ್ನಿಪ್ರವೇಶ ಮಾಡಿದ ದಾಕ್ಷಾಯಣಿಯಿಂದ ದಕ್ಷರಾಜನ ಯಾಗಯಜ್ಞ ವಿಫಲವಾಯಿತು.

ತ್ರೇತಾಯುಗದಲ್ಲಿ.. ರಾಜಾ ಸತ್ಯಹರಿಶ್ಚಂದ್ರನು ತನ್ನ ಬೃಹತ್ ಸಾಮ್ರಾಜ್ಯವನ್ನೂ ಬಂಧು ಬಳಗ ಎಲ್ಲವನ್ನು ಕಳೆದುಕೊಂಡು ಸತಿ-ಸುತರ ಆದಿಯಾಗಿ ಸ್ವಯಂ ತನ್ನಂತಾನೇ ಮಾರಿಕೊಂಡು ಕೊನೆಗೆ  ಸ್ಮಶಾನವನ್ನು ಕಾಯ್ದನು. ರಘುರಾಮನು ಪತ್ನಿ ಮತ್ತು ಸಹೋದರನ ಸಮೇತ ೧೪ ವರ್ಷ ವನವಾಸಕ್ಕೆ ತೆರಳಿದ್ದಾಗ ಸೀತಾದೇವಿಯ ಅಪಹರಣವಾಗಿ ಶ್ರೀರಾಮನು ವಿರಹ ತಾಪದಿಂದ ನೊಂದುಬೆಂದು ಬಳಲಿದನು. ಬಲಶಾಲಿ ವಾಲಿಯನ್ನು ಕೊಂದು ಮೋಸಗಾರನೆಂಬ ಕೆಟ್ಟ ಹೆಸರು ಪಡೆದ. ಲಕ್ಷ್ಮಣ ಪ್ರಜ್ಞೆ ಕಳೆದುಕೊಂಡ.

ಕ್ರಮೇಣ ರಾಮ ಲಕ್ಷ್ಮಣರಿಗೆ ತಪ್ಪಿನ ಅರಿವಾಗಿ ಪ್ರಾಯಶ್ಚಿತ ಮಾಡಿಕೊಳ್ಳಲು 21 ಬಾರಿ ಗಣಪತಿಯನ್ನು ಪೂಜಿಸಿದ ನಂತರ ಕಿಷ್ಕಿಂಧೆಯ ದಟ್ಟಕಾಡಿನಲ್ಲಿ ಹನುಮಂತ, ಸುಗ್ರೀವನ ಆಸರೆ ಮತ್ತು ವಾನರಸೇನೆಯ ಸಹಾಯ ದೊರಕುತ್ತದೆ. ಸೇತುವೆ ನಿರ್ಮಾಣ ಲಂಕಾದಹನ ಸೀತಾ-ರಾಮ ಪುನರ್ಮಿಲನ. ಪ್ರಥಮಪೂಜೆ ಮರೆತ ರಾವಣನಿಂದ ಸಮುದ್ರ ಸಂಧ್ಯಾವಂದನೆ ಸಮಯದಲ್ಲಿ ಶಿವನ ಆತ್ಮಲಿಂಗ ಪಡೆದು ಧರೆಗಿರಿಸಿ ಗೋಕರ್ಣವನ್ನು ಭೂಕೈಲಾಸ ಕ್ಷೇತ್ರವನ್ನಾಗಿ ಮಾಡಿದ ಮಹಾಗಣಪ. ಪ್ರಥಮ ಪೂಜೆ ಮರೆತ ದಶಕಂಠ ಲಂಕೇಶ ಹತನಾದ.

ದ್ವಾಪರಯುಗದಲ್ಲಿ.. ನಳಮಹಾರಾಜನು ಶನೈಶ್ಚರನ ಅವಕೃಪೆಗೆ ಬಲಿಯಾಗಿ ಸರ್ವಸ್ವವನ್ನೂ ಕಳೆದುಕೊಂಡು ನರಕಯಾತನೆ ಅನುಭವಿಸಿದನು. ಪಾಂಡವರು ವನವಾಸ ಅಜ್ಞಾತವಾಸ, ಅನುಭವಿಸಿದರು. ಸುಯೋಧನನು ಯುದ್ಧವನ್ನು ಸೋತು ಸಾವನ್ನಪ್ಪಿದನು. ಭಗವಾನ್ ಶ್ರೀಕೃಷ್ಣನೂ ವಿನಾಯಕ ಚೌತಿಯ ಚಂದ್ರದರ್ಶನದಿಂದ ಶಮಂತಕಮಣಿ ಕಳ್ಳನೆಂಬ ನಿಂದೆಗೆ ಗುರಿಯಾಗುವನು.

ಕಲಿಯುಗದಲ್ಲಿ.. ಮಹಾವಿಷ್ಣು ಭೃಗುಮುನಿಯ ಶಾಪಕ್ಕೆ ಗುರಿಯಾಗಿ ಶ್ರೀನಿವಾಸನ ಅವತಾರವೆತ್ತಿ ಕಷ್ಟ ಕಾರ್ಪಣ್ಯ ಎದುರಿಸಿ! ಕುಬೇರನಿಗೆ ಸಾಲಗಾರನಾದನು. ಅಜೇಯಅಶೋಕ ಇಮ್ಮಡಿಪುಲಿಕೇಶಿ, ಶ್ರೀಕೃಷ್ಣದೇವರಾಯ, ಮುಂತಾದ ಅನೇಕ ಚಕ್ರವರ್ತಿಗಳು ಅವನತಿ ಹೊಂದಿದರು. ಈಕಾರಣಕ್ಕಾಗಿ ಅಂದಿನ ಆಚಾರ್ಯತ್ರಯರು, ವಚನಗಾರರು, ದಾಸವರೇಣ್ಯರು, ಪವಾಡಪುರುಷರು, ಸರ್ವಜ್ಞರು, ರಾಜ ಮಹಾರಾಜರು ಮತ್ತು ಇಂದಿನ ಮಠ-ಪೀಠಾಧಿಪತಿಗಳು, ರಾಜಕಾರಣಿಗಳು, ಜ್ಞಾನಿ-ವಿಜ್ಞಾನಿಗಳು ಆದಿಯಾಗಿ ಪ್ರತಿಯೊಬ್ಬರೂ ಪ್ರಥಮ ಪೂಜಿತನನ್ನು ಆರಾಧಿಸುತ್ತಾ ನಿರ್ವಿಘ್ನವಾಗಿ ತಮ್ಮ ಕಾರ್ಯಗಳನ್ನು ಮುಗಿಸಿಕೊಂಡು, ಕೀರ್ತಿ ಹಣ ಯಶಸ್ಸು ಆನಂದ ನೆಮ್ಮದಿ ತೃಪ್ತಿ ಇತ್ಯಾದಿ ಪಡೆಯುತ್ತಿದ್ದಾರೆ.

21ರ ಮಹತ್ವ ವೇನೆಂದರೆ.. ಬೆನಕ ಬೆನಕ ಏಕದಂತ ಪಚ್ಚೆಕಲ್ಲು……. 21 ನಮಸ್ಕಾರಗಳು” 21ಲೋಕದಲ್ಲೂ 4ಯುಗದಲ್ಲೂ ಅಸ್ತಿತ್ವದಲ್ಲಿರುವ ಅಯೋನಿಜ, ಅಜಾತಶತ್ರು, ಅಮರಶಕ್ತಿ, ನಿರಂಕುಶಪ್ರಭು, ದೇವಾಧಿದೇವ, ಶೀಘ್ರವರ ಪ್ರದಾಯಕ, ಕ್ರಿಯಾಶೀಲ ದೈವ, 21ಬಾರಿ ಶನಿಯ (ವಕ್ರ)ದೃಷ್ಟಿಗೆ ಸಿಲುಕದ ಏಕೈಕ ನಾಯಕ ನಮ್ಮ ವಿನಾಯಕ! ಕೈಲಾಸ, ವೈಕುಂಠ, ಸತ್ಯಲೋಕ, ಮುಂತಾದ 13ಲೋಕದೊಡನೆ ಅಷ್ಟ ದಿಕ್‌ ಪಾಲಕರ 8 ಲೋಕ ಸೇರಿ ಒಟ್ಟು 21ಲೋಕಗಳು ಇರುತ್ತವೆ. 21ನೇ ’ಶೂನ್ಯ’ ಲೋಕವನ್ನು ದಾಟಿದರೆ 22ನೇ ಲೋಕ ಶ್ರೀವಿಘ್ನೇಶ್ವರಸ್ವಾಮಿಯ ’ಸ್ವಾನಂದಲೋಕ’ ಸಿಗುತ್ತದೆ.

ಈ ಲೋಕದ ಏಕಮೇವ ಅದ್ವಿತೀಯ ಚಕ್ರವರ್ತಿಯಾದ ಸ್ವಾನಂದೇಶ (ವಿನಾಯಕ) ನಿವಾಸದ ಸು(ಅ)ರಮನೆ ಹೆಸರು ’ಆನಂದಭವನ’ ಕಾಣಿಸುತ್ತದೆ! ಇಲ್ಲಿನ ರಾಜಧಾನಿಗೆ 21ಮುಖ್ಯದ್ವಾರಗಳಿದ್ದು, ಅರಮನೆಯ ಕೋಟೆಗೂ 21ಪ್ರಮುಖ ಬಾಗಿಲುಗಳಿವೆ. ಅವುಗಳಿಗಿಟ್ಟಿರುವ *21 ಹೆಸರುಗಳು* :- ಶ್ರೀಮುಖ, ಸುಮುಖ, ಅಥರ್ವ, ಪ್ರಣವ, ಬೆನಕ, ವಿಶ್ವಮೂರ್ತಿ, ವಿಶಿಷ್ಟಕೀರ್ತಿ, ಅಧಿಪತಿ, ಗಣಪತಿ, ಗಣೇಶ, ಲಂಬೋದರ, ಗೌರೀವರ, ವಿಘ್ನೇಶ್ವರ, ಗಣೇಶ್ವರ, ಅಜರಾಮರ, ಅತಿರಥ, ಅಖುರಥ, ಅಮಿತ, ಅಚ್ಯುತ, ಅನಂತ, ಅಗಣಿತ. ಶ್ರೀಗಣೇಶ ಸಹಸ್ರನಾಮ ಜಪಿಸುವಾಗ ಕೇಳಿಬರುವ ಗಣೇಶನ ಇನ್ನೊಂದು ಹೆಸರೇ ಸ್ವಾನಂದೇಶ!

ಈ ನಾಮಧೇಯವು ಅಪರೂಪದ ಸ್ಮರಣೆ ಎಂಬುದು ಅಕ್ಷರಷಃ ಸತ್ಯ! ವಿಘ್ನಹರ್ತ ವಾಸಿಸುವ ಸ್ವಾನಂದ ಲೋಕವು 5ಸಾವಿರ ಯೋಜನೆಯಷ್ಟು ವಿಸ್ತಾರವುಳ್ಳ ನವರತ್ನಖಚಿತ ಸುವರ್ಣ ಧರಣಿಯ ಸಾಮ್ರಾಟನಾಗಿ ಪಂಚಮುಖಿ ಗಣಪತಿಯು 21ಕೋಟಿ ಸೂರ್ಯನ ತೇಜಸ್ಸಿನಿಂದ ಸಮಷ್ಟಿ ವೃಷ್ಟಿರೂಪನಾಗಿ ಸಕಲ ಭೋಗ ಭಾಗ್ಯದ ವೈಭೋಗ ದರ್ಬಾರ್-ಆಳ್ವಿಕೆ ನಡೆಸುತ್ತಿದ್ದಾನೆ. ರವಿ ಚಂದ್ರ ನಕ್ಷತ್ರ ಅಷ್ಟ ದಿಕ್ಪಾಲಕರ ರಹಿತದ ಲೋಕದಲ್ಲಿ ಶೇ.100ರಷ್ಟು ಪುಣ್ಯಜೀವಿಗಳೇ ಇದ್ದು ಇವರೆಲ್ಲರ ಸ್ವಯಂ ಪ್ರಭೆಯಿಂದಲೆ ಇಲ್ಲಿನ ದಶದಿಕ್ಕುಗಳು ಪ್ರಕಾಶಮಾನವಾಗಿ ಬೆಳಗುತ್ತವೆ! ಪ್ರತಿಯೊಬ್ಬ ಪ್ರಜೆಯೂ ಸುಖ ಶಾಂತಿ ನೆಮ್ಮದಿ ಸುಭಿಕ್ಷುತೆಯಿಂದ ಹಸಿವು ಬಾಯಾರಿಕೆ ಇಲ್ಲದೆ ರಾರಾಜಿಸಿ ಪ್ರತಿದಿನವೂ 21ಬಾರಿ ಗಣೇಶನ ಭಜನೆ ಪೂಜೆ ಮಾಡುತ್ತಾ ಚಿರಂಜೀವಿಯಾಗಿದ್ದಾರೆ!

21 ನಿತ್ಯಸತ್ಯ ಸಾರ್ಥಕಗಳು.. 1 ಶ್ರೀವಾರಿಪಿಳ್ಳೆಯಾರ್, 2ವಿಘ್ನನಿವಾರಣಾ ಇಷ್ಟಾರ್ಥಪ್ರದಾಯಕ, 3ಗೂಳೂರುಗಣಪ, 4 ಬಸವನಗುಡಿ ಬೃಹತ್‌ ಗಣೇಶ, 5ಕಡಲೆಕಾಳುಗಣಪತಿ, 6ಶೋಣಭದ್ರಶಿಲಾಮೂರ್ತಿ, 7ಯೋಗಶಾಸ್ತ್ರಚಕ್ರಸ್ಥಾನಿಕ, 8ಸಂಕಷ್ಟಹರವ್ರತ, 9ಹಾಸ್ಯರಸಾಧಿಪತಿ, 10ಪೋಷಕಾರಾಧ್ಯಸುಜ್ಞಾನಮೂರ್ತಿ, 11 ಪೂನಾಕ್ಷೇತ್ರ ಅಷ್ಟವಿನಾಯಕ, 12ಗಣೇಶಪುರಾಣ-ಮುದ್ಗಲಪುರಾಣ, 13ತಾರಕಾಸುರ ಸಂಹಾರ ಮುರುಗನ್‌ ಪೂಜಿತ, 14ತ್ರಿಪುರಾಸುರ ಸಂಹಾರ ಸಂದರ್ಭ ಕಾಲಭೈರವಂಗೆ ಶ್ರೀಸಹಸ್ರನಾಮೋಪದೇಶಪೂಜ್ಯ.

15ಕಾಶೀಕ್ಷೇತ್ರದುಂಢಿರಾಜ, 16 ಇಂಡೊನೇಷ್ಯಕಾಂಚಾಣಗಣೇಶ, 17ಭಾದ್ರಪದ ಶುಕ್ಲಚೌತಿ ಮೌರ್ಯ, 18ಸಿದ್ಧಿಬುದ್ಧಿಮೂಶಿಕ ಗಣಾಧಿಪತಿ, 19ತ್ರಿಮೂರ್ತಿಗಳಿಂರಚಿಸಲ್ಪಟ್ಟ’ಅಜಂನಿರ್ವಿಕಲ್ಪಂ…..ಸ್ತೋತ್ರ ಪೂಜಿತ, 20ಬ್ರಹ್ಮಚರ್ಯವುಳ್ಳಸಂಸಾರಿ, 21’ಗಜವದನ ಹೇರಂಭ’ ಆದಿಯಾಗಿ 126ಭಾಷೆಗಳಲ್ಲಿ 8 ಕೋಟಿ ಭಕ್ತಿಗೀತೆಯುಳ್ಳ ಏಕೈಕದೈವ!. ಮೇಲ್ಕಂಡ 21ದೃಷ್ಟಾಂತದಿಂದ ತಿಳಿಯಬೇಕಾದ್ದು ಇಷ್ಟೆ: ಗಣೇಶನಿಗೆ ನಿಷ್ಕಪಟ ಭಕ್ತಿಯಿಂಭಜಿಸಿ, ನಿಸ್ವಾರ್ಥದಿಂಪೂಜಿಸಿ 21 ನಮಸ್ಕಾರದಿಂದ ಗರಿಕೆ ನೀಡಿದರೆ ಸಾಕು ಉದ್ಯೋಗ ಆರೋಗ್ಯ ಆಹಾರ ಆನಂದ ಜೀವನ ದೊರಕಿ, ಸುಖ ಶಾಂತಿ ನೆಮ್ಮದಿ ಸಿಗುವುದರ ಜತೆಗೆ ಅಕಾಲದ ದುರ್‌ಮರಣ-ದುರಂತ ತಪ್ಪಿಸಿಕೊಂಡು ಸಕಾಲದ ಅಂತ್ಯ-ಮುಕ್ತಿ ಕಾಣಬಹುದು! ನನ್ನದೇನಿದೆ ಬೆನಕ? ನಿನ್ನದಹುದಿಹುದೆಲ್ಲ ಕೊನೆತನಕ!

admin
the authoradmin

6 Comments

  • 21 ನಮಸ್ಕಾರ ಮತ್ತು 21ರ ಇತರೆ ಮಹತ್ವ ಬಹಳ ಅರ್ಥಪೂರ್ಣವಾಗಿ ಬರೆದಿದ್ದಾರೆ. ನಮಗೆ ಈ ಬಗ್ಗೆ ತಿಳಿದಿರಲಿಲ್ಲ, ನಮಸ್ಕಾರ

    • 21 ನಮಸ್ಕಾರ ಮತ್ತು 21ರ ಇತರೆ ಮಹತ್ವ ಬಹಳ ಅರ್ಥಪೂರ್ಣವಾಗಿ ಬರೆದಿದ್ದಾರೆ. ನಮಗೆ ಈ ಬಗ್ಗೆ ತಿಳಿದಿರಲಿಲ್ಲ, ನಮಸ್ಕಾರ

  • ಸ್ವಾನಂದ ಲೋಕದ ಮೊಟ್ಟಮೊದಲ ಲೇಖನ ಮತ್ತು 21ಲೋಕದ ಮತ್ತು 22ನೇ ಲೋಕದ ಸಾಮ್ರಾಟ್‍ ಗಣೇಶನ ಬಗ್ಗೆಲ್ಲ ಬಹಳ ಅಪರೂಪದ ವಿದ್ಯಮಾನ ತಿಳಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದ ಸರ್

  • Very much knowledge about God Ganesha and swananda loka spirituality detailed information, 🙏 🙌 👌 😀 👏 ❤ 🙏

Leave a Reply