Latest

ಕುಶಾಲನಗರದಲ್ಲಿ  ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜನ್ಮದಿನದ ಅಂಗವಾಗಿ ಗೀತಗಾಯನ

ಜಿಎಸ್ಎಸ್ ರಚಿತ ಭಾವಗೀತೆಗಳು ಹೆಚ್ಚು ಜನಪ್ರಿಯತೆಗಳಿಸಿವೆ

ಕುಶಾಲನಗರ (ರಘುಹೆಬ್ಬಾಲೆ) :  ಕನ್ನಡ ಸಾಹಿತ್ಯದ ದಿಗ್ಗಜ ಕವಿ ಜಿ‌.ಎಸ್. ಶಿವರುದ್ರಪ್ಪ ಅವರು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹಾಗೂ ಓದುಗರಿಗೆಂದೇ ಸರಳವಾಗಿ ಬರೆಯುತ್ತಿದ್ದ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಜಿಎಸ್ಎಸ್ ರಚಿತ ಭಾವಗೀತೆಗಳು ಹೆಚ್ಚು ಜನಪ್ರಿಯತೆಗಳಿಸಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಆಶ್ರಯದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನೂರು ವರ್ಷಗಳ ಜನ್ಮದಿನದ ಅಂಗವಾಗಿ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಸಭಾಂಗಣದಲ್ಲಿ  ಏರ್ಪಡಿಸಿದ್ದ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜಿಎಸ್ಎಸ್ ಅವರ ಭಾವಗೀತೆಗಳು ಪ್ರಕೃತಿ, ಪ್ರೀತಿ, ಮಾನವೀಯತೆ ಮತ್ತು ದಾರ್ಶನಿಕತೆಯನ್ನು ಸರಳ ಹಾಗೂ ಮಧುರ ಶೈಲಿಯಲ್ಲಿ ಪ್ರತಿಬಿಂಬಿಸುತ್ತವೆ ಎಂದರು.

ಹೃದಯದ ಭಾವನೆಗಳು ಸಾಹಿತ್ಯ, ಸಂಗೀತ ಸಮ್ಮಿಲನವೆ ಭಾವಗೀತೆಯಾಗಿದೆ.ಭಾವಗೀತೆ ಎಂದಿಗೂ ಜನಮಾನಸದಲ್ಲಿ ಶಾಶ್ವತ ನೆಲೆ ಕಂಡುಕೊಂಡಿವೆ. ಜಿಎಸ್ಎಸ್ ಅವರ ನವೋದಯ ಕನ್ನಡದ ಭಾವಗೀತೆಗಳು ಬದುಕಿನ ಏರಿಳಿತಗಳನ್ನು ಒಳಗೊಂಡು, ಓದುಗರ ಮನಸ್ಸನ್ನು ಆಹ್ಲಾದ ಗೊಳಿಸುವುದಲ್ಲದೆ, ಸಹೃದಯರ ಮಾನಸಿಕ ಖಿನ್ನತೆಯನ್ನು ದೂರ ಮಾಡುವ ಜನ ಮಾರ್ಗದಲ್ಲಿ ನಿಲ್ಲುವ ಕವಿತೆಗಳಾಗಿವೆ ಎಂದರು.

ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕನ್ನಡದಲ್ಲಿ ಉತ್ತಮ ಭಾವಗೀತೆಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಸಂಗೀತ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ಮನದಲ್ಲಿ ಹುಟ್ಟುವ ಭಾವನೆಗಳ ಅಂತ್ಯವಿಲ್ಲದ ತಾಣವೇ ಭಾವಗೀತೆ. ಕರ್ನಾಟಕದಲ್ಲಿ ಮಾತ್ರ ಭಾವಗೀತೆ ಸುಗಮ ಸಂಗೀತದ ಜೊತೆ ಸೇರಿ ಶಾಸ್ತ್ರೀಯ ಸಂಗೀತವನ್ನು ತನ್ನೊಂದಿಗೆ ಬೆಸೆದುಕೊಂಡು ಉತ್ತಮ ನೆಲೆಯನ್ನು ಕಂಡುಕೊಂಡಿದೆ. ಮತ್ತೆ ಹಾಡಲು ಮತ್ತೆ ಕೇಳಲು ಹಿತವಾಗುವ ಭಾವ ಪ್ರಪಂಚಕ್ಕೆ ಕೊಂಡೊಯ್ಯುವುದೇ ಈ ಭಾವಗೀತೆಗಳು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ನಾಗೇಶ್ ವಹಿಸಿದ್ದರು.ಈ ಸಂದರ್ಭ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವ್ಯವಸ್ಥಾಪಕ ಅಬ್ದುಲ್ ಸಲಾಂ ರಾವತರ್, ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕಸಾಪ ಸಂಘಟನಾ ಕಾರ್ಯದರ್ಶಿ ದೇವರಾಜ್, ಪರಿಷತ್ತಿನ ನಿರ್ದೇಶಕಿ ಬಿ. ಬಿ. ಹೇಮಲತಾ, ಕಾರ್ಯದರ್ಶಿ ಟಿ. ವಿ. ಶೈಲಾ, ಕೋಶಾಧಿಕಾರಿ ಕೆ.ವಿ. ಉಮೇಶ್, ಪರಮೇಶ್ ಸಾಗರ್ ಪಾಲ್ಗೊಂಡಿದ್ದರು.

ನಂತರ  ಗೀತಗಾಯನ ಕಾರ್ಯಕ್ರಮದಲ್ಲಿ ಮಡಿಕೇರಿ ಆಕಾಶವಾಣಿ ಕೇಂದ್ರದ ನಾಗೇಶ್ ಭಟ್, ಚಿದ್ವಿಲಾಸ್, ರವಿ, ವೈಭವಿ ಭಟ್, ಶೇಖರ್ ಅವರು ಜಿಎಸ್ಎಸ್ ರಚಿತ ಭಾವಗೀತೆಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.

admin
the authoradmin

Leave a Reply

Translate to any language you want