LatestLife style

ಮೈಸೂರಿನಲ್ಲಿ ಗುಜರಾತಿನ ಮಣ್ಣಿನ ಮಡಿಕೆ, ಫಿಲ್ಟರ್  ಮಾರಾಟ ಭರಾಟೆ… ಇದು ಇಷ್ಟವಾಗುವುದು ಏಕೆ?

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮಣ್ಣಿನ ಮಡಿಕೆ ಅಥವಾ ಮಣ್ಣಿನಿಂದ ತಯಾರಿಸಿರುವ ಫಿಲ್ಟರ್ ಕಡೆಗೆ ಜನ ಮುಖ ಮಾಡುವುದು ಮಾಮೂಲಿಯಾಗಿದೆ. ಅದರಲ್ಲೂ ಇತ್ತೀಚೆಗೆ ಬಹಳಷ್ಟು ಮಂದಿ ಮಣ್ಣಿನಿಂದ ತಯಾರಿಸಿದ ವಸ್ತುಗಳನ್ನು ಬಳಕೆ ಮಾಡಲು ಆರಂಭಿಸಿದ್ದಾರೆ. ಬೇಸಿಗೆ ದಿನಗಳಲ್ಲಿ ನೀರನ್ನು ಮಣ್ಣಿನ ಮಡಿಕೆ ಅಥವಾ ಫಿಲ್ಟರ್ ಗಳಲ್ಲಿ ಸಂಗ್ರಹಿಸಿಟ್ಟರೆ ತಣ್ಣಗಿರುತ್ತದೆ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಎಂಬ ಕಾರಣಕ್ಕಾಗಿ ಜನ ಆ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ಮಣ್ಣಿನ ಫಿಲ್ಟರ್ ಗಳ ಮಾರಾಟವೂ ರಸ್ತೆ ಬದಿಗಳಲ್ಲಿ ಜೋರಾಗಿ ನಡೆಯುತ್ತಿದೆ.

ಸಾಮಾನ್ಯವಾಗಿ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದವರಿಗೆ, ಮೈಸೂರಿನಲ್ಲಿ ಓಡಾಡುವವರಿಗೆ ಅಲ್ಲಲ್ಲಿ ಜೋಡಿಸಿಟ್ಟಿರುವ ಸುಂದರ ಮಣ್ಣಿನ ಫಿಲ್ಟರ್ ಮತ್ತು ಮಡಿಕೆಗಳು ಕಾಣಸಿಗುತ್ತಿವೆ. ಬೇರೆ ದಿನಗಳಲ್ಲಿ ಇವು ಇರುತ್ತವೆಯಾದರೂ ಬೇಸಿಗೆ ಬರುತ್ತಿದ್ದಂತೆಯೇ ಬೇಡಿಕೆ ಹೆಚ್ಚುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರಗಿನಿಂದ ತರಿಸಿ ಮಾರಾಟ ಮಾಡುತ್ತಾರೆ. ಇತ್ತೀಚೆಗೆ ಜನ ಕೂಡ ಫ್ಯಾಷನ್ ಪ್ರಿಯರಾಗಿರುವುದರಿಂದ ಸಾದಾ ಮಣ್ಣಿನ ಫಿಲ್ಟರ್ ಬಯಸುವುದಕ್ಕಿಂತ ಹೆಚ್ಚಾಗಿ ಬಣ್ಣ, ಚಿತ್ರಗಳಿರುವುದನ್ನು ಬಯಸುವುದರಿಂದ ಅಂತಹ ಫಿಲ್ಟರ್ ಗಳು ಕೂಡ ಮಾರಾಟಕ್ಕೆ ಬರುತ್ತಿವೆ.

ನೋಡ ನೋಡುತ್ತಲೇ ಮೈಸೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಈಗ ಎಷ್ಟು ನೀರು ಕುಡಿದರೂ ದಾಹ ತಣಿಯದಂತಾಗಿದೆ. ಅದರಲ್ಲೂ ಫ್ರಿಡ್ಜ್ ನಲ್ಲಿಟ್ಟು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಜನಕ್ಕೆ ಗೊತ್ತಿರುವ ಕಾರಣದಿಂದಾಗಿ ಬೇಸಿಗೆಯ ದಿನಗಳಲ್ಲಿ ತಾವು ಕುಡಿಯಲು ಉಪಯೋಗಿಸುವ ನೀರನ್ನು ಮಣ್ಣಿನ ಫಿಲ್ಟರ್ ಗಳಲ್ಲಿ ತುಂಬಿಸಿಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಮಣ್ಣಿನ ಫಿಲ್ಟರ್ ಗಳಿಗೆ ಬೇಡಿಕೆ ಬಂದಿದ್ದು, ಒಂದಷ್ಟು ವ್ಯಾಪಾರಗಳು ನಡೆಯುತ್ತಿವೆ. ಇಷ್ಟಕ್ಕೂ ಇಲ್ಲಿ ವ್ಯಾಪಾರವಾಗುವ ಯಾವುದೇ ಮಣ್ಣಿನ ಫಿಲ್ಟರ್ ಗಳು ಸ್ಥಳೀಯವಾಗಲೀ ರಾಜ್ಯದಲ್ಲಿಯಾಗಲೀ ತಯಾರಾಗುತ್ತಿಲ್ಲ. ಇವುಗಳೆಲ್ಲವೂ ಗುಜರಾತ್ ನಿಂದ ಬರುತ್ತಿವೆ. ಮಾರಾಟವನ್ನು ಅಲ್ಲಿನವರೇ ಮಾಡುತ್ತಿರುವುದು ಗಮನಾರ್ಹವಾಗಿದೆ.

ಇನ್ನು ದೂರದ ಗುಜರಾತಿನಿಂದ ಬರುವ ಮಣ್ಣಿನ ಮಡಿಕೆ, ಫಿಲ್ಟರ್ ಗಳು  ನೋಡಲು ಆಕರ್ಷಕವಾಗಿರುವ ಕಾರಣ ಜನರು ಅದನ್ನೇ ಕೇಳುತ್ತಾರೆ. ಸ್ಥಳೀಯವಾಗಿ ಮೈಸೂರು ಜಿಲ್ಲೆಯಲ್ಲಿ ಮಡಿಕೆ ತಯಾರಿಸಿ ತಂದು ಮಾರಾಟ ಮಾಡುತ್ತಿದ್ದರೂ ಅವು ಶುಭ ಅಶುಭ ಕಾರ್ಯಗಳಿಗಷ್ಟೆ ಸೀಮಿತವಾಗಿ, ಮಾರುಕಟ್ಟೆ ಪ್ರದೇಶಗಳಲ್ಲಿ ಮಾತ್ರ ಮಾರಾಟವಾಗುತ್ತಿವೆ. ಆದರೆ ಆಕರ್ಷಕ ಮಡಿಕೆಗಳು ನಗರದ ಹಲವು ಕಡೆಗಳ ರಸ್ತೆ ಬದಿ, ಬೀದಿಗಳಲ್ಲಿ ಮಾರಾಟವಾಗುತ್ತಿವೆ.

ಗುಜರಾತಿನ ಮಣ್ಣಿನ ಮಡಿಕೆ ಮತ್ತು ಫಿಲ್ಟರ್ ಗಳನ್ನು ಜನ ಏಕೆ ಇಷ್ಟ ಪಡುತ್ತಾರೆ ಎಂದರೆ ಅವುಗಳು ಇವತ್ತಿನ  ಫ್ಯಾಷನ್ ಪ್ರಿಯರನ್ನು ಸೆಳೆಯುವಂತಿವೆ. ಜತೆಗೆ ಮನೆಯ ಅಲಂಕಾರ ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿವೆ. ಇವು ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳಿಂದ ಕೂಡಿ ವಿಭಿನ್ನವಾಗಿವೆ.  ಸುರಕ್ಷತೆಗಾಗಿ ಸ್ಟಾಂಡ್‌ನ್ನು ಕೂಡ ಅಳವಡಿಸಲಾಗಿದೆ. 10ಲೀ, 20 ಲೀಟರ್ ನೀರು ತುಂಬುವ ಸಾಮರ್ಥ್ಯ ಹೊಂದಿವೆ ಹೀಗಾಗಿ ಅವುಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ.

ಸಾಮಾನ್ಯವಾಗಿ ಮಣ್ಣಿನ ಮಡಿಕೆಯನ್ನು ಹಿಂದಿನಿಂದಲೂ ಬಳಕೆ ಮಾಡುತ್ತಾ ಬರಲಾಗಿದ್ದು, ಇದರಲ್ಲಿ ನೀರನ್ನು ಹಾಕಿಟ್ಟರೆ ತಣ್ಣಗಿರುತ್ತದೆ. ಬಿಸಿಲಿನ ಸಂದರ್ಭ ದಾಹವಾದರೆ ಈ ನೀರನ್ನು ಕುಡಿದರೆ ನೆಮ್ಮದಿಯಾಗುತ್ತದೆ. ಮಣ್ಣಿನ ಮಡಿಕೆಯಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.  ಇದೆಲ್ಲ ಕಾರಣಕ್ಕೆ ಮಣ್ಣಿನ ಫಿಲ್ಟರ್ ಗಳಿಗೆ ತುಸು ದರ ಹೆಚ್ಚಿದ್ದರೂ ಕೂಡ ಜನ ಖರೀದಿಸುತ್ತಿದ್ದಾರೆ. ಹೀಗಾಗಿ ನಗರದ ಕುಕ್ಕರಹಳ್ಳಿ ಕೆರೆಯ ಸಿಗ್ನಲ್ ಬಳಿ, ಬಲ್ಲಾಳ್ ಸರ್ಕಲ್, ಬೆಂಗಳೂರು ರಸ್ತೆ, ಹುಣಸೂರು ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಇವುಗಳ ಮಾರಾಟ ನಡೆಯುತ್ತಿದೆ. ಇಲ್ಲಿ ಮಾರಾಟ ಮಾಡುವವರು ವರ್ಷಪೂರ್ತಿ ವಾಸ್ತವ್ಯ ಹೂಡಿ ವ್ಯಾಪಾರ ನಡೆಸುತ್ತಾರೆ.

ಗುಜರಾತ್‌ನಿಂದ ಲಾರಿಗಳಲ್ಲಿ ಮಡಿಕೆಗಳನ್ನು ತರಲಾಗುತ್ತದೆ. ಒಮ್ಮೆ ಒಂದು ಲಾರಿಯಲ್ಲಿ  ಸಾವಿರ ಮಡಕೆಗಳನ್ನು ತರಲಾಗುತ್ತದೆ ಆದರೆ ದೂರದ ಗುಜರಾತಿನಿಂದ ಮೈಸೂರಿಗೆ ತರುವ ವೇಳೆ ಕೆಲವು ಮಡಿಕೆಗಳು ಒಡೆದು ಹೋಗುವ ಅಪಾಯವಿರುತ್ತದೆ. ಜತೆಗೆ ಸಾಗಾಣಿಕೆ ವೆಚ್ಚವೂ ಹೆಚ್ಚಾಗುವುದರಿಂದ ಅನಿವಾರ್ಯವಾಗಿ ಮಡಿಕೆಗಳ ಬೆಲೆಯನ್ನು ಹೆಚ್ಚಳ ಮಾಡಬೇಕಾಗುತ್ತದೆ. ಕೆಲವೊಮ್ಮೆ ಮಡಿಕೆ ಬೆಲೆ ಕೇಳಿ ಹೆಚ್ಚಾಯಿತೆಂದು ಹೋಗುವವರು ಇಲ್ಲದಿಲ್ಲ.

ಬೇಸಿಗೆಯಲ್ಲಿ ಮಣ್ಣಿನ ಮಡಿಕೆ, ಫಿಲ್ಟರ್ ಗಳ ಉಪಯೋಗವನ್ನು ಅರಿತವರು ಇದರ ಬೆಲೆ ಬಗ್ಗೆ ತಲೆಕೆಡಿಸಿಕೊಳ್ಳದೆ  ಖರೀದಿಸುತ್ತಾರೆ. ಇದರಲ್ಲಿ ನೀರು ಸಂಗ್ರಹಿಸಿಟ್ಟು ಕುಡಿಯುವುದರಿಂದ ಶೀತ ಕೆಮ್ಮು ಬರುವುದಿಲ್ಲ ಜತೆಗೆ ಆರೋಗ್ಯಕ್ಕೂ ಹಿತಕರ ಎಂಬ ನಂಬಿಕೆಯಿಂದ ಜನ ಮಣ್ಣಿನ ಫಿಲ್ಟರ್ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದ ಗುಜರಾತಿನ ಮಣ್ಣಿನ ಮಡಿಕೆ ಮತ್ತು ಫಿಲ್ಟರ್ ಮೈಸೂರಿಗರು ಸೇರಿದಂತೆ ಎಲ್ಲರ ಮನೆಗಳಲ್ಲಿ ಜಾಗ ಪಡೆಯುವಂತಾಗಿದೆ…

 

B M Lavakumar

 

 

admin
the authoradmin

Leave a Reply

Translate to any language you want