ಬೆಳಕಿನ ಹಬ್ಬ ದೀಪಾವಳಿಯನ್ನು ದೀಪಹಚ್ಚಿ, ಪಟಾಕಿ ಸಿಡಿಸಿ, ಹಬ್ಬದೂಟ ಮಾಡಿ ಸಂಭ್ರಮಿಸಿ ಹಬ್ಬಾಚರಣೆ ಮಾಡುವುದು ಎಲ್ಲೆಡೆ ನಡೆಯುತ್ತದೆ. ಆದರೆ ಹಬ್ಬದ (ಬಲಿಪಾಡ್ಯಮಿ) ಮಾರನೆಯ ದಿನ ಚಾಮರಾಜನಗರ ಜಿಲ್ಲೆಯ ಗಡಿಭಾಗ ತಮಿಳುನಾಡಿನ ತಾಳವಾಡಿ ಫಿರ್ಕಾ ವ್ಯಾಪ್ತಿಯ ಗುಮಟಾಪುರದಲ್ಲಿ ನಡೆಯುವ ಸೆಗಣಿಯಲ್ಲಿ ಬಡಿದಾಡುವ ಗೋರೆ ಹಬ್ಬ ವಿಭಿನ್ನ, ವಿಶಿಷ್ಟವಾಗಿ ಗಮನಸೆಳೆಯುತ್ತದೆ.

ಗೋರೆ ಹಬ್ಬದಲ್ಲಿ ಮೇಲ್ನೋಟಕ್ಕೆ ಸೆಗಣಿಯಲ್ಲಿ ಬಡಿದಾಡುವುದು ಕಂಡು ಬರುತ್ತದೆಯಾದರೂ ಅದರಾಚೆಗೆ ಈ ಹಬ್ಬಕ್ಕೆ ತನ್ನದೇ ಆದ ಹಿನ್ನಲೆ, ಸಂಪ್ರದಾಯವಿರುವುದನ್ನು ತಳ್ಳಿಹಾಕುವಂತಿಲ್ಲ. ಇಲ್ಲಿ ಮುಖ್ಯವಾಗಿ ಗ್ರಾಮದ ಯುವಕರು ಒಬ್ಬರಿಗೊಬ್ಬರು ಪರಸ್ಪರ ಸಗಣಿ ಎರಚಾಡಿ, ಸಗಣಿ ಗುಡ್ಡೆಯಲ್ಲೇ ಉರುಳಾಡಿ ಸಂಭ್ರಮಿಸುವ ಮೂಲಕ ಸೌಹಾರ್ದತೆ ಮೆರೆಯುತ್ತಾರೆ ಎನ್ನುವುದಷ್ಟೇ ಕಾಣಿಸಿದರೂ ಅದಕ್ಕಿಂತ ಹೆಚ್ಚಾಗಿ ಅದಕ್ಕೊಂದು ಇತಿಹಾಸವೂ ಇದೆ ಎನ್ನುವುದು ಅಷ್ಟೇ ಸತ್ಯ.
ಇದನ್ನೂ ಓದಿ: ದೀಪದಿಂದ ದೀಪಹಚ್ಚುವ ದೀಪಾವಳಿ ಹಬ್ಬ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ ಬನ್ನಿರಿ
ಸೆಗಣಿಯಲ್ಲಿ ಬಡಿದಾಡುಕೊಳ್ಳುವ ಹಬ್ಬದ ಆಚರಣೆಯ ಹಿಂದೆ ಕಥೆಯೊಂದಿದೆ. ಅದು ಏನೆಂದು ನೋಡುವುದಾದರೆ.. ಗುಮಟಾಪುರ ಗ್ರಾಮದ ಗೌಡನ ಮನೆಗೆ ವ್ಯಕ್ತಿಯೊಬ್ಬ ಕೆಲಸಕ್ಕೆ ಸೇರಿದ್ದನು. ಈತ ಇದ್ದಕ್ಕಿದ್ದಂತೆ ಮರಣ ಹೊಂದಿದನು. ಆತ ಬಳಸುತ್ತಿದ್ದ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತು. ಇದಾದ ಕೆಲ ದಿನಗಳ ನಂತರ ಗೌಡನ ಎತ್ತಿನ ಗಾಡಿ ಜೋಳಿಗೆ ಎಸೆಯಲಾಗಿದ್ದ ತಿಪ್ಪೆಯಲ್ಲಿ ಹಾದು ಹೋಗುವಾಗ ಎತ್ತಿನ ಗಾಡಿಯ ಚಕ್ರಕ್ಕೆ ಆ ಜೋಳಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ಈ ವೇಳೆ ಸಮೀಪದಲ್ಲಿಯೇ ಇದ್ದ ಶಿವಲಿಂಗದಿಂದ ರಕ್ತ ಬರುತ್ತದೆ. ಅದೇ ದಿನ ರಾತ್ರಿ ಗೌಡರ ಕನಸಿನಲ್ಲಿ ದೇವರು ಕಾಣಿಸಿಕೊಂಡು ಈ ದೋಷ ನಿವಾರಣೆಗಾಗಿ ಗ್ರಾಮದಲ್ಲಿ ಗುಡಿಯೊಂದನ್ನು ನಿರ್ಮಿಸಬೇಕು. ದೀಪಾವಳಿ ಹಬ್ಬದ ಮರುದಿನ ಸೆಗಣಿ ಹಬ್ಬ ಆಚರಿಸಬೇಕು ಎಂದು ಹೇಳಿತಂತೆ.

ಹೀಗಾಗಿ ತಿಪ್ಪೆ ಸ್ಥಳದಲ್ಲಿ ಬೀರಪ್ಪನ ಗುಡಿ ಕಟ್ಟಿ ಸೆಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುವುದು ಪ್ರಚಲಿತದಲ್ಲಿರುವ ಕಥೆಯಾಗಿದೆ. ಹಬ್ಬದ ದಿನದಂದು ಗ್ರಾಮದ ಯುವಕನೊಬ್ಬನನ್ನು ಕತ್ತೆ ಮೇಲೆ ಕೂರಿಸಿಕೊಂಡು ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕತ್ತೆ ಮೇಲೆ ಕುಳಿತ ಈತನನ್ನು ಚಾಡಿಕೋರ ಎಂದು ಸಂಭೋದಿಸಲಾಗುತ್ತದೆ. ಮೆರವಣಿಗೆ ವೇಳೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತದೆ. ಇದೂ ಕೂಡ ಹಬ್ಬದ ಆಚರಣೆಯ ಮತ್ತೊಂದು ವಿಶೇಷ. ಅದು ಏನೆಂದರೆ? ಇದಕ್ಕೂ ಮುನ್ನ ಗೋವುಗಳು ಹಾಕಿದ ಸೆಗಣಿಯನ್ನು ಗ್ರಾಮದ ದೇವಸ್ಥಾನದ ಬಳಿ ಸುರಿಯಲಾಗುತ್ತದೆ. ಮತ್ತೊಂದೆಡೆ ಮಕ್ಕಳು ಮನೆಗಳಿಂದ ಬೇಡಿ ತಂದ ಎಣ್ಣೆಯಿಂದ ಪೂಜೆ ಸಲ್ಲಿಸಿ, ನಂತರ ಸಮೀಪದಲ್ಲಿಯೇ ಇರುವ ಕಾರಪ್ಪ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ದೀಪಾವಳಿಯಿಂದ ಬಾಳು ಕತ್ತಲಾಗದಿರಲಿ… ಪಟಾಕಿ ಸಿಡಿಸುವ ಮುನ್ನ ಎಚ್ಚರ..

ಚಾಡಿಕೋರ ಯುವಕನಿಗೆ ಹುಲ್ಲಿನ ಮೀಸೆ, ಗಡ್ಡ ಮಾಡಿ ಕಟ್ಟಿ ಬಳಿಕ ಆತನನ್ನು ಕತ್ತೆಯೊಂದರಲ್ಲಿ ಕೂರಿಸಿ ಗ್ರಾಮದ ಕೆರೆಯಿಂದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಿ ಬೀರೇಶ್ವರನ ದೇವಸ್ಥಾನದವರೆಗೂ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಈ ವೇಳೆ ಕತ್ತೆ ಮೇಲೆ ಕುಳಿತಿದ್ದ ಚಾಡಿಕೋರನಿಗೆ ಅಶ್ಲೀಲ ಪದಗಳಿಂದ ನಿಂದಿಸುತ್ತಾರೆ. ನಂತರ ಆತನ ಹುಲ್ಲಿನ ಮೀಸೆ ಹಾಗೂ ಗಡ್ಡ ತೆಗೆದು ಸೆಗಣಿ ರಾಶಿಯಲ್ಲಿ ಇರಿಸಿ ಬೀರೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಸೆಗಣಿಯಾಟ ನಡೆಯುತ್ತದೆ. ಈ ವೇಳೆ ಗ್ರಾಮದ ಯುವಕರು ಸೆಗಣಿಯನ್ನು ಉಂಡೆ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿ, ಸೆಗಣಿ ರಾಶಿಯಲ್ಲಿ ಉರುಳಾಡುತ್ತಾರೆ.

ಈ ವಿಶಿಷ್ಟ ಆಚರಣೆ ಮುಗಿದ ನಂತರ ಚಾಡಿಕೋರ ಗುಡ್ಡದಲ್ಲಿ ಹಿಡಿಕಟ್ಟೆಗಳಿಂದ ಗೊಂಬೆಯೊಂದನ್ನು ನಿರ್ಮಿಸಿ ಸುಡುತ್ತಾರೆ. ಆ ನಂತರ ಸೆಗಣಿಯಾಟದಲ್ಲಿ ಪಾಲ್ಗೊಂಡಿದ್ದ ಯುವಕರು ಕೆರೆಗೆ ತೆರಳಿ ಸ್ನಾನ ಮಾಡಿ ಮನೆಗಳಿಗೆ ತೆರಳುವ ಮೂಲಕ ಗೋರೆ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಗುಮ್ಮಟಾಪುರದ ಗೋರೆ ಹಬ್ಬವು ಎಲ್ಲರನ್ನು ಸೆಳೆಯುವ ವಿಶಿಷ್ಟ, ವಿಭಿನ್ನ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಕತ್ತಲಲ್ಲಿದ್ದ ಚಾಮರಾಜನಗರದ ಏಳು ಗ್ರಾಮಗಳಲ್ಲಿ ಈ ಬಾರಿ ದೀಪಾವಳಿ ಆಚರಣೆ…ಏಕೆ ಗೊತ್ತಾ?
B M Lavakumar








