ಗುಮ್ಮನಕೊಲ್ಲಿಯ ಕಲಿಕಾಹಬ್ಬದಲ್ಲಿ ಸಂಭ್ರಮಿಸಿದ ಮಕ್ಕಳು… ಸೃಜನಶೀಲತೆ ಬೆಳೆಸಲು ಕಲಿಕಾ ಹಬ್ಬ ಸಹಕಾರಿ

ಕುಶಾಲನಗರ (ರಘುಹೆಬ್ಬಾಲೆ) : ತಾಲ್ಲೂಕಿನ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕುಶಾಲನಗರ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬವು ಸಂಭ್ರಮ, ಸಡಗರದಿಂದ ನಡೆಯಿತು.
1 ರಿಂದ 5 ನೇ ತರಗತಿಯವರೆಗಿನ ಮಕ್ಕಳಿಗೆ ಮೂಲಭೂತ – ಸಾಕ್ಷರತೆ- ಸಂಖ್ಯಾಶಾಸ್ತ್ರ (ಎಫ್ ಎಲ್ ಎನ್ ) ಸಂಬಂಧಿಸಿದಂತೆ ಏರ್ಪಡಿಸಿದ್ದ ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳುಳ್ಳ ಚಟುವಟಿಕೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ವಿವಿಧ ಪ್ರಾಥಮಿಕ ಶಾಲೆಗಳಿಂದ ಶಿಕ್ಷಕರ ಜತೆ ಆಗಮಿಸಿದ್ದ ಮಕ್ಕಳು ತಾವು ಕಲಿತ್ತಿದ್ದ ವಿವಿಧ ಅಭ್ಯಾಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಲಿಕಾ ಹಬ್ಬದಲ್ಲಿ ಶಿಕ್ಷಕರು,ಮಕ್ಕಳು ಹಾಗೂ ಪೋಷಕರು ಕಾಗದದ ಟೋಪಿ ಧರಿಸಿ ಗಮನ ಸೆಳೆದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಕಲಿಕಾ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಮಕ್ಕಳ ಕಲಿಕಾ ಹಬ್ಬ ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳಲ್ಲಿ ಸಂತಸದಾಯಕ ಕಲಿಕೆಯ ಮೂಲಕ ಹೆಚ್ಚು ಜ್ಞಾನಾರ್ಜನೆಗೆ ಸಹಕಾರಿಯಾಗಿದೆ ಎಂದು ಹೇಳಿದರು.ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರೊಂದಿಗೆ ಪಾಲಕರು ಮತ್ತು ಸಮುದಾಯ ಒಟ್ಟಾಗಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಟಿ.ಈ.ವಿಶ್ವನಾಥ್ ಮಾತನಾಡಿ, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಓದು, ಬರವಣಿಗೆ ಮತ್ತು ಗಣಿತದ ಮೂಲಭೂತ ಕೌಶಲಗಳನ್ನು ಬಲಪಡಿಸುವುದೇ ಎಫ್‌ಎಲ್‌ಎನ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಬೆಳೆಸಲು ಮಕ್ಕಳ ಕಲಿಕಾ ಹಬ್ಬ ಸಹಕಾರಿಯಾಗಿದೆ. ಶೈಕ್ಷಣಿಕ ಪರಿಸರದ ಬೆಂಬಲ ಹಾಗೂ ಸಮುದಾಯದ ಸಹಭಾಗಿತ್ವ ವ್ಯವಸ್ಥೆ ಗಟ್ಟಿಯಾದರೆ ಮಕ್ಕಳಿನ ಕಲಿವಿನ ಫಲ ವೃದ್ಧಿಯಾಗುತ್ತದೆ ಎಂದರು.

ಶಾಲಾ ಮುಖ್ಯ ಶಿಕ್ಷಕಿ ಎಚ್.ಎಚ್.ಸಾಕಮ್ಮ ಮಾತನಾಡಿ, ವಿದ್ಯಾರ್ಥಿಗಳ ಕಲಿಕಾ ಮಟ್ಡವನ್ನು ಉತ್ತಮಪಡಿಸಲು ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ವಿಶಿಷ್ಡ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಕ್ರಿಯಾಶೀಲ ಕಲಿಕಾ ಪ್ರೇರಣೆಯೊಂದಿಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಹಕಾರಿಯಾಗಿವೆ .ಮಕ್ಕಳು ಕೇಳುವ ಪ್ರಶ್ನೆಯು ಪ್ರಜ್ಞೆಯಾಗಲಿ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಬಿ.ಜಿ.ರಮ್ಯ ಅಧ್ಯಕ್ಷತೆ ವಹಿಸಿದ್ದರು. ಸೋಮವಾರಪೇಟೆ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕಿ ಎಚ್.ಎಸ್.ಉಮಾದೇವಿ, ಶಿಕ್ಷಕರ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಎಸ್.ಆರ್.ಶಿವಲಿಂಗ, ಗೊಂದಿಬಸವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ, ಊರ್ದು ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶಾಂತಲಾ, ಬೈಚನಹಳ್ಳಿ ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮಿ, ನಿವೃತ್ತ ಶಿಕ್ಷಕಿ ರಾಧಮ್ಮ ,ಶಿಕ್ಷಕರಾದ ಕೆ.ಎ.ತಾರಾ, ಟಿ.ಕೆ.ವನಜಾಕ್ಷಿ, ಎನ್.ಎನ್.ಭಾರತಿ, ಅಜಿತ್ ಪಾಲ್ಗೊಂಡಿದ್ದರು. ಇದೇ ಸಂದರ್ಭ ಶಾಲಾ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.







