ಗುರುವಿಲ್ಲದ ಜ್ಞಾನ, ದಿಕ್ಕಿಲ್ಲದ ನಾವೆ… ಜ್ಞಾನವೇ ಬೆಳಕು, ಗುರುವೇ ಅದರ ದೀಪ… ಇದು ಗುರುಪೂರ್ಣಿಮೆ ವಿಶೇಷ..!

ಅಕ್ಷರದ ಕಾಳುಗಳನ್ನು ಎದೆಯಲ್ಲಿ ಬಿತ್ತಿದ ಅಕ್ಷರ ಬ್ರಹ್ಮರು, ಅರಿವೇ ಮಹಾಗುರು ಬದುಕ ಬೆಳಗಲು ದಾರಿ ತೋರುವ ದಾರಿದೀಪಗಳು, ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ, ಗುರುಗಳಾದವರು ತಾಯಿಯಂತೆ ಕಾರುಣ್ಯದ ಕಣ್ಣಿನಿಂದ ಅಕ್ಕರೆಯ ಬಸಿದು, ತಂದೆಯಂತೆ ಜವಾಬ್ದಾರಿ ಕಲಿಸಿ ಕಲಿಕಾರ್ಥಿಗಳನ್ನು ಒಂದು ಬದುಕಿನ ದಡ ಮುಟ್ಟಿಸಲು ಸದಾಕಾಲ ಹಂಬಲಿಸುವ ಹಾಗೂ ತಮ್ಮ ಸ್ವಂತ ಮಕ್ಕಳಿಗಿಂತ ವಿದ್ಯಾರ್ಥಿಗಳಿಗಾಗಿ ಜೀವವೀಣೆ ಮಿಡಿದು ಜೀವನ ಸಂಗೀತವನ್ನು ನುಡಿಸುವ ಗಾನ ಗಂಧರ್ವರು ಗುರುಗಳು ಈ ಎಲ್ಲಾ ಮಾತುಗಳು ಉಲ್ಲೇಖವಾಗಲು ಗುರುಗಳ ಮಹತ್ವ, ಅವರ ಮಹಿಮೆ ಎದ್ದು ನಿಲ್ಲುತ್ತದೆ.
ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ ಎಂಬ ಮಾತು ಕೂಡ ಗುರುವಿನ ಸಾಮೀಪ್ಯದಿಂದ ಕಂಡುಕೊಳ್ಳ ಬೇಕಾಗಿರುವ ಬದುಕಿನ ಅಸ್ಮಿತೆಯನ್ನು ಸಾದರಪಡಿಸುತ್ತದೆ. ಅಂತೆಯೇ ಗುರು ಕಾರುಣ್ಯವಿಲ್ಲದೆ ಗುರಿ ತಲುಪಲಾಗದು ಅದಕ್ಕಾಗಿಯೇ ಎರಡು ಕೈಗಳನ್ನು ಜೋಡಿಸಿ ಏಕೋ ಭಾವದಿಂದ ತನ್ಮಯತೆಯಲ್ಲಿ ಮುಳುಗಿ ಬೇಡುವ ಹೆಬ್ಬಯಕೆ ಶ್ರೀ ಗುರುವೇ ಕೃಪೆಯಾಗು, ಅಲ್ಲದೆ ಆಚಾರ್ಯ ದೇವೋಭವ ಎಂಬ ಮಾತು ಕೂಡ ಗುರುದೇವರಿಗೆ ಸಮ ಎಂದು ಹೇಳಿ ಗುರುಗಳ ಸರ್ವ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತವೆ.
ಗುರು ಎಂಬ ಸಂಸ್ಕೃತ ಪದದಲ್ಲಿ ಗು ಎಂದರೆ ಕತ್ತಲು, ರು ಎಂದರೆ ದೂರ ಮಾಡುವ ಅಥವಾ ಕಳೆಯುವ ಅಂದರೆ ಅಂತರಂಗದಲ್ಲಿ ತುಂಬಿರುವ ಕಗ್ಗತ್ತಲನ್ನು ದೂರ ಮಾಡಿ ಸುಜ್ಞಾನದ ದೀವಿಗೆಯನ್ನು ಬೆಳಗಿಸುವ ದಾರಿ ದೀಪವೇ ಗುರು. ಅಂತೆಯೇ ಗುರುವನ್ನು ಶಿಕ್ಷಕ, ಉಪಾಧ್ಯಾಯ, ಮೇಷ್ಟ್ರು, ಅಧ್ಯಾಪಕ, ಕಲಿಸುವಾತ, ಮಾರ್ಗದರ್ಶಕ ಇತ್ಯಾದಿ ಹೆಸರುಗಳಿಂದಲೂ ಕರೆದರೂ ಗುರು ಎಂಬ ಪದವೇಯುಕ್ತವಾಗಿರುವುದು. ಆದರೆ ಇಂದು ಗುರು ಎಂಬ ಸಭ್ಯ ಪದವನ್ನುಅಸಭ್ಯಗೊಳಿಸಿ ಸಂಕುಚಿತ ಅರ್ಥವಾಗಿ ಬಳಸಲಾಗುತ್ತಿರುವುದು ಮನಕೆ ದುಗುಡುವನ್ನು ತಂದಿದೆ.
ಏನಿದು ಗುರುಪೂರ್ಣಿಮೆ? ಇದರ ಮಹತ್ವವೇನು ಎಂಬುದನ್ನು ನೋಡಿದರೆ.. ಧಾರ್ಮಿಕ ನಂಬಿಕೆಯ ಪ್ರಕಾರ, ಮಹರ್ಷಿ ವೇದವ್ಯಾಸರು ಆಷಾಢಮಾಸದ ಹುಣ್ಣಿಮೆಯಂದು ಜನಿಸಿದರು. ಆ ದಿನವನ್ನು ಗುರುಪೂರ್ಣಿಮಾ ಅಥವಾ ವ್ಯಾಸಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ವೇದವ್ಯಾಸರು ಅನೇಕ ವೇದಗಳು ಮತ್ತು ಪುರಾಣಗಳನ್ನು ರಚಿಸಿದ್ದಾರೆ. ಸನಾತನ ಧರ್ಮದಲ್ಲಿ, ಮಹರ್ಷಿ ವ್ಯಾಸರನ್ನು ದೇವರರೂಪವೆಂದು ಪರಿಗಣಿಸಲಾಗುತ್ತದೆ. ಮಹರ್ಷಿ ವೇದವ್ಯಾಸರು ಬಾಲ್ಯದಿಂದಲೂ ಆಧ್ಯಾತ್ಮಿಕತೆಯಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಮಹರ್ಷಿ ವೇದವ್ಯಾಸರು ಆಷಾಢ ಮಾಸದ ಹುಣ್ಣಿಮೆಯಂದು ತಮ್ಮ ಶಿಷ್ಯರು ಮತ್ತು ಋಷಿಗಳಿಗೆ ಶ್ರೀಮದ್ಭಾಗವತ ಪುರಾಣದ ಜ್ಞಾನವನ್ನು ನೀಡಿದರು ಎಂದು ಹೇಳಲಾಗುತ್ತದೆ. ಅಂದಿನಿಂದ, ಮಹರ್ಷಿವ್ಯಾಸರ ಶಿಷ್ಯರು ಈ ದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದರು, ಇದನ್ನುಇಂದಿಗೂ ಅನುಸರಿಸಲಾಗುತ್ತದೆ.
ಗುರುಪೂರ್ಣಿಮೆ (ವ್ಯಾಸಪೂರ್ಣಿಮೆ) ಅಂದರೆ ಶಿಷ್ಯನೋರ್ವನ ಜೀವನದಲ್ಲಿ ಬರುವಂತಹ ಮಹತ್ವದ ದಿನ. ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರ ತರುವ, ಅವನಿಂದ ಅವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟ ಮುಕ್ತ ಮಾಡುವವರು ಗುರುಗಳೇ. ಇಂತಹ ಪರಮ ಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ. (10 ಜುಲೈ, 2025, ಗುರುವಾರದಂದು) ನಾವೆಲ್ಲರೂ ಕೃತಜ್ಞರಾಗಿ ಗುರುಪೂರ್ಣಿಮೆಯನ್ನು ಆಚರಿಸೋಣ
ಗುರು ಎಂದರೆ ಈಶ್ವರನ ಸಗುಣರೂಪ ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಇಂತಹ ಮಹಾನ್ಗುರುಗಳ ಋಣವನ್ನು ತೀರಿಸುವುದು ಅಸಾಧ್ಯ. ಆದರೂ ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ. ನಮ್ಮ ಹುಟ್ಟಿನಿಂದ ಸಾವಿನವರೆಗೆ ಹಲವು ಗುರುಗಳು ನಮ್ಮ ಜೀವನದಲ್ಲಿ ಬಂದು ಒಂದಲ್ಲಾ ಒಂದು ರೀತಿಯಲ್ಲಿ ಬದುಕಿನ ಪಾಠವನ್ನು ಹೇಳಿ ಕೊಟ್ಟು ತೀರಿಸಲಾರದಷ್ಟು ಋಣವನ್ನು ನಮ್ಮ ಮೇಲೆ ಹೊರೆಸುತ್ತಾರೆ. ಅದಕ್ಕಾಗಿಯೇ ಹೇಳಿರುವುದು ಏಕವರ್ಣಂ ಕಲಿಸಿದಾತ ಗುರು ಎಂದು ಗುರುಗಳು ತಮ್ಮ ಶಿಷ್ಯರಿಗೆ ನೈತಿಕತೆ, ಮಾನವೀಯತೆ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ನಡೆನುಡಿಯೊಂದಿಗೆ ಕಲಿಸುತ್ತಾರೆ. ಕಲಿಸಿ ಒಂದು ಮಗುವಿನ ಭರವಸೆಯ ಕುಡಿ ನೋಟವನ್ನು ಚಿಗುರಿಸಲು ಪೂರಕವಾಗುತ್ತಾರೆ.
ವೃತ್ತಿ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು. ಎಂಬುದನ್ನು ಸಾಧಕ ಗುರುಗಳು ತಿಳಿಸಿ ಕೊಡುತ್ತಾರೆ. ಅಂತೆಯೇ ಹಸಿ ಮಣ್ಣಿನಂತಿರುವ ನಮ್ಮನ್ನು ತಿದ್ದಿ ತೀಡಿ ರೂಪು ರೇಷೆಗಳನ್ನು ರೂಪಿಸಿ ಒಂದು ವ್ಯಕ್ತಿತ್ವವು ನಿರ್ಮಾಣವಾಗಲು ಕಾರಣೀ ಭೂತರಾಗಿರುತ್ತಾರೆ. ಗುರುಗಳು ಒಬ್ಬ ವ್ಯಕ್ತಿಯ ಮೇಲೆ ಪ್ರಭಾವ ಬೀರಿ ವ್ಯಕ್ತಿಯನ್ನು ಒಂದು ಶಕ್ತಿಯಾಗಿ ಮಾಡಿ ಆಗಾಧವಾದ ಸಾಧನೆಯ ಸೃಷ್ಟಿ ಮಹಾನ್ ಗುರುಗಳು ಹೇಗೆ ಎಂದರೆ ತಾವು ಮಾಡಲು ಸಾಧ್ಯವಿಲ್ಲ. ಸಾಧನೆಯನ್ನು ತನ್ನ ವಿದ್ಯಾರ್ಥಿಗಳು ಮಾಡಬೇಕು ಎಂಬ ಸಂಕಲ್ಪ ಬಲವನ್ನು ಅನುಗಾಲ ಹೊಂದಿರುತ್ತಾರೆ. ಅದರಂತೆ ಗುರುಗಳು ಸಂಕಲ್ಪ ಬಲವನ್ನು ಶಿಷ್ಯರಾದವರು ತಮ್ಮ ಮನೆಗಳಲ್ಲಿ ನೆಲೆಗೊಳಿಸಿಕೊಂಡು ಸಿದ್ದಿಪಡೆದದ್ದೆ ಅತ್ಯಾನಂದ ವಾಗುವುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ. ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ ಎಂಬ ವಾಸವಾಣಿ ನೆನಪಾಗುತ್ತಿದೆ. ಇಲ್ಲಿ ಗುಲಾಮ ಎಂದರೆ ಸೇವಕ ಎಂಬ ಸಂಕುಚಿತ ಅರ್ಥ ಎಂದು ಪರಿಭಾವಿಸದೆ ಗುರುವಿನ ಸಾಮಿಪ್ಯದಲ್ಲಿ ಸದಾಕಾಲ ಇರುವುದು ಎಂದರ್ಥ.
ಬಸವಣ್ಣನವರು ಶಿವಪಥವನ್ನು ಆರಿಯ ಬೇಕಾದರೆ ಗುರುಪಥವನ್ನು ಅರಿಯಬೇಕು ಎಂದಿದ್ದಾರೆ. ಶಂಕರಚಾರ್ಯರು ಹೇಳುವಂತೆ ಎಷ್ಟೇ ಸಂಪತ್ತಿದ್ದರೂ ಗುರುವಿನ ಬಗ್ಗೆ ಅಪಾರ ಶ್ರದ್ದೆ ನಂಬಿಕೆ ಇಲ್ಲದಿದ್ದರೆ ಆ ಸಂಪತ್ತೆಲ್ಲಾ ವ್ಯರ್ಥ ಎಂದಿದ್ದಾರೆ. ಈ ಎಲ್ಲಾ ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಮಹಾನ್ ಗುರುಗಳು ಚೇತನ ಗಳಾಗಿದ್ದು ಚೈತನ್ಯದ ಚಿಲುಮೆಯೂ ಆಗಿರುತ್ತಾರೆ. ಸದಾ ಉತ್ಸಾಹದಿಂದ ಇರುವ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಉತ್ಸಾಹದ ಅಮೃತಧಾರೆಯೆರೆದು ಸದಾ ಉತ್ಸಾಹದ ಬುಗ್ಗೆಗಳಾಗಿಸುವ ಜೀವಜಲದ ಜಲಪಾತವಾಗಿಸುವ ಶ್ರೇಷ್ಠ ಕಾರ್ಯ ನಿಜಕ್ಕೂ ಶ್ಲಾಘನೀಯ.