ಗುರುಗಳೇ ನಮ್ಮ ಬೆಳಕು – ಸರಗೂರಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮಕ್ಕೆ ಸಿದ್ಧತೆ

ಸರಗೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 1988 ರಿಂದ 1990 ರವರೆಗೆ ವಿದ್ಯಾಭ್ಯಾಸ ಮಾಡಿದ್ದ ಹಳೆಯ ವಿದ್ಯಾರ್ಥಿಗಳ ಸಮೂಹದಿಂದ ಜ.18ರಂದು ಪಟ್ಟಣದ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರನ್ನು ಸನ್ಮಾನಿಸುವ ಗುರುವಂದನಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ. ರವಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಂದನಾ ಕಾರ್ಯಕ್ರಮವು ಜ.18 ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಶ್ರೀ ಮಹದೇವಸ್ವಾಮಿಜಿಯವರು ವಹಿಸಲಿದ್ದು, ಒಟ್ಟು 22ಮಂದಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಅಭಿನಂದನೆ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

35ವರ್ಷಗಳ ಹಿಂದೆ ಒಂದೇ ತರಗತಿಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶಿಕ್ಷಣದ ಶಕ್ತಿ ಮತ್ತು ಗುರುಗಳ ತ್ಯಾಗದ ಪ್ರತೀಕವಾಗಿದೆ. ಶಿಕ್ಷಣದಿಂದ ಎಲ್ಲವೂ ಸಾಧ್ಯ ಎಂಬುದನ್ನು ನಮ್ಮ ಜೀವನವೇ ಸಾಬೀತುಪಡಿಸಿದೆ. ಇಂತಹ ಸಾಧನೆಗಳ ಹಿಂದಿರುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿ.ರವಿ ಹೇಳಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಹಳೆಯ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.ನಮ್ಮ ಹಳೆಯ ವಿದ್ಯಾರ್ಥಿಗಳಿಗೆ ನಮ್ಮ ಆಹ್ವಾನ ಪತ್ರಿಕೆ ತಲುಪದೇ ಇದ್ದವರು, ಇದೆ ಆಹ್ವಾನ ಪತ್ರಿಕೆ ಎಂದು ತಿಳಿದು ತಾವುಗಳೆಲ್ಲರೂ ಕುಟುಂಬ ಸಮೇತರಾಗಿ ಬರಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಬಗ್ಗೆ ಕುರಿತು ಮಾತನಾಡಿದ ವೈದ್ಯಾಧಿಕಾರಿ ಡಾ. ಸೋಮಣ್ಣ, ನಮ್ಮೊಂದಿಗೆ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡಿದ ಸ್ನೇಹಿತರು ಇಂದು ವೈದ್ಯರು, ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದಲೇ ಹಳೆಯ ವಿದ್ಯಾರ್ಥಿಗಳಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಕುಟುಂಬ ಸಮೇತರಾಗಿ ಎಲ್ಲರೂ ಭಾಗವಹಿಸಿ, ಗುರುಗಳಿಗೆ ವಂದನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಸಾರ್ಥಕಗೊಳಿಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ. ರವಿ, ವೈದ್ಯಾಧಿಕಾರಿ ಇಟ್ನ ಡಾ” ಸೋಮಣ್ಣ ಸರಗೂರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ್ (ವಿರೇಶ್), ಮಂಜುನಾಥ್, ಮಹದೇವಶೆಟ್ಟಿ, ಜಗದೀಶ್, ಇದಾಯತ್ ಉಲ್ಲ, ವೆಂಕಟೇಶ್, ಸತೀಶ್, ಅಶೋಕ್, ಉಪನ್ಯಾಸಕ ಚಂದ್ರಕುಮಾರ್ ಸೇರಿದಂತೆ ಹಲವು ಹಳೆಯ ವಿದ್ಯಾರ್ಥಿಗಳು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಗುರುವಂದನಾ ಕಾರ್ಯಕ್ರಮವು ಕೇವಲ ಸನ್ಮಾನವಲ್ಲ; ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಸಮಾಜಕ್ಕೆ ನೆನಪಿಸುವ ಸಾರ್ಥಕ ವೇದಿಕೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.








