ಹುಣಸೂರನ್ನು ಜಿಲ್ಲೆ ಮಾಡಿ ಅರಸು ಹೆಸರಿಡಿ ಸರ್ಕಾರಕ್ಕೆ ಎಂಎಲ್ಸಿ ಹೆಚ್.ವಿಶ್ವನಾಥ್ ಆಗ್ರಹ
ಗುಂಡಿ ಬಿದ್ದ ರಾಜ್ಯದ ಬಂಡ ನಾಯಕ... ವಚನಭ್ರಷ್ಟರಾಮಯ್ಯ...

ಹುಣಸೂರು: ಹುಣಸೂರು ತಾಲೂಕನ್ನು ಜಿಲ್ಲೆ ಎಂದು ಘೋಷಿಸಿ , ಮಾಜಿ ಮುಖ್ಯಮಂತ್ರಿ ದೇವರಾಜು ಅರಸುರವರ ಹೆಸರಿಡಬೇಕೆಂದು ಆಗ್ರಹಿಸಿದ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ (H Vishwanath) ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸದಾಕಾಲ ದೇವರಾಜ ಅರಸುರವರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳು ಜಾರಿಯಾಗುತ್ತಿಲ್ಲ, ಆದರೆ ದೇವರಾಜ ಅರಸುರವರ ಕಾರ್ಯಕ್ರಮಗಳ ದೇಶ ಹಾಗೂ ರಾಜ್ಯದಲ್ಲಿ ಇನ್ನೂ ಜೀವಂತವಾಗಿದೆ. ಇಡೀ ದೇಶದಲ್ಲೇ ಅರಸುರವರು ಮಾಡಿದ ಅಭಿವೃದ್ಧಿಯನ್ನು ಯಾರೊಬ್ಬ ಮುಖ್ಯಮಂತ್ರಿನು ಮಾಡಲು ಸಾಧ್ಯವಿಲ್ಲ. ದೇಶವೇ ತಿರುಗಿ ನೋಡುವಂತೆ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು 10 ಕೆಜಿ ಅಕ್ಕಿ ಕೊಟ್ಟೆ ಎಂದು ಸುಳ್ಳು ಹೇಳುತ್ತಾರೆ. ಅವರು ಕೊಟ್ಟಿದ್ದು 5 ಕೆಜಿ, ಕೇಂದ್ರ ಸರ್ಕಾರದು 5 ಕೆ.ಜಿ ಇದೆಲ್ಲ ಸಾಧನೆಯಲ್ಲ, ಬಡವರಿಗೆ 21 ಲಕ್ಷ ಎಕರೆ ಭೂಮಿ ಕೊಟ್ಟಿದ್ದು ಅರಸು, ಅವರು ನೀಡಿದ್ದ ಭೂಮಿಯನ್ನು ಇನ್ನು ವಂಶ ಪಾರಂಪರ್ಯವಾಗಿ ಉಳಿಸಿಕೊಂಡು ಉಳುಮೆ ಮಾಡಿ ಅವರನ್ನು ನೆನೆಯುತ್ತಿದ್ದಾರೆ ಎಂದರು.

ಮಾಜಿ ಶಾಸಕ ಮಂಜುನಾಥ್ ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು, ನಾನೆಂದು ಅಭಿವೃದ್ಧಿ ಕೆಲಸವನ್ನು ತಡೆದವನಲ್ಲ, ಯಾವ 40 ಕೋಟಿ ಅನುದಾನವನ್ನು ನಾನು ತಡೆದಿಲ್ಲ, ತಡೆದಿದ್ದರೆ ದಾಖಲೆ ಇದ್ದರೆ ನೀಡಲಿ, 15 ವರ್ಷ ಶಾಸಕನಾಗಿದ್ದ ಅವರು ತಮ್ಮ ಸಾಧನೆ ಏನು ಎಂದು ತಿಳಿಸಲಿ ಎಂದರು. ನಾನು ಹುಣಸೂರಿನಲ್ಲಿ ಶಾಸಕನಾಗಿದ್ದು ಕೇವಲ 14 ತಿಂಗಳ ಮಾತ್ರ. ಅಷ್ಟರಲ್ಲೇ ಭವಿಷ್ಯ ಬಹುಶಃ ಸಾಕಷ್ಟು ಸಾರ್ವಜನಿಕವಾಗಿ ಕೆಲಸ ಮಾಡಿದ್ದೇನೆ. ಹಬ್ಬನ ಕುಪ್ಪೆ, ಚಿಲ್ಕುಂದ, ಬಲ್ಲೆನಹಳ್ಳಿ, ಸೇರಿದಂತೆ 84 ಹಳ್ಳಿಗಳಲ್ಲಿ ಉತ್ತಮ ರಸ್ತೆ ಅಭಿವೃದ್ಧಿಪಡಿಸಿದ್ದೇನೆ ಎಂದರು.
ಈ ರಾಜ್ಯದಲ್ಲಿ ಅಕ್ಷರ- ಆರೋಗ್ಯ ಕೊರತೆ ಹೆಚ್ಚು ಕಾಣುತ್ತಿದೆ. ಅಕ್ಷರ ಆರೋಗ್ಯವಿಲ್ಲದಿದ್ದರೆ ರಾಜ್ಯ ಅಭಿವೃದ್ಧಿ ಹೊಂದುವುದಿಲ್ಲ, ಸಿದ್ದರಾಮಯ್ಯ ಸರ್ಕಾರದಲ್ಲಿ ಅಕ್ಷರವಿಲ್ಲ, ಆರೋಗ್ಯವೂ ಇಲ್ಲ, ಜೊತೆಗೆ ಉತ್ತಮವಾದ ರಸ್ತೆಗಳು ಇಲ್ಲ, ಅದರಿಂದ ಅವರನ್ನು ಗುಂಡುಬಿದ್ದ ರಾಜ್ಯದ ಬಂಡ ನಾಯಕ ಎನ್ನಬಹುದು ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ 30-30 ತಿಂಗಳ ಅಧಿಕಾರ ಹಂಚಿಕೆಯಾಗಿರುವುದು ಸತ್ಯ. ಕರುನಾಡಿನಲ್ಲಿ ಹುಟ್ಟಿ ವಚನಭ್ರಷ್ಟನಾಗಬಾರದು, ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ, ಕಟ್ಟುವಲ್ಲಿ ಡಿ ಕೆ ಶಿವಕುಮಾರ್ ಪಾತ್ರ ಹೆಚ್ಚಿದೆ, 17 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಗೆ ಹೊಸ ಯೋಜನೆಗಳು ಏನಿದೆ ಬಜೆಟ್ಗಳಲ್ಲಿ ಎಂದು ತಿಳಿಸಲಿ ಈ ಸರ್ಕಾರ ಕಳ್ಳ ಹಾಗೂ ಬೋಗಸ್ ಸರ್ಕಾರ ಎಂದರು.
ಈಗಿನ ರಾಜಕಾರಣಿಗಳು ಅಧಿಕಾರಿಗಳು ಎಲ್ಲರೂ ಅಭಿವೃದ್ಧಿ ಹಿಂದೆ ನಿಲ್ಲದೆ, ಎಲ್ಲರೂ ಹಣದ ಹಿಂದೆ ಓಡುತ್ತಿದ್ದಾರೆ. ಯಾರ ಬಾಯಲ್ಲೂ ನಾನು ಏನು ಕೆಲಸ ಮಾಡಿದೆ ಎನ್ನುವುದಕ್ಕಿಂತ ನಾನು ಎಷ್ಟು ಲಂಚ ಪಡೆದೆ, ಎಷ್ಟು ಭೂಮಿ ಖರೀದಿ ಮಾಡಿದೆ ಎನ್ನುವ ಚರ್ಚೆ ಜಾಸ್ತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.







