ಕನ್ನಡ ಚಲನಚಿತ್ರ ರಂಗದಲ್ಲಿ ಹಲವು ನಟರು ತಮ್ಮದೇ ಆದ ಪ್ರತಿಭೆಯಿಂದ ಅಜರಾಮರ. ಬಹಳಷ್ಟು ಹಿರಿಯ ನಟರು ಈಗ ನಮ್ಮೊಂದಿಗಿಲ್ಲ ಆದರೆ ಅವರ ಅಭಿನಯ ಮತ್ತು ಕಲಾ ಕೊಡುಗೆ ಎಂದಿಗೂ ಮರೆಯಲಾರದ್ದು ಇಂತಹ ಅಪರೂಪದ ನಟರ ಸಾಲಿನಲ್ಲಿ ಹಾಸ್ಯಬ್ರಹ್ಮ, ಹಾಸ್ಯಭೀಷ್ಮ ಮುಂತಾದ ಬಿರುದಾಂಕಿತದಿಂದ ಗೌರವಿಸಲ್ಪಟ್ಟ ಬಾಲಣ್ಣ ಅವರು ನಿಲ್ಲುತ್ತಾರೆ.. ಅವರ ನಟನೆ ಯುವ ನಟರಿಗೆ ಸ್ಪೂರ್ತಿಯೂ ಹೌದು.
ಇಂತಹ ನಟರ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಏಕೆಂದರೆ ಇವರು ಸಿನಿಮಾ ರಂಗದಲ್ಲಿ ಏನೇನು ಮಾಡಬಹುದೋ ಅದೆಲ್ಲವನ್ನು ಮಾಡಿದವರಾಗಿದ್ದಾರೆ. ಹೀರೋ, ವಿಲನ್, ಕಮಿಡಿಯನ್, ಪೋಷಕನಟ ಹಾಗೂ ನಿರ್ಮಾಪಕ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿಯೇ ಬಾಲಣ್ಣ ಎಲ್ಲ ವಯೋಮಾನದವರಿಗೆ ಇಷ್ಟವಾಗಿ ಮನದಲ್ಲಿ ನೆಲೆಯೂರಲು ಸಾಧ್ಯವಾಗಿದೆ. ಇಂತಹ ಮೇರು ನಟನ ಕುರಿತಂತೆ ಹಿರಿಯ ಬರಹಗಾರರಾದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಮತ್ತು ಬರೆಯುತ್ತಲೇ ಇರುವ ಕುಮಾರ ಕವಿ ನಟರಾಜ ಅವರು ಇಲ್ಲಿ ಹೇಳುತ್ತಾ ಹೋಗಿದ್ದಾರೆ.
ಬಾಲಕೃಷ್ಣ ಅವರು ನಟಿಸಿದ ಚೊಚ್ಚಲ ಕನ್ನಡ ಫಿಲಂ ರಾಧಾರಮಣ 1943ರಲ್ಲಿ ತೆರೆಕಂಡ ಚಿತ್ರ. ಬಹಳ ಹಿಂದೆ ಮದ್ರಾಸಿನ ಸ್ಟುಡಿಯೋಗಳನ್ನೇ ಅವಲಂಬಿಸಿದ್ದ ಅನಿವಾರ್ಯ ಕಾಲಘಟ್ಟದಲ್ಲಿ ಕನ್ನಡ ಚಿತ್ರಗಳ ನಿರ್ಮಾಣಕ್ಕೆಂದೇ ಬೆಂಗಳೂರಲ್ಲಿ ಅಭಿಮಾನ್ ಎಂಬ ಸುಸಜ್ಜಿತ ಸಿನಿಸ್ಟುಡಿಯೋ ಕಟ್ಟಿದ ಸ್ವಾಭಿಮಾನಿ ಕನ್ನಡಿಗ, ಧೀರ ಕಲಾವಿದ ಇವರು ಎನ್ನುವುದೇ ಹೆಮ್ಮೆ ವಿಚಾರ. ಇವರ ಬಗ್ಗೆ ತಿಳಿಯುತ್ತಾ ಹೋದಂತೆಲ್ಲ ಅವರ ಬದುಕು ಮತ್ತು ಸಾಧನೆ ನಮ್ಮನ್ನು ರೋಮಾಂಚನಗೊಳಿಸುತ್ತದೆ.
ಇದನ್ನೂ ಓದಿ: ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… ಇದು ಕನ್ನಡಚಿತ್ರರಂಗದಲ್ಲಿ ಶೋಕಿಗಾಗಿ ನಟನಾದವನ ಕಥೆ!
ಮೈಸೂರು ಜಿಲ್ಲೆಯ ತ್ರಿವೇಣಿ ಸಂಗಮ ಕ್ಷೇತ್ರದ ತಿರುಮಕೂಡಲು ನರಸೀಪುರ ಮೂಲದ ಟಿ.ಎನ್. ಬಾಲಕೃಷ್ಣ ಉರುಫ್ ಬಾಲಣ್ಣ 2.11.1915ರಂದು ಹಾಸನ ಜಿಲ್ಲೆ ಅರಸೀಕೆರೆ ಬಳಿ ಬಡಕುಟುಂಬ ವೊಂದರಲ್ಲಿ ಜನಿಸಿದರು. ಬಾಲ್ಯದಲ್ಲೇ ಕಿವಿಯು ಸಂಪೂರ್ಣ ಕೇಳಿಸುತ್ತಿರಲಿಲ್ಲ ಎಂಬ ಕಾರಣಕ್ಕೆ ಶಾಲಾ ಕಾಲೇಜು ವಿದ್ಯಾಭ್ಯಾಸಕ್ಕೆ ಹೆಚ್ಚು ಅವಕಾಶ ಅನುಕೂಲ ಒದಗಲಿಲ್ಲ. ಆದರೆ ದೇವರ ಆಣತಿ ಇರಬಹುದೇನೋ ಎಂಬಂತೆ ಅಭಿನಯ ರಂಗಕ್ಕೆ ಆಜೀವ ಸದಸ್ಯತ್ವ ದೊರಕಿತು.
ಆಗೋದೆಲ್ಲ ಒಳ್ಳೆದಕ್ಕೇ ಎಂಬ ನಾಣ್ಣುಡಿಯಂತೆ ಈ ಮೇರು ನಟನ ಆಗಮನದಿಂದ ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಎರಡೂ ಶ್ರೀಮಂತಗೊಂಡವು ಎಂಬುದರಲ್ಲಿ ಉತ್ಪ್ರೇಕ್ಷೆ ಇಲ್ಲ. ಬಾಲಣ್ಣನವರು ಹಿರಣ್ಣಯ್ಯ ಮಿತ್ರ ಮಂಡಳಿ ಅಲ್ಲದೇ ಬಹುತೇಕ ಎಲ್ಲ ನಾಟಕ ಕಂಪನಿಗಳಲ್ಲೂ ನಟಿಸುತ್ತಿದ್ದರು. ಸುಮಾರು 62 ವರ್ಷ ನಾಟಕ-ಸಿನಿಮ ಎರಡೂ ಕ್ಷೇತ್ರದಲ್ಲಿ ದುಡಿದರು. ತಮ್ಮ ಬೆವರಿನ ಬೆಲೆಯ ದುಡಿಮೆಯಿಂದ ಬಹಳ ಶ್ರಮ ಪಟ್ಟು ತಮ್ಮ ಕನಸಿನ ಅಭಿಮಾನ್ ಸ್ಟುಡಿಯೊ ಕಟ್ಟಿದರು. ಆದರೆ ದುರದೃಷ್ಟಕರ ಎಂಬಂತೆ ಇಂದು ಹಾಳು ಹಂಪೆಯಂತಾಗಿ ಅನಾಥವಾಗಿ ಬಿದ್ದಿದೆ.
ಇದನ್ನೂ ಓದಿ: ಕನ್ನಡ ಕಲಾ ರಸಿಕರ ಮನದಲ್ಲಿ ಅಚ್ಚಳಿಯದ ಹಿರಿಯ ನಟ ಕಲ್ಯಾಣಕುಮಾರ್… ಇವರು ನಟಿಸಿದ ಸಿನಿಮಾಗಳೆಷ್ಟು?
500ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ ಅನೇಕ ಪ್ರಶಸ್ತಿ ಬಹುಮಾನ ಪಡೆದಿದ್ದ ಕಲಾರತ್ನ ಕಲಾಭಿಮಾನಿ ಬಾಲಕೃಷ್ಣ ಓರ್ವ ಅಪ್ರತಿಮ ಪ್ರತಿಭೆಯ ಅತ್ಯುತ್ತಮ ನಟ. ಕನ್ನಡ ಚಿತ್ರರಂಗದ ಮಾತ್ರವಲ್ಲ ಇಡೀ ಭಾರತ ಚಿತ್ರರಂಗದ ಪ್ರಪ್ರಥಮ ಹೀರೋ, ವಿಲನ್, ಕಮಿಡಿಯನ್, ಪೋಷಕನಟ ಹಾಗೂ ನಿರ್ಮಾಪಕ, ಮಾತ್ರವಲ್ಲ ಒಬ್ಬ ಸಕಲ ಕಲಾವಲ್ಲಭ! ಆಲ್-ಇನ್-ಆಲ್ ಎನಿಸಿದ್ದ ಪರಿಪೂರ್ಣ ಕಲಾವಿದ ಬಾಲಣ್ಣ ಹೀರೋ ಪಾತ್ರದಲ್ಲಿ ಚಿಕ್ಕಮ್ಮ (ತಮಿಳಿನ‘ಚಿತ್ತಿ’ರೀಮೇಕ್) ಚಿತ್ರದಲ್ಲಿ ಖ್ಯಾತನಟಿ ಅಭಿನಯಶಾರದೆ ಜಯಂತಿ ಜತೆಗೆ ಅಮೋಘ ಅಭಿನಯ ನೀಡಿ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದು ಇತಿಹಾಸ. ಈ ಚಿತ್ರದಲ್ಲಿ ಡಾ.ರಾಜ್ ಗೌರವ ನಟರಾಗಿ ಕಾಣಿಸಿಕೊಂಡಿದ್ದು ಆಶ್ಚರ್ಯವಾದರೂ ಸತ್ಯ!
ತಮಗೆ ಸಂಪೂರ್ಣ ಕಿವುಡುತನವಿದ್ದ ಕಾರಣ ಇವರೊಡನೆ ನಟಿಸುತ್ತಿದ್ದ ನಟ-ನಟಿಯರ ತುಟಿ ಚಲನೆ (ಲಿಪ್ ಮೂವ್‌ಮೆಂಟ್) ಮಾತ್ರ ಗ್ರಹಿಸಿ ನಟಿಸುತ್ತಿದ್ದರು. ತಮಗೆ ದೊರೆತ ಪ್ರತಿಯೊಂದು ಪಾತ್ರದ ಪರಕಾಯಪ್ರವೇಶ ಮಾಡಿ ಅದ್ಭುತ ಅಭಿನಯ ನೀಡುತ್ತಿದ್ದರು. ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಗಂಧದಗುಡಿ, ಬೆಳ್ಳಿಮೋಡ, ಭಲೇಬಸವ, ಭೂತಯ್ಯನ ಮಗ ಅಯ್ಯು, ಮುಂತಾದ ಅನೇಕ ಸಿನಿಮಾಗಳ ಅಭಿನಯ ಸದಾ ಸ್ಮರಣೀಯ, ಒಂದೊಂದು ಚಿತ್ರವೂ ಮೈಲುಗಲ್ಲುಗಳು! ಇವರ ಜೀವನಕಥೆ ಆಧಾರಿತ ಸಿನಿಮ ಕಲಾಭಿಮಾನಿ ತೆರೆಕಂಡು ಯಶಸ್ವಿ ಆಯಿತು.
ಇದನ್ನೂ ಓದಿ: ನಟ ಅರುಣಕುಮಾರ್ ಹರಿಕಥಾ ವಿದ್ವಾಂಸ ಗುರುರಾಜಲುನಾಯ್ಡು ಆಗಿ ಖ್ಯಾತಿ ಪಡೆದಿದ್ದೇಗೆ? ಇಲ್ಲಿದೆ ರೋಚಕ ಕಥೆ!
1000ಕ್ಕೂ ಹೆಚ್ಚಿನ ನಾಟಕ ಸಿನಿಮಗಳಲ್ಲಿ ನಟಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕ ಸೇರಿದ ಚಂದನವನದ ಮೊಟ್ಟಮೊದಲ ಕಲಾವಿದ ಸುಮಾರು ಐದು ದಶಕದ ಕಲಾಸೇವೆ ಮಾಡಿದ ನಂತರ 19.7.1995ರಂದು ಬೆಂಗಳೂರಿನಲ್ಲಿ ವಿಧಿವಶರಾದರು. ಬಾಲಣ್ಣನಿಗ ಇಬ್ಬರು ಮಡದಿ ಸತ್ಯವತಿ+ಸರೋಜಮ್ಮ. ಇವರ ಐದು ಮಕ್ಕಳಲ್ಲಿ ಒಬ್ಬರು ಗೀತಾಬಾಲಿ. ಎಲ್ಲಕ್ಕು ಮಿಗಿಲಾಗಿ ಖ್ಯಾತ ನಟಿ-ನೃತ್ಯತಾರೆ ಸುಧಾಚಂದ್ರನ್ ಇವರ ಸೊಸೆ. ಹಾಸ್ಯಬ್ರಹ್ಮ ಬಾಲಣ್ಣನವರಿಗೆ ಹಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ದೊರಕಿದ್ದವು. ಇಂತಹ ನಟ ಶಿಖಾಮಣಿ ಭಾರತದ ಪ್ರಥಮ ಹುಟ್ಟುಕಿವುಡ ಕಲಾವಿದ? ಎಂಬುದು ಆಶ್ಚರ್ಯವಾದರೂ ಸತ್ಯ! ಈ ಕಲಾಭಿಮಾನಿಯ ಅಸ್ತಂಗತದಿಂದ ಕೋಟಿ ಕೋಟಿ ಅಭಿಮಾನಿಗಳಿಗೆ ಭರಿಸಲಾರದ ದುಃಖವೂ ಚಂದನವನಕ್ಕೆ ತುಂಬಲಾರದ ನಷ್ಟವೂ ಆಗಿದೆ.
ಬಾಲಕೃಷ್ಣ ನಟಿಸಿದ ಪ್ರಮುಖ ಚಿತ್ರಗಳನ್ನು ನೋಡುತ್ತಾ ಹೋದರೆ.. ರಾಧಾರಮಣ, ದಲ್ಲಾಳಿ, ದೇವಸುಂದರಿ, ಕನ್ಯಾದಾನ, ಮುಟ್ಟಿದ್ದೆಲ್ಲಾಚಿನ್ನ, ಆಷಾಢಭೂತಿ, ಭಕ್ತಮಲ್ಲಿಕಾರ್ಜುನ,ದೈವಸಂಕಲ್ಪ, ಮುತ್ತೈದೆಭಾಗ್ಯ, ಪಂಚರತ್ನ, ಸದಾರಮೆ, ಜಗಜ್ಯೋತಿ ಬಸವೇಶ್ವರ, ರಣಧೀರಕಂಠೀರವ, ಕಿತ್ತೂರು ಚೆನ್ನಮ್ಮ, ಭೂದಾನ, ಅನ್ನಪೂರ್ಣ, ಗೆಜ್ಜೆಪೂಜೆ, ಕಪ್ಪುಬಿಳುಪು, ಮೇಯರ್‌ಮುತ್ತಣ್ಣ, ಸಾಕ್ಷಾತ್ಕಾರ, ಕಸ್ತೂರಿನಿವಾಸ, ನಮ್ಮಸಂಸಾರ, ಬಂಗಾರದಮನುಷ್ಯ, ಗಂಧದಗುಡಿ, ತ್ರಿಮೂರ್ತಿ, ದೂರದಬೆಟ್ಟ, ಭಕ್ತಕುಂಬಾರ, ಸಂಪತ್ತಿಗೆಸವಾಲ್, ಬಂಗಾರದಪಂಜರ, ದಾರಿತಪ್ಪಿದಮಗ, ಬಾಲನಾಗಮ್ಮ, ಗಂಡೊಂದು ಹೆಣ್ಣಾರು, ಬೆಳ್ಳಿಮೋಡ, ಮದುವೆಮಾಡಿನೋಡು.
ಇದನ್ನೂ ಓದಿ: ಚಾಮಯ್ಯ ಮೇಷ್ಟ್ರು’ ಆಗಿ ಚಂದನವನದಲ್ಲಿ ನೆನಪಿನ ತಾರೆಯಾಗಿ ನಮ್ಮೊಂದಿಗಿರುವ ಹಿರಿಯನಟ ಕೆ.ಎಸ್.ಅಶ್ವಥ್…
ನಮ್ಮಮಕ್ಕಳು, ಲಗ್ನಪತ್ರಿಕೆ, ಮನೆಕಟ್ಟಿನೋಡು, ಭಾಗ್ಯದಲಕ್ಷ್ಮೀಬಾರಮ್ಮ, ಪ್ರೇಮದಕಾಣಿಕೆ, ಬಡವರಬಂಧು, ನಾನಿನ್ನಮರೆಯಲಾರೆ, ಸನಾದಿಅಪ್ಪಣ್ಣ, ಅಸಾಧ್ಯಅಳಿಯ, ವಜ್ರದ ಜಲಪಾತ, ಒಂದೇ ರೂಪ ಎರಡು ಗುಣ, ಬಯಲುದಾರಿ, ದೇವರ ದುಡ್ಡು, ಸ್ನೇಹಸೇಡು, ಶಂಕರ್‌ಗುರು, ನಾ ನಿನ್ನ ಬಿಡಲಾರೆ, ಒಂದು ಹೆಣ್ಣು ಆರು ಕಣ್ಣು, ಪ್ರಾಯ ಪ್ರಾಯ ಪ್ರಾಯ, ಮುಳ್ಳಿನ ಗುಲಾಬಿ, ಬಯಲುದಾರಿ, ಚಂದನದ ಗೊಂಬೆ, ಕಾಮನಬಿಲ್ಲು, ಆಟೋರಾಜ, ಒಂದು ಮುತ್ತಿನ ಕತೆ, ತಾಳಿಯ ಆಣೆ, ಭೂತಯ್ಯನ ಮಗ ಅಯ್ಯು, ಶ್ರುತಿಸೇರಿದಾಗ, ಅಶ್ವಮೇಧ, ಬೆಳ್ಳಿಯಪ್ಪ ಬಂಗಾರಪ್ಪ, ಚಿಕ್ಕಮ್ಮ, ಕವಿರತ್ನ ಕಾಳಿದಾಸ, ಮೂಗನಸೇಡು, ಬೆಟ್ಟದಹೂವು, ಹೃದಯಸಂಗಮ, ಪ್ರೀತಿಮಾಡು ತಮಾಷೆ ನೋಡು, ಕಲಾಭಿಮಾನಿ ಮುಂತಾದವು ಪ್ರಮುಖ ಚಿತ್ರಗಳಾಗಿವೆ. ಸಿನಿಮಾ ವೀಕ್ಷಿಸಿದವರಿಗೆ ಮಾತ್ರ ಬಾಲಣ್ಣ ಎಂತಹ ಅದ್ಭುತ ಕಲಾಪ್ರತಿಭೆ ಎನ್ನುವುದು ಅರಿವಾಗುತ್ತದೆ…
ಅತ್ಯಂತ ಅಗತ್ಯ ಲೇಖನ ಇವತ್ತಿನ ಪೀಳಿಗೆಯ ಜನರಿಗೆ, ಸೂಪರ್….
ಅನಂತಾನಂತ ಧನ್ಯವಾದಗಳು ಲವ ಸರ್
ಹಾಸ್ಯಬ್ರಹ್ಮ ಬಾಲಕೃಷ್ಣ ಉರುಫ್ ಬಾಲಣ್ಣ ನವರಿಗೆ ಸರಿಸಾಟಿಯಾದ ನಗೆನಟ ಬಹುಶಃ ಇರಲಾರರು ಎನಿಸುವಂತೆ ಬರೆದಿದ್ದಾರೆ, ಅಭಿನ೦ದನೆ ಕುಮಾರಕವಿ ಸರ್
ಬಾಲಕೃಷ್ಣ ರವರ ಲೇಖನ ಬೊಂಬಾಟ್. ನನಗೆ ನೆನಪಿರುವಂತೆ ಇವರೊಬ್ಬ ಸಾರ್ವಕಾಲಿಕ ಶ್ರೇಷ್ಠ ನಟ. ಇಂಥ ಕಲಾವಿದರ ಬಗ್ಗೆ ಹಲವಾರು ಲೇಖನಗಳನ್ನು ಆಗಾಗ ಬರೆದುಕೊಡುತ್ತಿರುವ ನಟರಾಜ ಕವಿಯವರಿಗೆ ಮತ್ತು ನಿಮ್ಮ ಪತ್ರಿಕೆಯ
ಬಳಗದ ಎಲ್ಲರಿಗೂ ನಾನು ಮತ್ತು ನನ್ನ ಕುಟುಂಬದವರೂ ಎಲ್ಲರೂ ಆಭಾರಿ,…
ನಿಮ್ಮ ಪತ್ರಿಕೆಯಲ್ಲಿ ಬರುವ ಅನೇಕ ಉತ್ತಮ ಲೇಖನಗಳಲ್ಲಿ ಇದೂ ಸಹ ಒಂದು, ನಮಸ್ಕಾರ ಧನ್ಯವಾದ
ನಿಮ್ಮ ಪತ್ರಿಕೆಯಲ್ಲಿ ಬರುವ ಅನೇಕ ಉತ್ತಮ ಲೇಖನಗಳಲ್ಲಿ ಇದೂ ಸಹ ಒಂದು, ಧನ್ಯವಾದ
ಲೇಖನ ತುಂಬ ಚೆನ್ನಾಗೆ ಇದೆ
Superb contents wonderful article
ಹಾಸ್ಯಬ್ರಹ್ಮ ಹುಟ್ಟು ಕಲಾವಿದ ಬಾಲಣ್ಣರವರ ಬಗ್ಗೆ ಲೇಖನ ಬಹಳ ಚೆನ್ನಾಗಿದೆ. ಇದನ್ನ ಬರೆದ ಕವಿ ನಟರಾಜ ರವರಿಗೂ ಮತ್ತು ಬೆಳಕಿಗೆ ತಂದ ನಿಮಗೂ ತುಂಬ ಧನ್ಯವಾದ ಸರ್
ನನಗೀಗ 72 ವಯಸ್ಸು ನಮ್ಮ ಕಾಲದ ಸಿನಿಮಾರಂಗ ನಟನಟಿಯರ ಮಾಹಿತಿಯ ಇಂಥ ಲೇಖನ ಶ್ಲಾಘನೀಯ, ಧನ್ಯವಾದ ಸರ್
ಬಹಳ ಆಕರ್ಷಕ ಮತ್ತು ಮನರಂಜನಾತ್ಮಕ ಲೇಖನ ಪ್ರಕಟಿಸಿದ ತಮಗೆ ಧನ್ಯವಾದ, ನಮಸ್ಕಾರ