ಮೈಸೂರು: ರಾಜ್ಯದ ತಂಬಾಕು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಿದ್ದು, ಈಗಾಗಲೇ ಕೊಟ್ಟ ಮಾತಿನಂತೆ ರೈತರಿಂದ ತಂಬಾಕು ಖರೀದಿ ಮಾಡಬೇಕು ಎಂದು ವರ್ತಕರಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಾಕೀತು ಮಾಡಿದ್ದಾರೆ.
ರಾಜ್ಯದಲ್ಲಿ ಎಫ್‌ಸಿವಿ ತಂಬಾಕು ಹರಾಜು ಸಂಬಂಧ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ತಂಬಾಕು ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳು, ಬೆಳೆಗಾರರು, ಖರೀದಿದಾರರು ಹಾಗೂ ತಂಬಾಕು ಮಂಡಳಿ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರನ್ನು ಕಾಪಾಡಿಕೊಳ್ಳಬೇಕಿದ್ದು, ಅವರಿಗೆ ಕೊಟ್ಟಿರುವ ಮಾತಿನಂತೆ ನೀವುಗಳು ನಡೆದುಕೊಳ್ಳಬೇಕಿದೆ. ನೆರೆ ರಾಜ್ಯ ಆಂಧ್ರ ಪ್ರದೇಶದಂತೆಯೇ ಇಲ್ಲಿಯೂ ಉತ್ತಮ ದರ ಕೊಟ್ಟು ತಂಬಾಕು ಖರೀದಿಸಿ. ಸುಂಕ ಸೇರಿದಂತೆ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಅದಕ್ಕೂ ಮೊದಲು ನಿಗದಿಯಂತೆ ತಂಬಾಕು ಖರೀದಿ ಮಾಡಿ ಎಂದರು.
ಕೇಂದ್ರ ಸರ್ಕಾರ ಸಿಗರೇಟಿನ ಸುಂಕ ಹಾಕಿದೆ ಎಂದು ಹೇಳುತ್ತೀರಿ. ಆದರೆ ನೀವು ಸುಂಕ ಏರಿಕೆಯ ಭಾರವನ್ನು ಸಿಗರೇಟ್ ಸೇದುವ ಗ್ರಾಹಕನ ಮೇಲೆ ವಿಧಿಸಿ, ಇದರ ಬದಲಾಗಿ ಇದಕ್ಕೆ ಸಂಬಂಧವಿಲ್ಲದ ಬೆಳೆಗಾರನ ಮೇಲೆ ಬರೆ ಏಕೆ ಎಳೆಯುತ್ತೀರಿ ಎಂದು ವರ್ತಕರನ್ನು ಪ್ರಶ್ನಿಸಿದ ಅವರು, ನಿಮ್ಮ ಸಮಸ್ಯೆಗಳನ್ನು ಕೇಳಲು ನಾವು ಸಿದ್ಧವಿದ್ದು, ನಾನು, ಸಂಸದ ಯದುವೀರ್ ಅವರು ಸತತವಾಗಿ ಸಂಬಂಧಪಟ್ಟ ಎಲ್ಲರೊಂದಿಗೂ ಮಾತುಕತೆ ನಡೆಸಿದ್ದೇವೆ. ಸುಂಕ ಏರಿಕೆ ಬಗ್ಗೆ ನಾವು ಕೇಂದ್ರದ ವಿತ್ತ ಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ಆದರೆ ನೀವು ರೈತರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಿ ಎಂದು ಹೇಳಿದರು.

ಇದೇ ವೇಳೆ ಹರಾಜು ಪ್ರಕ್ರಿಯೆಯಲ್ಲಿ ಯಾವ ಖರೀದಿದಾರರು ಭಾಗಿಯಾಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದ ಅವರು, ವಿದೇಶಿ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ನಿರ್ಬಂಧಗಳಿವೆಯೇ? ಎಂದು ಮಂಡಳಿ ಪ್ರಶ್ನಿಸಿದರು. ಈ ಕುರಿತಂತೆ ಮಾತನಾಡಿದ ಅಧಿಕಾರಿಗಳು, ಯಾವುದೇ ನಿರ್ಬಂಧ ಇಲ್ಲ ಎಂಬುದನ್ನು ಸಚಿವರ ಗಮನಕ್ಕೆ ತಂದರು.
ಏಕಪಕ್ಷೀಯವಾಗಿ ಹರಾಜು ನಿಲ್ಲಿಸಲು ಸಾಧ್ಯವಿಲ್ಲ. ಅಂತಹ ಕ್ರಮಕ್ಕೆ ಯಾರೂ ಸಹ ಮುಂದಾಗಬಾರದು. ತಂಬಾಕು ಮಂಡಳಿ ಮತ್ತು ಖರೀದಿದಾರರ ಬಗ್ಗೆ ಕರ್ನಾಟಕದ ರೈತರು ತಪ್ಪು ತಿಳಿಯುವುದು ಬೇಡ. ಒಂದು ವೇಳೆ ಅಂತಹ ಅಭಿಪ್ರಾಯ ಬಂದರೆ ರೈತರು ಪರ್ಯಾಯ ಬೆಳೆ ತೆಗೆಯಲು ಮುಂದಾದರೆ ಆಗ ಏನು ಮಾಡುತ್ತೀರಿ? ಯಾವ ಕಾರಣಕ್ಕೂ ತಂಬಾಕು ಬೆಳೆಗಾರರ ಹಿತಕ್ಕೆ ಧಕ್ಕೆ ಮಾಡಬೇಡಿ. ನಿಮ್ಮದೇನಾದರೂ ಬೇಡಿಕೆ ಇದ್ದರೆ ದೆಹಲಿಗೆ ಬನ್ನಿ, ಪರಿಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಸಚಿವ ಕೆ.ವೆಂಕಟೇಶ್, ಸಂಸದರಾದ ಯದುವೀರ್ ಒಡೆಯರ್, ಸುನೀಲ್ ಬೋಸ್, ಶಾಸಕ ಎ.ಮಂಜು, ಜಿ.ಡಿ. ಹರೀಶ್ ಗೌಡ ವಿದಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಇತರರಿದ್ದರು








