LatestLife style

ಇದು ಹೃದಯದ ವಿಷಯ… ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?

ಇವತ್ತು ಮೇಲಿಂದ ಮೇಲೆ ಕೇಳಿ ಬರುತ್ತಿರುವ ಹೃದಯಾಘಾತದ ಸುದ್ದಿಗಳು ಜನಮನದಲ್ಲಿ ಆತಂಕವನ್ನು ಸೃಷ್ಟಿಸಿದೆ. ಇದುವರೆಗೆ ಹೃದಯದ ಆರೋಗ್ಯದ ಬಗ್ಗೆ ಆಲೋಚಿಸದವರು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದವರು  ಭಯಭೀತರಾಗಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾರಿಗೋ ಹೃದಯಾಘಾತವಾಯಿತು ನನಗೂ ಆಗಿ ಬಿಡುತ್ತದೆಯೇನೋ ಎಂಬಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ನಿಜವಾಗಿಯೂ ಆ ರೀತಿಯ ಆತಂಕದ ಅಗತ್ಯವಿಲ್ಲ. ಯಾರಿಗೋ ಆಗಿದ್ದು ನಮಗೆ ಆಗಬೇಕೆಂದೇನು ಇಲ್ಲ.. ಮೊದಲಿಗೆ ಇಸಿಜಿ ಮಾಡಿಸಿ ಹೃದಯತಜ್ಞರಿಗೆ ತೋರಿಸಿ ಅವರಿಂದ ಸಲಹೆ ಪಡೆಯಿರಿ..

ಸಾಮಾನ್ಯವಾಗಿ ಇಸಿಜಿ ಎಲ್ಲೆಡೆಯೂ ಮಾಡುತ್ತಿದ್ದು ಅದನ್ನು ಮಾಡಿಸಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವ ಕೆಲಸ ಮಾಡಬೇಕು. ಅದಕ್ಕಿಂತ ಹೆಚ್ಚಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಕೆಲಸವನ್ನು ನಾವು ಮಾಡಬೇಕಾಗುತ್ತದೆ. ಮುಖ್ಯವಾಗಿ ಹೃದಯದ ಆರೋಗ್ಯದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೃದಯ ಆರೋಗ್ಯವಾಗಿರಲು ಏನೇನು ಪಾಲಿಸಬೇಕು ಎಂಬುದೇ ನಮಗೆ ಗೊತ್ತಿಲ್ಲ. ಹೀಗಾಗಿಯೇ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಮ್ಮ ನಿತ್ಯದ ಬದುಕಿನಲ್ಲಿ ಒಂದಷ್ಟು ಶಿಸ್ತು ಮತ್ತು ಆಹಾರ ಸೇವನೆ ಕುರಿತಂತೆ ಎಚ್ಚರಿಕೆ, ಮಿತವಾದ ವ್ಯಾಯಾಮ ಹೀಗೆ ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಂಡರೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶಗಳು ಏನೆಂದರೆ ನಾವು ಸೇವಿಸುವ ಆಹಾರಗಳೇ ಇಲ್ಲಿ ನಮಗೆ ಸಮಸ್ಯೆಯನ್ನು ತಂದೊಡ್ಡುತ್ತಿದೆ ಎಂದರೆ ತಪ್ಪಾಗಲಾರದು. ಹೃದಯದ ತೊಂದರೆಗೆ ದೇಹ ಮತ್ತು ರಕ್ತದಲ್ಲಿ ಶೇಖರಣೆಯಾಗುವ ಕೊಬ್ಬು, ಕೊಲೆಸ್ಟ್ರಾಲ್, ಅತಿರಕ್ತದೊತ್ತಡ, ಅತಿತೂಕವೂ ಮಾರಕವಾಗಿದೆ. ಬಹಳಷ್ಟು ಕಾಯಿಲೆಗೆ ನಾವು ಸೇವಿಸುವ ಆಹಾರದಲ್ಲಿರುವ ಕೆಲವು ಪದಾರ್ಥಗಳು ಕಾರಣವಾಗುತ್ತಿವೆ. ಹಾಗೆಯೇ  ಹೃದಯದ ವಿಚಾರಕ್ಕೆ ಬಂದಾಗಲೂ ಕೆಲವು ಆಹಾರ ಪದಾರ್ಥಗಳು ಹೃದಯಕ್ಕೆ ಮಾರಕವಾಗಿವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ:  ಐವತ್ತರ ನಂತರದ ಬದುಕಿಗೆ ಮಹಿಳೆಯರು ಮಾನಸಿಕ-ದೈಹಿಕವಾಗಿ ತಯಾರಾಗುವುದು ಹೇಗೆ?

ಬಾಯಿ ರುಚಿಗಾಗಿ ಸಿಕ್ಕಿದನೆಲ್ಲ ತಿನ್ನುವುದು ಕಾಯಿಲೆಗಳಿಗೆ ಆಶ್ರಯ ನೀಡುತ್ತವೆ. ಎಲ್ಲವೂ ಅಷ್ಟೆ ಹಿತಮಿತಾಗಿದ್ದರೆ ಮಾತ್ರ ಒಳಿತಾಗುತ್ತದೆ. ಜಿಡ್ಡು ಕೊಬ್ಬಿನಂಶ, ಎಣ್ಣೆಯಲ್ಲಿ ಕರಿದ ತಿಂಡಿಗಳು ಬಾಯಿಗೆ ರುಚಿಯಾಗಿದ್ದರೂ ಅವು ಹೃದಯದ ಆರೋಗ್ಯ ಒಳ್ಳೆಯದಲ್ಲ. ಹೀಗಾಗಿ ಶೇ. 15ರಿಂದ 20ರಷ್ಟು ಮಾತ್ರ ಕೊಬ್ಬು ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗಾದರೆ ಯಾವುದನ್ನು ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬುದರ ಬಗ್ಗೆ ನೋಡುತ್ತಾ ಹೋದರೆ ನಮ್ಮ ಹೃದಯಕ್ಕೆ ಯಾವ ಆಹಾರ ಬೇಕು ಮತ್ತು ಬೇಡ ಎಂಬುದು ಗೊತ್ತಾಗಿ ಬಿಡುತ್ತದೆ.

ತುಪ್ಪ, ವನಸ್ಪತಿ, ಕೊಬ್ಬರಿ ಎಣ್ಣೆ, ಬೆಣ್ಣೆ,  ಹಾಲಿನ ಉತ್ಪನ್ನಗಳಾದ ಖೋವಾ, ಪನ್ನೀರು, ಐಸ್‌ಕ್ರೀಮ್, ಗಿಣ್ಣು ಹೃದಯದ ಆರೋಗ್ಯದ ವಿಚಾರಕ್ಕೆ ಬಂದರೆ ಮಾರಕವಾಗಿವೆ. ಹಾಗೆಯೇ ಮೊಟ್ಟೆಯ ಹಳದಿ ಭಾಗ, ಚರ್ಬಿ ಮಾಂಸ, ಕೋಳಿಯ ಚರ್ಮ, ಹಂದಿ ಮಾಂಸ, ದನಮಾಂಸ ಮೊದಲಾದವುಗಳು ಕೂಡ  ಕೊಲೆಸ್ಟ್ರಾಲ್ ನ್ನು ಹೆಚ್ಚು ಮಾಡುತ್ತವೆ.  ಇನ್ನು ಉಪ್ಪನ್ನು ಆದಷ್ಟು ಕಡಿಮೆ ಮಾಡಬೇಕು. ಚಿಪ್ಸ್, ಸಾಸ್, ಉಪ್ಪಿನಕಾಯಿ ಉಪ್ಪು ಮಿಶ್ರಿತ ಬಿಸ್ಕೆಟ್, ಸಂಡಿಗೆ ಮೊದಲಾದವುಗಳನ್ನು ತಿನ್ನಬಾರದು. ಧೂಮಪಾನ, ಮದ್ಯಪಾನ ನಿಲ್ಲಿಸಬೇಕು.  ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು. ಒತ್ತಡದ ಬದುಕಿನಿಂದ ಹೊರಬರಬೇಕು. ಕಾಫಿ, ಟೀ ಸೇರಿದಂತೆ ಕೆಲವು ಪಾನೀಯಗಳನ್ನು ಹೆಚ್ಚು ಸೇವಿಸಬಾರದು.

ಇದನ್ನೂ ಓದಿ: ಮಹಿಳೆಯರಲ್ಲಿ ಫಲವಂತಿಕೆ ದರ ಇಳಿಯುತ್ತಿದೆಯಾ? ಇದಕ್ಕೆ ಕಾರಣಗಳೇನು?

ಹೃಯದ ಆರೋಗ್ಯವನ್ನು ಕಾಪಾಡುವ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಹೀಗಾಗಿ ನಾರಿನ ಅಂಶದ ಆಹಾರಗಳು, ಕಾಳುಗಳು, ಮೊಳಕೆಕಾಳುಗಳು, ಸೊಪ್ಪು, ಹಣ್ಣು ಹಂಪಲುಗಳು, ರಾಗಿ, ಗೋಧಿ, ಜೋಳ, ಅಕ್ಕಿಯನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸಬೇಕು. ಎಣ್ಣೆಬೀಜ ಮತ್ತು ಒಣ ಹಣ್ಣುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.  ವಿಟಮಿನ್ ಸಿ ಯುಕ್ತ ಹಣ್ಣುಗಳಾದ ದ್ರಾಕ್ಷಿ, ಸೀಬೆ, ಕಿತ್ತಲೆ, ಮೋಸಂಬಿ, ನೆಲ್ಲಿಕಾಯಿ ಮಾವಿನ ಹಣ್ಣನ್ನು  ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಬೆಳ್ಳುಳ್ಳಿ ಹಸಿ ಈರುಳ್ಳಿ ಸೇವನೆ ಒಳ್ಳೆಯದು.

ಇತ್ತೀಚೆಗಿನ ದಿನಗಳಲ್ಲಿ ಸದಾ ಒತ್ತಡದ ಬದುಕಿನಲ್ಲಿ ಯಾವುದನ್ನೂ ನಾವು ಸರಿಯಾಗಿ ಮಾಡುತ್ತಿಲ್ಲ. ಶ್ರೀಮಂತಿಕೆ ಇದ್ದರೂ ನೆಮ್ಮದಿಯಾಗಿ ಹೊತ್ತೊತ್ತಿಗೆ ಊಟ ಮಾಡಲಾಗುತ್ತಿಲ್ಲ. ಸಿಕ್ಕಿದನ್ನು ತಿಂದು ಹಣ ಸಂಪಾದನೆಯತ್ತ ಹೆಚ್ಚಿನ ಗಮನ ನೀಡುತ್ತಿರುವ ನಾವು ಆರೋಗ್ಯವನ್ನು ಸದ್ದಿಲ್ಲದೆ ಕಳೆದುಕೊಳ್ಳುತ್ತೇವೆ. ಅದಕ್ಕಿಂತ ಹೆಚ್ಚಾಗಿ ಹೃದಯದ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಜಾಸ್ತಿನೇ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಇವತ್ತಿನ ಆಹಾರಗಳು ಮತ್ತು ನಮ್ಮ ಜೀವನಶೈಲಿಗಳು ಹಲವಷ್ಟು ಆರೋಗ್ಯದ ಸಮಸ್ಯೆಗಳನ್ನು ಎಳೆದು ತರುತ್ತಿವೆ. ಹೃದಯದ ವಿಚಾರದಲ್ಲಿ ಹೆಚ್ಚಿನ ಗಮನ ನೀಡುವುದು ಉಳಿತು.

ಇದನ್ನೂ ಓದಿ: ಹಾಲುಣಿಸಿದರೆ ತಾಯಿಯ ಸೌಂದರ್ಯಕ್ಕೆ ಧಕ್ಕೆ ಬರುತ್ತಾ?

ಇಲ್ಲಿ ಗಾಬರಿಪಟ್ಟುಕೊಂಡು ಆಸ್ಪತ್ರೆಗೆ ಧಾವಿಸುವ ಮುನ್ನ ಭವಿಷ್ಯದ ದೃಷ್ಟಿಯಿಂದ ನಮ್ಮ ಮನೆಗಳಿಂದಲೇ ಮಕ್ಕಳಿಗೆ ಜೀವನ ಕ್ರಮಗಳ, ಆಹಾರ ಕ್ರಮಗಳ ಕುರಿತಂತೆ ಸಲಹೆಗಳನ್ನು ನೀಡಬೇಕಾಗಿದೆ. ಈಗಾಗಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರು ನೀಡಿದ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.  ಹೆಚ್ಚಿನ ಸಂದರ್ಭಗಳಲ್ಲಿ ಹೃದಯ ಸಮಸ್ಯೆಯಿದ್ದವರು ನಾನು ಚೆನ್ನಾಗಿದ್ದೇನೆ.. ಹಾಗಾಗಿ ಮಾತ್ರೆಗಳನ್ನೇಕೆ ತೆಗೆದುಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದು ಮಾತ್ರೆಗಳನ್ನು ನಿಲ್ಲಿಸಿ ಮತ್ತೆ ಸಮಸ್ಯೆಗೆ ಒಳಗಾಗುತ್ತಾರೆ. ಇಂತಹ ಸ್ವಂತ ನಿರ್ಧಾರಕ್ಕೆ ಯಾರೂ ಬರಬೇಡಿ.. ವೈದ್ಯರ ಸಲಹೆಯಂತೆ ಮುನ್ನಡೆಯಿರಿ… ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬೇಡಿ…

 

 

B M Lavakumar

 

admin
the authoradmin

Leave a Reply