Latest

ಕೊಡಗಿನಲ್ಲಿ ಪುಷ್ಯ ಮಳೆ ಅಬ್ಬರಕ್ಕೆ ಉಕ್ಕಿ ಹರಿಯುತ್ತಿರುವ ಕಾವೇರಿ… ನದಿ ತೀರದ ಜನ ಎಚ್ಚರವಾಗಿರಿ!

ಕೊಡಗಿನಲ್ಲಿ ಪುಷ್ಯ ಮಳೆ ಅಬ್ಬರಿಸುತ್ತಿರುವ ಪರಿಣಾಮ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಾವೇರಿ ನದಿ ಭೋರ್ಗರೆದು ಹರಿಯುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಯಾಗುತ್ತಿದ್ದು, ಕಣಿವೆ ಬಳಿ ತೂಗುಸೇತುವೆ ಮಟ್ಟಕ್ಕೆ ಹರಿಯುತ್ತಿದ್ದು, ರಾಮಲಿಂಗೇಶ್ವರ ದೇವಾಲಯದ  ಮುಂಬದಿ ನಿರ್ಮಿಸಲಾಗಿರುವ ಮೆಟ್ಟಿಲಿನ ತನಕ ನೀರು ಹರಿದು ಬಂದಿದೆ.

ಈಗಾಗಲೇ ಕುಶಾಲನಗರ ಮತ್ತು ಮೈಸೂರು ನಡುವಿನ ಹಳೆ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ. ಹೀಗಾಗಿ ತಗ್ಗು ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು,  ಈ ವ್ಯಾಪ್ತಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅತ್ತ ಹಾರಂಗಿ ಜಲಾಶಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಹೆಚ್ಚುವರಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಬಿಡುವುದು ಅನಿವಾರ್ಯವಾಗಿದೆ. ಇದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಕೆಆರ್ ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಲಿದೆ.

ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸುತ್ತಿದೆ. ತ್ರಿವೇಣಿ ಸಂಗಮ ಜಲಾವೃತವಾಗಿದ್ದು, ಎಂದಿನಂತೆ ಕೊಟ್ಟಮುಡಿ, ಬಲಮುರಿ, ಸಿದ್ದಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ವರ್ಷ ಆರಂಭದಿಂದಲೂ ಮಳೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದೆ. ಈ ಸಮಯದಲ್ಲಿ ಪ್ರತಿವರ್ಷವೂ ಧಾರಾಕಾರ ಮಳೆ ಸುರಿಯುವುದು ವಾಡಿಕೆಯಾಗಿದೆ. ಆದರೆ ಮೇ ಜೂನ್ ತಿಂಗಳಿನಿಂದಲೂ ಮಳೆ ಅಬ್ಬರಿಸುತ್ತಿರುವ ಪರಿಣಾಮ ಮುಂದೆ ಕುಂಬದ್ರೋಣ ಮಳೆ ಸುರಿದರೆ ಅದರಿಂದ ಅದ್ಯಾವ ರೀತಿಯ ಗಂಡಾಂತರ ಸಂಭವಿಸುತ್ತದೆಯೋ ಗೊತ್ತಿಲ್ಲ.

ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಆತಂಕದಲ್ಲಿಯೇ ಜನರು ದಿನ ಕಳೆಯುವಂತಾಗಿದೆ. ಕೆಲವೊಂದು ಪ್ರದೇಶಗಳಿಗೆ ಮಳೆಗಾಲದಲ್ಲಿ ಪ್ರವಾಹ ಬಂದಾಗ ನೀರು ನುಗ್ಗುವುದು ಮಾಮೂಲಿಯಾಗಿದೆ. ಇಂತಹ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಕೆಲಸವಾಗುತ್ತಿದೆ. ಆದರೂ ಇನ್ನು ಒಂದು ತಿಂಗಳ ಕಾಲ ಮಳೆಯ ರೌದ್ರತೆ ಹೆಚ್ಚಾಗಿರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಈಗಾಗಲೇ ಸಂಕಷ್ಟದಲ್ಲಿರುವ ಜನರಿಗೆ ಈಗ ಸುರಿಯುತ್ತಿರುವ ಮಳೆ ನಿದ್ದೆಗೆಡಿಸುವಂತೆ ಮಾಡಿದೆ

ಇದೀಗ ಕೊಡಗು ಮತ್ತು ಮೈಸೂರಿಗೆ ಹೊಂದಿಕೊಂಡಂತಿರುವ ಪ್ರದೇಶವಾದ ಕುಶಾಲನಗರ ವ್ಯಾಪ್ತಿಯಲ್ಲಿ  ಹಾರಂಗಿ ಹಾಗೂ ಕಾವೇರಿ ನದಿಗಳು ಮೈದುಂಬಿ ಹರಿಯುತ್ತಿದ್ದು ಕೂಡಿಗೆಯ ಬಳಿ ಹಾರಂಗಿ ನದಿ  ತುಂಬಿ   ಹರಿಯುತ್ತಿದ್ದು,  ಈಗಾಗಲೇ ನದಿಯ ತಗ್ಗು ಪ್ರದೇಶಗಳು  ಜಲಾವೃತವಾಗುತ್ತಿದ್ದು ಈ ವ್ಯಾಪ್ತಿಯ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವ ಭಯ ಎದುರಾಗಿದೆ. ಕಣಿವೆ ರಾಮಲಿಂಗೇಶ್ವರ ದೇವಾಲಯದ  ಮುಂಬದಿಯಲ್ಲಿ ನದಿಗೆ ಅಳವಡಿಸಿರುವ 48 ಮೆಟ್ಟಿಲುಗಳ ಪೈಕಿ ಈಗಾಗಲೇ 40ಕ್ಕೂ ಹೆಚ್ಚು ಮೆಟ್ಟಿಲುಗಳು ಜಲಾವೃತವಾಗಿವೆ ಇಲ್ಲಿ ನೀರಿನ ಪ್ರಮಾಣ ಹೆಚ್ಚಾದಷ್ಟೂ ಕುಶಾಲನಗರ, ಮುಳ್ಳುಸೋಗೆಯ ನದಿ ತೀರದ ಬಡಾವಣೆಗಳಿಗೆ ನೀರು ನುಗ್ಗುವುದು ಖಚಿತವಾಗಿದೆ.

ಒಟ್ಟಾರೆ ಪುಷ್ಯ ಮಳೆ ಅಬ್ಬರಕ್ಕೆ ಕೊಡಗಿನಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ಮಳೆ ಇನ್ನಷ್ಟು ಬಿರುಸುಗೊಂಡರೆ ನದಿಗಳು ಪ್ರವಾಹೋಪಾದಿಯಲ್ಲಿ ಹರಿಯಲಿವೆ. ಆದ್ದರಿಂದ ನದಿ ತೀರದ ಪ್ರದೇಶದ ಜನರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಹಾಗೆಯೇ ಕೊಡಗಿನಿಂದ ಹರಿದು ಬರುವ ಕಾವೇರಿ, ಲಕ್ಷ್ಮಣ ತೀರ್ಥ ನದಿ ವ್ಯಾಪ್ತಿಯ ಮೈಸೂರು ಜಿಲ್ಲೆಯ ಜನರು ಎಚ್ಚರವಾಗಿರಬೇಕಾಗುತ್ತದೆ.

admin
the authoradmin

Leave a Reply