ಈ ಬಾರಿಯ ಮುಂಗಾರು ದಾಖಲೆಯ ಮಳೆ ಸುರಿಸಿದೆ ಹೀಗಾಗಿ ಜಲಪಾತ ಮಾತ್ರವಲ್ಲದೆ, ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಟ್ಟೆಗಳೆಲ್ಲವೂ ತುಂಬಿ ನೀರು ಕಟ್ಟೆಯ ಮೇಲೆ ಧುಮ್ಮಿಕ್ಕುತ್ತಿದ್ದು, ಈ ಸುಂದರ ದೃಶ್ಯಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿದೆ. ಈ ಪೈಕಿ ಹೇಮಗಿರಿ ಅಣೆಕಟ್ಟೆ ಕೂಡ ರೋಮಾಂಚನಕಾರಿ ಅನುಭವ ನೀಡುತ್ತದೆ. ಪ್ರತಿವರ್ಷ ಮಂಡ್ಯ ಜಿಲ್ಲೆಯ ಜನ ಈ ಸುಂದರ ಕ್ಷಣಗಳಿಗಾಗಿ ಕಾಯುತ್ತಾರೆ. ಮತ್ತು ರಸಮಯ ಕ್ಷಣಗಳನ್ನು ಅನುಭವಿಸುತ್ತಾರೆ..
ಚಿಕ್ಕಮಗಳೂರು ಹಾಸನದಲ್ಲಿ ಮಳೆಯಾಗಿ ಹೇಮಾವತಿ ನದಿ ತುಂಬಿ ಹರಿದರೆ, ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ಕೆ.ಆರ್.ಪೇಟೆಗೆ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಹೇಮಗಿರಿ ಅಣೆಕಟ್ಟೆಯು ಭರ್ತಿಯಾಗಿ ಧುಮ್ಮಿಕ್ಕುವ ಸುಂದರ ನೋಟ ಮನಸ್ಸೆಳೆಯುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಹೇಮಾವತಿ ನದಿ ಉಕ್ಕಿ ಹರಿದು ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಟ್ಟಾಗ ಅದು ಹೇಮಗಿರಿ ಅಣೆಕಟ್ಟೆಯಲ್ಲಿ ತುಂಬಿ ಹರಿಯುತ್ತದೆ.
ಇದನ್ನೂ ಓದಿ: ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನ ನೋಡುವುದೇ ಕಣ್ಣಿಗೊಂದು ಹಬ್ಬ…
ಈ ಬಾರಿ ಮುಂಗಾರು ಮೇ ಅಂತ್ಯ ಜೂನ್ ಆರಂಭದಲ್ಲಿಯೇ ಅಬ್ಬರಿಸಿದ ಕಾರಣದಿಂದಾಗಿ ನದಿಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಇದೀಗ ಮುಂಗಾರು ಆರಂಭವಾಗಿ ಒಂದು ತಿಂಗಳಷ್ಟೇ ಆಗಿದ್ದು ಇನ್ನೆರಡು ತಿಂಗಳು ಮುಂಗಾರು ಮುಂದುವರೆಯುವ ಕಾರಣದಿಂದಾಗಿ ಈ ಅಣೆಕಟ್ಟೆಯಲ್ಲಿನ ಜಲನರ್ತನ ಮುಂದುವರೆಯುವುದಂತು ಖಚಿತ. ಹೀಗಾಗಿಯೇ ಇಲ್ಲಿನ ನಿಸರ್ಗ ನೋಟವನ್ನು ಸವಿಯಲೆಂದೇ ಪ್ರವಾಸಿಗರು ಇತ್ತ ಬರುವುದು ಮಾಮೂಲಿಯಾಗಿದೆ.
ಇನ್ನು ಹೇಮಗಿರಿ ನಿಸರ್ಗ ಸುಂದರ ತಾಣವಾಗಿರುವುದರಿಂದ ಸಾಮಾನ್ಯವಾಗಿ ಎಲ್ಲ ದಿನಗಳಲ್ಲೂ ಪೇಟೆ, ಪಟ್ಟಣದ ಜನಜಂಗುಳಿಯಲ್ಲಿ ಒತ್ತಡದಿಂದ ಕೆಲಸ ಮಾಡುವ ಜನ ಇಲ್ಲಿಗೆ ಭೇಟಿ ನೀಡಿ ಒಂದಷ್ಟು ಸಮಯವನ್ನು ಕಳೆದು ಹೋಗುವುದು ಮಾಮೂಲಿಯಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಒಂದು ಕ್ಷಣ ನಿಂತು ನಿಸರ್ಗದ ಸುಂದರತೆಯನ್ನು ಸವಿಯುತ್ತಾ ಕಣ್ಣು ಹಾಯಿಸಿದರೆ ಇಲ್ಲಿಂದ ಕಂಡು ಬರುವ ನಿಸರ್ಗ ಸುಂದರ ನೋಟ ಒಂದೇ ಎರಡೇ.. ಧುಮ್ಮಿಕ್ಕುವ ನೀರ ಝರಿ… ಸುತ್ತಲೂ ಹರಡಿ ನಿಂತ ಹಚ್ಚ ಹಸಿರಿನ ಚೆಲುವು… ಅದರಾಚೆಗೆ ಬೀಸಿ ಬರುವ ತಂಗಾಳಿ ನಮ್ಮೆಲ್ಲ ನೋವುಗಳನ್ನು ಮರೆಸಿ ಮನಸ್ಸನ್ನೆಲ್ಲ ಉಲ್ಲಾಸಗೊಳಿಸಿ ಬಿಡುತ್ತದೆ.
ಇದನ್ನೂ ಓದಿ: ಇತಿಹಾಸದ ಕಥೆ ಹೇಳುವ ತೊಣ್ಣೂರು ಕೆರೆ.. ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ತಲೆದೂಗದವರಿಲ್ಲ.
ಪ್ರವಾಸಿಗರು ನಿಸರ್ಗದೊಂದಿಗೆ ಸಮಯ ಕಳೆಯುವುದರ ಜತೆಗೆ ಪಕ್ಕದ ಚಂದಗೋನಹಳ್ಳಿಯಲ್ಲಿರುವ ಅಮ್ಮನವರ ದೇವಸ್ಥಾನಕ್ಕೂ ತೆರಳಿ ವಿವಿಧ ಸೇವೆ ಸಲ್ಲಿಸಲು ಅವಕಾಶವಿದೆ. ಇಲ್ಲಿ ವಾರದ ನಾಲ್ಕು ದಿನಗಳ ಕಾಲ ಪರ, ಬೀಗರ ಔತಣ, ನಾಮಕರಣ, ಸೇರಿದಂತೆ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಇನ್ನು ಈ ತಾಣ ಭೃಗ ಮಹರ್ಷಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳವೂ ಇದಾಗಿದೆ.
ಇದೆಲ್ಲದರ ನಡುವೆ ಹೇಮಗಿರಿ ಬಳಿಯೇ ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ ನದಿ ಸಂಗಮ ಕ್ಷೇತ್ರವಿದ್ದು, ಈ ಸ್ಥಳಗಳಿಗೆ ಆಗಾಗ್ಗೆ ಪ್ರವಾಸಿಗರು ಬರುತ್ತಿರುತ್ತಾರೆ. ಇದೀಗ ಹೇಮಾವತಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿರುವ ಪರಿಣಾಮ ಕೆ.ಆರ್.ಪೇಟೆ ತಾಲೂಕಿನ ಗದ್ದೆ ಹೊಸೂರು, ಚಿಕ್ಕಮಂದಗೆರೆ, ಶ್ರವಣೂರು, ಬಂಡಿಹೊಳೆ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ನುಗ್ಗಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಮುಂಗಾರು ಮಳೆಗೆ ಸ್ವರ್ಗವನ್ನೇ ಧರೆಗಿಳಿಸುವ ಬಿಸಿಲೆಘಾಟ್…
ಈಗಾಗಲೇ ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಎಚ್ಚರವಾಗಿರುವುದರ ಜೊತೆಗೆ ನದಿಗೆ ಬಟ್ಟೆ ಒಗೆಯಲು, ದನಕರುಗಳಿಗೆ ನೀರು ಕುಡಿಸಲು, ಯುವಜನರು ಈಜಲು, ಮೀನು ಹಿಡಿಯಲು ನದಿಗೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ. ಜತೆಗೆ ನದಿಯ ಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು. ನದಿಗೆ ಇಳಿಯುವುದು, ದನಕರುಗಳನ್ನು ತೊಳೆಯಲು ನದಿಗೆ ಹೋಗುವುದು ಸೇರಿದಂತೆ ಯಾವುದೇ ಕೆಲಸಗಳಿಗೆ ನದಿಯ ಪಾತ್ರದತ್ತ ತೆರಳ ಬಾರದು ಎಂದು ತಿಳಿಸಿ, ಎಚ್ಚರಿಕೆ ಸೂಚನಾ ಫಲಕಗಳನ್ನು ಹಾಕಿಸಲಾಗಿದೆ.
ಇದನ್ನೂ ಓದಿ: ಮೈಸೂರಿನ ಧನುಷ್ಕೋಟಿಗೆ ಜೀವಕಳೆ… ಇದು ಎಲ್ಲಿದೆ?
ಹೇಮಗಿರಿ ಒಂದೊಳ್ಳೆಯ ಸುಂದರ ತಾಣವಾಗಿದ್ದು, ಪ್ರವಾಹ ಪರಿಸ್ಥಿತಿ ಇರುವ ವೇಳೆ ಅತ್ತ ಹೋಗುವ ಸಾಹಸ ಮಾಡುವುದು ಒಳ್ಳೆಯದಲ್ಲ. ಮಳೆ ಕಡಿಮೆಯಾಗಿ ಪ್ರವಾಹ ಪರಿಸ್ಥಿತಿ ಕಡಿಮೆಯಾದ ಬಳಿಕ ಅತ್ತ ತೆರಳುವುದು ಒಳ್ಳೆಯದು. ಇನ್ನು ಇಲ್ಲಿನ ನೀರಿನಲ್ಲಿ ಹುಚ್ಚಾಟ ನಡೆಸದೆ, ನಿಸರ್ಗ ಸೌಂದರ್ಯವನ್ನು ವೀಕ್ಷಿಸಿ ಹಿಂತಿರುಗುವುದು ಕ್ಷೇಮಕರ. ಸದಾ ಪಟ್ಟಣದ ಗೌಜು ಗದ್ದಲದಲ್ಲಿದ್ದವರು ಬಿಡುವು ಮಾಡಿಕೊಂಡು ಇತ್ತ ಬಂದು ಒಂದಷ್ಟು ಸಮಯ ಕಳೆದು ಹೋದರೆ ಮನಸ್ಸಿಗೂ ನೆಮ್ಮದಿ ಸಿಗುವುದರಲ್ಲಿ ಎರಡು ಮಾತಿಲ್ಲ.
B M Lavakumar