ArticlesLatest

ಈ ಬಾರಿ ದಸರಾ ಆಚರಣೆ ಹತ್ತು ದಿನವಲ್ಲ… ಹನ್ನೊಂದು ದಿನ… ಏನು ಕಾರಣ? ಇದು ದಸರಾ ಇತಿಹಾಸದ ವಿಶೇಷ!

ದಸರಾ ಇತಿಹಾಸದಲ್ಲಿಯೇ ಈ ಬಾರಿ 11 ದಿನಗಳ ದಸರಾ ಉತ್ಸವ ನಡೆಯುತ್ತಿದ್ದು, ಇದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರವೂ ದೊರಕಿದೆ. ಬಹುಶಃ ಮೈಸೂರು ದಸರಾ ಆರಂಭದಿಂದ ಇಲ್ಲಿಯವರೆಗೆ ಇಂತಹದೊಂದು ವಿಶೇಷ ದಿನಗಳು ಬಂದಿರಲಿಲ್ಲ. ಆದರೆ 2025ರಲ್ಲಿ ಅಂತಹದೊಂದು ಘಟನೆ ನಡೆಯುತ್ತಿದ್ದು, ಅದರಂತೆ ದಸರಾ ಆಚರಣೆಯೂ ಒಂದು ದಿನ ಹೆಚ್ಚು ಆಗಲಿದೆ. ಸಾಮಾನ್ಯವಾಗಿ ದಸರಾ ಎಂದರೆ ದಶದಿನಗಳ ಆಚರಣೆ.. ಆದರೆ ಎರಡು ದಿನಗಳ ಕಾಲ ಪಂಚಮಿ ಬಂದಿರುವುದರಿಂದ ಹನ್ನೊಂದು ದಿನಗಳ ಕಾಲ ದಸರಾ ಆಚರಣೆ ನಡೆಯುತ್ತಿದೆ.

ದಿನಗಳು ಉರುಳುತ್ತಿದ್ದು, ಆಷಾಢ ಕಳೆಯುತ್ತಿದ್ದಂತೆಯೇ ಶ್ರಾವಣ ಬರಲಿದೆ. ಅಷ್ಟರಲ್ಲಿಯೇ ದಸರಾ ಸಿದ್ಧತೆಗಳು ಆರಂಭವಾಗಲಿದೆ. ಈ ಬಾರಿ ದಸರಾ ಆಚರಣೆ ಬಹುಬೇಗವೇ ಆರಂಭಗೊಳ್ಳಲಿದೆ. ಸೆಷ್ಟಂಬರ್ ನಿಂದಲೇ ದಸರಾ ಶುರುವಾಗಲಿದ್ದು, ಆ ವೇಳೆಗೆ ಮಳೆ ಕಡಿಮೆಯಾಗುತ್ತಾ? ಮಳೆಯಲ್ಲಿಯೇ ದಸರಾ ನಡೆಯುತ್ತಾ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸಾಮಾನ್ಯವಾಗಿ ದಸರಾ ಸಮಯದಲ್ಲಿ ಮಳೆಯಿದ್ದರೆ ಕಿರಿಕಿರಿಯಂತು ತಪ್ಪಿದಲ್ಲ. ಅದರಲ್ಲೂ ಸೆಪ್ಟಂಬರ್ ಕೊನೆಯ ವಾರದಿಂದಲೇ ದಸರಾ ಆರಂಭವಾಗುತ್ತಿರುವುದರಿಂದ ಆ ದಿನಗಳಲ್ಲಿ ಮಳೆಯಂತೂ ಇದ್ದೇ ಇರುತ್ತದೆ. ಈ ಬಾರಿ ಏನಾಗುತ್ತದೆಯೋ?

ಇನ್ನು ಹನ್ನೊಂದು ದಿನಗಳ ದಸರಾಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಈ ಬಾರಿ ದಸರಾ ಸೆ.22ರಿಂದ ಆರಂಭವಾಗಿ  ಅ.2ರವರೆಗೆ ನಡೆಯಲಿದೆ. ಹನ್ನೊಂದು ದಿನ ದಸರಾ ಆಚರಣೆ  ದಸರಾ ಇತಿಹಾಸದಲ್ಲಿಯೇ ವಿಶೇಷವಾಗಿದ್ದು, 2025 ಇದಕ್ಕೊಂದು ನಿದರ್ಶನವಾಗಿ ಉಳಿಯಲಿದೆ. ಇಲ್ಲಿ ತನಕ ಹತ್ತು ದಿನಗಳ ಕಾಲ ಆಚರಣೆ ನಡೆಯುತ್ತಿತ್ತು. ಆದರೆ ಹನ್ನೊಂದು ದಿನಗಳ ಕಾಲ ನಡೆಯಲಿದೆ ಎಂಬ ವಿಚಾರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಮೈಸೂರು ದಸರಾ ಮಹೋತ್ಸವ ಪ್ರತಿ ವರ್ಷ 10 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.  ಇದು ದಸರಾ ಆರಂಭದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.

ಈಗಾಗಲೇ ಮೈಸೂರು ದಸರಾ ನಾಲ್ಕು ಶತಮಾನಗಳನ್ನು ಸವೆಸಿದೆ. ಇಷ್ಟು ವರ್ಷಗಳಲ್ಲಿ ಹತ್ತು ದಿನಗಳ ಕಾಲವೇ ಆಚರಣೆ ನಡೆದಿದೆ. ದಸರಾ ಎಂದರೆ ದಶ+ಹರ=ಹತ್ತು ದಿನಗಳ ಆಚರಣೆ. ಆದರೆ, ಈ ಬಾರಿ ಸೆ.22ರಿಂದ ಅ.2ರವರೆಗೆ ದಸರಾ ಆಚರಣೆ ನಡೆಯಲಿದ್ದು,  ಸೆ.26, ಸೆ.27 ಎರಡೂ ದಿನ ಪಂಚಮಿ ಆಗಮನವಿದ್ದು, ಹೀಗಾಗಿ ಹನ್ನೊಂದು ದಿನ ದಸರಾ ಆಚರಣೆ ಮಾಡುವುದು ಅನಿವಾರ್ಯವಾಗಿದೆ. 1410ರಲ್ಲಿ ಮೈಸೂರು ಸಂಸ್ಥಾನದ ಅರಸರ ಆಳ್ವಿಕೆ ಕಾಲದಲ್ಲಿ ದಸರಾ ಮಹೋತ್ಸವ ಆಚರಣೆ ಆರಂಭವಾಗಿದ್ದು, ಇದುವರೆಗೂ ಹನ್ನೊಂದು ದಿನಗಳ ಕಾಲ ದಸರಾ ಮಹೋತ್ಸವ ಆಚರಿಸಿದ ಉದಾಹರಣೆಗಳಿಲ್ಲ.

ಇಲ್ಲಿವರೆಗೂ ಹತ್ತು ದಿನಗಳ ಕಾಲ ದಸರಾ ಆಚರಣೆ ನಡೆಯುತ್ತಾ ಬಂದಿದ್ದು, ನವರಾತ್ರಿಯ ಮಾರನೆಯ ದಿನ ವಿಜಯದಶಮಿ ಆಚರಣೆಯನ್ನು ಮಾಡಲಾಗುತ್ತಿತ್ತು. ಆದರೆ ಈ ಬಾರಿ ದಶ ದಿನಗಳ ನಡುವೆ ಎರಡು ದಿನ  ಸೆ.26ಮತ್ತು 27ರಂದು ಪಂಚಮಿ ಬಂದಿರುವ ಹಿನ್ನೆಲೆ ದಸರಾ ಉತ್ಸವ 11 ದಿನಗಳ ಕಾಲ ದಸರಾ ಆಚರಣೆ ನಡೆಯಲಿದೆ. ಇದರ ಬಗ್ಗೆ ಮಾಹಿತಿ ನೀಡಿರುವ ಆಧ್ಯಾತ್ಮಿಕ ಚಿಂತಕ ಡಾ.ಶೆಲ್ವಪಿಳೈ ಅಯ್ಯಂಗಾರ್ ಅವರು ಒಂದು ದಿನ ಹೆಚ್ಚಾಗಿ ದಸರಾ ಮಹೋತ್ಸವ ಆಚರಣೆ ಮಾಡುವುದು ಒಳ್ಳೆಯ  ಸಂಕೇತವೇ ಆಗಿದೆ. ಹಿರಿಯರು ಎಲ್ಲವೂ ಹೆಚ್ಚಲಿ ಎಂದೇ ಹೇಳುತ್ತಾರೆ. ಅದರಂತೆ  ಒಂದು ದಿನ ಹೆಚ್ಚಾಗಿ ದಸರಾ ಮಹೋತ್ಸವ ಆಚರಿಸಿದರೆ ಒಳ್ಳೆಯದೇ ಆಗುತ್ತದೆ. ಭಾರತೀಯರು ಸರ್ವವೂ ಒಳ್ಳೆಯದಾಗಲಿ ಎಂದು ಬಯಸುವವರು. ಸಕಲ ಜೀವರಾಶಿಗೆ ಒಳಿತು ಬಯಸುವ ಭಾರತೀಯರಿಗೆ ಇದರಿಂದ ಕೆಡುಕು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರು ಪ್ರತಿಕ್ರಿಯೆ ನೀಡಿ, ಈ ಬಾರಿಯ ದಸರಾ ಸೆ.22ರಿಂದ ಆರಂಭವಾಗಿ ಅ.2ರವರೆಗೆ ನಡೆಯಲಿದ್ದು, ಸೆಪ್ಟಂಬರ್ 26, ಸೆ.27 ಎರಡೂ ದಿನ ಪಂಚಮಿ ಇರುವುದರಿಂದ 11 ದಿನಗಳ ಕಾಲ ದಸರಾ ಉತ್ಸವ ಇರಲಿದೆ. ಚಾಮುಂಡಿ ಬೆಟ್ಟದಲ್ಲಿ 11 ದಿನವೂ ವಿಶೇಷ ಪೂಜೆ, ವಿಶೇಷ ಅಲಂಕಾರ ಮತ್ತು ಉತ್ಸವವನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಅದು ಏನೇ ಇರಲಿ ಮೈಸೂರು ದಸರಾ ಅಂದರೆ ಅದೊಂದು ಅದ್ಭುತ.. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ವಿಧ್ಯುಕ್ತವಾಗಿ ಆರಂಭವಾಗುವ ದಸರಾ ರಾತ್ರಿ ಹಗಲು ಮಿಂಚಿನಂತೆ ಮೆರೆಯುತ್ತದೆ. ಕೃಷಿಯೇ ಬದುಕಾಗಿ, ಜನಸಂಪರ್ಕ ದೂರವಾಗಿ, ಮನರಂಜನೆಯಿಂದ ವಂಚಿತವಾಗಿ ತಮ್ಮದೇ ಬದುಕಿನಲ್ಲಿ ಮುಳುಗಿರುತ್ತಿದ್ದ ಕಾಲದಲ್ಲಿ ದಸರಾ ಎಲ್ಲರನ್ನು ಒಂದೆಡೆ ಸೇರಿ ಸಂಭ್ರಮಿಸಲು ಅನುಕೂಲ ಮಾಡಿಕೊಟ್ಟಿತ್ತು. ಹೀಗಾಗಿ ಅವತ್ತಿನಿಂದ ಇವತ್ತಿನವರೆಗೆ  ಇತಿಹಾಸದ ಕಾಲಘಟ್ಟಗಳಿಗೆ ಹೊಸತನದ ಕೊಂಡಿಯನ್ನು ಸೇರಿಸಿರುವ ದಸರಾ ಈ ಬಾರಿ ಹನ್ನೊಂದು ಕಾಲ ಆಚರಣೆಯಾಗುತ್ತಿರುವುದು ಖುಷಿಕೊಟ್ಟಿದೆ. ಹೀಗಾಗಿ ಆ ದಿನಗಳಿಗೆ ಕಾಯೋಣ…

B.M.Lavakumar

admin
the authoradmin

Leave a Reply