ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಿ.ನರಸಿಪುರದಲ್ಲಿರುವ ಕೆ.ಎಸ್ಐ.ಸಿ ಪಿಲೇಚರ್ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವುದನ್ನು ಕೈ ಬಿಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್ ರವರು ಒತ್ತಾಯಿಸಿದ್ದಾರೆ.
ತಿ.ನರಸಿಪುರದಲ್ಲಿರುವ ಕೆ.ಎಸ್.ಐ.ಸಿ ಪಿಲೇಚರ್ ಕಾರ್ಖಾನೆ ಕೃಷ್ಣರಾಜ ಒಡೆಯರ್ ರವರ ದೂರದೃಷ್ಟಿಯ ಆಲೋಚನೆಯಿಂದ ಸ್ಥಾಪನೆ ಮಾಡಿದ ಕಾರ್ಖಾನೆಯಾಗಿದ್ದು, ಈ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ರೇಷ್ಮೆ ನೂಲು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಮೈಸೂರು ಮತ್ತು ಚನ್ನಪಟ್ಟಣ ರೇಷ್ಮೆ ನೇಯ್ಗೆ ಕಾರ್ಖಾನೆಗಳಿಗೆ ಸರಬರಾಜಾಗುತ್ತಿದೆ. ಈ ಸೀರೆಗಳಿಗೆ ಅಪಾರ ಬೇಡಿಕೆ ಇದ್ದು, ಸರ್ಕಾರಕ್ಕೆ ಲಾಭವನ್ನು ತರುತ್ತಿದೆ. 2018-19 ಮತ್ತು 2019-20 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿದೆ.
ಈ ಕಾರ್ಖಾನೆಯನ್ನು ಮತ್ತಷ್ಟು ವಿಸ್ತರಿಸಲು ಸಂಸ್ಥೆಯು ನೀಲಿ ನಕ್ಷೆ ತಯಾರಿಸಿ ಕಳೆದ 08 ವರ್ಷಗಳಿಂದ ಸರ್ಕಾರಕ್ಕೆ ಅನುಮತಿ ಕೋರಿದರೂ ಅನುಮತಿ ಕೊಡದೆ ವಿಸ್ತರಿಸಲು ವಿಳಂಬ ಮಾಡುತ್ತಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಉಳಿದಿರುವ ಜಾಗಕ್ಕೆ ಯಂತ್ರಗಳು, ಕಟ್ಟಡಗಳನ್ನು ನಿರ್ಮಿಸುವ ಅವಶ್ಯಕತೆ ಇರುವ ಸಂದರ್ಭದಲ್ಲಿ ಅದಕ್ಕೆ ಒತ್ತು ನೀಡದೇ ಕಾರ್ಖಾನೆಯ 5 ಎಕರೆ 05 ಗುಂಟೆ ವಿಸ್ತೀರ್ಣದಲ್ಲಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿ ಈಗಾಗಲೇ ಯುವಜನ ಸಬಲೀಕರಣ ಇಲಾಖೆಗೆ ವಹಿಸಿರುವುದು ಕಾರ್ಖಾನೆ ಮತ್ತು ಸಾರ್ವಜನಿಕರ ಹಾಗೂ ಪರಿಸರದ ಹಿತದೃಷ್ಟಿಯಿಂದ ಒಪ್ಪುವಂತದ್ದಲ್ಲ.

ಈ ಕಾರಣ ರೈತ ಸಂಘವು ಸರ್ಕಾರದ ಈ ತೀರ್ಮಾನವನ್ನು ವಿರೋಧಿಸುತ್ತದೆ ಹಾಗೂ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದನ್ನು ಕೈ ಬಿಟ್ಟು ಮತ್ತೆ ಈ ಜಾಗವನ್ನು ಕಾರ್ಖಾನೆಗೆ ವಹಿಸಬೇಕೆಂದು ಸಂಘವು ಮತ್ತು ಪ್ರಗತಿಪರ ಹೋರಾಟಗಾರರು, ಕಾರ್ಖಾನೆ ಕಾರ್ಮಿಕರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ. ಸಂವಿಧಾನ ಮತ್ತು ಸಮಾನತೆ, ಅಭಿವೃದ್ಧಿ, ದೂರದೃಷ್ಠಿಯ ಯೋಜನೆಗಳನ್ನು ನಾಡಿಗೆ ನೀಡಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕೊಡುಗೆ ಅಪಾರವಾಗಿದ್ದು ಇದನ್ನು ಉಳಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಈ ಹೋರಾಟಕ್ಕೆ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ರವರು, ಉಪಾಧ್ಯಕ್ಷ ಕೆಂಪೂಗೌಡರು, ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು ರವರು ಹಾಗೂ ಸ್ಥಳೀಯ ಪ್ರಗತಿಪರ ಸಂಘಟನೆಗಳು, ತಿ.ನರಸೀಪುರ ತಾಲ್ಲೂಕಿನ ಅಧ್ಯಕ್ಷರಾದಂತಹ ಕುಮಾರಸ್ವಾಮಿ ಮತ್ತು ಪದಾಧಿಕಾರಿಗಳು, ಕಳೆದ 15 ದಿನಗಳಿಂದ ಹೋರಾಟ ಮಾಡುತ್ತಿದ್ದು, ಧರಣಿಯಲ್ಲಿ 15ನೇ ತಾರೀಕಿನವರೆಗೆ ಗಡುವು ನೀಡಿದ್ದು, ಸರ್ಕಾರವು ಕ್ರೀಡಾಂಗಣಕ್ಕೆ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು.
ಇಲ್ಲದಿದ್ದಲ್ಲಿ ಮೈಸೂರು ಜಿಲ್ಲಾ ರೈತ ಸಂಘದ ಸಭೆಯಲ್ಲಿ ಮತ್ತು ಇನ್ನಿತರ ಪ್ರಗತಿಪರ ಸಂಘಟನೆಗಳ ಸಹಕಾರವನ್ನು ಪಡೆದುಕೊಂಡು ಮುಂದಿನ ಹೋರಾಟಗಳನ್ನು ರೂಪಿಸಲು ತೀರ್ಮಾನಿಸಲಾಗುವುದು ಹಾಗೂ ಈ ಹೋರಾಟವನ್ನು ಜಿಲ್ಲಾ ಮತ್ತು ರಾಜ್ಯಮಟ್ಟದ ವ್ಯಾಪ್ತಿಗೂ ರೂಪಿಸಲಾಗುವುದು ಎಂದು ಹೇಳಿದ್ದಾರೆ.








