ಎಲ್ಲರೂ ಮಾಡುವುದು ಪುಟ್ಟಹೊಟ್ಟೆಗಾಗಿ, ಗೇಣುಬಟ್ಟೆಗಾಗಿ. ಆದರೆ ಕೆಲವು ದಶಕಗಳಿಂದ ಮಹತ್ತರ ಬದಲಾವಣೆ ಕಾಣುತ್ತಿದ್ದೇವೆ.ಏಕಂದ್ರೆ ಬಹುತೇಕ ಮಂದಿ ಕೇವಲ ಅವರವರ ಪುಟ್ಟ ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಮಾತ್ರ ಅಲ್ಲದೇ.. ಆಸ್ತಿಗಾಗಿಯೂ, ಅಂತಸ್ತಿಗಾಗಿಯೂ, ಹಣಕ್ಕಾಗಿಯೂ ಒಡವೆ-ವಸ್ತ್ರಕ್ಕಾಗಿಯೂ, ಸೈಟು ಜಮೀನು ಮನೆಗಾಗಿಯೂ, ಅನ್ನ ಚಿನ್ನ ಕನ್ನ ನಿ-ರೋಗಕ್ಕಾಗಿಯೂ ಶಿಕ್ಷಣ (ಮಾರುಕಟ್ಟೆ ಗಾಗಿ) ಕ್ಕಾಗಿಯೂ, ದೇವಿ-ದೇವರ ದರ್ಶನಕ್ಕೂ ಪೂಜೆ ವರ-ಪ್ರಸಾದಕ್ಕೂ ಮತ್ತೆ ಕೆಲವರು ವರ್ಚುಯಲ್ ಯುನಿವರ್ಸಿಟಿಯ ಡಾಕ್ಟರ್ (ರೇಟ್?!) ಡಿಗ್ರಿ ಕೊಳ್ಳಲೂ, ಇನ್ನು ಕೆಲವರು ಕಲ್ಲುಕಟ್ಟಡದ ಕುರ್ಚಿಗಾಗಿಯೂ, (ಎಂ.ಎಸ್.ಬಿಲ್ಡಿಂಗ್) ಬಹುಮಹಡಿ ಕಟ್ಟಡದ ಹುದ್ದೆಗಾಗಿಯೂ, ಗ್ರಾಮ ಪಂಚಾಯ್ತಿ ತಾಲೂಕುಪಂಚಾಯ್ತಿ, ಜಿಲ್ಲಾಡಳಿತ, ರಾಜ್ಯದ ಅಥವ ರಾಷ್ಟ್ರದ ವಿವಿಧ ನಿಗಮ ಮಂಡಳಿಯ ಅಧ್ಯಕ್ಷ ಪದವಿಗಾಗಿಯೂ… ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಜನರು ಇವತ್ತು ನಿರಂತರ ವೇಷ ಭೂಷಣ ಬದಲಾಯಿಸುವುದರ ಜತೆಗೆ ಗೋಸುಂಬಿಯಂತೆ ಬಣ್ಣವನ್ನೂ ಬದಲಾಯಿಸುತ್ತಾರೆ?! ಇವೆಲ್ಲವನ್ನು ಹೊರತು ಪಡಿಸಿದಂತೆ ಪೂಜೆ ಪುನಸ್ಕಾರ ಪ್ರಾರ್ಥನೆ ಮಾಡುವ ಸ್ಥಳವನ್ನು ಅಪಾರ್ಟ್‌ಮೆಂಟ್, ರೆಸಾರ್ಟ್, ಪಬ್, ಡಿಸ್ಕೋಥೆಕ್, ಸ್ಟಾರ್ ಹೋಟೆಲ್, ಬೋರ್ಡಿಂಗ್-ಲಾಡ್ಜಿಂಗ್, ಇತ್ಯಾದಿ ಕಮರ್ಷಿಯಲ್ ಉಪಯೋಗಕ್ಕೆ (ಕ)ಬಳಸುವ ಷಡ್ಯಂತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಿಮಗೆ ಗೊತ್ತಾ ನಿಮ್ಮ ಬಯಕೆಗಳೇ ನಿಮಗೆ ವೈರಿಯಂತೆ… ಅದು ಹೇಗೆ? ಏಕೆ?..
ಜತೆಗೆ ಮಕ್ಕಳಕ್ರೀಡಾಂಗಣ, ದೊಡ್ಡಮೋರಿ, ಹಿರಿಯರ ಉದ್ಯಾನವನ, ರಾಜಕಾಲುವೆ, ಕೆರೆ ಕಟ್ಟೆ, ಎಲ್ಲವನ್ನು ಸಾರಾಸಗಟಾಗಿ ಗುಳುಂ ಮಾಡಿ, ಏಕ್ದಮ್ ತಿಂದು ತೇಗಲು ಅಥವಾ ಒಂದೇ ಸಲ ನುಂಗಿ ನೀರುಕುಡಿಯಲು (ಪ್ಲಾನ್) ಯೋಚನೆ-ಯೋಜನೆ ರೂಪಿಸುತ್ತಿದ್ದಾರೆ. ಅಭಯಾರಣ್ಯ, (ಕೆಂಪು)ಚಂದನದ ಕಾಡನ್ನೆಲ್ಲ ಹಾಳು(ನಾಡನ್ನಾಗಿ)ಮಾಡಲು ನಖಶಿಖಾಂತ ಹೊಂಚುಹಾಕುತ್ತಿದ್ದಾರೆ…? ಮತ್ತೆ ಹಲವು ಪ್ರಜಾಪ್ರತಿನಿಧಿಗಳೇ ನಿರ್ಧರಿಸಿದ್ದಾರೆ ತಾವು ಮೌಲ್ಯಧಾರಿತ ರಾಜಕೀಯ ಮಾಡುವ ಪ್ರಾಮಾಣಿಕ ಪ್ರಜಾಸೇವಕರಾಗೋ ಬದಲು ಪ್ರಜೆಗಳನ್ನೆ ಸೇವಕರಾಗಿಸಿ-ಕೊಳ್ಳಲು?!ಹಗಲಿರುಳು ಹವಣಿಸುತ್ತಿದ್ದಾರೆ.
ಇದನ್ನೂ ಓದಿ: ಮರ್ಕಟದಂತಹ ಮನಸ್ಸನ್ನು ಏಕಾಗ್ರತೆಯ ಗೂಟಕ್ಕೆ ಕಟ್ಟಿ ಹಾಕುವುದು ಹೇಗೆ..?
ಹೀಗಾಗಿ ಪ್ರಜೆಗಳೇ-ಪ್ರಭುಗಳು ನಾಣ್ಣುಡಿಯು ಅರ್ಥ ಕಳೆದುಕೊಂಡು ಒದ್ದಾಡುತ್ತಿದೆ, ಅನಾಥವಾಗಿ ಬಿದ್ದು ಜೀವದಹೆಣದಂತಿದೆ…! ಅಬ್ಬಾ…ಅಬ್ಬಬ್ಬ… ಭವಿಷ್ಯದ ಭಾರತವನ್ನು ನೆನಪಿಸಿಕೊಂಡರೆ ಸಾಕು, ಭಯದಿಂದ ಗಢಗಢ ನಡುಕ ಉಂಟಾಗುವ ಸ್ಥಿತಿ ತಲುಪಿದ್ದೇವೆ ಈಗ ವರ್ತಮಾನದಲ್ಲಿ…? ಉದರ ನಿಮಿತ್ತಂ ಬಹುಕೃತ ವೇಷಂ ಎಂಬುದು ನಮಗೆಲ್ಲ ಗೊತ್ತೇ ಇದೆ. ಆದರೆ, ಇಲ್ಲೊಬ್ಬ ಆಸಾಮಿ ಇದ್ದಾನೆ. ಈತ ಮಾಡುತ್ತಿರುವುದೇನೆಂದರೆ ಶ್ರೀಸಾಮಾನ್ಯ ಜನರು ಪವಿತ್ರವಾದದ್ದೆಂದು ನಂಬಿರುವ ಖಾವಿಯನ್ನೇ ತನ್ನ ಹೊಟ್ಟೆಪಾಡಿಗೆ ಉುಪಯೋಗ ಮಾಡಿಕೊಳ್ಳುವ ಬದಲು ಅದನ್ನೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ: ಕಾಯಕವೇ ಕೈಲಾಸ…. ನಾವು ನಮಗಾಗಿ ಕೆಲಸ ಮಾಡುವುದನ್ನು ಕಲಿಯೋಣ
ಇವನು ಶರಣನೇ ಇರಬೇಕು ಎಂಬುವ ಸದ್ಭಾವನೆಯಿಂದ ಪ್ರತಿಯೊಬ್ಬರೂ ಸಹ ಗೌರವ ನೀಡಿ, ನಮಸ್ಕರಿಸಿ ಅವರವರ ಕೆಲಸ ಕಾರ್ಯ ಕರ್ತವ್ಯಕ್ಕೆ ಹೋದ ಮೇಲೆ, ಕೇವಲ ಒಂದೆರಡು ಗಂಟೆಯಲ್ಲೇ ಇದೇ ಖಾವಿಧಾರಿ ವ್ಯಕ್ತಿಯು ಬೀಡಿ ಸೇದಿಕೊಂಡು, ಮೋಜುಮಸ್ತಿ ಮಾಡುತ್ತಾನೆ. ಪಾ..ಪ..ಈತನ ಊಸರವಳ್ಳಿ ಗುಣ ಅರಿಯದ ಜನರು ಇವನಿಗೆ ಕೈತುಂಬ ಕಾಸುನೀಡಿ, ಹೊಟ್ಟೆತುಂಬ ಅನ್ನನೀಡಿ ಮೈತುಂಬಾ ವಸ್ತ್ರಕೊಟ್ಟು ಕಾಪಾಡಿ ಸಾಕಿ ಸಲಹುತ್ತಿದ್ದಾರೆ!
ಸೋ,,, ಮದುವೆಗಾಗಿ, ಮನೆಕಟ್ಟಲಿಕ್ಕಾಗಿ, ಹತ್ಯೆ-ಆತ್ಮಹತ್ಯೆಗಾಗಿ, ಶಕ್ತಿಗಾಗಿ, ಯುಕ್ತಿ-ಕುಯುಕ್ತಿಗಾಗಿ, ಕಡೆಗೆ ಭಕ್ತಿ-ಮುಕ್ತಿಗಾಗಿ, ಆಗಾಗ್ಗೆ ಅಥವ ನಿರಂತರ ತಂತಮ್ಮ ವೇಷ ಬದಲಾಯಿಸುವುದರ ಜತೆಗೆ ಗೋಸುಂಬಿಯಂತೆ ಬಣ್ಣವನ್ನೂ ಬದಲಾಯಿಸುತ್ತ ಇರುತ್ತಾರೆ. ಇದೆಲ್ಲ-ಇವರೆಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತದೋ-ಮುಟ್ಟುವರೋ..? ಇದಕ್ಕೆಲ್ಲ ಅಂತ್ಯ ಎಂದಿಗೋ…? ಬಲ್ಲವರಾರು! ಅಲ್ಪಸ್ವಲ್ಪ ಬಲ್ಲವರನ್ನು ಕೇಳಿದಾಗ: “ಯದಾಯದಾಹಿ ಅಧರ್ಮಸ್ಯ…..ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ… ಶ್ಲೋಕದ ಉದಾಹರಣೆ ನೀಡುತ್ತಾ ಸಮಾಧಾನ ಪಡಿಸಿ ಸಾಂತ್ವನ ಹೇಳುತ್ತಾರೆ ಅಷ್ಟೆ..
ಇದನ್ನೂ ಓದಿ: ಯಶಸ್ಸು ಪುಕ್ಕಟೆ ಸಿಗುವ ವಸ್ತುವಲ್ಲ.. ಅದು ನಿರಂತರ ಶ್ರಮದ ಫಲ…
ಪಾಪ ಇನ್ನೇನು ಮಾಡಲು ತಾನೇ ಸಾಧ್ಯ..?! ಪರಮಾತ್ಮನು ದುಷ್ಟ ಶಿಕ್ಷಕನಾಗಿ, ಶಿಷ್ಟ ರಕ್ಷಕನಾಗಿ ಮತ್ತೊಮ್ಮೆ ಅವತಾರ ಎತ್ತಿ ಬರಲಿದ್ದಾನೆ…ಎಲ್ಲದರ ಬದಲಾವಣೆ ತರಲಿದ್ದಾನೆ… ಎಂಬುವ ಅಚಲನಂಬಿಕೆ ಆತ್ಮವಿಶ್ವಾಸ ಹಾಗೂ ಕಡೇ ನಿರೀಕ್ಷೆಯಿಂದ ಕೇವಲ ಆಶಾಜೀವಿಯಾಗಿ ಮಾತ್ರ ಇರುವಷ್ಟು ಕಾಲ ಬದುಕುವುದು ಬಿಟ್ಟರೆ ಬೇರೆಏನಿದೆ…?!