ಕೊಡಗಿನಲ್ಲಿ ಭಯಹುಟ್ಟಿಸಿದ್ದ ಹುಲಿ ಸೆರೆ… 10 ದಿನದಲ್ಲಿ 7 ಜಾನುವಾರುಗಳನ್ನು ಕೊಂದಿದ್ದ ವ್ಯಾಘ್ರ… ನಿಟ್ಟುಸಿರು ಬಿಟ್ಟ ಜನ

ಮಡಿಕೇರಿ: ಮೇಲಿಂದ ಮೇಲೆ ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಾ ತನ್ನ ಇರುವನ್ನು ತೋರ್ಪಡಿಸುತ್ತಾ ಜನರಲ್ಲಿ ಆತಂಕ, ಭಯ ಹುಟ್ಟಿಸಿದ ಹುಲಿ ಕೊನೆಗೂ ಸೆರೆಯಾಗಿದೆ.. ಆ ಮೂಲಕ ಜನ ಜಾನುವಾರುಗಳು ನಿಟ್ಟುಸಿರು ಬಿಡುವಂತಾಗಿದೆ.
ಕೊಡಗಿನಲ್ಲಿ ಅದರಲ್ಲೂ ದಕ್ಷಿಣಕೊಡಗಿನಲ್ಲಿ ಹುಲಿಗಳು ಆಗಾಗ್ಗೆ ದಾಳಿ ಮಾಡುವುದು ಹೊಸದೇದನಲ್ಲ. ಈಗಾಗಲೇ ಹುಲಿ ದಾಳಿಗೆ ಮನುಷ್ಯರು ಸೇರಿದಂತೆ ಜಾನುವಾರುಗಳು ಬಲಿಯಾಗಿವೆ. ಕಾಡಾನೆಗಳಂತು ಈ ವ್ಯಾಪ್ತಿಯಲ್ಲಿ ಮಾಮೂಲಿಯಾಗಿವೆ. ಆದರೆ ಹುಲಿ ಹಾವಳಿಯಿಂದ ಜನ ತಮ್ಮ ಜೀವವನ್ನು ಕೈನಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೀಗ ಕಾಫಿಕೊಯ್ಲುನ ಸಮಯವಾಗಿರುವುದರಿಂದ ಕಾರ್ಮಿಕರು ತೋಟದಲ್ಲಿ ಕಾಫಿ ಕೊಯ್ಲು ಮಾಡಲೇ ಬೇಕಾಗಿತ್ತು. ಆದರೆ ಬೆಸಗೂರು ವ್ಯಾಪ್ತಿಯಲ್ಲಿ ಹುಲಿ ಆಗಾಗ್ಗೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದರಿಂದ ತೋಟದ ಕೆಲಸ ಮಾಡಲು ಭಯಪಡುವ ಪರಿಸ್ಥಿತಿ ಎದುರಾಗಿತ್ತು. ತೋಟದೊಳಗಿನಿಂದ ಯಾವಾಗ ತಮ್ಮ ಕಡೆಗೆ ಬಂದು ಬಿಡಬಹುದೋ ಎಂಬ ಭಯದಲ್ಲಿಯೇ ದಿನ ಕಳೆಯುವಂತಾಗಿತ್ತು.
ಈ ನಡುವೆ ಕಾಣಿಸಿಕೊಂಡಿದ್ದ ಹುಲಿ ಸುಮಾರು ಹತ್ತು ದಿನಗಳಲ್ಲಿ 7ಕ್ಕೂ ಹೆಚ್ಚು ಜಾನುವಾರುಗಳನ್ನು ತಿಂದು ಹಾಕಿತ್ತು. ಇದರಿಂದ ಆತಂಕಗೊಂಡಿದ್ದ ಸಾರ್ವಜನಿಕರು ಸೆರೆಹಿಡಿಯುವಂತೆ ಒತ್ತಾಯ ಮಾಡಿದ್ದರೆ, ಹುಲಿ ಸೆರೆ ಹಿಡಿಯುವಂತೆ ರೈತಸಂಘ ಪ್ರತಿಭಟನೆ ನಡೆಸಿ ಆಕ್ರೋಶವನ್ನು ಹೊರಹಾಕಿತ್ತು. ಹೀಗಾಗಿ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ಹುಲಿಯ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು.

ಎಸಿಎಫ್ ಗೋಪಾಲ್ ನೇತೃತ್ವದಲ್ಲಿ 80 ಅರಣ್ಯ ಸಿಬ್ಬಂದಿಗಳು ಎರಡು ಸಾಕಾನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಕಾರ್ಯಾಚರಣೆ ಫಲಕೊಟ್ಟಿದ್ದು, ಕೊನೆಗೂ ಉಪಟಳ ನೀಡುತ್ತಾ ಭಯ ಹುಟ್ಟಿಸಿದ ಅಂದಾಜು 6 ವರ್ಷ ಪ್ರಾಯದ ಗಂಡು ಹುಲಿ ಸೆರೆಯಾಗಿದೆ. ಇದನ್ನು ಸೆರೆಹಿಡಿದ ಬಳಿಕ ಸುರಕ್ಷಿತವಾಗಿ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗಿದೆ. ಕಾರ್ಯಾಚರಣೆ ವೇಳೆ ಡಿ.ಎಫ್.ಓ ಜಗನ್ನಾಥ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.







