ArticlesLatest

ಕೊಡಗಿನ ಇರ್ಪು ಜಲಪಾತದಲ್ಲೀಗ ಮುಂಗಾರು ಮಳೆ ವೈಭವ… ದಟ್ಟ ಕಾನನದ ನಡುವೆ ಈ ಜಲಪಾತ ಸೃಷ್ಟಿಯಾಗಿದ್ದು ಹೇಗೆ?

ಈ ಬಾರಿ ರೋಹಿಣಿ ಮಳೆಯಿಂದ ಆರಂಭವಾಗಿ ಮೃಗಶಿರಾ, ಆರಿದ್ರಾ ಮಳೆ ಅಬ್ಬರಿಸಿದ ಕಾರಣದಿಂದಾಗಿ ಕೊಡಗಿನಲ್ಲಿ ಹಳ್ಳ, ಕೊಳ್ಳ, ಹೊಳೆ, ನದಿ, ಝರಿ, ಜಲಪಾತ ಎಲ್ಲವೂ ಧುಮ್ಮಿಕ್ಕಿ ಹರಿಯುತ್ತಿವೆ. ಈ ಸಮಯದಲ್ಲಿ ಹಿಂದೆಂದೂ ಕಾಣದಂತೆ ಮಳೆ ಸುರಿಯಲಾರಂಭಿಸಿದೆ. ಮಳೆಯ ರಭಸಕ್ಕೆ ಜಲಪಾತಗಳು ರುದ್ರರಮಣೀಯ ನರ್ತನಗೈಯ್ಯುತ್ತಿವೆ. ಈ ಪೈಕಿ ದಕ್ಷಿಣಕೊಡಗಿನಲ್ಲಿರುವ ಇರ್ಪು ಜಲಪಾತ ರೌದ್ರತೆ ಮೆರೆಯುತ್ತಿದೆ.

ಬೇರೆ ಜಲಪಾತಗಳಿಗೆ ಹೋಲಿಸಿದರೆ ಮಳೆಗಾಲ ಹೊರತು ಪಡಿಸಿದರೆ ಉಳಿದ ದಿನಗಳಲ್ಲಿ ಸೌಮ್ಯತೆ ಪ್ರದರ್ಶಿಸುವ ಈ ಜಲಪಾತ ಮುಂಗಾರು ಆರಂಭವಾದಲ್ಲಿಂದ ಇಲ್ಲಿವರೆಗೆ ಇನ್ನಿಲ್ಲದಂತೆ ಅಬ್ಬರಿಸುತ್ತಿದೆ. ಈ ಸಮಯಲ್ಲಿ ಇತ್ತ ಸುಳಿಯದಿರುವುದು ಒಳ್ಳೆಯದು. ಈಗಾಗಲೇ ಮಳೆ ಅನಾಹುತದಿಂದ ಕೊಡಗು ಪರದಾಡುವಂತಾಗಿದೆ. ಎಲ್ಲೆಂದರಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಇದನ್ನೂ ಓದಿ: ಚಿಕ್ಲಿಹೊಳೆಯಲ್ಲಿ ಜಲಬೆಡಗಿಯ ನರ್ತನ ನೋಡುವುದೇ ಕಣ್ಣಿಗೊಂದು ಹಬ್ಬ

ಸಾಮಾನ್ಯವಾಗಿ ಕೊಡಗಿನಲ್ಲಿರುವ ಯಾವುದೇ ಜಲಪಾತಗಳ ಬಳಿಗೆ ಹೋಗಲು ಇದು ಸಕಾಲವಲ್ಲ. ಆಗಸ್ಟ್ ನಂತರ ಜಲಪಾತಗಳತ್ತ ತೆರಳುವುದು ಒಳ್ಳೆಯದು. ಈ ಸಮಯದಲ್ಲಿ ಜಲಪಾತಗಳ ಬಳಿಗೆ ತೆರಳದಂತೆ ಮನವಿ ಮಾಡಿದ ಮೇಲೆಯೂ ಅತ್ತ ತೆರಳುವುದು ಅಪಾಯವನ್ನು ಮೈಮೇಲೆ ಎಳೆದು ಕೊಂಡಂತೆಯೇ… ಇನ್ನು ಇರ್ಪು ಜಲಪಾತದ ಬಗ್ಗೆ ಹೇಳಬೇಕೆಂದರೆ  ಇದು ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿದ್ದು, ಪೊನ್ನಂಪೇಟೆ ತಾಲೂಕಿಗೆ ಸೇರಿದೆ. ಮಡಿಕೇರಿ ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಅಥವಾ ಹುಣಸೂರು ನಾಗರಹೊಳೆ ಕುಟ್ಟ ಮೂಲಕವೂ ಇದರತ್ತ ತೆರಳಲು ರಸ್ತೆಯಿದೆ.

ಲಕ್ಷ್ಮಣತೀರ್ಥ ನದಿಯಿಂದ ನಿರ್ಮಿತವಾಗಿರುವ ಜಲಪಾತವು ಕೊಡಗಿನಲ್ಲಿರುವ ಇತರೆ ಜಲಪಾತಗಳಿಗಿಂತ ವಿಶಿಷ್ಟವಾಗಿದ್ದು, ಪರಮಪವಿತ್ರವಾಗಿ, ಇಷ್ಟಾರ್ಥಗಳನ್ನು ನೆರವೇರಿಸುವ ಜಲಧಾರೆಯಾಗಿ ಕೊಡಗಿನವರ ನಂಬಿಕೆಗೆ ಪಾತ್ರವಾಗಿದೆ.  ಇರ್ಪು ಕ್ಷೇತ್ರದ ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿರುವ ಈ ಜಲಪಾತ ಮಳೆಗಾಲ ಹೊರತುಪಡಿಸಿ ಇತರೆ ದಿನಗಳಲ್ಲಿ  ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಜುಳುಜುಳು ನಿನಾದದೊಂದಿಗೆ ವೀಕ್ಷಕರನ್ನು ತನ್ನತ್ತ ಆಕರ್ಷಿಸುತ್ತದೆ. ಆದರೆ ಈಗ ಮಾತ್ರ ರುದ್ರ ನರ್ತನದ ಮೂಲಕ ತಾನು ಅಪಾಯಕಾರಿ ಎಂಬುದನ್ನು ತೋರ್ಪಡಿಸುತ್ತಿದೆ.

ಇದನ್ನೂ ಓದಿ: ಈ ಫಾಲ್ಸ್ ನೋಡಲೆಷ್ಟು ಸುಂದರವೋ ಅಷ್ಟೇ ಭಯಂಕರ…! ಅದು ಹೇಗೆ?

ಈ ಜಲಪಾತ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಮತ್ತೆ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ. ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುವ ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯುವುದು  ಮರೆಯಲಾಗದ ಅನುಭವ ನೀಡುತ್ತದೆ. ಆದರೆ ಈ ಸಮಯದಲ್ಲಿ ಅದರ ರೌದ್ರತೆ ವಿಭಿನ್ನವಾಗಿರುತ್ತದೆ. ಅದಕ್ಕಿಂತ ಹೆಚ್ಚಾಗಿ ಅದರ ಬಳಿಗೆ ಸುಳಿಯಲು ಅವಕಾಶವಿಲ್ಲ. ಮಳೆಗಾಲದ ಹೆಚ್ಚಿನ ಸಮಯ ಪ್ರವಾಹ ಪರಿಸ್ಥಿತಿಯಲ್ಲಿರುವ ಕಾರಣದಿಂದಾಗಿ  ಅಪಾಯ ಕಟ್ಟಿಟ್ಟ ಬುತ್ತಿ.

ಇನ್ನು ಈ ಜಲಪಾತ  ಹೇಗೆ ಸೃಷ್ಠಿಯಾಯಿತು ಎನ್ನುವುದನ್ನು ನೋಡುತ್ತಾ ಹೋದರೆ ರಾಮಾಯಣದ ಕಾಲಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ರಾವಣನಿಂದ ಅಪಹರಣಕ್ಕೊಳಗಾದ  ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಕೊಡಗಿನ ಬ್ರಹ್ಮಗಿರಿ  ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ರಾಮನಿಗೆ ಎದುರಾಡದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇರ್ಪು ಹುಟ್ಟಿತೆಂದು ಹೇಳಲಾಗುತ್ತಿದೆ. ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು  ನಂದಿಸಿತಂತೆ.

ಇದನ್ನೂ ಓದಿ: ಕೊಡಗಿನಲ್ಲಿ ಮಳೆ.. ಮೈಸೂರಿನ ಧನುಷ್ಕೋಟಿಗೆ ಜೀವಕಳೆ

ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರಂತೆ. ಆ  ಲಕ್ಷ್ಮಣತೀರ್ಥನದಿಯಿಂದ ಸೃಷ್ಠಿಯಾದ ಜಲಧಾರೆಯೇ ಇರ್ಪು ಜಲಪಾತವಾಗಿದೆ. ಹೀಗಾಗಿ ಈ ಜಲಧಾರೆಗೆ ತಲೆಕೊಟ್ಟು ಮೀಯುವುದರಿಂದ ಪಾಪ ಕಳೆಯುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.  ಹೀಗಾಗಿ  ಪ್ರತಿವರ್ಷದ ಶಿವರಾತ್ರಿಯಂದು  ಇಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ನಾನಗೈಯ್ಯಲು ಸಹಸ್ರಾರು ಮಂದಿ ಆಗಮಿಸುತ್ತಾರೆ.  ಈ ವೇಳೆ ತಾತ್ಕಾಲಿಕವಾಗಿ ಕಟ್ಟಲಾಗುವ ಮರದ ಅಟ್ಟಳಿಗೆಯಲ್ಲಿ  ನಿಂತು ಮೀಯುವುದು ರೂಢಿ. ಹೀಗೆ ಸ್ನಾನ ಮಾಡಿದರೆ ಬೇಡಿದ ಫಲ ಒದಗುತ್ತದೆ. ಅದರಲ್ಲೂ ನವದಂಪತಿಗಳು ಕೈಕೈ ಹಿಡಿದು ಸ್ನಾನ ಮಾಡಿದರೆ ಬಯಸಿದ್ದು ಈಡೇರುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

ಇರ್ಪು ಜಲಪಾತದ ಬಳಿಗೆ (ಮಳೆಗಾಲದ ನಂತರ) ತೆರಳುವವರಿಗೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಗೋಣಿಕೊಪ್ಪಲಿನಿಂದ ಬಸ್ಸು ವ್ಯವಸ್ಥೆಯಿದೆ. ಉಳಿದಂತೆ ಕುಟ್ಟಕ್ಕೆ ತೆರಳುವ ಬಸ್ಸಿನಲ್ಲಿ ಶ್ರೀಮಂಗಲ ಹಾಗೂ ಕುಟ್ಟದ ನಡುವೆ ಸಿಗುವ ಕಾಕೂರು ಅಥವಾ ಕಾಯಿಮಾನಿಯಲ್ಲಿಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದಾಗಿದೆ.  ಅಥವಾ ಶ್ರೀಮಂಗಲಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಾಹನಗಳಲ್ಲಿಯೂ ತೆರಳಬಹುದು. ಸ್ವಂತ ವಾಹನಗಳಲ್ಲಿ ತೆರಳುವವರಿಗೆ ಯಾವುದೇ ರೀತಿಯ ತೊಂದರೆಯಿಲ್ಲ… ಅದು ಏನೇ ಇರಲಿ ಈ ಬಾರಿಯ ಮುಂಗಾರು ಶಾಂತವಾಗಿ ಧುಮ್ಮಿಕ್ಕುತ್ತಿದ್ದ ಇರ್ಪು ಜಲಪಾತವನ್ನು ರುದ್ರನರ್ತನ ಮಾಡುವಂತೆ ಮಾಡಿದ್ದಂತು ನಿಜ.

 

B M Lavakumar

admin
the authoradmin

Leave a Reply