ಇದು ಪ್ರವಾಹದ ಸಮಯ.. ನದಿಗಳ ಆಜು ಬಾಜು ಸದಾ ಎಚ್ಚರಿಕೆಯಿಂದ ಇರಿ… ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕುತ್ತು!

ಈಗ ಮಳೆಗಾಲ… ಅವಧಿಗೂ ಮುಂಚೆ ಹೆಚ್ಚು ಮಳೆ ಈಗಾಗಲೇ ಸುರಿದಿದೆ. ಹವಾಮಾನ ಇಲಾಖೆಯು ಇನ್ನು ಹೆಚ್ಚಿನ ಮಳೆ ಬೀಳುವ ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಎಲ್ಲಾ ನದಿಗಳು ತುಂಬಿ ತುಳುಕುತ್ತಿವೆ. ಹಲವು ನದಿಗಳು ಈಗಾಗಲೇ ಪ್ರವಾಹದಿಂದ ಜನರಲ್ಲಿ ಆತಂಕ ಮೂಡಿಸಿವೆ. ನದಿಯ ಎಡ-ಬಲದಲ್ಲಿರುವ ಜಮೀನು, ಗದ್ದೆಗಳಿಗೆ, ಹಳ್ಳಿಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ಜೊತೆಗೆ ನದಿಗೆ ಅಡ್ಡಲಾಗಿ ಕಟ್ಟಿರುವ ಅನೇಕ ಸೇತುವೆಗಳು ಕೂಡ ಮುಳುಗಿವೆ, ಮುಳುಗುತ್ತಿವೆ. ಮತ್ತೆ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಈ ಹಂತದಲ್ಲಿ ನಾವು ಎಷ್ಟು ಜಾಗೃತಿ ವಹಿಸಿದರೂ ಕೂಡ ಸಾಲದಾಗಿದೆ. ನಮ್ಮೊಂದಿಗೆ ನಮ್ಮ ಜಾನುವಾರುಗಳನ್ನು ಕೂಡ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಇನ್ನು ಕೆಲವರು ದನ ಕರುಗಳ ಬಾಲ ಹಿಡಿದು ನದಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಮ್ಮ ದಿನ ನಿತ್ಯದ ಹೊಲ-ಗದ್ದೆ ಗಳಿಗೆ ಹೋಗುವ ಸಾಹಸವನ್ನು ಕೂಡ ಮಾಡುತ್ತಾರೆ. ಈ ಹಂತದಲ್ಲಿ ಹಲವು ಕೊಚ್ಚಿ ಹೋಗಿದ್ದಾರೆ. ಈ ಸಾಹಸ ದಯವಿಟ್ಟು ಬೇಡ. ನಾವೇ ಈ ರೀತಿಯ ಅನೇಕ ದುರಂತಗಳಿಗೆ ಆಹ್ವಾನ ನೀಡಿದಂತೆ.
ಪ್ರವಾಹದಿಂದ ಜನಸಂಚಾರವಿದ್ದ ಸೇತುವೆಗಳು ನೀರಿನಿಂದ ಮುಳುಗಿರುತ್ತವೆ. ಸೇತುವೆ ಮೇಲೆ ನೀರು ಹೆಚ್ಚಾಗಿ ಬರುತ್ತಿದ್ದರೂ ಕೂಡ ವಾಹನ ಸವಾರರು ಸಾಹಸ ಪ್ರದರ್ಶನ ಮಾಡುತ್ತಿರುವುದು ನಿಜಕ್ಕೂ ಇದು ತಪ್ಪು. ಈ ಹಿಂದೆ ಅನೇಕ ಕಡೆ ದುರಂತ ಸಂಭವಿಸಿವೆ. ಇಂತಹ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿರುವ ನಮ್ಮ ಜನರಿಗೆ ಏನು ಹೇಳಬೇಕೊ ನಾ ಕಾಣೆ. ಪ್ರವಾಹದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಗಳು, ಜಿಲ್ಲಾಡಳಿತ, ಸ್ಥಳೀಯ ಪೊಲೀಸರು ಮುನ್ಸೂಚನೆ ನೀಡುತ್ತಿರುತ್ತಾರೆ. ಜೊತೆಗೆ ಸಂಪರ್ಕ ಮಾಧ್ಯಮಗಳಾದ ಪತ್ರಿಕೆಗಳು, ಆಕಾಶವಾಣಿ, ಟಿವಿಗಳು ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತಿರುತ್ತವೆ. ಅವನ್ನು ನಾವು ಗಮನಿಸಬೇಕು.
ಸೇತುವೆಯ ಮೇಲೆ ನೀರು ಹರಿಯುವ ವೇಳೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡಬಾರದು ಎಂದು ನಿಷೇಧಿಸಿದೆ. ಜೊತೆಗೆ ರಸ್ತೆಯ ಎರಡು ಕಡೆ ಬ್ಯಾರಿಕೇಡ್ ಗಳನ್ನು ಕೂಡ ಹಾಕಿರುತ್ತಾರೆ. ಜೊತೆಗೆ ಪೊಲೀಸರನ್ನು ಕೂಡ ನೇಮಿಸಿರುತ್ತಾರೆ. ಇವರ ಕಣ್ಣು ತಪ್ಪಿಸಿ, ಈ ರೀತಿಯ ಹರ ಸಾಹಸ ಮಾಡುತ್ತಿರುವುದು ವಿಪರ್ಯಾಸಕರ ಸಂಗತಿ. ಹಲವರು ಇಂತಹ ಸಂದರ್ಭದಲ್ಲಿ ನಡೆದು ಕೊಂಡು ಕೂಡ ಹೋಗುತ್ತಿರುತ್ತಾರೆ. ನೀರಿನೊಂದಿಗೆ ಈ ರೀತಿಯ ಹುಡುಗಾಟ ಮಾಡಲೇಬಾರದು. ನಂತರದಲ್ಲಿ ಎಲ್ಲವನ್ನ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತಾರೆ.
ಜೊತೆಗೆ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಹಲವರು ತುಂಬಿದ ಹೊಳೆಗೆ ಹೋಗಿ ಈಜಾಡುತ್ತಾರೆ. ಅಲ್ಲದೆ ದೋಣಿಗಳ ಮೂಲಕ ಹೋಗಿ ಮೀನು ಹಿಡಿಯುವುದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಇದನ್ನು ಕೂಡ ಮಾಡುತ್ತಾರೆ. ಪ್ರವಾಹ ತುಂಬಿದ ನದಿಯಲ್ಲಿ ಅನೇಕ ದೋಣಿಗಳು ಮುಳುಗಿ ಅನೇಕ ಕುಟುಂಬಗಳು ಕೂಡ ದುರಂತ ಅಂತ್ಯ ಕಂಡಿವೆ.
ಮೀನುಗಾರರು ಕೂಡ ಇಂತಹ ಪ್ರವಾಹದ ಸಂದರ್ಭದಲ್ಲಿ ನದಿಗೆ ಇಳಿಯದಂತೆ ನೋಡಿಕೊಳ್ಳಬೇಕು. ತುಂಬಿದ ಹೊಳೆಯಲ್ಲಿ ಎಷ್ಟೇ ಅನುಭವ ಇದ್ದರೂ ಕೂಡ ದುರಂತ ಅಂತ್ಯ ಕಾಣ ಬೇಕಾಗುತ್ತದೆ. ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಹಲವು ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ನದಿಗಳಿಗೆ ಒಂದು ರೀತಿಯಲ್ಲಿ ಜೀವ ಕಳೆ ಬಂದಿದೆ. ಈ ಹಂತದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹಲವು ಪ್ರವಾಸಿಗರು ತಮ್ಮ ಪ್ರಾಣದ ಹಂಗು ತೊರೆದು ಬೋರ್ಗರಿಯುವ ನೀರಿನ ಮಧ್ಯೆ ನಿಂತು ಫೋಟೋ, ವಿಡಿಯೋ ತೆಗೆದುಕೊಳ್ಳುವುದು, ಕೆಲ ಯುವಕ -ಯುವತಿಯರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಉದಾಹರಣೆ ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಬಂದರೂ ಕೂಡ ನಮ್ಮ ಯುವಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ.
ಮೊದಲೇ ಹೇಳಿದಂತೆ ಈ ವರ್ಷ ಮುಂಗಾರು ಚುರುಕಾಗಿದ್ದು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಂಗಳೂರು, ಉಡುಪಿ, ಕಾರವಾರ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಲಪಾತಗಳ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಕೂಡ ನಡೆಯುತ್ತಿದೆ. “ಬದುಕಿದ್ದರೆ ಸಾವಿರ ರೀಲ್ಸ ಮಾಡಬಹುದು ಒಂದು ರಿಲ್ಸ್ಗಾಗಿ ಪ್ರಾಣ ಕಳೆದುಕೊಳ್ಳಬೇಡಿ”- ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಜಲಪಾತಗಳಿಗೆ ಪ್ರವಾಸಿಗರನ್ನು ಕೂಡ ನಿಷೇಧ ಮಾಡಿದೆ.
ಮೊದಲೇ ಹೇಳಿದಂತೆ ತುಂಬಿದ ಹೊಳೆಯ ಆಜು ಬಾಜು ನಿಂತುಕೊಂಡು ಸೆಲ್ಫಿ ತೆಗೆಯುವ ಹುಚ್ಚು ಸಾಹಸವನ್ನು ಕೂಡ ಮಾಡುತ್ತಾರೆ. ಸೆಲ್ಫಿ ಫೋಟೋ ತೆಗೆಯುವ ಸಂದರ್ಭದಲ್ಲಿ ಅನೇಕರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಅಕ್ಕಪಕ್ಕದಲ್ಲಿರುವ ಜಲಪಾತಗಳನ್ನು ವೀಕ್ಷಿಸಲು ತೆರಳುವ ಮಂದಿಯೂ ಕೂಡ ಹೆಚ್ಚಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಅನೇಕ ದುರಂತಗಳು ಈಗಾಗಲೇ ಸಂಭವಿಸಿವೆ. ಅಂತಹ ಪ್ರವಾಸದ ಸ್ಥಳದಲ್ಲಿ ಎಚ್ಚರಿಕೆಯ ಬೋರ್ಡ್ ಗಳು ಇದ್ದರೂ ಕೂಡ ಅಕ್ಕಪಕ್ಕದ ನದಿಗೆ ಇಳಿಯುವುದು, ಫೋಟೋ ತೆಗೆದುಕೊಳ್ಳುವುದು ನಿರಂತರವಾಗಿ ನಡೆಯುತ್ತಲೇ ಇದೆ.
ಪ್ರಕೃತಿ, ಜಲಪಾತದ ಸೌಂದರ್ಯ, ಪ್ರವಾಹದಿಂದ ತುಂಬಿ ಹರಿಯುವ ನದಿಗಳ ಸಂಗಮ ಕ್ಷೇತ್ರ, ಇವೆಲ್ಲವನ್ನೂ ನೋಡಲು ಎರಡು ಕಣ್ಣು ಸಾಲದು ನಿಜ. ಆದರೇ ಇವೆಲ್ಲವನ್ನೂ ನಾವು ದೂರದಿಂದಲೇ ನೋಡಿ ಸಂಭ್ರಮಿಸಬೇಕೇ ಹೊರತು ಯಾವುದೇ ಕಾರಣದಿಂದ ಹತ್ತಿರಕ್ಕೆ ಹೋಗಲೇಬಾರದು. ಈ ನಿಟ್ಟಿನಲ್ಲಿ ಜಲಾಶಯದ ಅಕ್ಕಪಕ್ಕ ಇರುವ ಅಧಿಕಾರಿಗಳು, ಪೊಲೀಸರು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು. ನಾವು ಯಾವಾಗಲೂ ಬೆಂಕಿಯ ಜೊತೆ, ನೀರಿನ ಜೊತೆ ಸರಸವಾಡಬಾರದು.
ಇನ್ನೊಂದು ಅಂಶವೆಂದರೆ ನದಿಯ ಆಸು ಪಾಸು ಇರುವ ಮನೆಗಳಲ್ಲಿ ಅಥವಾ ಹೊಲಗದ್ದೆಗಳಲ್ಲಿ ವಾಸಿಸುವ ಜನರು- ಜಾನುವಾರುಗಳೊಂದಿಗೆ ಮಳೆಗಾಲದ ಸಂದರ್ಭದಲ್ಲಿ, ನದಿಗೆ ನೀರು ಬಿಟ್ಟ ಮುನ್ಸೂಚನೆ ತಿಳಿದ ತಕ್ಷಣ ಸ್ಥಳವನ್ನು ಖಾಲಿ ಮಾಡುವುದು ಒಳಿತು. ಒಮ್ಮೊಮ್ಮೆ ಮಧ್ಯರಾತ್ರಿಯ ವೇಳೆ ಹೆಚ್ಚು ನೀರು ನದಿಗೆ ಬರುವ ಸಂಭವವಿರುತ್ತದೆ. ನಗರ, ಪಟ್ಟಣಗಳಿಗೆ ಹೊಂದಿಕೊಂಡಂತೆ ಇರುವ ನದಿಗಳಿಂದ ಕುಡಿಯುವ ನೀರನ್ನು ಮೇಲೆತ್ತಿ ಅದನ್ನು ಯಂತ್ರಗಳ ಮೂಲಕ ಶುದ್ಧೀಕರಿಸಿ ನಲ್ಲಿ ಮೂಲಕ ಕುಡಿಯುವ ನೀರು ಬರುತ್ತದೆ.
ಈ ಹಂತದಲ್ಲಿ ಬಂದ ನೀರನ್ನು ನಾವು ಕುದಿಸಿ, ಆರಿಸಿ ಕುಡಿಯಲೇಬೇಕು. ಹಲವು ಸಾಂಕ್ರಾಮಿಕ ರೋಗಗಳು ಕೂಡ ಬರುವ ಸಂಭವ ಇರುತ್ತದೆ. ನದಿಯ ನೀರು ಕೂಡ ಹೆಚ್ಚು ಮಣ್ಣಿನಿಂದ ಕಲುಷಿತ, ಜೊತೆಗೆ ಕಸ- ಕಡ್ಡಿಗಳಿಂದ ಕೂಡಿರುತ್ತದೆ. ಒಟ್ಟಿನಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಸದಾ ಮುನ್ನೆಚ್ಚರಿಕೆಯಿಂದ ಇರಲೇಬೇಕು. ನದಿಯ ಹತ್ತಿರ ಮಕ್ಕಳು, ದೊಡ್ಡವರು ಸುಳಿಯದಂತೆ ನೋಡಿಕೊಳ್ಳಬೇಕು.
ಮಳೆಗಾಲದ ಈ ಸಂದರ್ಭದಲ್ಲಿ ನಾವು ಪ್ರವಾಸ ಮಾಡುವುದನ್ನು ನಿಲ್ಲಿಸಲೇಬೇಕು. ಏಕೆಂದರೆ ಪ್ರವಾಸದ ಮಾರ್ಗದಲ್ಲಿ ಇರುವ ಬೆಟ್ಟ ಗುಡ್ಡಗಳು ಕುಸಿಯಬಹುದು, ನದಿಗಳ ನೀರು ತುಂಬಿ ಹರಿಯಬಹುದು, ಸೇತುವೆಗಳು ಮುಳುಗಡೆಯಾಗಿರಬಹುದು, ಜೊತೆಗೆ ಮಳೆಯ ರಭಸಕ್ಕೆ ಅನೇಕ ಮರಗಳು ಕೂಡ ಭೂಮಿಗೆ ಬೀಳಬಹುದು, ಜೊತೆಗೆ ಮಿಂಚು ಗುಡುಗು ಹೀಗೆ ಈ ಮಳೆಗಾಲದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಬಂದೇ ಬರುತ್ತವೆ.
ಇನ್ನೊಂದು ಮುಖ್ಯವಾದ ಅಂಶವೆಂದರೆ ಮಳೆಗಾಲದಲ್ಲಿ ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಪ್ರವಹಿಸ ಬಹುದು. ಹೊಲ-ಗದ್ದೆಗಳಲ್ಲಿರುವ ಪಂಪ್ಸೆಟ್ ಗಳಲ್ಲೂ ಕೂಡ ಎಚ್ಚರಿಕೆ ವಹಿಸಬೇಕಾಗುತ್ತದೆ. ಇವನ್ನೆಲ್ಲಾ ನಾವು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಬೇಕು. ಅಂದರೆ ಸದಾ ಮುನ್ನೆಚ್ಚರಿಕೆ ವಹಿಸಲೇಬೇಕು.