ಜೇನು ಕುರುಬ, ಕೊರಗ ಸಮುದಾಯ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆ… ಪ್ರತ್ಯೇಕ ನಿಗಮ ರಚನೆಗೆ ಆಗ್ರಹ

ಕುಶಾಲನಗರ(ರಘುಹೆಬ್ಬಾಲೆ): ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕವಾದ ನಿಗಮ ಮಂಡಳಿ ರಚನೆ ಮಾಡಬೇಕು ಎಂದು ಜೇನು ಕುರುಬ ಹಾಗೂ ಕೊರಗ ಸಮುದಾಯ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಂಗಳೂರಿನ ಎಂ.ಸುಂದರ್ ದಳುವಾಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕಿನ ಬಸವನಹಳ್ಳಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಮಲೆನಾಡಿನ ಮೂಲನಿವಾಸಿಗಳ ಜೇನು ಕುರುಬ ಹಾಗೂ ಕರಾವಳಿಯ ಮೂಲನಿವಾಸಿಗಳಾಗಿ ಈಗಲೂ ತೀರಾ ಹಿಂದುಳಿದ ಕೊರಗ ಸಮುದಾಯಗಳು ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಈ ಎರಡು ಸಮುದಾಯಗಳನ್ನು ನೈಜ ದುರ್ಬಲ ಬುಡಕಟ್ಟು ಸಮುದಾಯ ಎಂದು ಘೋಷಿಸಿದೆ. ಜೊತೆಗೆ ಬುಡಕಟ್ಟು ಕಲಂ 51 ರಲ್ಲಿ ನಮ್ಮ ಈ ಸಮುದಾಯಗಳು ಶಿಕ್ಷಣದಿಂದ ವಂಚಿತಗೊಂಡಿವೆ. ಸರ್ಕಾರಗಳ ಎಲ್ಲಾ ಯೋಜನೆಗಳು ಭೂಮಿಯ ಆಧಾರಿತವಾಗಿರುವುದರಿಂದ ನಮ್ಮ ಈ ಸಮುದಾಯ ಗಳಲ್ಲಿ ಭೂಮಿಯೇ ಇಲ್ಲದ ಕಾರಣ ಸರ್ಕಾರದ ಯಾವ ಯೋಜನೆಗಳು ಇದೂವರೆಗೂ ತಲುಪಿಲ್ಲ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಗಳಿಗೆ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಗಿದೆ. ಕೂಡಲೇ ಸರ್ಕಾರ ನಮ್ಮ ಒಕ್ಕೂಟದ ಮನವಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕೂಡಲೇ ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಅಭಿವೃದ್ಧಿಗೆ ನಿಗಮ ಮಂಡಳಿ ರಚಿಸಬೇಕು ಎಂದು ಸುಂದರ್ ಆಗ್ರಹಿಸಿದರು.
ಒಕ್ಕೂಟದ ಉಪಾಧ್ಯಕ್ಷ ಹುಣಸೂರಿನ ಜೆ.ಟಿ.ರಾಜಪ್ಪ ಮಾತನಾಡಿ, ಜೇನು ಕುರುಬರು ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಕೊರಗ ಸಮುದಾಯದವರು ಕೇವಲ ದಕ್ಷಿಣ ಕನ್ನಡ ಹಾಗೂ ಉಡುಪಿ ಯಲ್ಲಿದ್ದಾರೆ. ನಮ್ಮ ಈ ಎರಡೂ ಸಮುದಾಯಗಳ ಮಕ್ಕಳು ಶಿಕ್ಷಣ ಪಡೆದರೂ ಕೂಡ ಸರ್ಕಾರದಿಂದ ಉದ್ಯೋಗವಕಾಶಗಳು ಸಿಗುತ್ತಿಲ್ಲ. 1967 ರಲ್ಲಿ ಹುಣಸೂರಿನಲ್ಲಿ ಇದ್ದಂತಹ ಜೇನುಕುರುಬರ ಸಂಘದ ಕಾರ್ಯಾಲಯವನ್ನು 2010 ರಲ್ಲಿ ಮುಚ್ಚಲಾಗಿದ್ದು, ಕೂಡಲೇ ಕಚೇರಿಯನ್ನು ಆರಂಭಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಜೇನು ಕುರುಬರ ಅಭಿವೃದ್ಧಿ ಸಂಘದ ಕೊಡಗು ಘಟಕದ ಅಧ್ಯಕ್ಷ ಜೆ.ಟಿ.ಕಾಳಿಂಗ ಮಾತನಾಡಿ, ಕೊರಗ ಹಾಗೂ ಜೇನು ಕುರುಬ ಸಮುದಾಯಗಳನ್ನು ಸರ್ಕಾರಗಳು ಕಡೆಗಣಿಸಿರುವ ಕಾರಣ ಜನಾಂಗದ ಅಭಿವೃದ್ಧಿ ಸಾಧ್ಯವಾಗಿಲ್ಲ. ಜೊತೆಗೆ ಸರ್ಕಾರದ ಯಾವುದೇ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ದೊರಕುತ್ತಿಲ್ಲ. ಹಾಗಾಗಿ ಸಮಗ್ರ ಸೌಲಭ್ಯಗಳು ಶೋಷಿತರು ಹಾಗೂ ಸಮಾಜದ ಕಟ್ಟಕಡೆಯ ಜನಾಂಗವಾಗಿರುವ ಈ ಸಮುದಾಯಗಳಿಗೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ನಾಲ್ಕೇರಿ ಗ್ರಾಪಂ ಅಧ್ಯಕ್ಷರೂ ಆದ ಒಕ್ಕೂಟದ ಸದಸ್ಯ ಜೆ.ಎಂ.ಸೋಮಯ್ಯ, ಕಾರ್ಯದರ್ಶಿ ಜೆ.ಟಿ.ಚಂದ್ರು, ಮನೋಜ್, ತಿತಿಮತಿ ಪುಷ್ಪ, ಪಿರಿಯಾಪಟ್ಟಣದ ಗೌರಮ್ಮ ಮತ್ತಿತರರು ಪಾಲ್ಗೊಂಡಿದ್ದರು. ಕುಶಾಲನಗರ ಸಮೀಪದ ಬಸವನಹಳ್ಳಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಜೇನು ಕುರುಬ ಹಾಗೂ ಕೊರಗ ಸಮುದಾಯ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಂಗಳೂರಿನ ಎಂ.ಸುಂದರ್ ದಳುವಾಯು ಮಾತನಾಡಿದರು.
ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವಿವಿಧ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದರು.







