ಕೆ.ಆರ್.ನಗರ(ಸಂಘಟನೆ ಮಂಜುನಾಥ್): ವಿದ್ಯಾರ್ಥಿಗಳು ಎಂದಿನ ಪಠ್ಯದೊಂದಿಗೆ ದೇಶದ ಇತಿಹಾಸ ಪರಂಪರೆ ಜೀವನದ ಮೌಲ್ಯಗಳನ್ನು ತಿಳಿದು ಸಂಸ್ಕೃತಿ ಸಂಸ್ಕಾರ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಿದಲ್ಲಿ ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾಲೇಜು ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜು ವ್ಯಾಸಂಗ ಜೀವನ ಪ್ರಮುಖ ಘಟ್ಟವಾಗಿದ್ದು ಇಲ್ಲಿ ಯಾವುದೆ ಆಲೋಚನೆ ಇಲ್ಲದೆ ಉತ್ತಮ ಅಂಕ ಪಡೆಯಬೇಕೆಂಬ ಮಹದಾಸೆ ಎಲ್ಲರಿಗೂ ಇರುತ್ತದೆ. ಆದರೆ ಇಂದಿನ ಆಧುನಿಕ ದಿನಗಳಲ್ಲಿ ಮೊಬೈಲ್ ಮನುಷ್ಯನನ್ನು ಬಿಟ್ಟರೂ ಮನುಷ್ಯ ಮೊಬೈಲ್‌ನ್ನು ಬಿಡಲು ಸಾಧ್ಯವಿಲ್ಲ ಮೊಬೈಲ್ ಮತ್ತು ಮನುಷ್ಯನ ಸಂಬಂಧ ಆ ಮಟ್ಟದಲ್ಲಿದ್ದು ವಿದ್ಯಾರ್ಥಿಗಳು ತಮಗೆ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟುಮಾತ್ರ ಮೊಬೈಲ್ ಬಳಕೆಮಾಡಿಕೊಂಡು ಉತ್ತಮವಾಗಿ ಉನ್ನತ ವ್ಯಾಸಂಗ ಮಾಡಿ ದೊಡ್ಡಮಟ್ಟದ ಸಾಧನೆ ಮಾಡುವಂತೆ ಕಿವಿಮಾತು ಹೇಳಿದರು.
ಮೊಬೈಲ್ ಹೆಚ್ಚು ಬಳಕೆಯಿಂದ ಹಲವಾರು ವಿದ್ಯಾರ್ಥಿಗಳು, ವ್ಯಕ್ತಿಗಳು ತಮ್ಮ ಜೀವನ ಹಾಳು ಮಾಡಿಕೊಂಡಿದ್ದು ಮೊಬೈಲ್‌ನಿಂದ ಎಷ್ಟು ಪಾಸಿಟೀವ್ ಇದೆಯೋ ಅಷ್ಟೆ ನೆಗೆಟೀವ್ ಇರುವುದರಿಂದ ತಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಮೊಬೈಲ್ ಬಳಕೆ ಮಾಡಿಕೊಂಡು ಕಾಲೇಜಿನ ಗುರುಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ವ್ಯಾಸಂಗಕ್ಕೆ ಹೆಚ್ಚು ಗಮನನೀಡಿ ಸಾಧಿಸಬೇಕಾಗಿರುವುದನ್ನು ಛಲಬಿಡದೆ ಸಾಧಿಸುವಂತೆ ಸಲಹೆನೀಡಿದರು.
ಈಗಾಗಲೆ ಕಾಲೇಜು ಅಭಿವೃದ್ದಿಗೆ 1ಕೋಟಿ ಹಣ ಬಿಡುಗಡೆಯಾಗಿದ್ದು ಕಾಲೇಜು ಆವರಣದಲ್ಲಿ ಆಗಬೇಕಾದ ಕಾಮಗಾರಿಗಳಿಗೆ ಕೂಡಲೆ ಗುದ್ದಲಿಪೂಜೆ ನೆರವೇರಿಸುವುದಾಗಿ ಹೇಳಿದ ಶಾಸಕರು, ಶೀಘ್ರದಲ್ಲಿ ಕಾಲೇಜಿಗೆ ಕಾಂಪೌಂಡ್ ನಿರ್ಮಾಣ ಮತ್ತು ವೇದಿಕೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ನಿವೃತ್ತ ಪ್ರಾಧ್ಯಾಪಕಿ ಡಾ.ಹೆಚ್.ಎಂ.ಕಲಾಶ್ರೀ ಮುಖ್ಯಭಾಷಣ ಮಾಡಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಬ್ಲಾಕ್‌ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಎಸ್.ಶಂಕರ್, ರೆಡ್‌ಕ್ರಾಸ್ ಸಂಚಾಲಕ ಪಿ.ಪ್ರಶಾಂತ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಸಿ.ಎಸ್.ಕಿರಣ್‌ಕುಮಾರ್, ಕ್ರೀಡಾಸಮಿತಿ ಸಂಚಾಲಕ ಡಾ.ಬಿ.ವಿ.ಗಣೇಶ್
ಐಕ್ಯೂಸಿ ಸಂಯೋಜಕ ಡಾ.ದೀಪುಕುಮಾರ್, ಸ್ಕೌಟ್ ಗೈಡ್ಸ್ ಸಂಚಾಲಕಿ ಡಾ.ಕೆ.ರೇಣುಕಾದೇವಿ, ಪ್ರಾಧ್ಯಾಪಕ ಎಂ.ರಾಜು, ಸೋಮಶೇಖರ್, ಗಣೇಶ್, ನಾಗರತ್ನ, ವಿದ್ಯಾರ್ಥಿ ಅಧ್ಯಕ್ಷೆ ಸಿ.ಕೆ.ಸಂಜನಾ, ಕಾರ್ಯದರ್ಶಿ ವೇದಾವತಿ, ಸಿಡಿಸಿ ಕಾರ್ಯದರ್ಶಿ ವೈ.ಎಸ್.ಜಯಂತ್, ಸದಸ್ಯ ತೋಟೇಗೌಡ, ಸಂಪತ್ತೇಗೌಡ, ಸುಧಾಕರ್ ಮತ್ತಿತರ ಸದಸ್ಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಇದೆ ಸಂಧರ್ಭದಲ್ಲಿ ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ದತ್ತಿನಿಧಿ ಬಹುಮಾನವನ್ನು ವಿತರಣೆ ಮಾಡಲಾಯಿತು.








