ಹೊಸೂರು(ಸಂಘಟನೆ ಮಂಜುನಾಥ್): ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಕಳೆದ 30ವರ್ಷಗಳಿಂದ ಅಭಿವೃದ್ದಿ ಕಾಮಗಾರಿ ಕಾಣದಾಗಿದ್ದು ಅಂತಹ ಗ್ರಾಮಗಳಿಗೆ ಹೆಚ್ಚು ಒತ್ತು ನೀಡಿ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕು ಮಾಯಿಗೌಡನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮಾಯಿಗೌಡನಹಳ್ಳಿ, ಸಕ್ಕರೆ, ಹಲಗೇಗೌಡನಕೊಪ್ಪಲು ಗ್ರಾಮಗಳಲ್ಲಿ ರಸ್ತೆ, ಚರಂಡಿ ಮತ್ತು ದೇವಾಲಯದ ಅಭಿವೃದ್ದಿಯ ಸುಮಾರು ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕೃಷ್ಣರಾಜನಗರ ಮತ್ತು ಸಾಲಿಗ್ರಾಮದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕಳೆದ 30ವರ್ಷಗಳಿಂದ ಯಾವುದೇ ಅಭಿವೃದ್ದಿ ಕಾರ್ಯ ಆಗದ ಹಲವಾರು ಗ್ರಾಮಗಳಿದ್ದು ಅಂತಹ ಗ್ರಾಮಗಳನ್ನು ಸಮಗ್ರವಾಗಿ ಅಬಿವೃದ್ದಿಪಡಿಸುವುದಲ್ಲದೆ ಮುಂದಿನ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ನೀಡಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಸ್ತೆ, ಚರಂಡಿ, ಕುಡಿಯುವನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದು ಹೇಳಿದ ಶಾಸಕರು ಕಳೆದ ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳಂತೆ ಎಲ್ಲೆಡೆ ಅಭಿವೃದ್ದಿ ಕಾಮಗಾರಿಗಳನ್ನು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಕೈಗೆತ್ತಿಕೊಂಡು ಮಾಡಲಾಗುತ್ತಿದೆ ಎಂದರು.

ತಾ.ಪಂ, ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಸಾಲಿಗ್ರಾಮ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಮಾತನಾಡಿ ಕಳೆದ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯಂತೆ ಶಾಸಕರು ಈ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಮಾಡುತ್ತಿದ್ದು ತಾವು ನೀಡಿದ ಭರವಸೆಯನ್ನು ಈಡೀರಿಸಿ ನೀಡಿದ ಮಾತಿನಂತೆ ನಡೆದುಕೊಳ್ಳುತ್ತಿರುವ ಶಾಸಕರ ವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಗ್ರಾಮದ ಮುಖಂಡ ನಾಗೇಶ್ ಮಾತನಾಡಿ ಕಳೆದ 30ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ಗುದ್ದಲಿಪೂಜೆಯನ್ನೇ ಕಂಡಿರಲಿಲ್ಲ ಇಂದು ಗ್ರಾಮದಲ್ಲಿ ಶಾಸಕರು ಗುದ್ದಲಿಪೂಜೆ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಮಲ್ಲಿಕಾರ್ಜುನ, ಸುರೇಶ್, ಮಾಜಿ ಉಪಾಧ್ಯಕ್ಷ ಮಹದೇವ, ಜಯರಾಮನಾಯಕ, ತ್ರಯಂಬಕಸ್ವಾಮಿ, ನಾಗೇಶ್, ಗುಂಡ, ಅಶ್ವಥ್, ಬೀರೇಗೌಡ, ಗಿರೀಶ್, ಹನಸೋಗೆಪರಮೇಶ್, ನವೀನ್, ದಶರಥ ಎರೆಮನುಗನಹಳ್ಳಿಅಸ್ಲಾಂಪಾಷ ಹಾಗೂ ಆಯಾ ಗ್ರಾಮದ ಮುಖಂಡರು, ಸಾರ್ವಜನಿಕರು, ಮಹಿಳೆಯರು ಪಾಲ್ಗೊಂಡಿದ್ದರು.








