ಕೆ.ಆರ್.ನಗರ(ಜಿಟೆಕ್ ಶಂಕರ್): ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಎರಡು ಜಿಲ್ಲೆಗಳ ಹೊಸ ರೈತ ಸದಸ್ಯರಿಗೆ ಬಡ್ಡಿ ರಹಿತ ಸಾಲ ನೀಡುವುದರ ಜತೆಗೆ ಅದರ ಪ್ರಮಾಣವನ್ನು 3 ರಿಂದ 5 ಲಕ್ಷದ ವರೆಗೆ ಏರಿಕೆ ಮಾಡಲಾಗಿದೆ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಗಳಿಗೆಕೆರೆ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಈ ಅನುಕೂಲ ಕಲ್ಪಿಸಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬ್ಯಾಂಕಿನ ವ್ಯಾಪ್ತಿಯ 417 ಸಂಘಗಳ ಮೂಲಕ ಕೃಷಿ ಮತ್ತು ಕೃಷಿಯೇತರ ಸಾಲವನ್ನಾಗಿ 2 ಸಾವಿರ ಕೋಟಿ ಸಾಲ ನೀಡಲಾಗಿದ್ದು ಇದರ ಜತೆಗೆ ಪ್ರಸ್ತುತ 1 ಸಾವಿರ ಕೋಟಿ ಠೇವಣಿ ಸಂಗ್ರಹ ಮಾಡಿದ್ದು ಇದರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಬ್ಬ ರೈತರು ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರಾಗುವ ಮೂಲಕ ಸರ್ಕಾರದಿಂದ ದೊರೆಯುವ ಸವಲತ್ತುಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ವಾಗಿ ಸದೃಢರಾಗಬೇಕೆಂದು ಮಾರ್ಗದರ್ಶನ ಮಾಡಿದ ದೊಡ್ಡಸ್ವಾಮೇಗೌಡ ರೈತರಿಗೆ ಅಗತ್ಯವಿರುವಷ್ಟು ಸಾಲ ನೀಡಲು ನಾವು ಬದ್ದರಾಗಿದ್ದರು ಸುಸ್ತಿಯಾಗದಂತೆ ರೈತರು ಮರುಪಾವತಿ ಮಾಡಬೇಕು ಎಂದು ಕೋರಿದರು.

ಕೆ.ಆರ್.ನಗರ ಮತ್ತು ಸಾಲಿಗ್ರಾಮ ವ್ಯಾಪ್ತಿಯಲ್ಲಿರುವ 24 ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 4 ಸಂಘಗಳು ಸುಸ್ತಿಯಾಗಿದ್ದು ಉಳಿದ 20 ಸಂಘಗಳು ಉತ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು ಅವರು ಸಂಘದವರ ಬೇಡಿಕೆಯಂತೆ ಅಭಿವೃದ್ಧಿ ಮತ್ತು ಇತರ ಕಾಮಗಾರಿ ನಿರ್ವಹಣೆಗೆ ಅಗತ್ಯ ಅನುದಾನ ನೀಡುವ ಭರವಸೆ ನೀಡಿದರು.
ಎಂಸಿಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬ್ಯಾಂಕ್ ಶಾಖೆಗಳು ರೈತ ಮತ್ತು ಗ್ರಾಹಕರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ರಾಷ್ಟ್ರೀಕೃತ ಬ್ಯಾಂಕ್ ಗಳ ಬದಲಾಗಿ ಎಂಸಿಡಿಸಿಸಿ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹರಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬೇಕೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ ವಿವಿಧ ಗ್ರಾಮಗಳ 14 ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಗಳಿಗೆಕೆರೆ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊಡ ಮಾಡಲಾದ 1.44 ಕೋಟಿ ರೂಗಳ ಸಾಲದ ಚೆಕ್ ಗಳನ್ನು ವಿತರಣೆ ಮಾಡಿದರು.
ಸಂಘದ ಉಪಾಧ್ಯಕ್ಷ ಕುಮಾರ್, ನಿರ್ದೇಶಕರಾದ ಎಂ.ಎಸ್.ಮಹದೇವ್, ರಾಮಕೃಷ್ಣೇಗೌಡ, ರಾಜೇಶ್ವರಿ, ವೇದಾವತಿ, ರೇವಣ್ಣ, ಜಾಣೇಗೌಡ, ಮಧುಕಿರಣ್, ರಾಜೇಗೌಡ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮೋಹನ್ ರಾಜ್, ಮೇಲ್ವಿಚಾರಕ ಉಮೇಶ್, ಸಿಇಒ ಪುಟ್ಟೇಗೌಡ, ಸಹಾಯಕಿ ವೀಣಾ, ಅಡಗೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಮಹದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್, ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಮುಖಂಡರಾದ ರಾಜೇಗೌಡ, ಸಂಪತ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.








