ಕುಶಾಲನಗರ(ರಘುಹೆಬ್ಬಾಲೆ): ಕಾಡಾನೆಗಳ ಹಾವಳಿಯಿಂದ ಜನ ನಲಗುತ್ತಿದ್ದು, ಪ್ರಾಣವನ್ನೇ ಒತ್ತೆಯಿಟ್ಟು ಓಡಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಈ ನಡುವೆ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಹಾಡಿ ಬಳಿ ಮೀನುಕೊಲ್ಲಿ ಅರಣ್ಯದಂಚಿನಲ್ಲಿ ಕಾಡಾನೆ ದಾಳಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದ್ದು ಜನ ತೀವ್ರ ಆಕ್ರೋಶಗೊಂಡಿದ್ದಾರೆ.
ವಾಲ್ನೂರು ತ್ಯಾಗತ್ತೂರು ಗ್ರಾಪಂ ಮಾಜಿ ಸದಸ್ಯೆ ಬಾಳೆಗುಂಡಿ ಹಾಡಿ ನಿವಾಸಿ ಸ್ವಾಮಿ ಎಂಬವರ ಪತ್ನಿ ಜಲಜಾಕ್ಷಿ (55) ಮೃತ ಮಹಿಳೆ. ಈಕೆ ಸೋಮವಾರ ಬೆಳಗ್ಗೆ ಹಾಡಿ ಮುಂಭಾಗ ಅರಣ್ಯದತ್ತ 6 ಮಂದಿ ಮಹಿಳೆಯರು ದೈನಂದಿನ ಚಟುವಟಿಕೆಗೆ ತೆರಳಲು ಮುಂದಾದ ಸಂದರ್ಭ ಘಟನೆ ಸಂಭವಿಸಿದೆ. ಏಕಾಏಕಿ ಕಾಡಾನೆ ದಾಳಿಗೆ ಸಿಲುಕಿ ಜಲಜಾಕ್ಷಿ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ.
ಸ್ಥಳಕ್ಕೆ ಎಸಿಎಫ್ ಗೋಪಾಲ್ ಸೇರಿದಂತೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭ ಕಾಡಾನೆ ಹಾವಳಿ ತಡೆಗಟ್ಟಬೇಕು, ಸ್ಥಳದಲ್ಲೇ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ ಹಾಡಿ ನಿವಾಸಿಗಳು, ಮಾಜಿ ಜನಪ್ರತಿನಿಧಿಗಳು ಹಾಗೂ ಮುಖಂಡರು ಕೆಲಕಾಲ ರಸ್ತೆ ತಡೆ ನಡೆಸಿದರು.

ಕಾಡಾನೆ ಹಾವಳಿ ತಡೆಗಟ್ಟಲು ಇಲಾಖೆಯಿಂದ ಈ ಭಾಗದಲ್ಲಿ ಕೈಗೊಂಡಿರುವ ಯೋಜನೆಗಳು ವಿಫಲವಾಗಿವೆ ಎಂದು ನಂಜರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಲ್.ವಿಶ್ವ ಆರೋಪಿಸಿದರು. ಉಪಟಳ ನೀಡುತ್ತಿರುವ ಪುಂಡ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಇಲಾಖೆ ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸಬೇಕಿದೆ.ಅರಣ್ಯ ಇಲಾಖೆ ಜೊತೆಗೆ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ವತಿಯಿಂದ ಕೂಡ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕಿದೆ ಎಂದು ನಂಜರಾಯಪಟ್ಟಣ ಗ್ರಾಪಂ ಮಾಜಿ ಸದಸ್ಯ ಗಿರಿಜನ ಮುಖಂಡ ಆರ್.ಕೆ.ಚಂದ್ರ ಒತ್ತಾಯಿಸಿದರು.
ಮೇಲಾಧಿಕಾರಿಗಳ ಸೂಚನೆಯಂತೆ ಮೃತರ ಕುಟುಂಬಕ್ಕೆ ಇಲಾಖೆ ವತಿಯಿಂದ ಅಗತ್ಯ ಪರಿಹಾರ ಒದಗಿಸಲು ಕ್ರಮವಹಿಸಲಾಗಿದೆ. ಉಪಟಳ ನೀಡುತ್ತಿರುವ ಕಾಡಾನೆ ಪತ್ತೆ ಕಾರ್ಯ ನಡೆಸಿ ಇಲಾಖೆ ಅನುಮತಿಯೊಂದಿಗೆ ಕಾಡಾನೆ ಸೆರೆ ಹಿಡಿಯಲು ಮುಂದಾಗುವುದಾಗಿ ಎಸಿಫ್ ಗೋಪಾಲ್ ಪ್ರತಿಕ್ರಿಯಿಸಿದರು.ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ವಾಲ್ನೂರು-ತ್ಯಾಗತ್ತೂರು ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಮನುಮಹೇಶ್ ಸೇರಿದಂತೆ ಮಾಜಿ ಸದಸ್ಯರುಗಳು, ಜಿಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಮತ್ತಿತರರು ಸ್ಥಳದಲ್ಲಿ ಇದ್ದರು.








