Mysore

ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿ ಮಾಡಲು ವಿಫಲರಾದರೆ ಕಾನೂನಾತ್ಮಕ ಕ್ರಮದ ಎಚ್ಚರಿಕೆ ನೀಡಿದ ಡಿಸಿ

ಮೈಸೂರು: ಕಬ್ಬು ಬೆಳೆಗಾರರಿಗೆ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಎರಡೂ ಸೇರಿ ಪ್ರತಿ ಟನ್ ಕಬ್ಬಿಗೆ ಬಾಕಿ ನೀಡಬೇಕಾಗಿರುವ ನೂರು ರೂಪಾಯಿಯನ್ನು ಇನ್ನೂ ಹದಿನೈದು ದಿನದಲ್ಲಿ ಸಂದಾಯ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಮಂಗಳವಾರ ನಡೆದ ಕಬ್ಬು ಬೆಳೆಗಾರರು ಹಾಗೂ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜತೆಗಿನ ಸಭೆಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಕಬ್ಬಿಗೆ ಹೆಚ್ಚುವರಿಯಾಗಿ ಸರ್ಕಾರ 50  ರೂಪಾಯಿ ನೀಡಬೇಕು. ಕಬ್ಬು ಸರಬರಾಜು ಮಾಡಿಸಿಕೊಂಡಿರುವ ಸಕ್ಕರೆ ಕಾರ್ಖಾನೆಯೂ 50 ರೂಪಾಯಿ ನೀಡಬೇಕು. ಇದರ ಅನ್ವಯ ಸರ್ಕಾರ ಆದ್ಯತೆ ಮೇರೆಗೆ ಜಿಲ್ಲೆಗೆ ಮುಂಚಿತವಾಗಿಯೇ ಹಣ ಬಿಡುಗಡೆ ಮಾಡುತ್ತಿದೆ. ಸರ್ಕಾರದ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಹಣ ಬರಲು ವಾರದ ಮೇಲಾಗುತ್ತದೆ. ತದನಂತರ ಇಲ್ಲಿ ಪ್ರಕ್ರಿಯೆಗಳು ಮುಗಿಯಲು ಒಂದು ವಾರಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹದಿನೈದು ದಿನಗಳ ನಂತರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕೂಡ ಇದೇ ಸಮಯದಲ್ಲೇ ತಾನು ನೀಡಬೇಕಾಗಿರುವ 50 ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಬೇಕು. ಯಾವುದೇ ಕಾರಣಕ್ಕೂ ಸಬೂಬುಗಳನ್ನು ಹೇಳಬಾರದು. ಇದು ಸರ್ಕಾರದ ಆದೇಶವಾಗಿದ್ದೂ, ಅದೇಶವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುವುದು ಕಾರ್ಖಾನೆಯ ಕರ್ತವ್ಯವಾಗಿದೆ. ಇದನ್ನು ಮೀರಿ ರೈತರ ಬಾಕಿ ಹಣವನ್ನು ಪಾವತಿ ಮಾಡಲು ವಿಫಲರಾದರೆ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡು ಸಕ್ಕರೆ ಕಾರ್ಖಾನೆ ಮೇಲೆ ದಂಡ ವಿಧಿಸುವ ಹಾಗೂ ಬೇರೆ ರೀತಿಯ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ಇಳುವರಿ ಅಂಶದಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ವರ್ಷವೂ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ವತಿಯಿಂದ ಕಬ್ಬಿನ ಇಳುವರಿಯ ಪರೀಕ್ಷೆ ಮಾಡಿಸಲಾಗಿತ್ತು. ಅವರು ಯಾವುದೇ ವ್ಯತ್ಯಾಸ ಇಲ್ಲ ಎಂದು ವರದಿ ಕೊಟ್ಟಿದ್ದರು. ಆದರೆ, ರೈತರ ಅನುಮಾನ ದೂರವಾಗದ ಹಿನ್ನೆಲೆಯಲ್ಲಿ ಈ ಸಲ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಹೊತ್ತಿಗೆ ತಾವೇ ಖುದ್ದಾಗಿ ಅನಿರೀಕ್ಷಿತವಾಗಿ ಭೇಟಿ ನೀಡಿ, ಸ್ಥಳದಲ್ಲೇ ಇಳುವರಿ ಪರೀಕ್ಷೆ ಮಾಡುತ್ತೇವೆ. ನಮ್ಮ ಜತೆಗೆ ರೈತ ಸಂಘಟನೆಗಳ ಮುಖಂಡರು, ಕಬ್ಬು ಬೆಳೆಗಾರರು ಇರುತ್ತಾರೆ. ಅವರ ಸಮ್ಮುಖದಲ್ಲೇ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯವರಿಂದ ಪರೀಕ್ಷಾ ಉಪಕರಣಗಳನ್ನು ತರಿಸಿ ಪರೀಕ್ಷೆ ಮಾಡಲಾಗುತ್ತದೆ. ಇದನ್ನು ಒಂದೇ ಸಲಕ್ಕೆ ಮುಗಿಸದೇ ಎರಡು-ಮೂರು ಬಾರಿ ಪರೀಕ್ಷೆ ನಡೆಸಿ, ಬಳಿಕ ಒಂದು ನಿರ್ಣಯಕ್ಕೆ ಬರಲಾಗುತ್ತದೆ ಎಂದು ತಿಳಿಸಿದರು.

ಕಬ್ಬು ಕಟಾವಿಗೆ ಪ್ರತಿ ರೈತರಿಗೂ ದಿನಾಂಕ ನಿಗದಿ ಮಾಡಲಾಗುತ್ತದೆ. ಇಂತಹ ದಿನ ಇಂತಹ ರೈತರ ಜಮೀನಿನಲ್ಲಿ ಕಬ್ಬನ್ನು ಕಟಾವು ಮಾಡಬೇಕು ಎಂದು ತಹಸೀಲ್ದಾರ್ ಕಚೇರಿಯಿಂದ ಅಧಿಕೃತವಾದ ಆದೇಶವನ್ನು ಹೊರಡಿಸಲಾಗುತ್ತದೆ. ಇದರ ಅನ್ವಯವೇ ಕಬ್ಬನ್ನು ಕಟಾವು ಮಾಡಬೇಕು. ಇದರಿಂದಾಗಿ ಕಬ್ಬು ಕಟಾವು ಮಾಡುವುದು ಒಂದು ಶಿಸ್ತಿಗೆ ಬರುತ್ತದೆ. ಕಟಾವು ಮಾಡುವ ಕಾರ್ಮಿಕರು ಒಂದು ದಿನ ಒಂದು ಜಮೀನಿನಲ್ಲಿ ಕಟಾವು ಮಾಡಿ, ಅಲ್ಲಿ ಅರ್ಧ ಕೆಲಸವನ್ನು ಮಾಡಿ, ಮತ್ತೆ ಮಾರನೇಯ ದಿನ ಮತ್ತೊಂದು ಜಮೀನಿಗೆ ಹೋಗುವುದಕ್ಕೂ ತಡೆ ಬೀಳುತ್ತದೆ. ಯಾರ ಜಮೀನಿನಲ್ಲಿ ಯಾವ ದಿನಾಂಕದಂದು ಕಬ್ಬು ಕಟಾವು ಆಗುತ್ತದೆ ಎನ್ನುವ ಮಾಹಿತಿಯೂ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ, ನಾಡ ಕಚೇರಿಗಳ ಮಾಹಿತಿ ಫಲಕದಲ್ಲಿ ಹಾಕಲಾಗುತ್ತದೆ. ಜತೆಗೆ ರೈತ ಸಂಘಟನೆಗಳಿಗೂ ನೀಡಲಾಗುತ್ತದೆ ಎಂದರು. ಇದಕ್ಕೆ ದನಿ ಗೂಡಿಸಿದ ರೈತರು, ಈ ಮಾಹಿತಿಯನ್ನು -ನಮ್ಮ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಪ್ರಚುರ ಪಡಿಸಿಕೊಳ್ಳುತ್ತವೆ ಎಂದರು.

ಸಭೆಯಲ್ಲಿ ಮಾತನಾಡಿದ ರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘ ದ ರಾಜ್ಯ ಅಧ್ಯಕ್ಷಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು  ಕಬ್ಬು ಕಟಾವು ಸಾಗಾಣಿಕೆ ರಾಜ್ಯಾದ್ಯಂತ ಏಕ ರೀತಿಯಲ್ಲಿರಬೇಕು,  ಇಳುವರಿಯಲ್ಲಿ ಮೋಸ ತಪ್ಪಿಸಲು ಕಾರ್ಖಾನೆ ಮುಂದೆ ಇಳುವರಿ ಯಂತ್ರ ಅಳವಡಿಸಬೇಕು,  ಸಕ್ಕರೆ ಕಾರ್ಖಾನೆ ಮುಂದೆ ತೂಕದ ಯಂತ್ರ ಹಾಕಬೇಕು,  ಉತ್ಪನ್ನಗಳ ಲಾಭ ಹಂಚಿಕೆ ಆಗಬೇಕು  ಕಳೆದ ಎರಡು ವರ್ಷದ ಸರ್ಕಾರದ ಆದೇಶ    ಪ್ರತಿ ಟನ್ ಕಬ್ಬಿಗೆ150  ಬಾಕಿ ನೀಡಬೇಕು, ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಬೇಕು, ಕಬ್ಬು ಕಟಾವು ಸಾಗಾಣಿಕೆಯನ್ನು ಕಾರ್ಖಾನೆ ಭರಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯತಿ ಸಿಇಒ ಎಸ್.ಯುಕೇಶ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್, ಕೆರೆಹುಂಡಿ ರಾಜಣ್ಣ  ವಳಗೇರ ಗಣೇಶ, ದೇವನೂರು ನಾಗೇಂದ್ರ ಮತ್ತಿತರರು ಇದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want